ಈ ದಿನ ಸಂಪಾದಕೀಯ | ಬಾಲಕಿಯರಿಗೆ ಲೈಂಗಿಕ ಕಿರುಕುಳ; ಪೋಕ್ಸೋ ಆರೋಪಿಯ ಖುಲಾಸೆ, ಕಾಯ್ದೆಯ ಅಣಕವಲ್ಲವೇ?

Date:

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮಿಯ ವಿರುದ್ಧ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ನೀಡಿದ್ದ ಲೈಂಗಿಕ ಕಿರುಕುಳದ ದೂರು ಎರಡು ವರ್ಷಗಳ ಹಿಂದೆ ದೇಶದಲ್ಲೇ ಭಾರೀ ಸುದ್ದಿ ಮಾಡಿತ್ತು. ಮಠದ ಆವರಣದಲ್ಲೇ ಇರುವ ಹಾಸ್ಟೆಲ್‌ನಲ್ಲಿ ಆಶ್ರಯಪಡೆದಿದ್ದ ಅಮಾಯಕ ವಿದ್ಯಾರ್ಥಿನಿಯರಿವರು. ಆದರೆ, ಕಾನೂನು ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವಲ್ಲಿ ಸೋತಿದೆ.

ಕಠಿಣ ಪೋಕ್ಸೋ ಕಾಯಿದೆಯಡಿ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಸ್ವಾಮಿ ಮತ್ತು ಇಬ್ಬರು ಆರೋಪಿಗಳನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸೂಕ್ತ ಸಾಕ್ಷ್ಯಗಳಿಲ್ಲವೆಂದು ಖುಲಾಸೆಗೊಳಿಸಿದೆ. ಸ್ವಾಮಿಯ ವಿರುದ್ಧ ಎರಡನೆಯ ಪ್ರಕರಣ ದಾಖಲಾಗಿದ್ದು, ಈ ಸಂಬಂಧದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆಯಿದೆ. ಸಾಕ್ಷ್ಯಗಳನ್ನು ನಾಶಗೊಳಿಸಿದ ಆಪಾದನೆಯ ಮತ್ತೊಂದು ಪ್ರಕರಣ ಬಾಕಿ ಇದೆ.

ಸ್ವಾಮಿಯ ವಿರುದ್ಧ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ನೀಡಿದ್ದ ಲೈಂಗಿಕ ಕಿರುಕುಳದ ದೂರು ಎರಡು ವರ್ಷಗಳ ಹಿಂದೆ ದೇಶದಲ್ಲೇ ಭಾರೀ ಸುದ್ದಿ ಮಾಡಿತ್ತು. ಪ್ರಗತಿಪರನೆಂದು  ಹೆಸರು ಗಳಿಸಿದ್ದ ಸ್ವಾಮಿಯ ಮೇಲಿನ ಹೇಯಕೃತ್ಯದ ಆಪಾದನೆಗಳು ಭಕ್ತಾದಿಗಳು- ಪ್ರಜ್ಞಾವಂತರನ್ನು ಬೆಚ್ಚಿ ಬೀಳಿಸಿದ್ದವು. ಮಠದ ಆವರಣದಲ್ಲೇ ಇರುವ ಹಾಸ್ಟೆಲ್‌ನಲ್ಲಿ ಆಶ್ರಯಪಡೆದಿದ್ದ ಅಮಾಯಕ ವಿದ್ಯಾರ್ಥಿನಿಯರಿವರು. ಪೋಕ್ಸೋ ಕಾಯ್ದೆಯಡಿ ದಾಖಲಾದ ದೂರಿನ ಪ್ರಕಾರ ಎಫ್‌ಐಆರ್‌ ನಂತರ ಆರೋಪಿಯನ್ನು ತಕ್ಷಣ ಬಂಧಿಸಬೇಕಿತ್ತು. ಪ್ರಭಾವಿ ಆರೋಪಿಯನ್ನು ಬಂಧಿಸಲು ಪೊಲೀಸರು ಹಿಂದೆಮುಂದೆ ನೋಡಿದ್ದರು. ಸಾಮಾಜಿಕ ಒತ್ತಡ ಹೆಚ್ಚಿದ ನಂತರ ಪೊಲೀಸರು ವಿಧಿಯಿಲ್ಲದೇ ಆರೋಪಿಯನ್ನು ಬಂಧಿಸಿದೆ ವಿಧಿಯಿರಲಿಲ್ಲ ನಂತರ ಜೈಲಿನಿಂದ ಬಿಡುಗಡೆಯಾಗಿದ್ದ ಸ್ವಾಮಿಯ ಜಾಮೀನನ್ನು ಸುಪ್ರೀಮ್ ಕೋರ್ಟು ರದ್ದುಗೊಳಿಸಿತ್ತು. ಪ್ರಭಾವಿಗಳ ಮುಂದೆ ಮಂಡಿ ಚಿಪ್ಪು ಸವೆಯುವಷ್ಟು ಸಲ ಮಂಡಿ ಊರಿರುವ ವ್ಯವಸ್ಥೆಯು ಮತ್ತೊಮ್ಮೆ ಬೇರೆ ದಾರಿಯಿಲ್ಲದೆ ಸ್ವಾಮಿಯನ್ನು ಜೈಲಿಗೆ ಕಳಿಸಿತ್ತು. ಆದರೆ, ಇದೀಗ ಆರೋಪಿಗಳಾದ ಶಿವಮೂರ್ತಿ, ವಾರ್ಡನ್‌ ರಶ್ಮಿ ಹಾಗೂ ಮ್ಯಾನೇಜರ್ ಪರಮಶಿವಯ್ಯ ಮೂವರನ್ನೂ ಚಿತ್ರದುರ್ಗದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರ್ದೋಷಿಗಳು ಎಂದು ಖುಲಾಸೆಗೊಳಿಸಿದೆ. ಒಂದು ಸಾಲಿನ ತೀರ್ಪು ನೀಡಿರುವ ಪೀಠ “ಆರೋಪಕ್ಕೆ ಪೂರಕ ಸಾಕ್ಷ್ಯ ಇಲ್ಲ, ಹಾಗಾಗಿ ಆರೋಪಮುಕ್ತಗೊಳಿಸಿ ಬಿಡುಗಡೆ ಮಾಡಲಾಗಿದೆ” ಎಂದು ಸಾರಿದೆ. ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವುದಕ್ಕೆ ವೈದ್ಯಕೀಯ ಸಾಕ್ಷ್ಯಗಳಿಲ್ಲ. ಸ್ಥಳ ಮಹಜರು ವೇಳೆ ಸಂತ್ರಸ್ತೆಯರ ವಿವರಣೆಗೆ ಹೋಲಿಕೆಯಾಗುತ್ತಿಲ್ಲ. ಸಂತ್ರಸ್ತೆಯರ ಮೇಲೆ ಹಲ್ಲೆ ನಡೆದಿದೆ ಎನ್ನುವ ಆರೋಪವಿದೆ. ಆದರೆ ಹಲ್ಲೆ ನಡೆಸಿದ್ದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲʼ ಎಂದು ಹೇಳಿದೆ. ಯಾವ ಮಹತ್ವದ ಉದ್ದೇಶದಿಂದ ಲೈಂಗಿಕ ಅಪರಾಧ-ಕಿರುಕುಳ ಲಂಪಟ ವಿಷಯ ವಸ್ತುಗಳಿಂದ ಅಪ್ರಾಪ್ತ ಮಕ್ಕಳನ್ನು ರಕ್ಷಿಸುವ ಕಾಯ್ದೆಯನ್ನು(POCSO) ರೂಪಿಸಲಾಗಿದೆಯೋ ಆ ಉದ್ದೇಶವನ್ನೇ ಅಣಕಿಸಿದಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ 2012ರಲ್ಲಿ ಈ ಮಹತ್ವ ಕಾಯ್ದೆ ಜಾರಿಯಾಗಿತ್ತು. ಕಾಯ್ದೆಯ ಪ್ರಕಾರ, ಸಂತ್ರಸ್ತರ ಹೇಳಿಕೆಯೇ ಮುಖ್ಯ. ನ್ಯಾಯಾಧೀಶರ ಮುಂದೆ ಸಂತ್ರಸ್ತೆ ನೀಡುವ ಹೇಳಿಕೆ ಬಹಳ ಮಹತ್ವದ ಸಾಕ್ಷ್ಯ. ಈ ಸಾಕ್ಷ್ಯದ ಕುರಿತು ನ್ಯಾಯಾಲಯಕ್ಕೆ ಮನವರಿಕೆಯಾದಲ್ಲಿ, ಆಪಾದಿತನನ್ನು ಶಿಕ್ಷಿಸಲು ಈ ಸಾಕ್ಷ್ಯವಷ್ಟೇ ಸಾಕು. ಆದರೆ ಸಮಾಜದಲ್ಲಿ ಪ್ರತಿಷ್ಠಿತರು ಎಂದು ಹೇಳಿಕೊಳ್ಳುವ ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಶಿಕ್ಷಣ ಸಂಸ್ಥೆಯ ಮುಖಂಡರು ಅಪ್ರಾಪ್ತರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಾಗ, ಎಫ್‌ಐಆರ್‌ ದಾಖಲಿಸುವುದರಿಂದ ಹಿಡಿದು ಬಂಧನ, ಚಾರ್ಜ್‌ಶೀಟ್ ಸಲ್ಲಿಕೆ, ವಿಚಾರಣೆ, ಸಾಕ್ಷ್ಯ ಸಂಗ್ರಹ ಹೀಗೆ ಎಲ್ಲ ಹಂತಗಳಲ್ಲೂ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ. ಪ್ರತಿಷ್ಠಿತ ಆರೋಪಿಗಳನ್ನು ರಕ್ಷಿಸಲು ಹಣಬಲ, ರಾಜಕೀಯ ಬಲ ಮತ್ತು ಕಾನೂನು ಬಲ ಎಲ್ಲವೂ ಒಂದಾಗಿ ‘ಉಳ್ಳವರಿಗೊಂದು ಕಾನೂನು, ಇಲ್ಲದವರಿಗೆ ಮತ್ತೊಂದು’ ಎಂಬ ಸಂದೇಶ ರವಾನೆಯಾಗುತ್ತಿದೆ.

ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲಿನ ಪ್ರಕರಣದಲ್ಲಿ ಪೋಕ್ಸೋ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಮುರುಘಾಶ್ರೀ ಪ್ರಕರಣದಲ್ಲಿ ಶಿಕ್ಷೆಯಾಗುವ ನಿರೀಕ್ಷೆ ದಟ್ಟವಾಗಿತ್ತು. ಆದರೆ ಈಗ ಹೊರಬಿದ್ದಿರುವ ತೀರ್ಪು ಬಹಳ ನಿರಾಸೆ ಮೂಡಿಸಿದೆ. ಅಷ್ಟಕ್ಕೂ ಮುರುಘಾಶ್ರೀ ವಿರುದ್ಧ ಪ್ರಕರಣ ದಾಖಲಾದಾಗ ಹಲವು ಹೆಣ್ಣುಮಕ್ಕಳು, ಬಹಳ ವರ್ಷಗಳ ಹಿಂದೆ ಮಠದಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ, ಕೆಲಸ ಮಾಡುತ್ತಿದ್ದಾಗ ತಮ್ಮ ಮೇಲೆ ಸ್ವಾಮಿಯಿಂದಾದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದರು. ಮಠದ ಸಿಬ್ಬಂದಿ, ಸಹಾಯಕರು ಈ ಸ್ವಾಮೀಜಿಯ ನಡತೆಯ ಬಗ್ಗೆ, ಮಕ್ಕಳ ಮೇಲಾಗುತ್ತಿದ್ದ ಲೈಂಗಿಕ ಕಿರುಕುಳವನ್ನು ಕಂಡೂ ಕಾಣದಂತೆ ಸುಮ್ಮನಿದ್ದರು. ಹಾಸ್ಟೆಲ್‌ ವಾರ್ಡನ್‌ ರಶ್ಮಿಯೇ ಮಕ್ಕಳನ್ನು ಸ್ವಾಮೀಜಿಯ ಕೊಠಡಿಗೆ ಕಳಿಸುತ್ತಿದ್ದರು ಎಂದು ಸಂತ್ರಸ್ತ ಮಕ್ಕಳು ಆರೋಪಿಸಿದ್ದರು. 

ಸ್ವಾಮಿಯ ವಿರುದ್ದದ ಇನ್ನೊಂದು ಪೋಕ್ಸೋ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವ ಪ್ರಯತ್ನವನ್ನು ಸರ್ಕಾರ ತ್ವರಿತವಾಗಿ ಮಾಡಬೇಕಿದೆ. ಸಾಕ್ಷ್ಯನಾಶದ ಆಪಾದನೆಯ ವಿಚಾರಣೆಯೂ ಚುರುಕಾಗಿ ನಡೆಯಬೇಕಿದೆ.

ಮುರುಘಾ ಶ್ರೀ ವಿರುದ್ದ ಪ್ರಕರಣ ದಾಖಲಿಸುವಲ್ಲಿ ಮೈಸೂರಿನ ಒಡನಾಡಿ ಸಂಸ್ಥೆ ಮಹತ್ವದ ಪಾತ್ರ ವಹಿಸಿತ್ತು. ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರುವುದಾಗಿ  ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ ತಿಳಿಸಿದ್ದಾರೆ. ಸಂತ್ರಸ್ತ ಮಕ್ಕಳಿಗೆ ಹೈಕೋರ್ಟಿನಲ್ಲಿ ನ್ಯಾಯ ಸಿಗುತ್ತದೆಂಬ ನಿರೀಕ್ಷೆ ಇಟ್ಟುಕೊಳ್ಳಬೇಕಿದೆ.

ದೇಶಾದ್ಯಂತ 2017 ಮತ್ತು 2022ರ ನಡುವೆ ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಶೇ. 94ರಷ್ಟು ಏರಿಕೆಯಾಗಿದೆ ಎಂದು “ಇನ್‌ಟು ದಿ ಲೈಟ್‌ ಇಂಡೆಕ್ಸ್‌ 2025′ ಹೇಳಿದೆ.

ವರದಿಯ ಪ್ರಕಾರ ಅಪರಾಧ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. 33,210ರಿಂದ 64,469ಕ್ಕೆ ಏರಿಕೆಯಾಗಿದೆ. ಎಂಟು ಮಕ್ಕಳ ಪೈಕಿ ಒಂದು ಮಗು ಹದಿನೆಂಟು ವರ್ಷ ತುಂಬುವ ಮೊದಲೇ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರಕ್ಕೆ ಒಳಗಾಗುತ್ತಿದೆ. ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 12,943 ಪ್ರಕರಣಗಳು ದಾಖಲಾಗಿವೆ. ಆದರೆ ಶಿಕ್ಷೆಯ ಪ್ರಮಾಣ ತೀರಾ ಕಡಿಮೆಯಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಹಿತಿಯ ಪ್ರಕಾರ, ಸಾರ್ವಜನಿಕ ಜೀವನದಲ್ಲಿ ಪೋಷಕರು ಅಥವಾ ಸಂತ್ರಸ್ತ ಕುಟುಂಬಸ್ಥರು ತಮ್ಮ ಘನತೆಗೆ ‘ಕಳಂಕ’ ತಂದೀತೆಂಬ ಅಳುಕಿನಿಂದ ಕಾನೂನು ಪ್ರಕ್ರಿಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಹೇಳಿದೆ. ಇದು ನಿಜಕ್ಕೂ ಕಳವಳದ ಸಂಗತಿ. ತಮ್ಮ ಮಕ್ಕಳಿಗಾದ ಅನ್ಯಾಯಕ್ಕೆ ಕಾನೂನು ಹೋರಾಟ ನಡೆಸುವುದು ಹೇಗೆ ಅವಮಾನವಾಗುತ್ತದೆ? ಸಮಾಜದಲ್ಲಿ ನೆಲೆಸಿರುವ ಇಂತಹ ಹುಸಿ ಮರ್ಯಾದೆಯ ಧೋರಣೆಯೇ ಆಪಾದಿತರ ಪರವಾಗಿ ಕಾನೂನಿನ ದುರ್ಬಳಕೆಗೆ ಪ್ರೇರಣೆಯಾಗುತ್ತಿದೆ.   

16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ (ಹೆಣ್ಣು ಮತ್ತುಗಂಡು) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲಿ 20 ವರ್ಷಗಳವರೆಗೆ ಜೀವಾವಧಿ ಶಿಕ್ಷೆ, ಜೀವವಿರುವವರೆಗೂ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ ಪೊಲೀಸರ ನಿರ್ಲಕ್ಷ್ಯದ ತನಿಖೆಯ ಕಾರಣ ಕೇಸುಗಳು ಖುಲಾಸೆಯಲ್ಲಿ ಕೊನೆಗೊಳ್ಳುತ್ತಿವೆ. ಹಲವು ಸಲ ಕೋರ್ಟ್‌ಗಳೂ ಪೋಕ್ಸೋ ಪ್ರಕರಣಗಳಲ್ಲಿ ಪ್ರಭಾವಿಗಳನ್ನು ಬಂಧಿಸದಂತೆ ತಡೆಯುವುದು, ವಿಚಾರಣೆಗೆ ತಡೆ ನೀಡುವುದುಂಟು. ಬಡ ವರ್ಗದ ಸಂತ್ರಸ್ತರ ʼಅಸಹಾಯಕ ನಿರ್ಲಕ್ಷ್ಯʼವೂ ತ್ವರಿತ ಇತ್ಯರ್ಥಕ್ಕೆ ಅಡ್ಡಿಯಾಗುತ್ತಿದೆ. ಬಹಳಷ್ಟು ಪ್ರಕರಣಗಳಲ್ಲಿ ಸಾಕ್ಷ್ಯಗಳ ಕೊರತೆಯ ಕಾರಣವು ಖುಲಾಸೆಗೆ ದಾರಿಯಾಗುತ್ತಿದೆ. ಸಂತ್ರಸ್ತ ಮಕ್ಕಳು ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಯೇ ಮುಖ್ಯ ಸಾಕ್ಷ್ಯ ಎಂಬ ಕಾಯಿದೆಯೇ ಸುಳ್ಳಾಗಿ ಹೋಗಿದೆ!

ಮುರುಘಾಶ್ರೀ ಪ್ರಕರಣದಲ್ಲಿ ದೂರುದಾರ ಬಾಲಕಿಯರು ತಮಗಾದ ಅನ್ಯಾಯದ ಬಗ್ಗೆ ನ್ಯಾಯಾಧೀಶರ ಮುಂದೆ ಯಾವುದೇ ಅಳುಕಿಲ್ಲದೇ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ವಿಚಾರಣೆಯ ಸಮಯದಲ್ಲೂ ತಮ್ಮ ಮೂಲ ಹೇಳಿಕೆಗೇ ಬದ್ಧರಾಗಿದ್ದರು ಎಂದು ಒಡನಾಡಿಯ ಸ್ಟ್ಯಾನ್ಲಿ ಹೇಳುತ್ತಾರೆ. ಹಾಗಾದರೆ ಪ್ರಬಲ ಸಮುದಾಯದ ಸ್ವಾಮಿಯ ರಕ್ಷಣೆಗೆ ಇಡೀ ವ್ಯವಸ್ಥೆ ನಿಂತಿದೆಯೇ? ಇನ್ನೊಂದು ಪ್ರಕರಣದ ವಿಚಾರಣೆಗೆ ಹೈಕೋರ್ಟ್ ನೀಡಿರುವ ತಡೆ ಅನಿರ್ದಿಷ್ಟ ಅವಧಿಗೆ ಲಂಬಿಸಕೂಡದು. ಸರ್ಕಾರ ಈ ಕುರಿತು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಬೇಕು.

ಇದೇ ಬುಧವಾರ ಶಿವಮೂರ್ತಿ ಸ್ವಾಮಿ ಖುಲಾಸೆ ಆದೇಶ ಹೊರ ಬರುತ್ತಿದ್ದಂತೆ ಚಿತ್ರದುರ್ಗದ ಕೋರ್ಟ್‌ ಹೊರಗೆ ಭಕ್ತರು ಮತ್ತು ಕೆಲವು ವಕೀಲರು ಕುಣಿಯುತ್ತ ಸಂಭ್ರಮಾಚರಣೆ ಮಾಡಿದ್ದರು. ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಗುಜರಾತಿನ ಆಧ್ಯಾತ್ಮಗುರು ಅಸಾರಾಂ ಬಾಪೂ ಆರು ತಿಂಗಳ ಪೆರೋಲ್‌ನಲ್ಲಿ ಹೊರಬಂದಾಗ ಕೂಡ ಭಕ್ತರು ಹೂಮಳೆಗರೆದು ಆತನ ಮೆರವಣಿಗೆ ಮಾಡಿದ್ದರು. ಹರಿಯಾಣದ ಡೇರಾ ಸಚ್ಚಾಸೌಧದ ರಾಮ್‌ರಹೀಂ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರೂ ಕಾಲಕಾಲಕ್ಕೆ ಪೆರೋಲ್‌ನಲ್ಲಿ ಹೊರಬಂದು ಭಕ್ತರ ಸಂಭ್ರಮಕ್ಕೆ ಪಾತ್ರವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಈ ಮಟ್ಟಿನ ಗೌರವ ಸಿಗುತ್ತಿರುವುದು ಸಮಾಜದ ನೈತಿಕ ಅಧಃಪತನದ ನಿಚ್ಚಳ ಸಂಕೇತ. ಹೆಣ್ಣುಮಕ್ಕಳನ್ನು ದೇವರಂತೆ ಪೂಜಿಸಲಾಗುತ್ತಿದೆ ಎಂದು ಬರಿದೇ ಬೊಬ್ಬೆ ಹೊಡೆಯುವವರು ಅಪ್ಪಟ ಆಷಾಢಭೂತಿಗಳು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....