ಈ ದಿನ ಸಂಪಾದಕೀಯ | ಹಾರಾಡುವ ಮೋದಿಗೆ ಲಗಾಮು ಹಾಕಲಿದೆಯೇ ತಮಿಳುನಾಡು?

Date:

ಮೋದಿಯವರು ಕೊಯಮತ್ತೂರು ಮಾತ್ರವಲ್ಲ, ಇಡೀ ತಮಿಳುನಾಡಿನ ಎಲ್ಲ ಪಟ್ಟಣಗಳಲ್ಲಿಯೂ ರೋಡ್‌ ಶೋ ನಡೆಸಿದರೂ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ನೆಲೆ ಒದಗಿಸುವುದಿಲ್ಲ ಎಂಬ ಸ್ಪಷ್ಟ ಅಭಿಪ್ರಾಯಗಳಿವೆ. ತಮಿಳುನಾಡಿನ ಜನ ಲಗಾಮು ಹಾಕುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಆಡಳಿತ ವಿರೋಧಿ ಅಲೆಯ ನಡುವೆಯೂ ‘ಮಹಿಳಾ ರೋಜ್‌ಗಾರ್’ ಯೋಜನೆಯಡಿ ಮಹಿಳೆಯರಿಗೆ ಬೃಹತ್ ಮೊತ್ತದ ನಗದು ವರ್ಗಾವಣೆ ಮಾಡಿದ್ದ ಎನ್‌ಡಿಎ ಸರ್ಕಾರ ಬಿಹಾರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಗೆಲುವಿಗೆ ‘ವೋಟ್ ಚೋರಿ’ ಮತ್ತು ‘ನಗದು ಆಮಿಷ’ ಕಾರಣವೆಂದು ವಿಪಕ್ಷಗಳು, ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಆದಾಗ್ಯೂ, ಗೆಲುವಿನ ಉತ್ಸಾಹದಲ್ಲಿರುವ ಮೋದಿ ಅವರು ಅದೇ ‘ಜೋಶ್‌’ನಲ್ಲಿ ತಮಿಳುನಾಡಿಗೆ ಬುಧವಾರ ಹಾರಿದ್ದರು. ಕೊಯಮತ್ತೂರಿನಲ್ಲಿ ರೋಡ್‌ ಶೋ ನಡೆಸಿದರು.

ತಮಿಳುನಾಡಿನಲ್ಲಿ 2026ರಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಯಲ್ಲಿ (ಎನ್‌ಡಿಎ) ಚುನಾವಣೆ ಎದುರಿಸಲಿವೆ. ಮೋದಿ ಅವರ ರೋಡ್‌ ಶೋ ಮೈತ್ರಿಕೂಟದ ಚುನಾವಣಾ ಪ್ರಚಾರಕ್ಕೆ ಚಾಲನೆಯೆಂದು ಭಾವಿಸಲಾಗಿದೆ. ಬಿಜೆಪಿಗೆ ತಮಿಳುನಾಡು ಭೇದಿಸಲಾಗದ ಅತ್ಯಂತ ಕಠಿಣ ಗಡಿಗಳಲ್ಲಿ ಒಂದು. ತಮಿಳುನಾಡಿನಲ್ಲಿ ನೆಲೆ ಕಾಣಲು ಮಿತ್ರಪಕ್ಷ ಎಐಎಡಿಎಂಕೆಯನ್ನು ಬಿಜೆಪಿ ಅವಲಂಬಿಸಿದೆ. ಆದರೆ, ಮಿತ್ರಪಕ್ಷವೇ ತಮಿಳು ನೆಲದಲ್ಲಿ ದುರ್ಬಲವಾಗಿದ್ದು, ಬಿಜೆಪಿ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ.

ಒಂದು ಕಾಲದಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪ್ರವೇಶಕ್ಕೆ ಎಐಎಡಿಎಂಕೆ ಹೆಬ್ಬಾಗಿಲಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಜಯಲಲಿತಾ ಮರಣದ ನಂತರ, ಎಐಎಡಿಎಂಕೆ ಸತತ ಮೂರು ಚುನಾವಣೆಗಳಲ್ಲಿ(2019, 2021 ಮತ್ತು 2024) ಸೋತಿದೆ. ಈ ಚುನಾವಣೆಗಳ ಸಮಯದಲ್ಲಿ ಎರಡೂ ಪಕ್ಷಗಳ ನಡುವೆ ಆಗಾಗ್ಗೆ ಬಿರುಕು ಕಾಣಿಸಿಕೊಂಡಿದೆ. ಜೊತೆಗೆ, ಎಐಎಡಿಎಂಕೆಯಲ್ಲೂ ಆಂತರಿಕ ಬಿಕ್ಕಟ್ಟು ಬಿಗಡಾಯಿಸಿದೆ. ಶಶಿಕಲಾ, ಓ ಪನ್ನೀರ್‌ಸೆಲ್ವಂ, ಟಿಟಿವಿ ದಿನಕರನ್ ಹಾಗೂ ಹಿರಿಯ ನಾಯಕ, ಪಶ್ಚಿಮ ತಮಿಳುನಾಡಿನ ಪ್ರಭಾವಿ ಕೆಎ ಸೆಂಗೊಟ್ಟೈಯನ್ ಅವರನ್ನು ಎಐಎಡಿಎಂಕೆ ಉಚ್ಚಾಟಿಸಿದೆ. ಇದು ಪಕ್ಷವನ್ನು ವಿಭಜಿಸಿದೆ. ಪ್ರಭಾವಿ ತೇವರ್ ಸಮುದಾಯದ ನಾಯಕರಾಗಿದ್ದ, ಎನ್‌ಡಿಎಗೆ ಪ್ರಮುಖ ಮುಖಗಳಾಗಿದ್ದ ಪನ್ನೀರ್‌ಸೆಲ್ವಂ ಮತ್ತು ದಿನಕರನ್‌ ಹೊರಗುಳಿದಿರುವುದು ಬಿಜೆಪಿ ಮತ್ತು ಎಐಎಡಿಎಂಕೆಯ ಮತಗಳ ವಿಭಜನೆಯಲ್ಲಿ ಪ್ರಭಾವ ಬೀರುವ ಸಾಧ್ಯತೆಗಳಿವೆ. ಸೆಂಗೊಟ್ವೈಯನ್ ಉಚ್ಚಾಟನೆಯು ಎಐಎಡಿಎಂಕೆಗೆ ಭದ್ರಕೋಟೆಯಾಗಿದ್ದ ಪಶ್ಚಿಮ ತಮಿಳುನಾಡಿನಲ್ಲಿ ಮೈತ್ರಿಕೂಟಕ್ಕೆ ಅನಿಶ್ಚಿತತೆಯನ್ನು ಸೃಷ್ಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಳೆದ ಮೂರು ಚುನಾವಣೆಗಳಲ್ಲಿ ಎರಡು ಚುನಾವಣೆಗಳಲ್ಲಿ ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿತ್ತು. ಆದರೂ, ಈ ಮೈತ್ರಿಯ ಸಮಯದಲ್ಲಿ, ಬಿಜೆಪಿ ಪ್ರತ್ಯೇಕವಾಗಿ ಮತ್ತು ಸ್ವತಂತ್ರವಾಗಿ ಸ್ಪರ್ಧಿಸುವ ಇರಾದೆ ಹೊಂದಿತ್ತಾದರೂ, ಪರಿಸ್ಥಿತಿಯ ಕಾರಣಕ್ಕಾಗಿ ಎಐಎಡಿಎಂಕೆ ಜೊತೆ ಮೈತ್ತಿ ಮಾಡಿಕೊಂಡಿತ್ತು ಎಂಬುದು ಸ್ಪಷ್ಟ. ಎನ್‌ಡಿಎ ಭಾಗವೇ ಆಗಿರುವ ಪಟ್ಟಾಳಿ ಮಕ್ಕಳ್ ಕಚ್ಚಿ(ಪಿಎಂಕೆ) ಮತ್ತು ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ(ಡಿಎಂಡಿಕೆ) ಕೂಡ ಆಂತರಿಕ ಕಚ್ಚಾಟದಲ್ಲಿ ತೊಡಗಿವೆ.

ಎನ್‌ಡಿಎ ಮೈತ್ರಿಕೂಟದಲ್ಲಿ ಅನಿಶ್ಚಿತತೆ ಎದುರಾಗಿರುವ ಸಮಯದಲ್ಲಿಯೇ ನಟ ವಿಜಯ್ ಅವರು ತಮಿಳಗ ವೆಟ್ರಿ ಕಳಗಂ(ಟಿವಿಕೆ) ಆರಂಭಿಸಿದ್ದಾರೆ. 2026ರ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷವೂ ಪ್ರಬಲ ಪೈಪೋಟಿ ನೀಡಲಿದೆ. ಈಗಾಗಲೇ ಬಿಜೆಪಿ ತಮ್ಮ ಸೈದ್ಧಾಂತಿಕ ಎದುರಾಳಿ ಎಂದು ವಿಜಯ್ ಘೋಷಿಸಿದ್ದಾರೆ. ಯಾವುದೇ ಪಕ್ಷದೊಂದಿಗೆ ನೇರ ಅಥವಾ ಪರೋಕ್ಷ ಮೈತ್ರಿ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಎನ್‌ಡಿಎ ಮೈತ್ರಿಪಕ್ಷಗಳ ಆಂತರಿಕ ಬಿಕ್ಕಟ್ಟು, ಆಡಳಿತಾರೂಢ ಡಿಎಂಕೆ-ಕಾಂಗ್ರೆಸ್‌ ಮೈತ್ರಿಕೂಟ ಹಾಗೂ ವಿಜಯ್ ಅವರ ಟಿವಿಕೆ ಇದೆಲ್ಲವನ್ನೂ ಎದುರಿಸಿ, ನಿಭಾಯಿಸಿ ಬಿಜೆಪಿ ತಮಿಳುನಾಡಿನಲ್ಲಿ ಬದುಕುಳಿಯುವುದು ಸುಲಭವಲ್ಲ. ಏಕಾಂಗಿಯಾಗಿ ನೆಲೆಯೂರುತ್ತೇವೆಂಬ ಧೈರ್ಯವೂ ಬಿಜೆಪಿಗಿಲ್ಲ. ತಮಿಳುನಾಡು ರಾಜ್ಯದಲ್ಲಿ ಮೋದಿ ನೇಮ್ – ಫೇಮ್, ಅಲೆ-ಹವಾ ಯಾವುದೂ ನಡೆಯುವುದಿಲ್ಲ. ಬಿಜೆಪಿಯನ್ನು ದಡ ಸೇರಿಸಲು ಸಾಧ್ಯವೂ ಇಲ್ಲ.

ಕಳೆದ 7 ವರ್ಷಗಳಲ್ಲಿ ಮೋದಿ ಅವರು ಹಲವು ಬಾರಿ ತಮಿಳುನಾಡಿಗೆ ಭೇಟಿ ನೀಡಿದ್ದಾರೆ. ಆ ಎಲ್ಲ ಸಂದರ್ಭಗಳಲ್ಲೂ ಭಾರೀ ವಿರೋಧವನ್ನು ಎದುರಿಸಿದ್ದಾರೆ. ನ.19ರ ಭೇಟಿಯಲ್ಲೂ ಅದು ಕಂಡುಬಂದಿದೆ. 2018ರ ಏಪ್ರಿಲ್ 12ರಂದು ಮೋದಿ ಅವರು ‘ಡಿಫೆನ್ಸ್‌ ಎಕ್ಸ್‌ಪೋ’ ಉದ್ಘಾಟನೆಗಾಗಿ ಚೆನ್ನೈಗೆ ಬಂದಿದ್ದರು. ಆಗ, ಆಡಳಿತಾರೂಢ ಡಿಎಂಕೆ ನೇತೃತ್ವದಲ್ಲಿ ಜನರು ರಸ್ತೆಯಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ #ಗೋಬ್ಯಾಕ್‌ಮೋದಿ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗಿತ್ತು. ಮೋದಿಯವರು ಅದನ್ನು ತಮಿಳಿಗರ ಉತ್ತರದ ಆಕ್ರಮಣಕಾರಿ ಎಂದು ಬಣ್ಣಿಸಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಪುಲ್ವಾಮ ದಾಳಿಯ ಕಾರಣಕ್ಕಾಗಿ ದೇಶಾದ್ಯಂತ ಬಿಜೆಪಿ ಪರವಾದ ಅಲೆ ವ್ಯಕ್ತವಾಗಿತ್ತು. ಆದರೆ, ತಮಿಳುನಾಡು ವ್ಯತಿರಿಕ್ತ ಪ್ರತಿಕ್ರಿಯೆ ನೀಡಿತ್ತು. ಪುಲ್ವಾಮ ದಾಳಿಯ ಹೆಸರಿನಲ್ಲಿ ಚುನಾವಣೆ ಎದುರಿಸಿದ ಬಿಜೆಪಿಗೆ ತಮಿಳುನಾಡು ಮಣೆ, ಮನ್ನಣೆ ನೀಡಲಿಲ್ಲ.

2024ರಲ್ಲಿ, ಒಡಿಶಾದಲ್ಲಿ ಭಾಷಣ ಮಾಡಿದ್ದ ಮೋದಿ ತಮಿಳರನ್ನು ‘ಜಗನ್ನಾಥ ದೇವಾಲಯದ ರತ್ನ ಭಂಡಾರದ ಕೀಗಳನ್ನು ತಮಿಳರು ಕದ್ದಿದ್ದಾರೆ’ ಎಂಬರ್ಥದಲ್ಲಿ ಟೀಕಿಸಿದ್ದರು. ಇದು ತಮಿಳರ ಕೆಂಗಣ್ಣಿಗೆ ಗುರಿಯಾಗಿತ್ತು.

ಇನ್ನು, ಹಿಂದಿ ಹೇರಿಕೆ, ಹೊಸ ಶಿಕ್ಷಣ ನೀತಿಯಡಿ ತ್ರಿಭಾಷ ಸೂತ್ರದ ಒತ್ತಡ, ಅನುದಾನ ತಡೆ, ಜಲ್ಲಿಕಟ್ಟು ನಿಷೇಧ ಹಾಗೂ ಕೊಯಮತ್ತೂರಿಗೆ ಮೆಟ್ರೋ ಯೋಜನೆಗೆ ನಕಾರ ಕಾರಣಕ್ಕಾಗಿ ಮೋದಿ ಮತ್ತು ಅವರ ಎನ್‌ಡಿಎ ವಿರುದ್ಧ ತಮಿಳರು ಕಿಡಿಕಾರುತ್ತಿದ್ದಾರೆ. ಮೋದಿ ‘ತಮಿಳುನಾಡನ್ನು ವಂಚಿಸುತ್ತಿದ್ದಾರೆ’ ಎಂಬ ಅಸಮಾಧಾನ ತಮಿಳು ರಾಜ್ಯದಲ್ಲಿ ಬೇರೋರಿದೆ.

ಈ ಲೇಖನ ಓದಿದ್ದೀರಾ?: ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ

ಮೋದಿ ವಿರುದ್ಧ ಆಕ್ರೋಶಗೊಂಡಿರುವ ತಮಿಳುನಾಡು 2026ರ ಚುನಾವಣೆಯಲ್ಲಿಯೂ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಎಐಎಡಿಎಂಕೆಗೆ ಮತ್ತೊಮ್ಮೆ ಪಾಠ ಕಲಿಸಲು ಸಜ್ಜಾಗಿದೆ. ತಮಿಳು ಜನರನ್ನು ಸಮಾಧಾನಿಸಲು ಮೋದಿ ಯತ್ನಿಸುತ್ತಿದ್ದಾರೆ. ಬುಧವಾರ ಕೊಯಮತ್ತೂರಿನಲ್ಲಿ ರೋಡ್‌ ಶೋ ನಡೆಸಿದ್ದಾರೆ. ಆದರೆ, ಮೋದಿ ನಾಟಕ ನಮ್ಮ ನೆಲದಲ್ಲಿ ನಡೆಯುವುದಿಲ್ಲ ಎಂದು ದ್ರಾವಿಡ ನಾಡಿನ ಜನರು ಹೇಳುತ್ತಿದ್ದಾರೆ.

ಮತ್ತೊಂದೆಡೆ, ಸತತ ಮೂರು ಚುನಾವಣಾ ವಿಜಯಗಳ ಮೂಲಕ ಡಿಎಂಕೆ ಮತ್ತು ಮಿತ್ರಪಕ್ಷಗಳು ಅಧಿಕಾರದಲ್ಲಿ ಅಖಂಡವಾಗಿ ಉಳಿದಿವೆ. ಡಿಎಂಕೆ ನೇತೃತ್ವದ ಸರ್ಕಾರವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ, ಜನರ ಮನದಲ್ಲಿ ಅಚಲವಾಗಿ ಉಳಿದಂತೆ ಕಾಣುತ್ತಿದೆ. ಮಹಿಳೆಯರಿಗೆ ಮಾಸಿಕ ರೂ. 1,000 ಸಹಾಯ, ಉಚಿತ ಬಸ್ ಪ್ರಯಾಣ ಹಾಗೂ ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲದಂತಹ ಯೋಜನೆಗಳನ್ನು ತಮಿಳು ಜನರು ಮತ್ತು ರಾಜ್ಯವನ್ನು ಅಭಿವೃದ್ಧಿ, ಆರ್ಥಿಕ ಬೆಳವಣಿಗೆಯತ್ತ ದಾಪುಗಾಲಿಡುವಂತೆ ಮಾಡಿವೆ. ರಾಜಕೀಯವಾಗಿ, ಭಾಷಾ ಮತ್ತು ಸಾಂಸ್ಕೃತಿಕವಾಗಿ ಪ್ರಾದೇಶಿಕತೆಯನ್ನು ಡಿಎಂಕೆ ಒತ್ತಿ ಹೇಳುತ್ತಿದೆ.

ಇದೆಲ್ಲವೂ, ಮೋದಿ ಅವರು ಕೊಯಮತ್ತೂರು ಮಾತ್ರವಲ್ಲ, ಇಡೀ ತಮಿಳುನಾಡಿನ ಎಲ್ಲ ಪಟ್ಟಣಗಳಲ್ಲಿಯೂ ರೋಡ್‌ ಶೋ ನಡೆಸಿದರೂ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ನೆಲೆ ಒದಗಿಸುವುದಿಲ್ಲ ಎಂಬ ಸ್ಪಷ್ಟ ಅಭಿಪ್ರಾಯಗಳಿವೆ. ಮುಖ್ಯವಾಗಿ, ಇತ್ತೀಚಿನ, ಕೆಲವು ರಾಜ್ಯಗಳ ಚುನಾವಣೆಗಳಲ್ಲಿ ಗೆಲುವಿನೊಂದಿಗೆ ಹಾರಾಡುತ್ತಿರುವ ಮೋದಿ ಅವರಿಗೆ, ತಮಿಳುನಾಡಿನ ಜನ ಬಾಲಂಗೋಚಿ ಕಟ್ಟಿ, ಲಗಾಮು ಹಾಕುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....