ಹರಡಿ ಹಬ್ಬುತ್ತಿರುವ ಬಹುಸಂಖ್ಯಾತವಾದವು ಕೇವಲ ರಾಜಕೀಯ ಪ್ರವೃತ್ತಿ ಮಾತ್ರವಾಗಿರದೆ, ವ್ಯಾಪಕ ಸೈದ್ಧಾಂತಿಕ ಯೋಜನೆಯಾಗಿದೆ. ಅದು ಸಂಸ್ಥೆಗಳನ್ನು ಶಿಕ್ಷಣ ವ್ಯವಸ್ಥೆಗಳನ್ನು ಹಾಗೂ ಸಾಂಸ್ಕೃತಿಕ ನಿರೂಪಣೆಗಳನ್ನು ಪ್ರಭಾವಿಸುತ್ತಿದೆ ಎಂದಿದ್ದ ಇತಿಹಾಸ ವಿದ್ವಾಂಸ ಕೆ ಎನ್ ಪಣಿಕ್ಕರ್ ಅವರ ಭವಿಷ್ಯ ಸಮಕಾಲೀನ ನಿಜ ರೂಪ ಧರಿಸಿ ಗಹಗಹಿಸಿದೆ.
ಆಧುನಿಕ ಇತಿಹಾಸದ ಅಗ್ರಗಣ್ಯ ವಿದ್ವಾಂಸರಲ್ಲಿ ಒಬ್ಬರೆನಿಸಿದ್ದ ಕೆ ಎನ್ ಪಣಿಕ್ಕರ್ ಇನ್ನಿಲ್ಲವಾಗಿದ್ದಾರೆ. ಧರ್ಮ, ವಸಾಹತುವಾದ, ಸಂಸ್ಕೃತಿ, ರೈತ ಚಳವಳಿ, ಇತಿಹಾಸಶಾಸ್ತ್ರ ಕುರಿತು ಅವರು ಬರೆದಿರುವ ಪುಸ್ತಕಗಳು ಮತ್ತು ಪ್ರಬಂಧಗಳು ಚಿರಸ್ಥಾಯಿ. ಕೇರಳದ ಮಲಬಾರ್ ಸೀಮೆ, ವಸಾಹತು ಅಧಿಕಾರ ಸಂರಚನೆಗಳು, ರೈತ ಬಂಡಾಯಗಳ ಕುರಿತ ಅವರ ಒಳನೋಟದ ಬರೆಹಗಳಿಲ್ಲದೆ ಆಧುನಿಕ ಇತಿಹಾಸ ಶಾಸ್ತ್ರ ಅಪೂರ್ಣ. ಜಮೀನ್ದಾರೀ ವ್ಯವಸ್ಥೆ ಮತ್ತು ಅದರ ವಿರುದ್ಧ ಸಿಡಿದ ರೈತ ಬಂಡಾಯ ಹಾಗೂ ವಸಾಹತು ಶಕ್ತಿಗಳ ಕುರಿತು ಅವರು ಬರೆದ Against Lord and State: Uprisings in Malabar (1836-1921) ಕೃತಿ ಮೈಲುಗಲ್ಲು. ಘಟನಾವಳಿ ಕುರಿತು ಪಣಿಕ್ಕರ್ ಅವರು ಮಾಡಿದ ವ್ಯಾಖ್ಯಾನಗಳು ವಿಸ್ತೃತ ವಿದ್ವತ್ಪೂರ್ಣ ಚರ್ಚೆಗೆ ದಾರಿ ಮಾಡಿದ್ದುಂಟು. ಅವರು ಕೃತಿಕಾರ ಪ್ರೊಫೆಸರ್ ಮಾತ್ರ ಆಗಿರಲಿಲ್ಲ, ಪ್ರಗತಿಪರ ಆಂದೋಲನಗಳ ಹೋರಾಟಗಾರರೂ ಆಗಿದ್ದರು.
A Concerned Indian’s Guide to Communalism and ಮತ್ತು Towards Freedom, 1940: A Documentary History of the Freedom Struggle, Before the Night FallsCulture, Ideology and Hegemony – Intellectuals and Social Consciousness in Colonial India ಪಣಿಕ್ಕರ್ ಅವರ ಮಹತ್ಕೃತಿಗಳಲ್ಲಿ ಸೇರಿವೆ. ಅವರು ಸಾರ್ವಜನಿಕ ಬದುಕಿನ ನಡೆನುಡಿಯಲ್ಲಿ ತಳೆದ ನಿಲುವುಗಳು ಹಿಂದೂ ರಾಷ್ಟ್ರವಾದಿಗಳಿಂದ ಕಟು ಟೀಕೆಗೆ ಗುರಿಯಾಗಿವೆ.
The Concerned Indian’s Guide to Communalism ಎಂಬುದು ಅವರು ಬಾಬರಿ ಮಸೀದಿ ನೆಲಸಮದ ನಂತರ ಅವರು ಸಂಪಾದಿಸಿದ್ದ ಕೃತಿ. ಹಿಂದುತ್ವವು ರಾಜಕೀಯ ಮತ್ತು ಶೈಕ್ಷಣಿಕ ಸಂವಾದಗಳಲ್ಲಿ ನಿಧಾನವಾಗಿ ಮತ್ತು ನಿಶ್ಚಿತವಾಗಿ ಬೇರು ಬಿಡುತ್ತಿದ್ದ ಕಾಲಘಟ್ಟದಲ್ಲಿ ಬಂದಿದ್ದ ಕೃತಿಯಿದು. ಮಹತ್ವದ ಹಸ್ತಕ್ಷೇಪವಾಗಿತ್ತು. ಕೋಮುವಾದವೆಂಬುದು ತನ್ನ ಬಳ್ಳಿಗಾಲುಗಳನ್ನು ಸಾರ್ವಜನಿಕ ಬದುಕಿನಲ್ಲಿ, ರಾಜಕಾರಣದಿಂದ ಹಿಡಿದು ಶಿಕ್ಷಣದ ತನಕ ಹಾಗೂ ನಿತ್ಯ ಬದುಕಿನ ಸಾಮಾಜಿಕ ಸಂಬಂಧಗಳಲ್ಲಿ ಹೇಗೆಲ್ಲ ಹರಡುತ್ತಲಿದೆ ಮತ್ತು ಕಾರ್ಯನಿರತವಾಗಿದೆ ಎಂಬುದನ್ನು ಗ್ರಹಿಸಲು ಓದುಗರಿಗೆ ತೀವ್ರವಾಗಿ ನೆರವಾದ ಸಂಪುಟ.
ಇತಿಹಾಸವನ್ನು ಭಾರತೀಯ ದೃಷ್ಟಿಕೋನದಿಂದ ಮರುರಚಿಸಬೇಕಿದೆ. ವಸಾಹತುಶಾಹಿ ದೃಷ್ಟಿಕೋನವು ದೇಶದ ಚರಿತ್ರೆಯನ್ನು ದಾಖಲಿಸುವಾಗ ಭಾರತೀಯ ದನಿಯನ್ನು ಇಡಿಯಾಗಿ ನಿರ್ಲಕ್ಷಿಸಿದೆ. ದೇಶದ ಇತಿಹಾಸದಲ್ಲಿ ದಮನಿತರನ್ನು ಅಂಚಿಗೆ ತಳ್ಳುತ್ತಲೇ ಬಂದಿರುವುದನ್ನು ನಿರಂತರವಾಗಿ ಪ್ರಶ್ನಿಸಬೇಕು. ಈ ಪ್ರಶ್ನೆಗೆ ದೊರೆಯುವ ಉತ್ತರಗಳು ಸಂಶೋಧನೆಯನ್ನು ಹೆಚ್ಚು ರೋಮಾಂಚಕಗೊಳಿಸುತ್ತವೆ. ಇತಿಹಾಸವನ್ನು ವಸಾಹತುಶಾಹಿ ಕಣ್ಣೋಟವನ್ನು ಪ್ರಶ್ನಿಸುತ್ತಿರಬೇಕು ಎಂದು ಅವರು ತಮ್ಮ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು.
ಬ್ರಿಟಿಷರ ವಿರುದ್ಧ ಸಾಂಸ್ಕೃತಿಕ ಪ್ರತಿರೋಧವಿತ್ತು ಎಂಬುದನ್ನು ಜನರಿಗೆ ಯಾರೂ ಹೇಳಿಲ್ಲ. ಈ ಪ್ರತಿರೋಧವು ಬ್ರಿಟಿಷ್ ವಿಧಿ ನಿಯಮಗಳನ್ನು ತಿರಸ್ಕರಿಸಿತ್ತು. ಭಾರತ ನಿಜದನಿಯನ್ನು ಕಂಡುಕೊಳ್ಳಬೇಕು. ದಮನಿತರ ಪ್ರತಿರೋಧದ ಚರಿತ್ರೆಯನ್ನು ಹೊರತರಬೇಕಿದೆ ಎಂದಿದ್ದರು.
ಮಹಿಳೆಯರು, ಪರಿಸರ, ಕೋಮುವಾದ, ಜಾತ್ಯತೀತವಾದ ಹಾಗೂ ಸಮಾಜದ ಅಂಚಿಗೆ ತಳ್ಳಲ್ಪಟ್ಟಿರುವ ಜನವರ್ಗಗಳ ವಿಷಯಗಳಿಗೆ ಸುದ್ದಿ ಪತ್ರಿಕೆಗಳು ಮುಖಾಮುಖಿ ಆಗಿಯೇ ಇಲ್ಲ ಎಂಬುದು ಅವರ ದೂರಾಗಿತ್ತು. ಸಮಾಜದ ಮೇಲೆ ಅಗಾಧ ಪರಿಣಾಮ ಬೀರಬಲ್ಲ ಪತ್ರಿಕೆಗಳು ಇಂತಹ ವಿಷಯಗಳ ಕುರಿತು ತಳೆದಿರುವ ಮೌನವನ್ನು ಅವರು ಪ್ರಶ್ನಿಸಿದ್ದರು. ಪತ್ರಿಕೆಗಳು ಸರಿತಪ್ಪುಗಳನ್ನು ಚರ್ಚಿಸಬೇಕು. ಆದರೆ, ವೃತ್ತಪತ್ರಿಕೆಗಳು (ಮೀಡಿಯಾ) ಒಂದು ವೇಳೆ ಮಧ್ಯಪ್ರವೇಶ ಮಾಡಿದರೆ. ಅದು ಪಟ್ಟಭದ್ರ ಹಿತಾಸಕ್ತಿಗಳ ಪರವಾಗಿಯೇ ಇರುತ್ತದೆ. ಸುದ್ದಿ ಮತ್ತು ಅಭಿಪ್ರಾಯದ ನಡುವಣ ಭೇದವೇ ಅಳಿಸಿಹೋಗುತ್ತಿದೆ. ಮೀಡಿಯಾದ ವಿಶ್ವಾಸಾರ್ಹತೆ ನಶಿಸಿ ಹೋಗುತ್ತಿರುವ ಅಪಾಯಕಾರಿ ಬೆಳವಣಿಗೆಯು ಸಮಾಜದ ಮೇಲೆ ಗಾಢ ಪ್ರಭಾವ ಬೀರುತ್ತದೆ. ಮೀಡಿಯಾವನ್ನು ವಿಮರ್ಶಿಸಲು ಕೌಂಟರ್ ಮೀಡಿಯಾ ಇರಬೇಕು. ಮೀಡಿಯಾವನ್ನು ಸರಿದಾರಿಗೆ ತರಲು ಕೌಂಟರ್ ಮೀಡಿಯಾ ಸ್ಥಾಪನೆಯ ಪರಿಹಾರ ಎಂದಿದ್ದರು.
ದೇಶದ ಕೋಮುವಾದಿ ಇತಿಹಾಸಶಾಸ್ತ್ರವು ನಮ್ಮ ಜಾತ್ಯತೀತ ಪರಂಪರೆಯನ್ನು ತಿರಸ್ಕರಿಸಿದೆ. ಸಂಸ್ಕೃತಿ ಎಂಬುದು ಸಂಘರ್ಷದ ಕಣವಾಗಿ ಹೋಗಿದೆ. ಕೋಮುವಾದದ ಪ್ರತಿಪಾದಕರು ಇತಿಹಾಸಕಾರರ ಮುಖವಾಡ ಧರಿಸಿ ತಿರುಗುತ್ತಿದ್ದಾರೆ. ಭಾರತೀಯ ನಾಗರಿಕತೆಯ ಸೆಕ್ಯೂಲರ್ ಪರಂಪರೆಯನ್ನು ಕಳಂಕಿತಗೊಳಿಸುತ್ತಿದ್ದಾರೆ. ಈ ರೀತಿಯಾಗಿ ಭಾರತೀಯ ಇತಿಹಾಸಶಾಸ್ತ್ರವು ಸೆಕ್ಯೂಲರ್ ಮತ್ತು ಕೋಮುವಾದಿ ವ್ಯಾಖ್ಯಾನಗಳ ನಡುವಣ ಸಂಘರ್ಷದ ಕಣವಾಗಿ ಮಾರ್ಪಟ್ಟಿದೆ. ವಸಾಹತುವಾದಿ ಮತ್ತು ನವವಸಾಹತುವಾದಗಳ ಸೈದ್ಧಾಂತಿಕ ಪ್ರಭಾವವು ಈಗಲೂ ಅಳಿದಿಲ್ಲ. ಈ ಚರಿತ್ರೆಗಳು ವಸಾಹತುವಾದಿ ದಮನದ ವಾಸ್ತವತೆಯನ್ನು ಮರೆ ಮಾಡಿಬಿಟ್ಟಿವೆ. ಕೋಮುವಾದಿ ವ್ಯಾಖ್ಯಾನಗಳು ಸೆಕ್ಯೂಲರ್ ಪರಂಪರೆಯನ್ನು ಕಡೆಗಣಿಸಿವೆ. ಸಂಸ್ಕೃತಿಯ ಯಜಮಾನಿಕೆಯ ಸ್ವರೂಪವು ಶೋಷಣಾತ್ಮಕ ವ್ಯವಸ್ಥೆಯನ್ನು ಸಮರ್ಥಿಸಿರುವುದಲ್ಲದೆ, ಅದನ್ನು ಹಾಗೆಯೇ ಕಾಪಾಡಿಕೊಂಡು ಹೋಗುತ್ತಿದೆ. ಸಂಸ್ಕೃತಿಯು ಪ್ರತಿರೋಧದ ಮೂಲವಾಗಬೇಕಿದೆ. ಅಂತಹ ರೂಪವನ್ನು ಸಂಸ್ಕೃತಿಯು ತಳೆಯಬೇಕಿದೆ. ಸಂಸ್ಕೃತಿ ಮತ್ತು ಧರ್ಮವನ್ನು ಒಟ್ಟಿಗೆ ಇಟ್ಟು ಅಸ್ಮಿತೆಯನ್ನು ಗುರುತಿಸಬೇಕಿದೆ. ಈ ಸಂಬಂಧದ ಮೂಲಕವೇ ದೇಶದ ವ್ಯಾಖ್ಯೆಯನ್ನು ಕಟ್ಟಬೇಕಿದೆ. ವಾಸ್ತವಾಂಶಗಳನ್ನು ತಿರುಚಿ ತಪ್ಪಾಗಿ ಪ್ರತಿನಿಧಿಸುವ ಪಠ್ಯಪುಸ್ತಕಗಳ ಮೂಲಕ ಅಥವಾ ಅಂತಹ ಸಂಶೋಧನೆಗಳ ಮೂಲಕ ಇತಿಹಾಸವನ್ನು ತಿರುಚಲಾಗುತ್ತಿದೆ. ಸಂಸ್ಕೃತಿಯನ್ನು ಸೆಕ್ಯೂಲರ್ ಆಚರಣೆಯಾಗಿ ಕಂಡವರು ಮತ್ತು ಅದನ್ನು ಧರ್ಮದೊಂದಿಗೆ ಗುರುತಿಸಿದವರ ನಡುವೆ ಸಂಘರ್ಷ ನಡೆದಿದೆ. ಮಾರ್ಕ್ಸವಾದಿ ಇತಿಹಾಸ ಶಾಸ್ತ್ರದಲ್ಲಿ ಸಂಸ್ಕೃತಿಯ ಅಧ್ಯಯನಕ್ಕೆ ಸಾಕಷ್ಟು ಗಮನ ನೀಡದಿರುವುದು, ಸಂಸ್ಕೃತಿಯ ಅಧ್ಯಯನವನ್ನು ಕೋಮುವಾದಿಗಳು ಮತ್ತು ಸಾಮ್ರಾಜ್ಯಶಾಹಿಗಳು ತಮ್ಮ ವಶಕ್ಕೆ ತೆಗೆದುಕೊಳ್ಳುವುದು ಸಲೀಸಾಗಿ ಹೋಗಿದೆ ಎಂಬುದು ಅವರ ನಿಲುವಾಗಿತ್ತು.
ಪಣಿಕ್ಕರ್ ಅವರು ದೇಶದ ಅತ್ಯಂತ ವಿಶಿಷ್ಟ ಇತಿಹಾಸಕಾರರಾಗಿದ್ದಂತೆ, ಶಿಕ್ಷಣ ತಜ್ಞರು ಮತ್ತು ಸಾರ್ವಜನಿಕ ಬುದ್ಧಿಜೀವಿಯೂ ಆಗಿದ್ದರು. ಬಹುಸಂಖ್ಯಾತವಾದಿ ರಾಜಕಾರಣದ ವಿರುದ್ಧ ನಿರಂತರವಾಗಿ ದನಿ ಎತ್ತಿದವರಾಗಿದ್ದರು. ಇತಿಹಾಸವನ್ನು ಸೈದ್ಧಾಂತಿಕ ಉದ್ದೇಶಗಳಿಗಾಗಿ ತಿರುಚುವ ಪ್ರಯತ್ನಗಳು ಹೆಚ್ಚುತ್ತಲೇ ಹೋಗಿದ್ದನ್ನು ಅವರ ಬರವಣಿಗೆಯು ಮುಖಾಮುಖಿಯಾಗಿತ್ತು. ಪುರಾಣಗಳನ್ನು ಐತಿಹಾಸಿಕ ವಾಸ್ತವಾಂಶಗಳೆಂದು ಪ್ರತಿಬಿಂಬಿಸುವ ಪ್ರವೃತ್ತಿಯ ಕುರಿತು ಅವರು ತೀವ್ರ ಆತಂಕಕ್ಕೆ ಈಡಾಗಿದ್ದರು. ಈ ಕುರಿತು ಮತ್ತೆ ಮತ್ತೆ ಎಚ್ಚರಿಸಿದರು. ಪುರಾವೆಗಳ ಆಧಾರವಿರುವ ಚರಿತ್ರೆಯನ್ನು ಬದಿಗೆ ತಳ್ಳಿ ಆ ಜಾಗದಲ್ಲಿ ಪೌರಾಣಿಕ ಮಿಥ್ಯೆಗಳ ಸ್ಥಾಪನೆಯ ಅಪಾಯದತ್ತ ಅವರು ಗಮನ ಸೆಳೆದಿದ್ದರು. ಇತಿಹಾಸಕ್ಕೆ ರೂಪು ನೀಡುವ ಸಂಕೀರ್ಣ ಸಾಮಾಜಿಕ ಸಂಬಂಧಗಳು ಮತ್ತು ಆರ್ಥಿಕ ಶಕ್ತಿಗಳನ್ನು ಅವಗಣಿಸುವ ಪ್ರವೃತ್ತಿ ಅಪಾಯಕರ. ಇಂತಹ ವಿರೂಪಗಳು ವಿದ್ವತ್ತನ್ನು ಕಡೆಗಣಿಸುವುದೇ ಅಲ್ಲದೆ ಜನತಾಂತ್ರಿಕ ಸಂವಾದವನ್ನು ಬಲಹೀನಗೊಳಿಸುವ ಅಪಾಯದ ಗಂಟೆಯನ್ನು ಮೊಳಗಿಸಿದ್ದರು ಪಣಿಕ್ಕರ್.
ಇತಿಹಾಸಕ್ಕೆ ಸಂಬಂಧಿಸಿದ ಬರವಣಿಗೆಯು ವಸ್ತುನಿಷ್ಠವೂ ವೈಜ್ಞಾನಿಕವೂ ಆಗಿದ್ದು, ತಾಳೆ ನೋಡಿ ಪರಿಶೀಲಿಸಬಹುದಾದ ಪುರಾವೆಗಳನ್ನು ಆಧರಿಸಿರಬೇಕು. ಅದರೆ, ಅಂತಹ ವಿದ್ವತ್ತಿಗೆ ಪೂರಕವಾದ ಬೌದ್ಧಿಕ ವಾತಾವರಣ ಅತ್ಯಗತ್ಯ. ಭಯ ಅಥವಾ ಹಸ್ತಕ್ಷೇಪಗಳಿಲ್ಲದೆ ವಿಮರ್ಶಾತ್ಮಕ ಅನ್ವೇಷಣೆಯಲ್ಲಿ ತೊಡಗಬಹುದಾದ ವಾತಾವರಣ ಚರಿತ್ರಕಾರರಿಗೆ ಬಹುಮುಖ್ಯ. ತನ್ನ ಸೈದ್ಧಾಂತಿಕ ಕಾರ್ಯಸೂಚಿಗೆ ತಕ್ಕಂತೆ ಚರಿತ್ರೆಯನ್ನು ಎರಕ ಹೊಯ್ಯುವ ಸರ್ಕಾರದ ಯಾವುದೇ ಪ್ರಯತ್ನವು ಅಕೆಡಮಿಕ್ ಸ್ವಾತಂತ್ರ್ಯ ಮತ್ತು ಜನತಾಂತ್ರಿಕ ಮೌಲ್ಯಗಳಿಗೆ ಗಂಭೀರ ಗಂಡಾಂತರ ತರುತ್ತದೆ ಎಂದಿದ್ದ ಅವರ ಮಾತುಗಳು ಇಂದಿನ ಭಾರತದಲ್ಲಿ ಕಟುವಾಸ್ತವಗಳಾಗಿ ಧ್ವನಿಸಿವೆ.
ಹರಡಿ ಹಬ್ಬುತ್ತಿರುವ ಬಹುಸಂಖ್ಯಾತವಾದವು ಕೇವಲ ರಾಜಕೀಯ ಪ್ರವೃತ್ತಿ ಮಾತ್ರವಾಗಿರದೆ, ವ್ಯಾಪಕ ಸೈದ್ಧಾಂತಿಕ ಯೋಜನೆಯಾಗಿದೆ. ಅದು ಸಂಸ್ಥೆಗಳನ್ನು ಶಿಕ್ಷಣ ವ್ಯವಸ್ಥೆಗಳನ್ನು ಹಾಗೂ ಸಾಂಸ್ಕೃತಿಕ ನಿರೂಪಣೆಗಳನ್ನು ಪ್ರಭಾವಿಸುತ್ತಿದೆ ಎಂದಿದ್ದ ಅವರ ಭವಿಷ್ಯ ನಿಜ ರೂಪ ಧರಿಸಿ ಗಹಗಹಿಸಿದೆ.
ಇತಿಹಾಸವೆಂಬುದು ಗತಕಾಲದ ದಾಖಲೆ ಮಾತ್ರವಲ್ಲ, ವರ್ತಮಾನದ ಮೌಲ್ಯತತ್ವಗಳನ್ನು ರೂಪಿಸುವ ಸಂಗತಿಯೂ ಹೌದು ಎಂಬ ಸತ್ಯವನ್ನು ಅವರ ಕೃತಿಗಳು ಎತ್ತಿ ಹಿಡಿದಿವೆ. ಮಲಬಾರ್ ಬಂಡಾಯದ ಕುರಿತ ಅವರ ಬರವಣಿಗೆಯು ಇತಿಹಾಸದ ಘಟನೆಗಳನ್ನು ಸೈದ್ಧಾಂತಿಕ ವ್ಯಾಖ್ಯಾನಗಳಿಗಿಂತ ಭೌತಿಕ ವಾಸ್ತವಗಳ ವಿಶ್ಲೇಷಣೆಯಾಗಿರಬೇಕು ಎಂಬುದಕ್ಕೆ ಅವರ ‘Against Lord and State: Religion and Peasant Uprisings in Malabar, 1836–1921’ ಕೃತಿಯೇ ಸಾಕ್ಷಿ. ಈ ಬಂಡಾಯವನ್ನು ಹಿಂದುತ್ವವಾದಿಗಳು ಶುದ್ಧಾಂಗವಾಗಿ ಕೋಮುವಾದಿ ದಂಗೆಯೆಂದು ಬಣ್ಣಿಸುತ್ತವೆ. ಪಣಿಕ್ಕರ್ ಈ ಬಣ್ಣನೆಯನ್ನು ಪ್ರಶ್ನಿಸಿದರು ಮತ್ತು ಸವಾಲೆಸೆದರು. ಈ ಬಂಡಾಯದ ಬೇರುಗಳು ಕೃಷಿ ಬಿಕ್ಕಟ್ಟಿನ ಕುದಿಯಲ್ಲಿ ಅಡಗಿದ್ದವು, ಆರ್ಥಿಕ ದಾರಿದ್ರ್ಯದಲ್ಲಿ ಹಾಗೂ ವಸಾಹತುವಾದಿ ಆಡಳಿತದ ಜಮೀನ್ದಾರಿ ಪದ್ಧತಿಯ ದಬ್ಬಾಳಿಕೆಯ ಸಂರಚನೆಯಲ್ಲಿದ್ದವು ಎಂದು ವಾದಿಸಿದರು. ಈ ಬಂಡಾಯವನ್ನು ಕೇವಲ ಕೋಮುವಾದಿ ಘರ್ಷಣೆ ಎಂದು ಕರೆಯಲಾಗದು. ಆರ್ಥಿಕ ಶೋಷಣೆ, ಕೃಷಿ ಸಮಸ್ಯೆಗಳು ಹಾಗೂ ವಸಾಹತುವಾದಿ ಶಕ್ತಿಗಳ ಅನ್ಯೋನ್ಯ ಸಂಬಂಧದ ಕ್ರಿಯೆಗೆ ಹುಟ್ಟಿದ ಪ್ರತಿಕ್ರಿಯೆ ಆಗಿತ್ತು. ಬ್ರಿಟಿಷ್ ವಸಾಹತುಶಾಹಿ ಪ್ರಭುತ್ವ ಮತ್ತು ಜಮೀನ್ದಾರರ ವಿರುದ್ಧ ಹುಟ್ಟಿದ ಹೋರಾಟವಾಗಿತ್ತು ಎಂಬ ಅವರ ವಿಶ್ಲೇಷಣೆ ಸತ್ಯಕ್ಕೆ ಅತಿ ಸನಿಹವಾಗಿತ್ತು.
ಸಮಕಾಲೀನ ಭಾರತದಲ್ಲಿ ಬಹುಸಂಖ್ಯಾತವಾದ ತಲೆಯತ್ತಿದ ಮತ್ತು ನವಉದಾರವಾದ ಹುಟ್ಟಿದ ಬೆಳವಣಿಗೆಗಳ ನಡುವಿನ ಕೊಂಡಿಯತ್ತ ಅವರು ಗಮನ ಸೆಳೆದಿದ್ದರು. ಈ ಬೆಳವಣಿಗೆಗಳು ಶೂನ್ಯದಲ್ಲಿ ಉದ್ಭವಿಸಿದ ವಿದ್ಯಮಾನಗಳಾಗಿರದೆ ಸಮಾಜದ ಸಂರಚನೆಯಲ್ಲಿ ಉಂಟಾದ ವಿಸ್ತೃತ ಬದಲಾವಣೆಯಾಗಿದ್ದವು ಎಂದು ಗುರುತಿಸಿದ್ದರು.
ಪ್ರಬಲ ಪ್ರಧಾನ ಅಧಿಪತ್ಯದ ಸಿದ್ಧಾಂತವಾಗಿ ತಲೆಯೆತ್ತಿದ ಬಹುಸಂಖ್ಯಾತವಾದವನ್ನು ಅದರ ವಿಸ್ತೃತ ರಾಜಕೀಯ, ಸಾಂಸ್ಕೃತಿಕ ಹಾಗೂ ಆರ್ಥಿಕ ಪರಿಸ್ಥಿತಿಗಳ ಸಂಯೋಗವಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹೊಮ್ಮಿತು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಆರ್ಥಿಕ ರೂಪಾಂತರಗಳು, ರಾಜಕೀಯ ಅಧಿಕಾರದ ಪಲ್ಲಟಗಳು ಹಾಗೂ ಸಾಂಸ್ಕೃತಿಕ ಕಥಾನಕಗಳಿಗೆ ನೀಡಿದ ಮರುರೂಪಗಳು ಸೇರಿ ಸಾರ್ವಜನಿಕ ಬದುಕಿನಲ್ಲಿ ಬಹುಸಂಖ್ಯಾತವಾದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿದವು ಮತ್ತು ಬಹುಸಂಖ್ಯಾತವಾದಕ್ಕೆ ಸಾರ್ವಜನಿಕ ಬದುಕಿನಲ್ಲಿ ಹೆಚ್ಚು ಹೆಚ್ಚು ನ್ಯಾಯಸಮ್ಮತಿಯನ್ನು ಗಳಿಸಿಕೊಟ್ಟವು ಎಂಬುದು ಅವರ ಅತ್ಯಂತ ಮೌಲಿಕ ವಿಶ್ಲೇಷಣೆ.
ಭಾರತದ ದಮನಿತ ಸಮುದಾಯಗಳು ತಮ್ಮ ಪ್ರಬಲ ಪ್ರತಿಪಾದಕನೊಬ್ಬನನ್ನು, ಭಾರತೀಯ ಸಾರ್ವಜನಿಕ ಬದುಕು ಒಬ್ಬ ಪ್ರಖರ ಜಾತ್ಯತೀತವಾದಿಯನ್ನು, ಹೊಳಪಿನ ವಿಚಾರವಂತನನ್ನು ಕಳೆದುಕೊಂಡಿವೆ.





