ವಿಮರ್ಶಾತ್ಮಕ ದನಿಗಳನ್ನು ಅಡಗಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳು ಮತಿಹೀನ ಮತ್ತು ಅಸಹಿಷ್ಣು ಸಮಾಜದ ಹೆಗ್ಗುರುತುಗಳಾಗಿ ರೂಪು ತಳೆದಿವೆ. ದೇಶಾದ್ಯಂತ ವಿವಿಗಳ ಉಪಕುಲಪತಿಗಳನ್ನಾಗಿ ಬಿಜೆಪಿ ಪಕ್ಷ ಪರಿವಾರದ ನೀತಿ ಸಿದ್ಧಾಂತಗಳ ಪ್ರತಿಪಾದಕರು ಬೆಂಬಲಿಗರನ್ನೇ ನೇಮಕ ಮಾಡಲಾಗುತ್ತಿದೆ. ಪರ್ಯಾಯ ಚಿಂತನೆಗಳಿಗೆ ಆಶ್ರಯ ತಾಣಗಳಾಗಿದ್ದ ಅರಿವಿನ ಕೇಂದ್ರಗಳು ಏಕವ್ಯಕ್ತಿ-ಏಕಚಿಂತನೆ ಆರಾಧನೆಯ ಕೂಪಗಳಾಗಿ ಹೋಗಿವೆ.
ಮೂರನೆಯ ಸಲ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೋದಿಯವರು ಬಿಹಾರದಲ್ಲಿ ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟಿಸಿದರು. ಅರಿವು ಅಥವಾ ಜ್ಞಾನದ ಜಿಜ್ಞಾಸೆ ನಡೆಸಲು ಪೂರಕವಾಗಿ ಮುಕ್ತ ಶೈಕ್ಷಣಿಕ ವಾತಾವರಣ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದರು. ಪುಸ್ತಕಗಳನ್ನು ಬೆಂಕಿಗೆ ಹಾಕಿ ಸುಟ್ಟರೂ ಅರಿವನ್ನು ನಾಶಪಡಿಸುವುದು ಅಸಾಧ್ಯ ಎಂಬುದಕ್ಕೆ ನಳಂದವೇ ಉದಾಹರಣೆ ಎಂದಿದ್ದರು.
ಪಕ್ಷಪರಿವಾರದ ನಾಯಕರು ತಾವು ಆಡುವ ಹಲವು ಮಾತುಗಳನ್ನು ನಡೆಸಿಕೊಡುವುದಿಲ್ಲ ಎಂಬುಕ್ಕೆ ಮೋದಿಯವರ ಈ ಮಾತು ಬಹುದೊಡ್ಡ ಉದಾಹರಣೆ. ದೇಶದ ಯಾವ ವಿಶ್ವವಿದ್ಯಾಲಯದಲ್ಲೂ ಜ್ಞಾನದ ಜಿಜ್ಞಾಸೆ ನಡೆಸುವ ಪೂರಕ ವಾತಾವರಣ ಈಗ ಇಲ್ಲವಾಗಿದೆ. ಆತ್ಮಹತ್ಯಾಕಾರಿ ಬೆಳವಣಿಗೆಯಿದು. ಸಮಾಜ ತನ್ನನ್ನು ತಾನು ತಿದ್ದುಕೊಳ್ಳಲು ಕಲಿಯುವ ದಾರಿಯನ್ನೇ ಹಾಳುಗೆಡವಿದಂತಾಗಿದೆ.
ಆಳುವ ಪಕ್ಷಪರಿವಾರದ ನೀತಿನಿರ್ಧಾರಗಳನ್ನು ಟೀಕಿಸುತ್ತ ಬಂದಿರುವವರು ಖ್ಯಾತ ನಟ ನಸೀರುದ್ದೀನ್ ಶಾ. ಮುಂಬಯಿ ವಿಶ್ವವಿದ್ಯಾಲಯದ ಕಹಿ ಅನುಭವವನ್ನು ಅವರು ಇಂಗ್ಲಿಷ್ ಪತ್ರಿಕೆಗೆ ಬರೆದ ಲೇಖನದಲ್ಲಿ ಬಣ್ಣಿಸಿದ್ದಾರೆ. ವಿಶ್ವವಿದ್ಯಾಲಯದ ಉರ್ದು ವಿಭಾಗ ಶಾ ಅವರಿಗೆ ನೀಡಿದ್ದ ಆಹ್ವಾನವನ್ನು ಹಠಾತ್ತಾಗಿ ಹಿಂದಕ್ಕೆ ಪಡೆದಿತ್ತು. ಕಡೆಯ ಗಳಿಗೆಯಲ್ಲಿ ಫೋನ್ ಮಾಡಿ ತಾವು ಬರಬೇಡಿ ಎಂದು ಸೂಚನೆ ನೀಡಿತು. ಆದರೆ ಈ ಗಾಯಕ್ಕೆ ಉಪ್ಪೆರಚುವ ಕೆಲಸವನ್ನೂ ಮಾಡಿತು. ಶಾ ಅವರು ಆಹ್ವಾನವನ್ನು ತಿರಸ್ಕರಿಸಿದ್ದಾರೆಂದು ಸಾರ್ವಜನಿಕವಾಗಿ ಸುಳ್ಳು ಹೇಳಿತು.
ವಿಶ್ವವಿದ್ಯಾಲಯಗಳಲ್ಲಿ ಆಲೋಚನೆಗಳ ಪಹರೆದಾರಿಕೆ (ಥಾಟ್ ಪೊಲೀಸ್) ತಲೆಯೆತ್ತಿದೆ. ಭಿನ್ನಾಭಿಪ್ರಾಯವನ್ನು ದೇಶದ್ರೋಹ ಎಂದು ಬಗೆಯಲಾಗುತ್ತಿದೆ. ನಾನು ಹುಟ್ಟಿ ಬೆಳೆದ, ಪ್ರೀತಿಸಲು ಕಲಿಸಿದ ಭಾರತ ಇದಲ್ಲ ಎಂಬ ಶಾ ಅವರ ಕಟು ಪ್ರತಿಕ್ರಿಯೆಯಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.
ಮೊನ್ನೆ ಮೊನ್ನೆ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಜೈಲಿಗೆ ತಳ್ಳಲಾಯಿತು. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಅವರನ್ನು ಅಪರಾಧಿಗಳಂತೆ ನಡೆಸಿಕೊಂಡರು ಪೊಲೀಸರು.ವಿದ್ಯಾರ್ಥಿಗಳ ಪ್ರತಿಭಟನೆಯನ್ನು ವಿಫಲಗೊಳಿಸಲು ಏಳುನೂರು ಮಂದಿ ಪೊಲೀಸ್ ಪಡೆ ನಿಯುಕ್ತಗೊಂಡಿತ್ತು ಎಂಬುದು ಏಕಕಾಲಕ್ಕೆ ಸೋಜಿಗದ ಮತ್ತು ಆಘಾತದ ನಡೆಯಲ್ಲವೇ?
ಮೋದಿಯವರ ಸರ್ಕಾರ ತನ್ನ ರಾಜಕೀಯ ನಿಲುವುಗಳು ಧೋರಣೆಗಳನ್ನು ವಿಶ್ವವಿದ್ಯಾಲಯದ ಕ್ಯಾಂಪಸ್ ಗಳ ಮೇಲೆ ಹಲವು ಬಗೆಗಳಲ್ಲಿ ಹೇರುತ್ತ ಬಂದಿದೆ. ಕೆಲಸದಿಂದ ಕಿತ್ತು ಹಾಕುತ್ತಾರೆ ಅಥವಾ ಚಾರಿತ್ರ್ಯ ಹರಣದ ಸಂಚು ನಡೆಸಲಾಗುತ್ತದೆ ಎಂಬ ಅಂಜಿಕೆ ಇಲ್ಲದೆ ಪ್ರಾಧ್ಯಾಪಕರು ವಿಶ್ವವಿದ್ಯಾಲಯಗಳಲ್ಲಿ ಪಾಠ ಹೇಳಿಕೊಡುತ್ತಿದ್ದ ಕಾಲವೊಂದಿತ್ತು. ಕ್ಯಾಂಪಸ್ ಗಳಲ್ಲಿ ಮುಕ್ತ ಚರ್ಚೆಗಳು ನಡೆಯುತ್ತಿದ್ದವು. ಪ್ರಾಧ್ಯಾಪಕರು ವೇದಿಕೆಗಳಲ್ಲಿ ನಿರ್ಭೀತಿಯಿಂದ ತಮ್ಮ ಅಭಿಪ್ರಾಯ ಹೇಳುತ್ತಿದ್ದರು ಮತ್ತು ಮಾಧ್ಯಮಗಳಲ್ಲಿ ಬರೆಯಬಲ್ಲವರಾಗಿದ್ದರು. ಆಗಾಗ ರಾಜಕೀಯ ಹಸ್ತಕ್ಷೇಪದ ಆಪಾದನೆಗಳು ಕೇಳಿ ಬರುತ್ತಿದ್ದವು. ಆದರೆ ಸಾಪೇಕ್ಷ ಸ್ವಾಯತ್ತತೆ ಸಾಧಾರಣವಾಗಿ ಕಂಡು ಬರುತ್ತಿತ್ತು. ಆದರೆ ಈಗ ಈ ವಾತಾವರಣ ಉಳಿದಿಲ್ಲ. ತೀವ್ರ ರಾಜಕೀಯಕರಣಗೊಂಡಿದೆ. ಹೆಜ್ಜೆ ಹೆಜ್ಜೆಗೆ ಕೇಸರಿಯ ದಬ್ಬಾಳಿಕೆ, ಸರ್ವವ್ಯಾಪಿ ಅಸ್ತಿತ್ವಯಾಗಿ ಹರಡಿ ನೆಲೆ ನಿಲ್ಲುವ ಧೋರಣೆ ಎದ್ದು ಕಾಣುತ್ತಿದೆ. ವಿಮರ್ಶಾತ್ಮಕ ದನಿಗಳನ್ನು ಅಡಗಿಸಲಾಗುತ್ತಿದೆ.
ವಿಶ್ವವಿದ್ಯಾಲಯಗಳು ಮತಿಹೀನ ಮತ್ತು ಅಸಹಿಷ್ಣು ಸಮಾಜದ ಹೆಗ್ಗುರುತುಗಳಾಗಿ ರೂಪು ತಳೆದಿವೆ. ದೇಶಾದ್ಯಂತ ವಿವಿಗಳ ಉಪಕುಲಪತಿಗಳನ್ನಾಗಿ ಬಿಜೆಪಿ ಪಕ್ಷ ಪರಿವಾರದ ನೀತಿ ಸಿದ್ಧಾಂತಗಳ ಪ್ರತಿಪಾದಕರು ಬೆಂಬಲಿಗರನ್ನೇ ನೇಮಕ ಮಾಡಲಾಗುತ್ತಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಇಂತಹ ನೇಮಕಗಳು ನೂರಕ್ಕೆ ನೂರು ನಿಜವಾಗಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಬಿಜೆಪಿ ಮನಸ್ಥಿತಿಯ ಉಪಕುಲಪತಿಗಳನ್ನು ಕಾಣಬಹುದಾಗಿದೆ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಈ ಮಾತಿಗೆ ಜೀವಂತ ಉದಾಹರಣೆ. ಕೇಸರಿ ಧೋರಣೆಯನ್ನು ಬದುಕಿನುದ್ದಕ್ಕೂ ಪ್ರಬಲವಾಗಿ ವಿರೋಧಿಸಿದ ಖ್ಯಾತ ಬರೆಹಗಾರ ಪ್ರೊ.ಯು.ಆರ್. ಅನಂತಮೂರ್ತಿ ಅವರು ಪಕ್ಷಪರಿವಾರದ ಕ್ರೋಧಕ್ಕೆ ತುತ್ತಾಗಿದ್ದವರು, ಪಾಕಿಸ್ತಾನಕ್ಕೆ ತೊಲಗಿ ಹೋಗಿ ಎಂದು ಪಾಕಿಸ್ತಾನಕ್ಕೆ ವಿಮಾನಯಾನದ ಟಿಕೆಟ್ ನ್ನು ಅವರಿಗೆ ಕಳಿಸುವ ಹಂತ ತಲುಪಿತ್ತು ಈ ಹಗೆತನ. ಅಂಥವರ ಮಗನೇ ಈಗ ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಸ್ಥಾನದಲ್ಲಿದ್ದಾರೆ. ಕೇಸರಿ ಧೋರಣೆಯನ್ನು ಪ್ರತಿಪಾದಿಸುವ ಅವರನ್ನು ನೇಮಕ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಬಿಜೆಪಿ ಸರ್ಕಾರಗಳು ಇಂತಹ ‘ತಪ್ಪು’ ಗಳನ್ನು ಮಾಡುವುದೇ ಇಲ್ಲ. ವಿಶೇಷವಾಗಿ ಪ್ರತಿಪಕ್ಷಗಳ ಸರ್ಕಾರಗಳಿರುವ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ರಾಜ್ಯಪಾಲರು ಉಪಕುಲಪತಿಗಳ ನೇಮಕದಲ್ಲಿ ತೀವ್ರ ಹಸ್ತಕ್ಷೇಪ ನಡೆಸಿದ್ದಾರೆ.
ದೇಶದ ಹೆಸರಾಂತ ಖಾಸಗಿ ವಿಶ್ವವಿದ್ಯಾಲಯಗಳ ಸಾಲಿಗೆ ಸೇರಿರುವ ಅಶೋಕ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದವರು ಪ್ರತಾಪ್ ಭಾನು ಮೆಹ್ತಾ. ಅಗ್ರಮಾನ್ಯ ಚಿಂತಕರು ಮತ್ತು ರಾಜಕೀಯ ವಿಜ್ಞಾನಿ. ದೇಶದ ಎಲ್ಲ ಪ್ರಜೆಗಳೂ ಸಮಾನ ಎಂದು ಸಾರಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿದಿದ್ದ ಅವರ ವಿಮರ್ಶಾತ್ಮಕ ಲೇಖನವೊಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದೇ ಕಾರಣಕ್ಕಾಗಿ ಅವರು ಉಪಕುಲಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರಬರಬೇಕಾಯಿತು. ಅಂತಹ ಒತ್ತಡವನ್ನು ಅಶೋಕ ವಿಶ್ವವಿದ್ಯಾಲಯದ ಆಡಳಿತ ವರ್ಗದ ಮೇಲೆ ಉಂಟು ಮಾಡಲಾಯಿತು. ಇಂತಹ ಕೆಟ್ಟ ಉದಾಹರಣೆಗಳು ಸಾಲು ಸಾಲಾಗಿವೆ.
ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯಕ್ಕೆ ದೇಶದ್ರೋಹಿ ಹಣೆಪಟ್ಟಿ ಹಚ್ಚಲಾಯಿತು. ಅಲ್ಲಿ ಬೇರುಬಿಟ್ಟಿದ್ದ ಸಮಾನತೆ ಪ್ರತಿಪಾದಿಸುವ ವಿಚಾರಧಾರೆಯನ್ನು ತೀವ್ರ ದಾಳಿಗೆ ಗುರಿ ಮಾಡಲಾಗಿದೆ. ಇಂತಹುದೇ ವಾತಾವರಣವಿದ್ದ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಂಸ್ಥೆ ಕೇಸರಿ ವಿಚಾರಧಾರೆಯ ದಮನಕ್ಕೆ ತುತ್ತಾಗಿದೆ. ದೇಶದ್ರೋಹಿ ಚಟುವಟಿಕೆ ನಡೆಸುತ್ತಿದ್ದಾರೆಂದು ವಿದ್ಯಾರ್ಥಿಗಳನ್ನು ಬಲಿ ಹಾಕಲಾಗುತ್ತಿದೆ. ಪ್ರತಿಭಟನಾ ಪ್ರದರ್ಶನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗುತ್ತಿದೆ.
ಉಪನ್ಯಾಸಗಳನ್ನು ಸದ್ದಿಲ್ಲದೆ ರದ್ದುಗೊಳಿಸಲಾಗುತ್ತಿದೆ. ಆಹ್ವಾನಗಳನ್ನು ಹಿಂಪಡೆಯಲಾಗುತ್ತಿದೆ. ಶಾಂತಿಯುತವಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಜೈಲಿಗೆ ಕಳಿಸಲಾಗುತ್ತಿದೆ.
ಆರೋಗ್ಯಕರ ಸಮಾಜದ ವಿಶ್ವವಿದ್ಯಾಲಯಗಳಲ್ಲಿ ಮುಕ್ತ ಚರ್ಚೆ ನಡೆಯಬೇಕು. ಸಮಾನಾಂತರ ಬದಲಿ ವಿಚಾರಗಳ ಮಂಥನ ಜರುಗಬೇಕು. ಇಂತಹ ವಾತಾವರಣವನ್ನು ಹತ್ತಿಕ್ಕುವುದು ದೀರ್ಘಭವಿಷ್ಯದಲ್ಲಿ ಮಾರಕವಾಗಿ ಪರಿಣಮಿಸುವುದು ನಿಶ್ಚಿತ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಭಾರತದ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಗಳು ವಾದ-ಪ್ರತಿವಾದಗಳನ್ನು ರೂಪಿಸುವ ಅರಿವಿನ ಕೇಂದ್ರಗಳಾಗಿದ್ದವು. ವಿಭಿನ್ನ ವಿಷಯಗಳು ಕುರಿತ ತೀವ್ರ ಚರ್ಚೆ ನಡೆಯುತ್ತಿತ್ತು. ಭಿನ್ನಾಭಿಪ್ರಾಯಗಳಿಗೆ ಅವಕಾಶ ಇರುತ್ತಿತ್ತು. ಅರಿವು ಎಂಬುದು ಹಲವು ದನಿಗಳನ್ನು ಪ್ರೋತ್ಸಾಹಿಸುವುದರಿಂದ ಬೆಳೆಯುತ್ತದೆಯೇ ವಿನಾ ಏಕರೂಪದ ದನಿಯ ಹೇರಿಕೆಯಿಂದ ಅಲ್ಲ.
ಪರ್ಯಾಯ ಚಿಂತನೆಗಳಿಗೆ ಆಶ್ರಯ ತಾಣಗಳಾಗಿದ್ದ ಅರಿವಿನ ಕೇಂದ್ರಗಳು ಏಕವ್ಯಕ್ತಿ-ಏಕಚಿಂತನೆ ಆರಾಧನೆಯ ಕೂಪಗಳಾಗಿ ಹೋಗಿವೆ. ಪ್ರಾಧ್ಯಾಪಕರು ವಿಚಾರಸಂಕಿರಣಗಳಲ್ಲಿ ಭಾಗವಹಿಸಲು, ವಿದೇಶೀ ವಿಚಾರಸಂಕಿರಣಗಳಿಗೆ ಹಾಜರಾಗಲು ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ತಾವು ಮಂಡಿಸುವ ಪ್ರಬಂಧಗಳನ್ನು ಯುಜಿಸಿಯ ಅನುಮೋದನಗೆ ಮುಂದಾಗಿಯೇ ಕಳಿಸಬೇಕಿರುವ ದುರ್ದಿನಗಳು ಒದಗಿವೆ. ಬಿತ್ತಲಾಗಿರುವ ಭಯದ ವಾತಾವರಣವು ಪ್ರಾಧ್ಯಾಪಕರು- ವಿದ್ಯಾರ್ಥಿ ಸಮುದಾಯಗಳು ತಮ್ಮ ಅಭಿವ್ಯಕ್ತಿಗಳಿಗೆ ತಾವೇ ಕಡಿವಾಣ ಹಾಕಿಕೊಂಡು ಸೆನ್ಸಾರ್ ಮಾಡಿಕೊಳ್ಳುವ ಅನಿವಾರ್ಯವನ್ನು ಸೃಷ್ಟಿಸಿದೆ. ಬೌದ್ಧಿಕ ತಟಸ್ಥತೆಯೇ ನಿಜವಾದ ಅರಿವು ಎಂಬ ಕೆಟ್ಟ ಭ್ರಮೆಯನ್ನು ಬೆಳೆಸಲಾಗುತ್ತಿದೆ.
‘ಅಧಿಕಾರಸ್ಥರನ್ನು ಪ್ರಶ್ನಿಸುವ ಮತ್ತು ಪರ್ಯಾಯ ಭವಿಷ್ಯಗಳನ್ನು ಸೃಷ್ಟಿಸುವ’ ವಾತಾವರಣ ಮರೆಯಾಗಿ ಹೋಗಿದೆ. ಡಿಗ್ರಿ ಪ್ರಮಾಣಪತ್ರಗಳನ್ನು ನೀಡುವ ಯಾಂತ್ರಿಕ ಕಾರ್ಖಾನೆಗಳಾಗಿ ಪರಿಣಮಿಸಿವೆ ವಿಶ್ವವಿದ್ಯಾಲಯಗಳು. ಹಿಂದೊಮ್ಮೆ ತುರ್ತುಪರಿಸ್ಥಿತಿಯ 18 ತಿಂಗಳುಗಳ ಕಾಲ ಇಂತಹ ವಾತಾವರಣ ಏರ್ಪಟ್ಟಿತ್ತು. ಆದರೆ ಇದೀಗ ಅಘೋಷಿತ ಮತ್ತು ಅನಿಶ್ಚಿತ ಕಾಲದ ತುರ್ತುಪರಿಸ್ಥಿತಿ ಜಾರಿಯಲ್ಲಿದೆ.





