“ಗಂಗೆ ಯಮುನೆ ನನ್ನ ತಾಯಂದಿರು. ಈ ಎರಡೂ ನದಿಗಳ ಜಲವನ್ನು ಸ್ವಚ್ಛಗೊಳಿಸಲು ಜನಾಂದೋಲನ ನಡೆಸುವೆ. ವಿಶ್ವದ ಪ್ರಸಿದ್ಧ ಪರಿಸರವಾದಿಗಳನ್ನು ಕರೆಯಿಸುವೆ” ಎಂದಿದ್ದರು ಪ್ರಧಾನಿ. ಅವರ ಮಾತಿನಲ್ಲಿ ಎಳ್ಳಷ್ಟು ಸತ್ಯಾಂಶ ಇದ್ದಿದ್ದರೂ ಸ್ವಾಮಿ ಸಾನಂದರು ಪ್ರಾಣ ತ್ಯಾಗ ಮಾಡಬೇಕಿರಲಿಲ್ಲ.
ವಾರಣಾಸಿಯ ಗಂಗಾ ನದಿಯಲ್ಲಿ ದೋಣಿಯ ಮೇಲೆ ಇಫ್ತಾರ್ ಊಟ ಮಾಡಿ ಕೋಳಿ ಮಾಂಸದ ಮೂಳೆಗಳನ್ನು ನದಿಗೆ ಎಸೆದರು ಎಂಬ ಆರೋಪದ ಮೇಲೆ 20-25 ವರ್ಷ ವಯಸ್ಸಿನ 14 ಮಂದಿ ಮುಸಲ್ಮಾನ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಗಂಗಾ ನದಿಯ ಮೇಲೆ ತೇಲುವ ಐಷಾರಾಮಿ ಹಡಗುಗಳಲ್ಲಿ ದೇಶ-ವಿದೇಶದ ಪ್ರವಾಸಿಗರಿಗೆ ಕೋಳಿ, ಹಂದಿ ಮಾಂಸ , ಕುರಿ ಮಾಂಸ ಸೇರಿದಂತೆ ವಿವಿಧ ಬಗೆಯ ಮಾಂಸಾಹಾರಿ ಖಾದ್ಯಗಳನ್ನು ನೀಡಲಾಗುತ್ತದೆ. ಉಳಿದ ಆಹಾರ, ಮಾಂಸದ ತ್ಯಾಜ್ಯಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನದಿಯ ದಡಕ್ಕೆ ಅಥವಾ ನೇರವಾಗಿ ನದಿಯೊಳಗೆ ಎಸೆಯುತ್ತಿರುವ ಉದಾಹರಣೆಗಳಿವೆ. ಈ ಕೃತ್ಯಗಳಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುವುದಿಲ್ಲವಾದರೆ, ಕೆಲ ಯುವಕರು ಇಫ್ತಾರ್ ಆಚರಿಸಿದ್ದು ಯಾಕೆ ಅಪರಾಧ ಆಗಬೇಕು?
ಈ ಯುವಕರ ಮೇಲಿನ ಪ್ರಕರಣಗಳನ್ನು ವಾಪಸು ಪಡೆದು, ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಂತಹ ಭಾವನಾತ್ಮಕ ಭ್ರಮೆಗಳಿಗೆ ಹಿಂದೂ ಸಮುದಾಯವನ್ನು ನೂಕಿ, ಅದರ ಕಣ್ಣಿಗೆ ಮಣ್ಣೆರಚುವುದನ್ನು ನಿಲ್ಲಿಸಬೇಕು.
ಮಾಲಿನ್ಯ ಮತ್ತು ಅಭಿವೃದ್ಧಿಯೋಜನೆಯ ಎರಡು ಭಾರೀ ವಿಪತ್ತುಗಳಿಗೆ ಸಿಲುಕಿರುವ ‘ಪರಮ ಪವಿತ್ರ’ ಗಂಗಾ ನದಿ ಈಗಲೂ ಏದುಸಿರು ಬಿಡುತ್ತಿದೆ. ಎರಡೂ ವಿಪತ್ತುಗಳು ಮಾನವ ನಿರ್ಮಿತ. ಹಿಂದೂ ಧರ್ಮೀಯರಿಗೆ ಪೂಜ್ಯವೆನಿಸಿರುವ ಈ ಜೀವನದಿಯ ರಕ್ಷಣೆಗೆ ಈವರೆಗೆ 40 ಸಾವಿರ ಕೋಟಿ ರುಪಾಯಿಗಳ ವಿನಿಯೋಗ ಆಗಿದೆ. ಏನೇನು ಉದ್ದಾರ ಮಾಡಲಾಗಿದೆ ಎಂಬ ಕುರಿತು ಶ್ವೇತಪತ್ರವೊಂದನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು.
ಮೋದಿಯವರು ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಾಗಿತ್ತು. ಗಂಗಾ ನದಿಯ ಸಂರಕ್ಷಣೆಗಾಗಿ ಆಗ್ರಹಿಸಿ ಸ್ವಾಮೀಜಿಯೊಬ್ಬರು ನೂರಕ್ಕೂ ಹೆಚ್ಚು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ ಪ್ರಾಣಬಿಟ್ಟರು. ಪೂರ್ವಾಶ್ರಮದಲ್ಲಿ ಐಐಟಿ ಪ್ರೊಫೆಸರ್ ಆಗಿದ್ದ ಸ್ವಾಮಿ ಜ್ಞಾನಸ್ವರೂಪ ಸಾನಂದರು ತಾವು ಪ್ರಾಣತ್ಯಾಗ ಮಾಡುವ ಮುನ್ನ ಪ್ರಧಾನಿಯವರಿಗೆ ಮೂರು ಪತ್ರಗಳನ್ನು ಬರೆದಿದ್ದರು. ಈ ಪೈಕಿ ಪ್ರಧಾನಿ ಕಚೇರಿಯಿಂದ ಒಂದಕ್ಕೂ ಉತ್ತರ ಬರಲಿಲ್ಲ.
ಆರೆಸ್ಸೆಸ್ ನ ಹಿರಿಯರಾದ ಕೃಷ್ಣಗೋಪಾಲರ ಪ್ರಯತ್ನದ ನಂತರ ಸ್ವಾಮೀಜಿಗೆ, ಗಂಗಾ ಸಂರಕ್ಷಣ ಸಚಿವ ನಿತಿನ್ ಗಡ್ಕರಿ ಪತ್ರವೊಂದನ್ನು ಬರೆದರು. ಆದರೆ ಈ ಪತ್ರದಲ್ಲಿ ಅವರು ಉಪವಾಸ ಕೈಬಿಡಲು ಪೂರಕ ಆಗುವ ಯಾವ ಭರವಸೆಯೂ ಇರಲಿಲ್ಲ. ಗಂಗೆಯ ಪರಿಸರ ಹರಿವಿನ ಕುರಿತು ಕಾಳಜಿ ವಹಿಸುವ ಪ್ರಸ್ತಾಪವಷ್ಟೇ ಇತ್ತು. ಉಳಿದಂತೆ ಪರಿಶೀಲಿಸಲಾಗುವ ಅಪ್ಪಟ ಸರ್ಕಾರಿ- ದೇಶಾವರಿ ಉತ್ತರವಿತ್ತು. ಪರಿಸರ ಹರಿವಿನ ಶೇಕಡಾವಾರು ಪ್ರಮಾಣ ಬೇಡಿಕೆಯ ಕುರಿತು ಮೌನ ವಹಿಸಲಾಗಿತ್ತು. ಈಗಾಗಲೆ ನೀಡಲಾಗಿದ್ದ ಅನೇಕ ವೈಜ್ಞಾನಿಕ ವರದಿಗಳಿಗೆ ಅನುಗುಣವಾಗಿ ಪರಿಸರ ಹರಿವಿನ ಪ್ರಮಾಣ ಶೇ.50ರಷ್ಟಿರಬೇಕು ಎಂಬುದು ಸ್ವಾಮೀಜಿ ಆಗ್ರಹವಾಗಿತ್ತು.
“ಗಂಗೆ ಯಮುನೆ ನನ್ನ ತಾಯಂದಿರು. ಈ ಎರಡೂ ನದಿಗಳ ಜಲವನ್ನು ಸ್ವಚ್ಛಗೊಳಿಸಲು ಜನಾಂದೋಲನ ನಡೆಸುವೆ. ವಿಶ್ವದ ಪ್ರಸಿದ್ಧ ಪರಿಸರವಾದಿಗಳನ್ನು ಕರೆಯಿಸುವೆ” ಎಂದಿದ್ದರು ಪ್ರಧಾನಿ. ಅವರ ಮಾತಿನಲ್ಲಿ ಎಳ್ಳಷ್ಟು ಸತ್ಯಾಂಶ ಇದ್ದಿದ್ದರೂ ಸ್ವಾಮಿ ಸಾನಂದರು ಪ್ರಾಣ ತ್ಯಾಗ ಮಾಡಬೇಕಿರಲಿಲ್ಲ.
ಉತ್ತರ ಕಾಶಿಯಿಂದ ಸ್ವಾಮೀಜಿ 2018ರ ಫೆಬ್ರವರಿಯಲ್ಲಿ ಬರೆದಿದ್ದ ಪತ್ರದ ಕೆಲ ಸಾಲುಗಳು ಹೀಗಿವೆ- “ಭಾಯೀ, … ನೀವು ಕೆಲವು ಆಶೆಬುರುಕ, ವಿಲಾಸಪ್ರಿಯ ಪುತ್ರ ಪುತ್ರಿಯರ ಸಮೂಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರಿ ಮತ್ತು ನೀವುಗಳು ವಿಕಾಸವೆಂದು ಕರೆಯುವ ಆ ನಾಲಾಯಕರ ವಿಲಾಸದ ಸಾಧನಗಳನ್ನು (ಉದಾ- ಹೆಚ್ಚುವರಿ ವಿದ್ಯುಚ್ಛಕ್ತಿ) ಹೊಂದಿಸಲು, ಕೆಲವೊಮ್ಮೆ ಜಲಮಾರ್ಗದ ಹೆಸರಿನಲ್ಲಿ ವಯಸ್ಸಾದ ತಾಯಿಯನ್ನು ಒಜ್ಜೆ ಹೊರುವ ಹೇಸರಗತ್ತೆ ಆಗಿಸಬಯಸುವಿರಿ, ಮತ್ತೊಮ್ಮೆ ಊರ್ಜೆಯ ಅಗತ್ಯ ಪೂರೈಸಲು ನೊಗ-ನೇಗಿಲು-ಗಾಣಕ್ಕೆ ಬಿಗಿಯುವ ಎತ್ತು ಆಗಿಸುವಿರಿ. ತಾಯಿಯ ಒಡಲಿನ ರಕ್ತವೆಲ್ಲ ಲೆಕ್ಕವಿಲ್ಲದಷ್ಟು ಹಸಿದ ಪುತ್ರ ಪುತ್ರಿಯರ ಹಿಂಡನ್ನು ಪಾಲಿಸಿ ಪೋಷಿಸಲು ವ್ಯರ್ಥವಾಗುತ್ತಿದೆ. ಈ ನಾಲಾಯಕರ ಹಸಿವು ಇಂಗುವುದೇ ಇಲ್ಲ. ಹೆತ್ತಮ್ಮನ ಆರೋಗ್ಯ ಹಾಳಾದ ಕುರಿತು ಇವರಿಗೆ ಕೊಂಚವೂ ಗಮನವಿಲ್ಲ”.
“ತಾಯಿಯ (ಗಂಗಾ ನದಿ) ರಕ್ತಬಲದಿಂದಲೇ ಸರದಾರರಾದ ನಿಮ್ಮ ಚಾಂಡಾಲ-ಚೌಕಡಿಯ ಹಲವು ಸದಸ್ಯರ ನಜರು ಅಮ್ಮನ ಅಳಿದುಳಿದ ರಕ್ತ ಹೀರುವುದರ ಮೇಲೆಯೇ ಸದಾ ನೆಟ್ಟಿರುತ್ತದೆ. ಅಮ್ಮ ಜೀವಂತ ಇದ್ದರೇನು, ಸತ್ತೇ ಹೋದರೇನು ಅವರಿಗೆ ತಮ್ಮ ಸಂಪತ್ತಿನದೇ ಚಿಂತೆ. ನಿಮ್ಮ ಅಗ್ರಜನಾಗಿ, ವಿದ್ಯಾ-ಬುದ್ಧಿಯಲ್ಲಿ ನಿಮಗಿಂತ ಹಿರಿಯನಾಗಿ, ಎಲ್ಲಕ್ಕೂ ಮಿಗಿಲಾಗಿ ತಾಯಿ ಗಂಗೆಯ ಸ್ವಾಸ್ಥ್ಯ- ಸುಖ- ಪ್ರಸನ್ನತೆಗಾಗಿ ಎಲ್ಲವನ್ನೂ ಪಣಕ್ಕಿಡಲು ನಿಮಗಿಂತ ಮುಂದಿರುವೆನಾದ ಕಾರಣ, ಗಂಗಾಜೀ ಕುರಿತ ವಿಷಯಗಳ ಕುರಿತು ನಿಮಗೆ ಬುದ್ಧಿ ಹೇಳಿ ತಿಳಿಸುವ, ನಿರ್ದೇಶನ ನೀಡುವುದು ನನ್ನ ಹಕ್ಕು. ತಾಯಿಯ ಆಶೀರ್ವಾದ, ನಿಮ್ಮ ಅದೃಷ್ಟ ಹಾಗೂ ಆಸೆ ಆಮಿಷಗಳ ಚಾಲಾಕಿತನದ ಬಲದಿಂದ ನೀವು ಸಿಂಹಾಸನಾರೂಢ ಆಗಿದ್ದೀರಿ. ಆದರೂ ನಿರ್ದೇಶನ ನೀಡುವ ನನ್ನ ಹಕ್ಕು ಕಡಿಮೆಯಾಗುವುದಿಲ್ಲ. ಇದೇ ಹಕ್ಕಿನ ಬಲದಿಂದ ಕೆಲವು ಅಪೇಕ್ಷೆಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದೇನೆ”.
ಸ್ವಾಮಿ ಸಾನಂದರು ಮೋದಿಯವರಿಗೆ ಬರೆದಿದ್ದ ಎರಡನೆಯ ಪತ್ರದ ಕೆಲವು ಸಾಲುಗಳು ಹೀಗಿವೆ-
“ ಆದರಣೀಯ ಪ್ರಧಾನಮಂತ್ರಿ ಜೀ, ಗಂಗಾ ಜೀ ಸಂಬಂಧ ತಮಗೆ ಹಲವು ಪತ್ರ ಬರೆದೆ. ಆದರೆ ಒಂದಕ್ಕೂ ಜವಾಬು ಸಿಗಲಿಲ್ಲ. ತಾವು ಪ್ರಧಾನಿ ಆದ ನಂತರ ಗಂಗಾ ಜೀ ಕುರಿತು ಆಲೋಚಿಸುವಿರಿ ಎಂದು ನಂಬಿದ್ದೆ. ಯಾಕೆಂದರೆ 2014ರ ಲೋಕಸಭಾ ಚುನಾವಣೆ ಗೆದ್ದ ನಂತರ ತಾವು ತಾಯಿ ಗಂಗಾ ತಮ್ಮನ್ನು ಬನಾರಸಿಗೆ ಕರೆಯಿಸಿಕೊಂಡಿದ್ದಾಳೆ ಎಂದು ಹೇಳಿದ್ದಿರಿ. ಏನಾದರೂ ಮಾಡುವಿರೆಂದು ನಂಬಿದ್ದೆ. ಹೆಚ್ಚು ಕಡಿಮೆ ನಾಲ್ಕೂವರೆ ವರ್ಷ ಕಾಲ ಶಾಂತಿಯಿಂದ ಎದುರು ನೋಡಿದೆ. ಗಂಗಾ ಜೀ ಸಲುವಾಗಿ ನಾನು ಈ ಹಿಂದೆಯೂ ಉಪವಾಸ ಸತ್ಯಾಗ್ರಹ ಮಾಡಿದ್ದು ನಿಮಗೆ ಗೊತ್ತೇ ಇರುತ್ತದೆ. ನನ್ನ ಆಗ್ರಹವನ್ನು ಮನ್ನಿಸಿ ಅಂದಿನ ಪ್ರಧಾನಿ ಮನಮೋಹನಸಿಂಗ್ ಅವರು ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದ ಲೋಹಾರಿ-ನಾಗಪಾಲಾ ದಂತಹ ಬೃಹತ್ ವಿದ್ಯುಚ್ಛಕ್ತಿ ಯೋಜನೆಯನ್ನು ರದ್ದು ಮಾಡಿದರು. ಸಾವಿರಾರು ಕೋಟಿ ರುಪಾಯಿಗಳ ನಷ್ಟವನ್ನು ಸರ್ಕಾರ ಭರಿಸಬೇಕಾಯಿತು. ಆದರೆ ಗಂಗಾ ಜೀ ಸಲುವಾಗಿ ಮನಮೋಹನಸಿಂಗ್ ಸರ್ಕಾರ ಈ ಹೆಜ್ಜೆ ಇರಿಸಿತ್ತು. ಜೊತೆ ಜೊತೆಗೆ ಆ ಸರ್ಕಾರ ಉತ್ತರಕಾಶಿಯ ತನಕ ಭಾಗೀರಥೀ ಜೀ ಹರಿವನ್ನು ಪರಿಸರ-ಸೂಕ್ಷ್ಮ ವಲಯವೆಂದೂ ಘೋಷಿಸಿ, ಗಂಗಾ ಜೀ ಗೆ ಹಾನಿಯಾಗುವ ಯಾವ ಕೆಲಸವೂ ಜರುಗದಂತೆ ತಡೆದಿತ್ತು.
ತಾವು ಇನ್ನೂ ಎರಡು ಹೆಜ್ಜೆ ಮುಂದೆ ಇಟ್ಟು ಗಂಗಾ ಜೀಯ ಉಳಿವಿಗೆ ವಿಶೇಷ ಪ್ರಯತ್ನ ಮಾಡುವಿರಿ ಎಂಬುದು ನನ್ನ ಅಪೇಕ್ಷೆಯಾಗಿತ್ತು. ಯಾಕೆಂದರೆ ತಾವು ಗಂಗಾ ನದಿಗಾಗಿ ಪ್ರತ್ಯೇಕ ಸಚಿವ ಖಾತೆಯನ್ನೇ ತೆರೆದಿರಿ. ಆದರೆ ಈ ನಾಲ್ಕು ವರ್ಷಗಳಲ್ಲಿ ನಿಮ್ಮ ಸರ್ಕಾರ ಏನೇ ಮಾಡಿದ್ದರೂ, ಆದರಿಂದ ಗಂಗಾ ಜೀಗೆ ಏನೇನೂ ಲಾಭ ಆಗಲಿಲ್ಲ. ಬದಲಾಗಿ ಕಾರ್ಪೊರೇಟ್ ವಲಯ ಮತ್ತು ವ್ಯಾಪಾರಿ ಮನೆತನಗಳಿಗೇ ಲಾಭವಾಗುವುದು ಕಂಡು ಬರುತ್ತಿದೆ. ಈವರೆಗೆ ಗಂಗಾ ನದಿಯಿಂದ ಲಾಭ ಗಳಿಸುವ ವಿಚಾರವನ್ನೇ ತಾವು ಮಾಡಿದ್ದೀರಿ. ಗಂಗಾ ಜೀಗೆ ನೀವು ಏನನ್ನೂ ಕೊಡುತ್ತಿಲ್ಲ…..”
“ಅಲಕಾನಂದಾ, ಧೌಳಗಂಗಾ, ನಂದಾಕಿನಿ, ಪಿಂಡರ್ ತಥಾ ಮಂದಾಕಿನೀ ನದಿಗಳ ಎಲ್ಲ ನಿರ್ಮಾಣಾಧೀನ- ಪ್ರಸ್ತಾವಿತ ಜಲವಿದ್ಯುತ್ ಉತ್ಪಾದನಾ ಯೋಜನೆಗಳನ್ನು ತಕ್ಷಣವೇ ಕೈಬಿಡಬೇಕು ಮತ್ತು ಗಂಗಾ ಜೀಯ ಇತರೆ ಉಪನದಿಗಳ ಪ್ರಸ್ತಾವಿತ ಜಲವಿದ್ಯುತ್ ಯೋಜನೆಗಳನ್ನೂ ರದ್ದು ಮಾಡಬೇಕು.
ಈ ಉದ್ದೇಶಕ್ಕಾಗಿ ಈ ಎಲ್ಲ ನದಿಗಳ ವ್ಯವಸ್ಥೆಯ ವ್ಯಾಪ್ತಿಯಲ್ಲಿ ಅದರಲ್ಲೂ ವಿಶೇಷವಾಗಿ ಹರಿದ್ವಾರದ ಕುಂಭ ಕ್ಷೇತ್ರದಲ್ಲಿ ಕಾಡು ಕಡಿಯುವ ಮತ್ತು ಗಣಿಗಾರಿಕೆ ನಡೆಸುವ ಇಲ್ಲವೆ ಯಾವುದೇ ಬಗೆಯ ಅಗೆಯುವ ಕೆಲಸದ ಮೇಲೆ ಪೂರ್ಣ ತಡೆ ಹೇರಬೇಕು”.
ಗಂಗಾ ನದಿಯ ಮೇಲೆ ಹತ್ತಾರು ಸೇತುವೆಗಳ ನಿರ್ಮಾಣ ಈಗಲೂ ನಿಂತಿಲ್ಲ. 2019ರ ತನಕ ಶೇ.50ರಷ್ಟು ಪೂರ್ಣಗೊಂಡಿದ್ದ ಜಲವಿದ್ಯುಚ್ಛಕ್ತಿ ಯೋಜನೆಗಳ ನಿರ್ಮಾಣ ಮುಂದುವರೆದಿದೆ. ಹೊಸ ಯೋಜನೆಗಳ ನಿರ್ಮಾಣವನ್ನು ನಿಷೇಧಿಸಲಾಗಿದೆ.
ರಾಷ್ಟ್ರೀಯ ಗಂಗಾ ಪರಿಷತ್ತನ್ನು 2016ರಲ್ಲಿ ರಚಿಸಲಾಯಿತು. ಗಂಗಾ ನದಿಯ ಸಂರಕ್ಷಣೆ, ಪುನಶ್ಚೇತನ ಹಾಗೂ ನಿರ್ವಹಣೆಯ ಜವಾಬ್ದಾರಿ ಹೊತ್ತ ಅತ್ಯುನ್ನತ ಸಂಸ್ಥೆಯಿದು. ಖುದ್ದು ಪ್ರಧಾನಮಂತ್ರಿಯವರೇ ಈ ಪರಿಷತ್ತಿನ ಅಧ್ಯಕ್ಷರು.
ಈ ಪರಿಷತ್ತು ಕಳೆದ ಹತ್ತು ವರ್ಷಗಳಲ್ಲಿ ನಡೆಸಿರುವ ಸಭೆಗಳು ಎರಡೇ ಎರಡು!
ಈ ಎರಡರ ಪೈಕಿ ಒಂದು ಕಾನ್ಪುರದಲ್ಲಿ 2019ರಲ್ಲಿ ಜರುಗಿದೆ. ಎರಡನೆಯದು ಆನ್ಲೈನ್ ಸಭೆ. ನಡೆದದ್ದು 2022ರಲ್ಲಿ. ಈವರೆಗೆ ಅದೇ ಕಟ್ಟಕಡೆಯದು. ಎರಡೂ ಸಭೆಯಲ್ಲಿ ಪ್ರಧಾನಮಂತ್ರಿಯವರು ‘ಅರ್ಥ್ ಗಂಗಾ’ ಪರಿಕಲ್ಪನೆಯನ್ನು ಪ್ರೋತ್ಸಾಹಿಸಬೇಕೆಂದಿದ್ದಾರೆ. ಆರ್ಥಿಕ ಅವಕಾಶಗಳ ಮೂಲಕ ಜನರನ್ನು ಗಂಗಾ ನದಿಯೊಂದಿಗೆ ಬೆಸೆಯಬೇಕು ಎಂಬುದು ‘ಅರ್ಥ್ ಗಂಗಾ’ದ ತಾತ್ಪರ್ಯ.
ಸ್ವಾಮಿ ಸಾನಂದರ ಪತ್ರಗಳ ಸಾಲುಗಳನ್ನು ಮತ್ತೊಮ್ಮೆ ಓದಿ ನೋಡಿದರೆ ಪ್ರಧಾನಿಯವರ ಮಾತಿನ ಅರ್ಥ ಹೆಚ್ಚು ನಿಚ್ಚಳ ಆದೀತು.
ಇಫ್ತಾರ್ ಊಟದ ಆಪಾದನೆ ಕ್ಷುಲ್ಲಕ. ಇವುಗಳ ಮರೆಯಲ್ಲಿ ತಾಯಿ ಗಂಗೆಯ ಮೇಲೆ ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವ ನಿಜ ದೌರ್ಜನ್ಯಗಳಿಗೆ ಪರದೆ ಹಾಕುವ ದ್ರೋಹ ಸರಿಯಲ್ಲ. ಹಿಂದೂ ಧರ್ಮ ರಕ್ಷಕರೆಂದು ಹೇಳಿಕೊಂಡು ಕಳೆದ 12 ವರ್ಷಗಳಿಂದ ಅಧಿಕಾರದಲ್ಲಿರುವವರು ಗಂಗಾ ನದಿಯನ್ನು ನಿಜಾರ್ಥದಲ್ಲಿ ರಕ್ಷಿಸಲು ಇನ್ನಾದರೂ ಮುಂದಾಗಬೇಕಿದೆ.





