ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿ, ಬಾವಿಗಿಳಿದು ಕೂಗಾಟ ನಡೆಸುತ್ತಿದ್ದಾಗ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆಡಿದ ಮಾತು ಘನತೆ ಮೀರಿತ್ತು. ವಿರೋಧ ವ್ಯಕ್ತವಾಗುತ್ತಿದ್ದಂತೆ ಅವರು ಪತ್ರಿಕಾಗೋಷ್ಠಿ ಕರೆದು ವಿಷಾಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ವಿಧಾನ ಪರಿಷತ್ತಿನ ಸದಸ್ಯ ನಸೀರ್ ಅಹಮದ್ ಅವರು ಪ್ರಧಾನಿಯವರ ಕುರಿತು ʼದೇಶದ್ರೋಹಿʼ ಎಂಬ ಪದ ಬಳಕೆ ಮಾಡಿದ್ದಕ್ಕೆ ಅಷ್ಟೇ ಬೇಗ ವಿಷಾಧ ವ್ಯಕ್ತಪಡಿಸಿದ್ದಾರೆ. ಆದರೆ, ನಸೀರ್ ಬಗ್ಗೆ ಸಿ ಟಿ ರವಿ ನೀಡಿದ ʼಪಾಕಿಸ್ತಾನದ ನಾಲಗೆʼ ಎಂಬ ಹೇಳಿಕೆ ಬಗ್ಗೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ.
“ಕೆಟ್ಟು ಕೆರ ಹಿಡಿಯೋದು” ಎಂಬ ಮಾತು ಇಂದಿನ ರಾಜಕಾರಣಿಗಳಿಗೆ ಸರಿ ಹೊಂದುವ ಪದ. ಇತ್ತೀಚಿನ ದಶಕಗಳಲ್ಲಿ ಗ್ರಾಮ ಪಂಚಾಯ್ತಿಯಿಂದ ಸಂಸತ್ತಿನವರೆಗೆ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿರುವವರ ಸಾಮಾಜಿಕ, ವೈಯಕ್ತಿಕ ಹಿನ್ನೆಲೆಯೇ ಇದಕ್ಕೆಲ್ಲ ಕಾರಣ ಎಂದು ನಿಸ್ಸಂದೇಹವಾಗಿ ಹೇಳಬಹುದು. ಹಣ, ಜಾತಿ, ತೋಳ್ಬಲ ಇರುವ ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳು ಜನಪ್ರತಿನಿಧಿಗಳೆಂದು ಆಯ್ಕೆಯಾಗಿ ವಿಧಾನ ಮಂಡಲ, ಸಂಸತ್ತಿನಲ್ಲಿ ಮೆರೆಯುತ್ತಿದ್ದಾರೆ. ಅವರು ಬಳಸುವ ಪದಗಳು, ಅವರ ಅಸಂಸದೀಯ ನಡವಳಿಕೆಗಳು, ವಿರೋಧಿ ಪಕ್ಷದ ನಾಯಕರಿಗೆ ಘನತೆಯೇ ಇಲ್ಲ ಎಂಬಂತೆ ಮಾನಹಾನಿಕರ ಹೇಳಿಕೆ ನೀಡುವುದು, ಚರ್ಚೆಯನ್ನೇ ನಡೆಸದಂತೆ ದೊಂಬಿ ಎಬ್ಬಿಸುವುದು ಇದೆಲ್ಲವನ್ನೂ ಹೊರಗಿಂದ ನೋಡುವ ಸಾಮಾನ್ಯ ಜನರೂ ಜನಪ್ರತಿನಿಧಿಗಳ ಬಗ್ಗೆ ಗೌರವದ ಭಾವನೆ ಕಳೆಯುವಂತೆ ಮಾಡಿದೆ.
ರಾಜ್ಯದಲ್ಲಿ ಎರಡು ವಾರ ನಡೆದ ವಿಶೇಷ ಅಧಿವೇಶನ ಹಲವು ಅಪಸವ್ಯಗಳಿಗೆ ಕೆಟ್ಟ ಘಟನೆಗಳಿಗೆ ಕಾರಣವಾಗಿದೆ. ಮನರೇಗಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ವಿಬಿ-ಜಿ-ರಾಮ್-ಜಿ ಕಾಯ್ದೆ ಎಂದು ಹೆಸರು ಬದಲಾಯಿಸಿದ ಮೋದಿ ಸರ್ಕಾರದ ವಿರುದ್ಧ ನಿರ್ಣಯ ಕೈಗೊಳ್ಳುವ ಸರ್ಕಾರದ ನಿರ್ಧಾರ ಈ ವಿಶೇಷ ಅಧಿವೇಶನ ಕರೆಯಲು ಕಾರಣವಾಗಿತ್ತು. ಆದರೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಸರ್ಕಾರದ ಭಾಷಣ ಓದದೇ ಎರಡು ಸಾಲು ಓದಿ ರಾಷ್ಟ್ರಗೀತೆಗೂ ನಿಲ್ಲದೇ ಹೊರಟು ಹೋಗಿದ್ದು, ಅವರು ಹೋಗುವಾಗ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು ವಿಪಕ್ಷಗಳಿಗೆ ದೊಂಬಿ ನಡೆಸಲು ಚರ್ಚೆಯ ಹಾದಿ ತಪ್ಪಿಸಲು ಕಾರಣವಾಯಿತು. ಒಂದು ವಾರ ರಾಜ್ಯಪಾಲರಿಗೆ ಅವಮಾನ ಎಂದು ಬಿಜೆಪಿಯವರು ಹೇಳಿದರೆ, ರಾಜ್ಯಪಾಲರಿಂದ ಸಂವಿಧಾನದ ನಿಯಮ ಉಲ್ಲಂಘನೆ ಎಂದು ಆಡಳಿತ- ಪ್ರತಿಪಕ್ಷ ವಾಕ್ಸಮರದಲ್ಲಿ ಮತ್ತೊಂದು ವಾರ ಕಳೆದು ಹೋಗಿತ್ತು. ಮತ್ತೆ ಎರಡು ದಿನ ಅಧಿವೇಶನ ಮುಂದುವರಿದು ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆ ತಿರಸ್ಕರಿಸುವ ನಿರ್ಣಯದೊಂದಿದೆ ಬುಧವಾರ ಮುಕ್ತಾಯಗೊಂಡಿದೆ.
ವಿಶೇಷ ಅಧಿವೇಶನದಲ್ಲಿ ಕಾಯ್ದೆಯ ಬಗ್ಗೆ ಚರ್ಚೆ ನಡೆಯಲೇ ಇಲ್ಲ. ಚರ್ಚೆ ನಡೆಯಲೇ ಬಾರದು ಎಂದು ವಿಪಕ್ಷಗಳ ನಾಯಕರು ನಿರ್ಧಾರ ಮಾಡಿಕೊಂಡೇ ಬಂದಿದ್ದರು. ಮೊದಲ ವಾರ ರಾಜ್ಯಪಾಲರ ಪರ ವಿರೋಧಕ್ಕೆ ವ್ಯರ್ಥವಾದರೆ, ಎರಡನೇ ವಾರ ಅಧಿವೇಶನದ ಸಮಯದಲ್ಲಿಯೇ ಬಯಲಾದ ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರದ ವಿಚಾರ ವಿಪಕ್ಷಗಳ ಅಹೋರಾತ್ರಿ ಧರಣಿಗೆ ಕಾರಣವಾಯಿತು. ವಿಶೇಷ ಅಧಿವೇಶನ ಪ್ರಜಾಪ್ರಭುತ್ವದ ದೇವಾಲಯ ಎಂದು ಕರೆಸಿಕೊಳ್ಳುವ ವಿಧಾನಮಂಡಲ ಕೊಳಕು ಮಾತುಗಳಿಂದ ಸುದ್ದಿಯಾಯಿತು.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿ, ಬಾವಿಗಿಳಿದು ಕೂಗಾಟ ನಡೆಸುತ್ತಿದ್ದಾಗ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಆಡಿದ ಮಾತು ಘನತೆ ಮೀರಿತ್ತು. ಸಹ ಶಾಸಕರೊಬ್ಬರನ್ನು ಉದ್ದೇಶಿಸಿ ಅವರ ಪತ್ನಿಯ ಚಾರಿತ್ರ್ಯದ ಬಗ್ಗೆ ವೈಯಕ್ತಿಕ ನಿಂದನೆ ಮಾಡಿರುವುದು, ಕೂಗಾಡಿದ ರೀತಿ ಸಭಾ ಮರ್ಯಾದೆ ಕಳೆಯುವಂಥದ್ದು. ಆದರೆ, ವಿರೋಧ ವ್ಯಕ್ತವಾಗುತ್ತಿದ್ದಂತೆ ಅವರು ಮರುದಿನ ಪತ್ರಿಕಾಗೋಷ್ಠಿ ಕರೆದು ವಿಷಾಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ವಿಧಾನ ಪರಿಷತ್ತಿನ ಸದಸ್ಯ ನಸೀರ್ ಅಹಮದ್ ಅವರು ಪ್ರಧಾನಿಯವರ ಕುರಿತು ʼದೇಶದ್ರೋಹಿʼ ಎಂಬ ಪದ ಬಳಕೆ ಮಾಡಿದ್ದಕ್ಕೆ ಅಷ್ಟೇ ಬೇಗ ವಿಷಾಧ ವ್ಯಕ್ತಪಡಿಸಿದ್ದಾರೆ. ಆದರೆ, ನಸೀರ್ ಬಗ್ಗೆ ಸಿ ಟಿ ರವಿ ʼಪಾಕಿಸ್ತಾನದ ನಾಲಗೆʼ ಎಂಬ ಹೇಳಿಕೆ ನೀಡಿರುವುದರ ಬಗ್ಗೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಒಂದು ದಿನದ ಮಟ್ಟಿಗೆ ಅವರನ್ನು ಅಮಾನತು ಮಾಡುವಾಗ ಅಧಿವೇಶನ ಮುಗಿದೇ ಹೋಗಿತ್ತು. ಇಂಥವರಿಗೆ ಸಕಾಲದಲ್ಲಿ ಶಿಕ್ಷೆ ಆಗದಿರುವ ಕಾರಣ ಪದೇ ಪದೇ ಅದೇ ಚಾಳಿಯನ್ನು ಮುಂದುವರಿಸುತ್ತಿದ್ದಾರೆ. ಬಿಜೆಪಿಯವರು ಸದಾ ಮುಸ್ಲಿಂ ಶಾಸಕರನ್ನು ʼಪಾಕಿಸ್ತಾನದ ಬೆಂಬಲಿಗರುʼ ಎಂದು ಸದನದೊಳಗೇ ನಿಂದಿಸುತ್ತಲೇ ಬಂದಿದ್ದಾರೆ. ಮತ್ತೆ ಅಂತಹ ಮಾತುಗಳಿಗೆ ಸಮರ್ಥನೆಯನ್ನೂ ನೀಡುತ್ತಾರೆ.
ಹಾಗಂತ ಇದು ಮೊದಲ ಪ್ರಕರಣವೇನಲ್ಲ. ಕಳೆದ ವರ್ಷ ಬೆಳಗಾವಿಯ ಅಧಿವೇಶನದ ಕೊನೆಯ ದಿನ ಕಲಾಪ ಮುಗಿಯುತ್ತಿದ್ದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಎಂಎಲ್‌ಸಿ ಸಿ ಟಿ ರವಿ ನಡುವೆ ನಡೆದ ಬಿರುಸಿನ ಮಾತುಕತೆಯ ಮಧ್ಯೆ ಸಿ ಟಿ ರವಿ ಬಳಸಿದ ಪದ ಮತ್ತು ಪರಿಷತ್ತಿನ ಸಭಾಪತಿ ಹೊರಟ್ಟಿ ಸಾಹೇಬರು ಈ ಪ್ರಕರಣದಲ್ಲಿ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು; ಒಟ್ಟಾಗಿ ರಾಜಕಾರಣಿಗಳ ಘನತೆ ಮಾತ್ರವಲ್ಲ, ಇಡೀ ವ್ಯವಸ್ಥೆಯ ಬಗ್ಗೆ ರೇಜಿಗೆ ಹುಟ್ಟಿಸುವಂತಿದೆ.
ವಿಶೇಷ ಅಧಿವೇಶನದ ಕೊನೆಯ ದಿನ ಖುದ್ದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಅತ್ಯಂತ ಹಿರಿಯ ಸದಸ್ಯೆ, ಮಾಜಿ ಸಚಿವೆ, ಖ್ಯಾತ ಕಲಾವಿದೆ ಉಮಾಶ್ರೀ ಅವರ ಬಗ್ಗೆ ಕೇವಲವಾಗಿ ಏಕವಚನದಲ್ಲಿ ಮಾತನಾಡಿರುವುದು ಕೂಡ ಮಹಿಳೆಯರ ಬಗ್ಗೆ ಇರುವ ಪುರುಷಹಂಕಾರದ ಮಾದರಿಯಾಗಿದೆ.
ವಿಧಾನಸೌಧದ ಒಳಗೂ ಹೊರಗೂ ನಾಲಿಗೆ ಹರಿಬಿಡುವ ಜನಪ್ರತಿನಿಧಿಗಳಿಗೆ ಸಭ್ಯತೆಯ ಪಾಠ ಮಾಡೋರು ಯಾರು ಎಂಬುದು ಯಕ್ಷಪ್ರಶ್ನೆ. ಐಎಎಸ್ ಐಪಿಎಸ್ ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡಿಸುವುದು, ನಿಯಮ ಮೀರಿ ತಮ್ಮ ಅಕ್ರಮಗಳಿಗೆ ಸಹಕರಿಸದಿದ್ದರೆ ಬೆದರಿಕೆಯೊಡ್ಡುವ ರೀತಿಯಲ್ಲಿ ಜನಪ್ರತಿನಿಧಿಗಳ ವರ್ತನೆ ಇವೆಲ್ಲದಕ್ಕೂ ಕಡಿವಾಣ ಬೀಳಬೇಕಿದೆ. ಸಾರ್ವಜನಿಕ ಸಭ್ಯತೆ ಎಂಬುದು ರಾಜಕಾರಣಿಗಳಿಗೆ ಎಷ್ಟು ಮುಖ್ಯ ಎಂಬ ಅರಿವು ಇದ್ದಂತಿಲ್ಲ.
ನಿನ್ನೆ ಪ್ರಧಾನಿ ಮೋದಿಯವರು ಕಾಂಗ್ರೆಸ್ ನವರೆಲ್ಲ ಕಳ್ಳರು ಎಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಗುಜರಾತಿನ ಗಾಂಧಿಯ ಹೆಸರನ್ನೂ ನೆಹರೂ ಕುಟುಂಬ ಕದ್ದಿದೆ ಎಂದು ಹೇಳಿದ್ದಾರೆ. ಸದಾ ನೆಹರು, ಇಂದಿರಾ ಅವರನ್ನು ಟೀಕಿಸುವ ಚಾಳಿ ಪ್ರಧಾನಿ ಮೋದಿಯವರಿಗಿದೆ. ಲೋಕಸಭೆಯಲ್ಲಿ ಬುಧವಾರ ಮೋದಿಯವರ ಆಸನದ ಬಳಿ ಮಹಿಳಾ ಸಂಸದರು ಪ್ರತಿಭಟನೆ ಮಾಡಿದ್ದನ್ನೇ ಹಲ್ಲೆಗೆ ಯತ್ನ ಎಂದು ಸ್ವತಃ ಸ್ಪೀಕರ್ ಓಂ ಬಿರ್ಲಾ ಅವರೇ ಸುಳ್ಳು ಹೇಳಿದ್ದಾರೆ. ಗುರುವಾರ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಭಾಷಣ ಪ್ರಧಾನಿ ಮೋದಿಯವರು ಮಾಡಬೇಕಿತ್ತು. ಆದರೆ ಅವರು ಲೋಕಸಭೆಗೆ ಗೈರಾಗಿದ್ದರು. “ನಾನೇ ಪ್ರಧಾನಿಯವರಿಗೆ ಸಂಸತ್ತಿಗೆ ಬರುವುದು ಬೇಡ ಅಂತ ತಿಳಿಸಿದೆ. ಅವರ ಮೇಲೆ ಹಲ್ಲೆಗೆ ಯತ್ನ ನಡೆಯುವ ಸಾಧ್ಯತೆ ಇತ್ತು” ಎಂದು ಸ್ಪೀಕರ್ ಓಂ ಬಿರ್ಲಾ ಸಂಸತ್ತಿಗೆ ತಿಳಿಸಿದ್ದಾರೆ. ಆದರೆ, ಪ್ರಧಾನಿ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದಾರೆ. ಅದು ರಾಷ್ಟ್ರಪತಿಯ ಭಾಷಣದ ಬಗ್ಗೆ ಆಗಿರಲಿಲ್ಲ. ನೂರು ನಿಮಿಷದ ಭಾಷಣ ಕೇವಲ ಕಾಂಗ್ರೆಸ್ ಟೀಕೆಗೆ ಮೀಸಲಾಗಿತ್ತು. ಇದೇ ಬಿಜೆಪಿಯವರು ತಾವು ಸೋಲುವ ರಾಜ್ಯಗಳಲ್ಲಿ ವಿಪಕ್ಷಗಳ ಕಡು ಭ್ರಷ್ಟರನ್ನೆಲ್ಲ ಕರೆ ತಂದು ಸ್ವಚ್ಛ ಮಾಡುತ್ತಿರುವುದು ಪ್ರಧಾನಿಗಳ ಅರಿವಿನಲ್ಲಿ ಇಲ್ಲವೇ? ಎಲ್ಲಾ ಪಕ್ಷಗಳ ಕಳ್ಳರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದು ಯಾವ ನಡವಳಿಕೆ?
ಮೋದಿಯವರು ಯಾವುದೇ ಸಂದರ್ಭದಲ್ಲಿ ಭಾಷಣ ಮಾಡಿದರೂ ಅವರಿಗೆ ನೆಹರು ಕಾಡುತ್ತಾರೆ. ಕಾಂಗ್ರೆಸ್ ಅರವತ್ತು ವರ್ಷಗಳಲ್ಲಿ ದೇಶವನ್ನು ಲೂಟಿ ಹೊಡೆದಿದೆ ಎಂದು ಹೇಳುವುದು ಸಾಮಾನ್ಯ ಕಾರ್ಯಕರ್ತನಿಂದ ಮೋದಿಯವರವರೆಗೆ ಎಲ್ಲರಿಗೂ ಅಂಟಿದ ಚಾಳಿ. ಬ್ರಿಟಿಷರು ಖಾಲಿ ನೆಲ ಬಿಟ್ಟು ಹೋದಾಗ ನೆಹರು ಪ್ರಧಾನಿಯಾದರು. ಆ ನಂತರ ದೇಶದ ಇಂದಿನ ಬೆಳವಣಿಗೆಗೆ ಅವರು ಆಗ ಹಾಕಿದ ಬುನಾದಿಯೇ ಕಾರಣ. ಆದರೆ ಸದಾ ಕಾಂಗ್ರೆಸ್ ಏನೂ ಮಾಡಿಲ್ಲ ಎಂಬ ಸುಳ್ಳು ಹರಡುತ್ತಾರೆ. ಮೋದಿಯವರು ಹನ್ನೆರಡು ವರ್ಷಗಳಿಂದ ಪ್ರಧಾನಿಯಾಗಿದ್ದಾರೆ. ಅವರು ಆ ಸ್ಥಾನಕ್ಕೇರುವಾಗ ದೇಶದಲ್ಲಿ ಏನೇನಿತ್ತು ಅದರಲ್ಲಿ ಬಹುಪಾಲು ಕಾಂಗ್ರೆಸ್ ಕೊಡುಗೆ ಅಲ್ಲವೇ ಎಂದು ಯೋಚಿಸಬೇಕಿದೆ. ನೆಹರು ಕಟ್ಟಿದ ಸಂಸ್ಥೆಗಳ ಒಂದಂಶವನ್ನೂ ಮೋದಿಯವರು ಕಟ್ಟಿಲ್ಲ. ಕಾಂಗ್ರೆಸ್ ಯೋಜನೆಗಳಿಗೆ ಹೆಸರು ಬದಲಾಯಿಸಿದ್ದೇ ಅವರ ಸಾಧನೆ.
ದೇಶದ ಪ್ರಧಾನಿಯಾಗಿ ಎಲ್ಲರನ್ನೂ ಒಂದೇ ಭಾವನೆಯಲ್ಲಿ ನೋಡಬೇಕಿರುವ ಮೋದಿಯವರು ಚುನಾವಣೆಯ ಸಮಯದಲ್ಲಿ ತಮ್ಮ ಸ್ಥಾನದ ಘನತೆ ಮೀರಿ ದ್ವೇಷ ಭಾಷಣ ಮಾಡುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಲೋಕಸಭಾ ಚುನಾವಣೆಯ ಪ್ರಚಾರ ಭಾಷಣದಲ್ಲಿ “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳಿರುವವರಿಗೆ ಹಂಚುತ್ತಾರೆ” ಎಂದು ತೀರಾ ಕೆಳ ಮಟ್ಟಕ್ಕಿಳಿದು ಟೀಕಿಸಿದ್ದರು. ಬಿಜೆಪಿಗರಿಗೆ ಇಂದಿರಾ ಕುಟುಂಬಕ್ಕೆ ಗಾಂಧಿ ಉಪನಾಮ ಇರುವುದೇ ದೊಡ್ಡ ಸಂಕಟ. ಆ ಕುಟುಂಬವನ್ನು ಸಂಸತ್ತಿನ ಒಳಗೂ ಹೊರಗೂ ಹೀನಾಮಾನ ಟೀಕೆ ಮಾಡಲಾಗುತ್ತಿದೆ. ದ್ವೇಷ ಭಾಷಣ, ವಿಪಕ್ಷಗಳನ್ನು ನಿಂದಿಸುವ ಮೇಲ್ಪಂಕ್ತಿ ಹಾಕಿಕೊಟ್ಟವರು ಪ್ರಧಾನಿ ಮೋದಿ. ಅವರ ಅನುಯಾಯಿಗಳು ಅದನ್ನು ದೇಶದೆಲ್ಲೆಡೆ ಹರಡುತ್ತಿದ್ದಾರೆ. ಅವರ ಪ್ರಚೋದನೆ ಅನ್ಯರಿಗೂ ಪ್ರೇರಣೆ ನೀಡುತ್ತಿದೆ. ಒಟ್ಟಿನಲ್ಲಿ ಜನಪ್ರತಿನಿಧಿಗಳ ಭಾಷೆಗೆ ಯಾವುದೇ ಲಗಾಮು ಇಲ್ಲದಂತಾಗಿದೆ.
ದೇಶ, ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆದು ಜನರ ಹಿತಕ್ಕೆ ಪೂರಕವಾಗಿ ನೀತಿ ನಿರೂಪಣೆಗಳನ್ನು ಜಾರಿ ಮಾಡಬೇಕಿರುವ ಪ್ರಜಾಪ್ರಭುತ್ವದ ಪ್ರಮುಖ ಸಂಸ್ಥೆಗಳು ಸ್ವಾರ್ಥ, ಅಧಿಕಾರದಾಹಿಗಳ ಕೈವಶವಾಗಿ ತಾವು ಮಾಡಿದ್ದೇ ಶಾಸನ ಎಂಬಂತಾಗಿದೆ. ಪರಸ್ಪರ ಘನತೆ ಗೌರವದ ನಡವಳಿಕೆಗಳು ರಾಜಕಾರಣಿಗಳಲ್ಲಿ ಮರೆಯಾಗುತ್ತಿರುವುದು ಅಪೇಕ್ಷಣೀಯವಲ್ಲ. ಎಲ್ಲಾ ಪಕ್ಷಗಳಲ್ಲಿ, ಸರ್ಕಾರಗಳಲ್ಲಿ ಭ್ರಷ್ಟರು, ಅತ್ಯಾಚಾರಿಗಳು, ಕೊಲೆ ಪಾತಕಿಗಳು, ಅನಕ್ಷರಸ್ಥರು, ರೌಡಿಗಳು ತುಂಬಿದ್ದಾರೆ. ಅವರದಿಂದ ಆಳಿಸಿಕೊಳ್ಳುವ ದುರಂತ ಸ್ಥಿತಿ ದೇಶವಾಸಿಗಳದ್ದು. ಇದನ್ನು ಸ್ವಚ್ಛ ಮಾಡುವವರು ಯಾರು ಎಂಬುದೇ ಸದ್ಯದ ಬಹುದೊಡ್ಡ ಪ್ರಶ್ನೆ.





