ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸುವವರು ಬದುಕಿನ ಯಾವುದಾದರೂ ಕ್ಷೇತ್ರದಲ್ಲಿ ಗಣ್ಯರು ಎನಿಸಿಕೊಂಡಿರಬೇಕು ಎಂಬುದು ಸರ್ಕಾರಿಯಾ ಆಯೋಗದ ಶಿಫಾರಸು. ಈ ಶಿಫಾರಸನ್ನು ಅನುಸರಿಸಿದ್ದಕ್ಕಿಂತ ಗಾಳಿಗೆ ತೂರಿರುವುದೇ ಹೆಚ್ಚು. ಈ ಗಣ್ಯ ಸ್ಥಾನಮಾನ ಏನೆಂಬ ಸಡಿಲ ವ್ಯಾಖ್ಯಾನ ಕೂಡ ನಮ್ಮ ನಡುವೆ ಇಲ್ಲ. ರಾಜಕೀಯ ಕೃಪಾಪೋಷಣೆಯೇ ಏಕೈಕ ಗಣ್ಯಮಾನ್ಯ ಅರ್ಹತೆಯಾಗಿ ಪರಿಣಮಿಸಿದೆ.
ಕೇಂದ್ರ ಸರ್ಕಾರದಿಂದ ನೇಮಕವಾಗುವ ರಾಜ್ಯಪಾಲರು ಸ್ವತಂತ್ರ ಭಾರತದ ಉದ್ದಕ್ಕೂ ಸದಾ ತಪ್ಪು ಕಾರಣಗಳಿಗಾಗಿಯೇ ಸುದ್ದಿಯಲ್ಲಿರುತ್ತ ಬಂದಿದ್ದಾರೆ. ಕಳೆದ ಹನ್ನೆರಡು ವರ್ಷಗಳಲ್ಲಿ ಈ ದುರುಪಯೋಗ ಶಿಖರ ಮುಟ್ಟಿದೆ. ಕಳೆದ ಕೆಲ ದಿನಗಳಿಂದ ದಕ್ಷಿಣ ರಾಜ್ಯಗಳಾದ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಪಾಲರು ಮತ್ತೆ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ ಎಂಬುದು ಈ ಬೆಳವಣಿಗೆಯ ಬಹುಮುಖ್ಯ ಸಂಗತಿ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ಈ ಮೂರೂ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದ್ದಿದ್ದರೆ ಈ ವಿವಾದಗಳು ನಡೆಯುತ್ತಿದ್ದವೇ ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ ಉತ್ತರ ಕಂಡುಕೊಳ್ಳುವುದು ಬಲು ಸುಲಭ.
ರಾಜ್ಯಪಾಲರನ್ನಾಗಿ ಯಾರೆಲ್ಲರನ್ನು ನೇಮಕ ಮಾಡುತ್ತ ಬರಲಾಗಿದೆ ಎಂದು ಗಮನಿಸೋಣ. ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸದೆ ಅವಗಣಿಸಲ್ಪಟ್ಟವರು, ತರಲೆ ಕಿರಿಕಿರಿ ಮಾಡುತ್ತಾನೆಂದು ಹೆಸರು ಪಡೆದ ರಾಜಕಾರಣಿ, ನಿವೃತ್ತ ಐಎಎಸ್-ಐಪಿಎಸ್-ಐಎಫ್ಎಸ್ ಅಧಿಕಾರಿಗಳು, ನಿವೃತ್ತ ನ್ಯಾಯಮೂರ್ತಿಗಳು, ನಿವೃತ್ತ ಸೇನಾಧಿಕಾರಿಗಳು ಹಾಗೂ ಮತದಾರರಿಂದ ತಿರಸ್ಕರಿಸಲ್ಪಟ್ಟ ರಾಜಕಾರಣಿಗಳೇ ಈ ಪಟ್ಟಿಯನ್ನು ಕಿಕ್ಕಿರಿಯುತ್ತ ಬಂದಿದ್ದಾರೆ. ಪ್ರಧಾನಮಂತ್ರಿ ಅಥವಾ ಪ್ರಧಾನಿಯ ಸಮೀಪವರ್ತಿಗಳ ವಿಶ್ವಾಸ ಗಳಿಸಬೇಕಿರುವುದು ರಾಜ್ಯಪಾಲರಾಗಿ ನಿಯುಕ್ತಿಗೊಳ್ಳಲು ಅಗತ್ಯವಾಗಿ ಬೇಕಿರುವ ಮೂಲಭೂತ ಅರ್ಹತೆ. ಪ್ರಧಾನಮಂತ್ರಿ ತಮಗೆ ಬೇಕಿರುವ ಯಾವ ವ್ಯಕ್ತಿಯನ್ನಾದರೂ ಈ ಹುದ್ದೆಗೆ ನೇಮಕ ಮಾಡಬಹುದಾಗಿದೆ ಎಂಬುದು ಈವರೆಗಿನ ರಾಜಕೀಯ ಇತಿಹಾಸ ಸ್ಪಷ್ಟಪಡಿಸಿರುವ ಅಂಶ. ವ್ಯಕ್ತಿ ಎಷ್ಟೇ ಗಣ್ಯ ಎನಿಸಿದರೂ ರಾಜಕೀಯ ಆಶ್ರಯ ಇರಲೇಬೇಕು. ಕಳೆದ 10-12 ವರ್ಷಗಳಿಂದ ಸಂಘಪರಿವಾರಕ್ಕೆ ಸೇರಿದ ವ್ಯಕ್ತಿಗಳನ್ನೂ ಈ ಹುದ್ದೆಗಳಿಗೆ ನೇಮಕ ಮಾಡಿರುವ ಹಲವು ನಿದರ್ಶನಗಳಿವೆ. ತಮ್ಮ ಕುಟುಂಬದ ಸದಸ್ಯರಿಗೆ, ಬಂಧುಬಳಗಕ್ಕೆ ಹುದ್ದೆಗಳು, ಸೀಟುಗಳು, ಉದ್ಯೋಗಗಳು, ವಿದೇಶಯಾತ್ರೆಯ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ರಾಜ್ಯಪಾಲರ ಸ್ಥಾನವನ್ನು ದುರುಪಯೋಗಪಡಿಸಿಕೊಂಡವರೇ ಹೆಚ್ಚು. ಈ ಕುರಿತು ಮೀಡಿಯಾದಲ್ಲಿ ವರದಿಯಾಗಿರುವ ಅಕ್ರಮಗಳನ್ನು ಪಟ್ಟಿ ಮಾಡಿದರೂ ನೂರಾರು ಪುಟಗಳ ಪುಸ್ತಕ ಆದೀತು.
ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸುವವರು ಬದುಕಿನ ಯಾವುದಾದರೂ ಕ್ಷೇತ್ರದಲ್ಲಿ ಗಣ್ಯರು ಎನಿಸಿಕೊಂಡಿರಬೇಕು ಎಂಬುದು ನಿವೃತ್ತ ನ್ಯಾಯಾಧೀಶ ಆರ್.ಎಸ್. ಸರ್ಕಾರಿಯಾ ಆಯೋಗದ ಶಿಫಾರಸು. ಈ ಶಿಫಾರಸನ್ನು ಅನುಸರಿಸಿದ್ದಕ್ಕಿಂತ ಗಾಳಿಗೆ ತೂರಿರುವುದೇ ಹೆಚ್ಚು. ಈ ಗಣ್ಯ ಸ್ಥಾನಮಾನ ಏನೆಂಬ ಸಡಿಲ ವ್ಯಾಖ್ಯಾನ ಕೂಡ ನಮ್ಮ ನಡುವೆ ಇಲ್ಲ. ರಾಜಕೀಯ ಕೃಪಾಪೋಷಣೆಯೇ ಏಕೈಕ ಗಣ್ಯಮಾನ್ಯ ಅರ್ಹತೆಯಾಗಿ ಪರಿಣಮಿಸಿದೆ.
ಆರ್ಥಿಕವಾಗಿ ರಾಜ್ಯಪಾಲರ ಹುದ್ದೆಗಳು ಈ ದೇಶದ ಬಡ ತೆರಿಗೆದಾರನ ರಂಧ್ರಗಳೇ ತುಂಬಿರುವ ಕಿಸೆಯ ಮೇಲೆ ಹೊರಿಸಿದ ಬಿಳಿಯಾನೆಗಳಾಗಿ ಪರಿಣಮಿಸಿವೆ. ಲೋಕಭವನಗಳು (ಇತ್ತೀಚಿನವರೆಗೆ ರಾಜಭವನಗಳು) ಅಸಭ್ಯ ವೈಭೋಗ ಪ್ರದರ್ಶನ ಮತ್ತು ದುಂದುವೆಚ್ಚಗಳ ಬೇಜವಾಬ್ದಾರಿ ಧೋರಣೆಯ ಪ್ರತೀಕಗಳೇ ಆಗಿ ಹೋಗಿವೆ. ದೇಶದ ಅತ್ಯಂತ ವಿಲಾಸೀ ಹೋಟೆಲುಗಳಿಗಿಂತಲೂ ವಿಲಾಸಿ ವ್ಯವಸ್ಥೆಗಳನ್ನು ಲೋಕಭವನಗಳು ಹೊಂದಿವೆ. ಅರಸೊತ್ತಿಗೆ ಅಳಿದರೂ ತಲೆಯೆತ್ತಿ ನಿಂತಿರುವ ಜೀವಂತ ಅರಮನೆಗಳಾಗಿ ಹೋಗಿವೆ. ಇಂದಿಗೂ ಅಲ್ಲಿನ ಆಳುಕಾಳುಗಳು- ನೌಕರ ಚಾಕರಿಯವರು ಊಳಿಗಮಾನ್ಯ ಅರಸೊತ್ತಿಗೆಯನ್ನೇ ನೆನಪಿಗೆ ತರುತ್ತಾರೆ. ಬಣ್ಣಿಸಲೂ ಹೇಸಿಗೆ ಎನಿಸುವಷ್ಟು ವೈಭೋಗ ವಿಲಾಸವಿದು.
ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಮಹಾತ್ಮ ಗಾಂಧಿ ವಂಶಜ ಗೋಪಾಲಕೃಷ್ಣ ಗಾಂಧಿಯಂತಹವರು ಈ ವಿಲಾಸೀ ವ್ಯವಸ್ಥೆಗೆ ಅಲ್ಲಲ್ಲಿ ಅಪರೂಪದ ಅಪವಾದಗಳಾಗಿದ್ದವರು. ಕೋಲ್ಕತ್ತಾದಲ್ಲಿ ವಿದ್ಯುತ್ ಸರಬರಾಜು ಕಡಿತವಿದ್ದಾಗ ರಾಜಭವನದ ದೀಪಗಳನ್ನು ಆರಿಸಿ ತಾವೂ ಕತ್ತಲಲ್ಲಿ ಕಳೆಯುತ್ತಿದ್ದವರಾಗಿದ್ದರು ಗೋಪಾಲಕೃಷ್ಣ ಗಾಂಧಿ.
28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಿಗೆ ಅಷ್ಟೇ ಸಂಖ್ಯೆಯ ರಾಜ್ಯಪಾಲರು ಮತ್ತು ಉಪರಾಜ್ಯಪಾಲರಿದ್ದಾರೆ. 36 ರಾಜಭವನಗಳ ವಾರ್ಷಿಕ ವೆಚ್ಚವನ್ನು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಜೆಟ್ಟಿನಲ್ಲೇ ಮೀಸಲಿಡಲಾಗುತ್ತದೆ. ಅರ್ಥಾತ್ ಆಯಾ ರಾಜ್ಯಗಳ ಜನರ ತೆರಿಗೆ ಹಣದಿಂದಲೇ ಭರಿಸಲಾಗುತ್ತದೆ. ಕೇಂದ್ರದ ಕಣ್ಣು ಕಿವಿ ಮೂಗುಗಳಾಗಿ ಕೆಲಸ ಮಾಡುತ್ತಾರೆ ಈ ರಾಜ್ಯಪಾಲರು. ಪ್ರತಿಪಕ್ಷಗಳ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ಅಪ್ಪಟ ಕೇಂದ್ರ ಸರ್ಕಾರದ ಏಜೆಂಟರಾಗಿ ಕೆಲಸ ಮಾಡುತ್ತಾರೆ. ರಾಜಕೀಯ ಬಿಕ್ಕಟ್ಟುಗಳು ಮತ್ತು ಪಕ್ಷಾಂತರಗಳ ಸಂದರ್ಭದಲ್ಲಿ ವಿರೋಧಪಕ್ಷಗಳ ಸರ್ಕಾರಗಳನ್ನು ಅಸ್ಥಿರಗೊಳಿಸಿ ಕಟ್ಟಕಡೆಗೆ ಉರುಳಿಸಲು ಕೇಂದ್ರ ಸರ್ಕಾರದ ಕೈಯಲ್ಲಿನ ದಾಳಗಳಾಗಿ ದುರ್ಬಳಕೆ ಆಗುತ್ತಾರೆ. ಅದೇ ಪಕ್ಷದ ಸರ್ಕಾರಗಳಿದ್ದರೆ ಪ್ರಧಾನಿಯ ವಿರುದ್ಧ, ಅದೇ ಪಕ್ಷದ ಯಾವುದೇ ಮುಖ್ಯಮಂತ್ರಿ, ಅಥವಾ ಪ್ರಾದೇಶಿಕ ನಾಯಕ ತಲೆಯೆತ್ತದಂತೆ ಹತ್ತಿಕ್ಕಲು ಬಳಕೆಯಾಗುತ್ತಾರೆ. ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷ, ನಿರ್ದಿಷ್ಟ ರಾಜ್ಯಗಳಲ್ಲಿ ವಿರೋಧ ಪಕ್ಷಗಳಾಗಿದ್ದಲ್ಲಿ, ಆ ಪಕ್ಷಗಳು ಇಲ್ಲವೇ ಆ ಪಕ್ಷಗಳ ರಾಜ್ಯ ನಾಯಕರ ಭ್ರಷ್ಟಾಚಾರಗಳು- ಅಕ್ರಮ- ಅನಾಚಾರಗಳಿಗೆ ಮುಸುಕು ಹೊದಿಸುವ ಘನ ಕಾರ್ಯಸೂಚಿಯನ್ನೂ ಬಹುತೇಕ ರಾಜ್ಯಪಾಲರು ಹೊಂದಿರುತ್ತಾರೆ. ರಾಜ್ಯ ಸರ್ಕಾರಗಳು ವಜಾ ಆದಾಗ ಕೇಂದ್ರ ಸರ್ಕಾರ ಘೋಷಿಸುವ ರಾಷ್ಟ್ರಪತಿ ಆಡಳಿತವನ್ನು ರಾಜ್ಯಪಾಲರೇ ನೆರವೇರಿಸುತ್ತಾರೆ. ಈ ಘನ ಕಾರ್ಯವನ್ನು ರಾಜ್ಯಪಾಲರು ಇಬ್ಬರು ಸಲಹೆಗಾರರ ನೆರವಿನಿಂದ ನಿರ್ವಹಿಸುತ್ತಾರೆ. ಈ ಸಲಹೆಗಾರರು ಹಿರಿಯ ನಿವೃತ್ತ ಅಥವಾ ಸೇವಾನಿರತ ಅಧಿಕಾರಿಗಳೇ ಆಗಿರುತ್ತಾರೆ. ರಾಷ್ಟ್ರಪತಿ ಆಳ್ವಿಕೆಯ ಅಪರೂಪದ ಸಂದರ್ಭಗಳಲ್ಲಿ ಪ್ರಧಾನಮಂತ್ರಿಯೇ ನೇರವಾಗಿ ಈ ಸಲಹೆಗಾರರ ಮೂಲಕ ಆಡಳಿತ ನಡೆಸಬಹುದು ಎಂಬ ಅಭಿಮತವೂ ಉಂಟು.
ಈ ಹಿಂದೆ ರಾಜ್ಯಪಾಲರು ಒಮ್ಮೆ ನೇಮಕವಾದರೆ ಬಹುತೇಕ ಅವಧಿ ಪೂರೈಸುವುದು ಖಚಿತವಿರುತ್ತಿತ್ತು. ಆದರೆ ಈಗ ಮೋದಿ ಯುಗದಲ್ಲಿ ಪರಿಸ್ಥಿತಿ ಬೇರೆಯೇ ಆಗಿದೆ. ಮೋದಿ-ಶಾ ಜೋಡಿಯ ಕಾರ್ಯಸೂಚಿಯನ್ನು ಸರಿಯಾಗಿ ಜಾರಿಗೆ ತರದಿದ್ದರೆ ಅಂತಹ ರಾಜ್ಯಪಾಲರ ಕುರ್ಚಿಗಳು ಅಲ್ಲಾಡುತ್ತವೆ. ಈ ಕಟುಸತ್ಯದ ಅರಿವು ರಾಜ್ಯಪಾಲರಿಗೆ ಇದೆ. ಹೀಗಾಗಿ ಅವರು ತಮಗೆ ನೀಡಲಾಗಿರುವ ಗುರಿಯನ್ನು ಮುಟ್ಟಲು ಸದಾ ಸೆಣೆಸುವ ಒತ್ತಡದಲ್ಲಿರುತ್ತಾರೆ. ಅದನ್ನು ಬಿಟ್ಟರೆ ಅವರಿಗೆ ಬೇರೆ ಏನೂ ಕಾಣದು. ವಾಸ್ತವವಾಗಿ ರಾಜ್ಯಪಾಲರು ಸ್ವೀಕರಿಸುವ ಪ್ರಮಾಣವಚನ ಏನು ಎಂಬುದನ್ನು ಮತ್ತೊಮ್ಮೆ ಇಲ್ಲಿ ನೆನಪಿಸಿಕೊಳ್ಳುವುದು ಅತ್ಯಂತ ಪ್ರಸ್ತುತ.
ಭಾರತದ ಸಂವಿಧಾನದ 159ನೆಯ ವಿಧಿಯ ಪ್ರಕಾರ ರಾಜ್ಯಪಾಲರು ಆಯಾ ರಾಜ್ಯ ಹೈಕೋರ್ಟಿನ ಮುಖ್ಯನ್ಯಾಯಮೂರ್ತಿ ಅಥವಾ ಜ್ಯೇಷ್ಠ ನ್ಯಾಯಮೂರ್ತಿಯಿಂದ ಪ್ರಮಾಣವಚನ ಸ್ವೀಕರಿಸುತ್ತಾರೆ. ಸಂವಿಧಾನ ಮತ್ತು ಕಾನೂನನ್ನು ಸಂರಕ್ಷಿಸಿ ಕಾಪಾಡಿ ಸಮರ್ಥಿಸಿಕೊಳ್ಳುವ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನೆರವೇರಿಸುವುದಾಗಿ ಸಾರುತ್ತಾರೆ. ನಿರ್ದಿಷ್ಟ ರಾಜ್ಯದ ಹೆಸರು ಹೇಳಿ, ಆ ರಾಜ್ಯದ ಜನರ ಯೋಗಕ್ಷೇಮಕ್ಕಾಗಿ ತಮ್ಮ ಸೇವೆಯನ್ನು ಮುಡಿಪಾಗಿಡುವುದಾಗಿ ಪ್ರಮಾಣ ಮಾಡುತ್ತಾರೆ.
ರಾಜ್ಯಪಾಲರ ಹುದ್ದೆಗಳಿಗೆ ನೇಮಕ ಆಗುವವರು ನಿಜವಾಗಿಯೂ ಸಂವಿಧಾನವನ್ನು ಮತ್ತು ನೆಲದ ಕಾನೂನನ್ನು ಎತ್ತಿ ಹಿಡಿಯುತ್ತಿದ್ದಾರೆಯೇ? ಉದಾಹರಣೆಗೆ ಕರ್ನಾಟಕ ರಾಜ್ಯದ ರಾಜ್ಯಪಾಲರು ನಿಜವಾಗಿಯೂ ಕರ್ನಾಟಕ ರಾಜ್ಯದ ಜನರ ಯೋಗಕ್ಷೇಮಕ್ಕಾಗಿ ತಮ್ಮ ಸೇವೆಯನ್ನು ಮುಡಿಪಾಗಿ ಇರಿಸಿದ್ದಾರೆಯೇ?
ಇಂದಿನ ರಾಜಕೀಯ-ಆಡಳಿತ-ಶಾಸಕಾಂಗ- ನ್ಯಾಯಾಂಗ ವ್ಯವಸ್ಥೆ ಕೇಳಿಕೊಳ್ಳಲೇಬೇಕಿರುವ ಜ್ವಲಂತ ಪ್ರಶ್ನೆಗಳಿವು. ಉತ್ತರ ಇಲ್ಲವೆಂದು ಆದಲ್ಲಿ, ಸರಿಪಡಿಸಲು ಕ್ರಮ ಕೈಗೊಳ್ಳಬೇಕೇ ಇಲ್ಲವೇ ರಾಜ್ಯಪಾಲ ಹುದ್ದೆಗಳನ್ನೇ ರದ್ದುಪಡಿಸಬೇಕೇ ಎಂಬ ಕುರಿತು ವ್ಯಾಪಕ ಚರ್ಚೆ ನಡೆಯುವುದು ಅತ್ಯಗತ್ಯ.
ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ನಿವೃತ್ತರಾಗಿರುವ ಎ.ರವೀಂದ್ರ, ರಾಜ್ಯಪಾಲರ ಹುದ್ದೆಯನ್ನೇ ರದ್ದು ಮಾಡುವುದು ಲೇಸು ಎಂದಿದ್ದಾರೆ. “ಸಂವಿಧಾನದ ಅಡಿಯಲ್ಲಿ ರಾಜ್ಯಪಾಲರು ತಾವಾಗಿಯೇ ಸ್ವತಂತ್ರವಾಗಿ ನಿರ್ವಹಿಸಬಹುದಾದ ಯಾವ ಕೆಲಸ ಕಾರ್ಯಗಳೂ ಇಲ್ಲವೇ ಇಲ್ಲ” ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತನ್ನು ರವೀಂದ್ರ ಉಲ್ಲೇಖಿಸಿದ್ದಾರೆ. ಹೀಗಿದ್ದಾಗ ತೆರಿಗೆದಾರನಿಗೆ ಹೊರೆಯಾಗುವ ಈ ಅಲಂಕಾರಿಕ ಹುದ್ದೆ ಇರಬೇಕಾದರೂ ಯಾಕೆ ಎಂಬುದು ಅವರ ಪ್ರಶ್ನೆ.
ಸಂವಿಧಾನಕ್ಕೆ ಹಲವು ತಿದ್ದುಪಡಿಗಳನ್ನು ತರಬೇಕಾದೀತು. ಈ ಹುದ್ದೆಯು ರಾಜ್ಯ ಸರ್ಕಾರಗಳ ಬೊಕ್ಕಸಗಳ ಮೇಲೆ ಅನಗತ್ಯ ಹೊರೆ. ರಾಜ್ಯಪಾಲರ ಸಿಬ್ಬಂದಿಯನ್ನು ಸಾಕಲು ಮತ್ತು ರಾಜಭವನದ ನಿರ್ವಹಣೆಗೆಂದು ವರ್ಷಕ್ಕೆ ಗಣನೀಯ ಪ್ರಮಾಣದ ವೆಚ್ಚ ಮಾಡಬೇಕಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧದಲ್ಲಿ ಮುಳ್ಳಾಗಿ ಪರಿಣಮಿಸಿರುವ ಹುದ್ದೆಯಿದು. ಬ್ರಿಟಿಷ್ ವಸಾಹತುಶಾಹಿ ಪಳೆಯುಳಿಕೆ. ಈ ಭವ್ಯ ರಾಜಭವನಗಳನ್ನು ವಿಶಾಲ ಉದ್ಯಾನಗಳನ್ನಾಗಿಯೋ, ಆಯಾ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವಸ್ತುಸಂಗ್ರಹಾಲಯಗಳನ್ನಾಗಿಯೋ, ಆರ್ಟ್ ಗ್ಯಾಲರಿಗಳನ್ನಾಗಿಯೋ ಪರಿವರ್ತಿಸಬಹುದು ಎಂಬ ಅವರ ಸಲಹೆ ಗಂಭೀರ ಪರಿಶೀಲನೆಗೆ ಅರ್ಹವಾದದ್ದು.
ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ರಾಜ್ಯಪಾಲರ ಹುದ್ದೆಯನ್ನು ಮರುವಿಮರ್ಶೆಗೆ, ಮರುವ್ಯಾಖ್ಯಾನಕ್ಕೆ ಒಳಪಡಿಸುವ ತುರ್ತು ಅಗತ್ಯವಿದೆ.





