ಈ ದಿನ ಸಂಪಾದಕೀಯ | ‘ಸಂಚಾರ್ ಸಾಥಿ’ ಕಣ್ಗಾವಲು ಸನ್ನಾಹ, ವೇಷ ಬದಲಿಸಿ ಬಂದೀತು ಹುಷಾರ್!

Date:

ಅಮೆರಿಕೆಯ ಆ್ಯಪಲ್ ಮೊಬೈಲ್ ಫೋನ್ ಕಂಪನಿ ಭಾರತದ ಪ್ರತಿಪಕ್ಷಗಳ ಹಲವಾರು ನಾಯಕರು, ಪತ್ರಕರ್ತರು ಮತ್ತಿತರರಿಗೆ ಅಪಾಯಸೂಚನೆಯನ್ನು ವರ್ಷಗಳ ಹಿಂದೆಯೇ ಕಳಿಸಿತ್ತು. ನಿಮ್ಮ ಫೋನುಗಳು ಪ್ರಭುತ್ವ ಪ್ರಾಯೋಜಿತ ಹ್ಯಾಕರ್ ಗಳ ದಾಳಿಗೆ ಗುರಿಯಾಗಿವೆ ಎಂಬುದು ಈ ಸೂಚನೆಯ ಸಾರಾಂಶವಾಗಿತ್ತು.

1947ರಲ್ಲಿ ‘1984’ ಎಂಬ ‘ಕೇಡುಗಾಲ’ದ ಪ್ರಸಿದ್ಧ ಕಾದಂಬರಿಯೊಂದನ್ನು ಬರೆಯುತ್ತಾನೆ ಪತ್ರಕರ್ತ ಜಾರ್ಜ್ ಆರ್ವೆಲ್. ಆಳುವ ಪಕ್ಷ ಹೇಳಿದ್ದೇ ಅಂತಿಮ. ಎರಡಕ್ಕೆ ಎರಡು ಸೇರಿಸಿದರೆ ನಾಲ್ಕೋ ಅಥವಾ ಐದೋ ಎಂದು ಅನುಮಾನಿಸುವ  ಅನಿಶ್ಚಯತೆಯ ಹಂತಕ್ಕೆ ಜನತೆಯನ್ನು ತಳ್ಳಲಾಗುತ್ತದೆ. ಕೆಲವು ಸಲ ಎರಡಕ್ಕೆ ಎರಡು ಸೇರಿಸಿದರೆ ಐದು ಕೂಡ ಆಗಬಹುದು ಎಂದು ಪ್ರಜೆಗಳು ಒಪ್ಪಲೇಬೇಕಾಗುತ್ತದೆ. ಕಟ್ಟಕಡೆಗೆ ಎರಡಕ್ಕೆ ಎರಡು ಸೇರಿಸಿದರೆ ಆಳುವ ಪಕ್ಷ ಎಷ್ಟು ಹೇಳುತ್ತದೋ ಅಷ್ಟೇ ಎಂಬ ಸ್ಥಿತಿಗೆ ಜನತೆಯನ್ನು ಬಗ್ಗಿಸಲಾಗುತ್ತದೆ.

ಸರ್ವಾಧಿಕಾರಿ ಸಮಾಜಗಳ ಎರಡು ಚಹರೆಗಳನ್ನು ಆರ್ವೆಲ್ ಗುರುತಿಸಿದ್ದ. ಒಂದು ಸುಳ್ಳು ಹೇಳುವುದು ಮತ್ತೊಂದು schizophrenia (ಅಂದರೆ ಛಿದ್ರಮನಸ್ಕತೆ. ನಿರಂತರ ಭ್ರಾಂತಿಗಳಿಂದ ಕೂಡಿದ ಮಾನಸಿಕ ವ್ಯಾಧಿ). ಸಂಘಟಿತವಾಗಿ ಸುಳ್ಳು ಹೇಳುವುದು ಸರ್ವಾಧಿಕಾರಿ ಪ್ರಭುತ್ವದ ಅವಿಭಾಜ್ಯ ಅಂಗ. ವರ್ತಮಾನಕ್ಕೆ ಸ್ಥಾನ ಕಲ್ಪಿಸಲು ಗತವನ್ನು ನಿರಂತರವಾಗಿ ತಿದ್ದಿ ಬರೆಯುವುದೂ ಈ ಸುಳ್ಳು ಹೇಳುವಿಕೆಯಲ್ಲಿ ಸೇರಿದೆ. ಇಂತಹ ಪ್ರಭುತ್ವ schizophrenic ಆಲೋಚನಾ ವ್ಯವಸ್ಥೆಯನ್ನೇ ಏರ್ಪಡಿಸಿಬಿಡುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1984 ಕಾದಂಬರಿಯಲ್ಲಿ ಆಡಳಿತ ಪಕ್ಷದ ಸರ್ವಾಧಿಕಾರೀ ದಬ್ಬಾಳಿಕೆ ಸರ್ವಾಂತರ್ಯಾಮಿ ಆಗಿರುತ್ತದೆ. ನಿರಂತರ ಕಣ್ಗಾವಲಿನ ಮೂಲಕ ಪ್ರಜೆಗಳನ್ನು ನಿರಂಕುಶ ನಿಯಂತ್ರಣದಲ್ಲಿ ಅದುಮಿಡುವುದೇ ಅದರ ಉದ್ದೇಶ. ಆರ್ವೆಲ್ ಕಾದಂಬರಿ ಬರೆಯುವ ಹೊತ್ತಿಗೆ ಬ್ರಿಟನ್ ಮತ್ತು ಅಮೆರಿಕೆಯ ಮನೆ ಮನೆಗಳಲ್ಲಿ ಟೆಲಿವಿಷನ್ ಅದಾಗಲೇ ಬಂದಿತ್ತು. ಆದರೆ 1984 ಕಾದಂಬರಿಯ  ಕಾಲ್ಪನಿಕ ದೇಶ ಓಶಿಯಾನಿಯಾದಲ್ಲಿ ಟೆಲಿಸ್ಕ್ರೀನ್ಸ್-ಟೆಲಿಪರದೆಗಳ ಕುರಿತು ಬರೆಯುವ ಆರ್ವೆಲ್ ಮುಂದೆ ಹೋಗಿ ಭವಿಷ್ಯದೊಳಕ್ಕೆ ಇಣುಕಿರುತ್ತಾನೆ. ಟೆಲಿಸ್ಕ್ರೀನ್ಸ್ ಅಪ್ಪಟ ಅವನದೇ ಅತಿಶಯದ ಕಲ್ಪನೆ. ಸರ್ವಾಧಿಕಾರಿ ಪ್ರಚಾರಸಮರದ ಸಾಧನವಾಗಿ ಮತ್ತು ಪ್ರಜೆಗಳ ಮೇಲೆ ಕಣ್ಗಾವಲು ಇರಿಸುವ ಸಲುವಾಗಿ ಈ ಟೆಲಿಪರದೆಗಳು ಇಮ್ಮುಖ ಆಗಿರುತ್ತವೆ. ಸರ್ವಾಧಿಕಾರಿಯ ಪ್ರಚಾರ ಸಮರದ ಜೊತೆ ಜೊತೆಗೆ, ಪ್ರಜೆಗಳ ಮನೆಮನಗಳಲ್ಲಿ ನಡೆಯುತ್ತಿರುವುದೇನು ಎಂಬ ಬೇಹುಗಾರಿಕೆಯ ಅಗೋಚರ ಕಣ್ಣು ಕಿವಿಗಳನ್ನೂ ಈ ಟೆಲಿಪರದೆಗಳು ಹೊಂದಿರುತ್ತವೆ. (ಆದರೆ ಆರ್ವೆಲ್ ನ ಈ ಕಲ್ಪನೆ ಈಗಾಗಲೆ ನಿಜವಾಗಿದೆ. ಇಮ್ಮುಖ ಸಿಸಿ ಟೀವಿಗಳು ಈಗ ಪ್ರಯೋಗದ ಹಂತದಲ್ಲಿವೆ). ಓಶಿಯಾನಾ ದೇಶದ ಈ ಇಮ್ಮುಖ ಟೆಲಿಪರದೆಗಳು ಪಿಸುಮಾತಿಗಿಂತ ತುಸುವೇ ಗಟ್ಟಿಯಾಗಿ ಮಾತಾಡಿದರೂ ಗ್ರಹಿಸಿ ಸರ್ಕಾರಕ್ಕೆ ತಲುಪಿಸುತ್ತಿರುತ್ತವೆ. ಆದರೆ ತಮ್ಮ ಮೇಲೆ ಯಾವಾಗ ಕಣ್ಗಾವಲು ಜಾರಿಯಲ್ಲಿದೆ, ಯಾವಾಗ ಇಲ್ಲ ಎಂಬುದು ಪ್ರಜೆಗಳಿಗೆ ಗೊತ್ತಾಗುತ್ತಲೇ ಇರಲಿಲ್ಲ.

ಹಾಗೆಯೇ ಓಶಿಯಾನಿಯಾದ ಸರ್ವಾಧಿಕಾರಿಯು, ರೇಡಿಯೋಗಳನ್ನು ಕೂಡ ಶ್ರಮಿಕ ವರ್ಗಗಳ ಜನರ ಮನೆ ಮನೆಗಳಲ್ಲಿ ಕಡ್ಡಾಯವಾಗಿ ಇರಿಸಿರುತ್ತಾನೆ. ಕಣ್ಗಾವಲು ಇರಿಸುವುದು ರೇಡಿಯೋದ ಉದ್ದೇಶ ಆಗಿರುವುದಿಲ್ಲ. ಆದರೆ ಅವುಗಳನ್ನು ಸ್ವಿಚ್ ಆಫ್ ಮಾಡುವುದು ಸಾಧ್ಯವೇ ಇರಲಿಲ್ಲ. ಅವುಗಳ ನಿರ್ಮಾಣವೇ ಹಾಗಿರುತ್ತಿತ್ತು. ರೇಡಿಯೋಗಳ ದನಿಯ ಮಟ್ಟವನ್ನು ತಗ್ಗಿಸಬಹುದಿತ್ತು. ಆದರೆ ತಗ್ಗಿಸಿದ್ದು ಕೂಡ ಸರ್ವಾಧಿಕಾರದ ಗಮನಕ್ಕೆ ಬರುತ್ತಿತ್ತು. ಹಾಗೆ ತಗ್ಗಿಸುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆಯೇ ಆಗಿತ್ತು.

ಓಶಿಯಾನಿಯಾದ ಬಹುಸಂಖ್ಯಾತ ಶ್ರಮಿಕ ವರ್ಗದ ಜನರನ್ನು ಸದಾ ಅಗ್ಗದ ಮನರಂಜನೆ ಮತ್ತು ಕರ್ಕಶ ಸದ್ದುಗಳ ಅಮಲಿನಲ್ಲಿ ಇರಿಸುವುದೇ ಸರ್ವಾಧಿಕಾರದ ಉದ್ದೇಶವಾಗಿರುತ್ತದೆ. ದೇಶಭಕ್ತಿಯ ಗೀತೆಗಳು, ಹುಸಿ ಆರ್ಥಿಕ ಯಶಸ್ಸಿನ ಕಟ್ಟುಕತೆಗಳು ಪ್ರಚಾರ ಸಮರ, ಲಾಟರಿ ಟಿಕೆಟ್ ಫಲಿತಾಂಶಗಳು ಹಾಗೂ ಕರ್ಕಶ ಮಿಲಿಟರಿ ಸಂಗೀತವನ್ನು ಈ ರೇಡಿಯೋಗಳಲ್ಲಿ ಪ್ರಸಾರ ಮಾಡಲಾಗುತ್ತಿರುತ್ತದೆ. ಶ್ರಮಿಕ ವರ್ಗ ಜೂಜಿನ ಗೀಳಿಗೆ ಬಿದ್ದು ಖರೀದಿಸುವ ಈ ಲಾಟರಿ ಟಿಕೆಟ್ ಗಳಿಗೆ ದೊಡ್ಡ ಮೊತ್ತದ ಬಹುಮಾನಗಳು ಬರುತ್ತಿರಲೇ ಇಲ್ಲ.

ಇಮ್ಮುಖ ಟೆಲಿಪರದೆಗಳು ಮತ್ತು ಸ್ವಿಚ್ ಆಫ್ ಮಾಡಲು ಸಾಧ್ಯವೇ ಇಲ್ಲದ ರೇಡಿಯೋಗಳ ಈ ವ್ಯವಸ್ಥೆಯು ಪ್ರಜೆಗಳ ಖಾಸಗಿತನ, ನಿಶ್ಯಬ್ದ, ಸ್ವತಂತ್ರ ಆಲೋಚನೆಯ ಅಂಶಗಳನ್ನು ಅಳಿಸಿ ಹಾಕಿರುತ್ತವೆ. ವರ್ತಮಾನದ ಸರ್ವಾಧಿಕಾರಿ ಪ್ರಭುತ್ವಗಳು ಗುಪ್ತ ಕ್ಯಾಮೆರಾಗಳು, ಸಿಸಿ ಟಿವಿಗಳು, ಸ್ಮಾರ್ಟ್ ಫೋನ್‌ಗಳು, ಸ್ಪೀಕರ್‌ಗಳು ಹಾಗೂ ಅತ್ಯಾಧುನಿಕ ಸೂಕ್ಷ್ಮಸಲಕರಣೆಗಳ ಮೂಲಕ ಕಣ್ಗಾವಲು ಇಡುತ್ತ ಬಂದಿವೆ. ‘Big Brother Is Watching You’ (ದೊಡ್ಡಣ್ಣನ ಕಣ್ಗಾವಲಿದೆ ನಿಮ್ಮ ಮೇಲೆ) ಎಂಬ ನುಡಿಗಟ್ಟು ಬಂದದ್ದೇ ಆರ್ವೆಲ್ ನ ಈ ಕಾದಂಬರಿಯಿಂದ.

78 ವರ್ಷಗಳ ಹಿಂದಿನ ಈ ಕಾಲ್ಪನಿಕ ಕಣ್ಗಾವಲನ್ನು, ಇಂದಿನ ದಿನಮಾನದ ಅನೇಕ ‘ಜನತಾಂತ್ರಿಕ’ ಸರ್ಕಾರಗಳೂ, ಜನತಂತ್ರದ ಮುಸುಕು ಹೊದ್ದ ಸರ್ವಾಧಿಕಾರಿ ಸರ್ಕಾರಗಳೂ, ಅಪ್ಪಟ ಸರ್ವಾಧಿಕಾರಿ ಸರ್ಕಾರಗಳು ನಿಜವಾಗಿಸಿವೆ. ಕಣ್ಗಾವಲು ಹೆಚ್ಚಿದ್ದೀತು ಇಲ್ಲವೇ ತುಸು ಕಡಿಮೆ ಇದ್ದೀತು, ಆದರೆ ಕಣ್ಗಾವಲು ಬೇಡವೆನ್ನುವ ಸರ್ಕಾರಗಳು ವಿರಳಾತಿವಿರಳ.

ನಮ್ಮದೇ ದೇಶದ ಇಂದಿನ ಪರಿಸ್ಥಿತಿಗೆ ಮರಳಿದರೆ, ಸರ್ಕಾರದ ವಿಚಕ್ಷಣಾ ದಳದ ವರದಿಗಳು, ಟೆಲಿಫೋನ್ ಕದ್ದಾಲಿಕೆ, ಮೊಬೈಲ್ ಫೋನ್ ಕದ್ದಾಲಿಕೆಯ ನಂತರ ಇಸ್ರೇಲಿನ ಅತ್ಯಾಧುನಿಕ ಬೇಹುಗಾರಿಕೆ ಸಾಧನ ಸಲಕರಣೆಗಳ ಬಳಕೆ ಜಾರಿಯಲ್ಲಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ನಾಯಕರು, ಪ್ರಶ್ನೆಗಳನ್ನು ಕೇಳುವ ಪತ್ರಕರ್ತರು ಹಾಗೂ ಜನಪರ ಹೋರಾಟಗಾರರ ಫೋನು ಕದ್ದಾಲಿಕೆ ಚಾಳಿಗೆ ಹೊಸ ರಭಸ ನೀಡಿತು.

ಅಮೆರಿಕೆಯ ಆ್ಯಪಲ್ ಮೊಬೈಲ್ ಫೋನ್ ಕಂಪನಿ ಭಾರತದ ಪ್ರತಿಪಕ್ಷಗಳ ಹಲವಾರು ನಾಯಕರು, ಪತ್ರಕರ್ತರು ಮತ್ತಿತರರಿಗೆ ಅಪಾಯ ಸೂಚನೆಯನ್ನು ವರ್ಷಗಳ ಹಿಂದೆಯೇ ಕಳಿಸಿತ್ತು. ನಿಮ್ಮ ಫೋನುಗಳು ಪ್ರಭುತ್ವ ಪ್ರಾಯೋಜಿತ ಹ್ಯಾಕರ್ ಗಳ ದಾಳಿಗೆ ಗುರಿಯಾಗಿವೆ ಎಂಬುದು ಈ ಸೂಚನೆಯ ಸಾರಾಂಶವಾಗಿತ್ತು.

2021ರಲ್ಲಿ ಮೋದಿ ಸರ್ಕಾರ ತನ್ನ ರಾಜಕೀಯ ಎದುರಾಳಿಗಳು, ಪತ್ರಕರ್ತರು, ನ್ಯಾಯಮೂರ್ತಿಗಳ ವಿರುದ್ಧ ಪ್ರಯೋಗಿಸಿದ್ದ ಇಸ್ರೇಲಿ ಬೇಹುಗಾರಿಕೆ ಸೈಬರಾಸ್ತ್ರ ‘ಪೆಗಸಸ್’ ಬಿರುಗಾಳಿಯನ್ನೇ ಎಬ್ಬಿಸಿತ್ತು. ಭಾರತದಲ್ಲಿ ಪೆಗಸಸ್ ದಾಳಿ ಈ ಹಿಂದೆ  ಸುದ್ದಿಗೆ ಬಂದಿತ್ತು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ನಾಲ್ಕನೆಯ ಅಂಗವೆಂದು ಕರೆಯಲಾಗುವ ಪತ್ರಿಕಾಂಗಗಳು ಈ ಅಕ್ರಮ ಅನೈತಿಕ, ಜನತಂತ್ರ ವಿರೋಧಿ ದಾಳಿಗೆ ತುತ್ತಾಗಿದ್ದವು. ಸಾಮಾಜಿಕ ರಾಜಕೀಯ ಹೋರಾಟಗಾರರನ್ನೂ ಬಿಟ್ಟಿರಲಿಲ್ಲ ಈ ಕಣ್ಗಾವಲು.

ನಿರ್ದಿಷ್ಟ ಮೊಬೈಲ್ ಪೋನ್ ಅಥವಾ ಕಂಪ್ಯೂಟರಿಗೆ ಸುಳಿವೇ ಇಲ್ಲದಂತೆ ನುಗ್ಗಿಸಲಾಗುವ ಪೆಗಸಸ್ ಅಸ್ತ್ರವು ಸಂಬಂಧಪಟ್ಟ  ಫೋನ್ ಅಥವಾ ಕಂಪ್ಯೂಟರನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಅರ್ಥಾತ್ ಆ ಪೋನ್ -ಕಂಪ್ಯೂಟರನ್ನು ಬೇಹುಗಾರಿಕೆ ನಡೆಸುವವರ ನಿಯಂತ್ರಣಕ್ಕೆ ಒಪ್ಪಿಸಿಕೊಡುತ್ತದೆ. ಆ ಫೋನಿನ ಮಾಲೀಕ ನಿರ್ದಿಷ್ಟ ಫೋನಿನಲ್ಲಿ ಮಾಡಬಹುದಾದ ಎಲ್ಲ ಕ್ರಿಯೆಗಳನ್ನು ಬೇಹುಗಾರಿಕೆ ನಡೆಸುವವರೂ ಮಾಡಬಹುದು. ಅಷ್ಟೇ ಅಲ್ಲ, ನಿರ್ದಿಷ್ಟ ಫೋನಿನ ಆಸುಪಾಸು ನಡೆಯುವ ಮಾತುಕತೆಗಳು, ಚಟುವಟಿಕೆಗಳ ಧ್ವನಿಮುದ್ರಣ ಮಾಡಿಕೊಳ್ಳಬಹುದು. ಫೋನಿನ ಕ್ಯಾಮೆರಾ ತಂತಾನೇ ಚಾಲನೆಯಾಗಿ ಫೋನಿನ ಆಸುಪಾಸು ನಡೆಯುವ ಎಲ್ಲ ದೃಶ್ಯಗಳನ್ನೂ ಚಿತ್ರೀಕರಿಸಿಕೊಂಡು ಬೇಹುಗಾರರಿಗೆ ರವಾನಿಸುತ್ತದೆ. ಬೇಹುಗಾರಿಕೆಗೆ ಶಿಕಾರಿಯಾದ ಫೋನನ್ನು ಸೈಬರಾಸ್ತ್ರ ಪ್ರವೇಶ ಮಾಡುವುದರಿಂದ ಹಿಡಿದು, ಅದು ನಡೆಸುವ ಈ ಯಾವುದೇ ಕ್ರಿಯೆಯು ಫೋನಿನ ಒಡತಿ-ಒಡೆಯನ ಅರಿವಿಗೆ ಬರುವುದಿಲ್ಲ. ನಾಲ್ಕು ಗೋಡೆಯ ನಡುವೆ ನಡೆಯುವ ತಮ್ಮ ಖಾಸಗಿ ಚಟುವಟಿಕೆಗಳನ್ನು ಬಟಾಬಯಲಿನಲ್ಲಿ ನಡೆಸಿದಂತೆ. ಊಹೆಗೂ ನಿಲುಕದ ಭಯಾನಕ ಸ್ಥಿತಿ. ಹೀಗಾಗಿ ಈ ಬೇಹುಗಾರಿಕೆ ಇಲ್ಲಿಯ ತನಕ ನಾವು ಕಂಡು ಕೇಳಿರುವ ಕೇವಲ ಫೋನುಗಳ ಕದ್ದಾಲಿಕೆಯ ಸಾಧಾರಣ ಬೇಹುಗಾರಿಕೆ ಅಲ್ಲ.

121 ಮಂದಿ ಭಾರತೀಯರ ವಾಟ್ಸ್ಯಾಪ್ ಸಂದೇಶಗಳನ್ನು ಹ್ಯಾಕ್ ಮಾಡಲಾಗಿತ್ತು. ಆಗ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಅಂಶ ನಿಚ್ಚಳವಾಗಿರಲಿಲ್ಲ. ಪೆಗಸಸ್ ತಂತ್ರಾಂಶವನ್ನು ತಾನು ಖರೀದಿ ಮಾಡಿಯೇ ಇಲ್ಲ ಎಂದು ಮೋದಿ ಸರ್ಕಾರ ಅಂದು ಗಟ್ಟಿಯಾಗಿ ನಿರಾಕರಿಸಿರಲಿಲ್ಲ. ಇಂದು ಕೂಡ ಅಲ್ಲಗಳೆದಿಲ್ಲ.

ಈ ಅಪಾಯ ಸೂಚನೆಗಳ ಪ್ರಿಂಟ್ ಔಟ್ ಗಳು, ಸ್ಕ್ರೀನ್‌ಶಾಟ್ ಗಳನ್ನು ತೆಗೆದುಕೊಟ್ಟರೂ, ಪ್ರತಿಪಕ್ಷಗಳ ನಾಯಕರ ಈ ಆಪಾದನೆ ಅಸ್ಪಷ್ಟ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿತ್ತು.

‘ಪೆಗಸಸ್’ ಸೈಬರಾಸ್ತ್ರದ ಖರೀದಿ- ಬಳಕೆ ಕುರಿತು ಸುಪ್ರೀಮ್ ಕೋರ್ಟು ತನಿಖೆಗೆ ಆದೇಶ ನೀಡಿತ್ತು. ತನಿಖೆಗೆ ಕೇಂದ್ರ ಸರ್ಕಾರ ಸಹಕರಿಸಲಿಲ್ಲ. ಆದರೂ ತನಿಖೆ ಪೂರ್ಣಗೊಂಡಿದೆ. ತನಿಖಾ ವರದಿ ಈಗಲೂ ಮೊಹರು ಮಾಡಿದ ಲಕೋಟೆಯಲ್ಲಿ ‘ಬಂಧಿ’ಯಾಗಿದೆ.

ಪೆಗಸಸ್ ಎಬ್ಬಿಸಿದ್ದ ಬಿರುಗಾಳಿ ಅಡಗುವ ತನಕ ಕಾದಿತ್ತು ಮೋದಿ ಸರ್ಕಾರ. ಪೆಗಸಸ್‌ನಂತಹುದೇ ಮತ್ತೊಂದು ಬೇಹುಗಾರಿಕೆ ಸೈಬರಾಸ್ತ್ರದ ಖರೀದಿಗೆ ಮುಂದಾಗಿದೆ ಎಂದು ಬ್ರಿಟನ್ನಿನ ಪ್ರಸಿದ್ಧ ದಿನಪತ್ರಿಕೆ ‘ಫೈನಾನ್ಷಿಯಲ್ ಟೈಮ್ಸ್’  ವರದಿ ಮಾಡಿತ್ತು. ಪೆಗಸಸ್‌ನ ಪರ್ಯಾಯ ಬೇಹುಗಾರಿಕೆ ಸಾಧನಗಳ ಪೂರೈಕೆಗಾಗಿ ಭಾರತ ಸರ್ಕಾರ ವಿದೇಶೀ ಸಂಸ್ಥೆಗಳಿಂದ ‘ಬಿಡ್’ ಕರೆದಿದೆ ಎಂದೂ ಎಫ್.ಟಿ. ವರದಿ ಹೇಳಿತ್ತು. ಈ ಹೊಸ ಬೇಹುಗಾರಿಕೆ ಸಾಧನಗಳನ್ನು ‘ಪ್ರಿಡೇಟರ್,’ ‘ಕಾಗ್ನೈಟ್’, ‘ಕ್ವಾಡ್ರೀಮ್’ ಎಂದು ಗುರುತಿಸಿತ್ತು.

ಕಣ್ಗಾವಲಿನ ಈ ಸುತ್ತಿನ ಬಿಸಿ ಆರಿದ ನಂತರ ಮೋದಿ ಸರ್ಕಾರ ಮೊನ್ನೆ ಹೊಸ ಕಣ್ಗಾವಲಿನ ದುಸ್ಸಾಹಸಕ್ಕೆ ಕೈ ಹಾಕಿತು. ಸಂಚಾರ್ ಸಾಥಿ ಎಂಬ ಹೊಸ ಆ್ಯಪ್ ನ್ನು ದೇಶದ ನಾಗರಿಕರೆಲ್ಲ ತಮ್ಮ ಮೊಬೈಲ್ ಫೋನುಗಳಲ್ಲಿ ಕಡ್ಡಾಯವಾಗಿ ಹಾಕಿಕೊಳ್ಳಬೇಕೆಂದು ಆದೇಶ ಹೊರಡಿಸಿತು. ಕಣ್ಗಾವಲಿನ ಶಂಕೆಯ ವ್ಯಾಪಕ ವಿರೋಧದ ಅಲೆಗಳೇ ಎದ್ದವು. ಈ ಹಿನ್ನೆಲೆಯಲ್ಲಿ ಕಡ್ಡಾಯ ಅಳವಡಿಕೆಯ ಅಂಶವನ್ನು ಸರ್ಕಾರ ಕೈ ಬಿಟ್ಟಿತು. ಆದರೂ ವಿರೋಧ ಅಡಗಲಿಲ್ಲ. ಇಂದು ಅಪರಾಹ್ನದ ಹೊತ್ತಿಗೆ ಇಡೀ ಆದೇಶವನ್ನೇ ರದ್ದು ಮಾಡಬೇಕಾಯಿತು.

ದೇಶದ ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಲು, ಸಾರ್ವಜನಿಕ ಒಳಿತು ಸಾಧಿಸಲು  ಸಂಬಂಧಪಟ್ಟ ವ್ಯಕ್ತಿಗಳ ಮೇಲೆ ಗೋಪ್ಯ ನಿಗಾ ಇರಿಸಿ ಅವರ ದೂರವಾಣಿ ಮಾತುಕತೆಗಳು ಮತ್ತು ಡಿಜಿಟಲ್ ಮಾಹಿತಿಗಳನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸುವ ಅಧಿಕಾರ ಸರ್ಕಾರಗಳಿಗೆ ಇದೆ. ಭಾರತೀಯ ಟೆಲಿಗ್ರಾಫ್ ಕಾಯಿದೆ, ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ಆದರೆ ಹಾಗೆ ಮಾಡಲು ಕಾನೂನು ವಿಧಿ ವಿಧಾನಗಳಿವೆ.

ತನ್ನ ಪ್ರಜೆಗಳ ನಾಗರಿಕ ಹಕ್ಕುಗಳು ಮತ್ತು ಖಾಸಗಿತನವನ್ನು, ಜನತಂತ್ರವನ್ನು ಗೌರವಿಸಿ ರಕ್ಷಿಸುವುದು ಆಯಾ ದೇಶದ ಸರ್ಕಾರಗಳ ಆದ್ಯ ಕರ್ತವ್ಯ. ಆದರೆ ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿದೆ. ತಾನೇ ಜಾರಿಗೊಳಿಸಿರುವ ದತ್ತಾಂಶ ಸಂರಕ್ಷಣಾ ಕಾಯಿದೆಯನ್ನು ಉಲ್ಲಂಘಿಸಲು ಮೋದಿ ಸರ್ಕಾರ ತನಗೆ ವಿನಾಯಿತಿ ಕೊಟ್ಟುಕೊಂಡಿರುವುದು ಜನತಂತ್ರದ ಬಹುದೊಡ್ಡ ಅಣಕ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....