2014ರ ನಂತರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ದೇಶದಲ್ಲಿ ಹಲವು ಸ್ಫೋಟ ಪ್ರಕರಣಗಳು ನಡೆದಿವೆ. ಆದರೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಮೂಗಿನಡಿ ನಡೆದಿರುವ ಮೊದಲ ಸ್ಫೋಟವಿದು ಎಂಬುದು ಗಮನಾರ್ಹ. ಕೇವಲ ಬಿಜೆಪಿ ಅದರಲ್ಲೂ ಮೋದಿ ಆಡಳಿತದಲ್ಲಿ ಮಾತ್ರ ಭಾರತ ಸುರಕ್ಷವಾಗಿರುವುದು ಸಾಧ್ಯ ಎಂಬುದನ್ನು ಈ ಘಟನೆ ಸುಳ್ಳು ಮಾಡಿದೆ.
ದೆಹಲಿಯ ಕೆಂಪುಕೋಟೆ ಸನಿಹದ ಮೆಟ್ರೋ ಸ್ಟೇಷನ್ ಮುಂಭಾಗ ಜರುಗಿರುವ ಭಯಾನಕ ಬಾಂಬ್ ಸ್ಫೋಟದಲ್ಲಿ 13 ಮಂದಿ ಮರಣ ಹೊಂದಿದ್ದು, ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಾಂಬ್ ಸ್ಫೋಟದ ಈ ಕೃತ್ಯ ಅತ್ಯಂತ ಖಂಡನೀಯ ಮತ್ತು ಕಳವಳಕಾರಿ. ಈ ಪ್ರಕರಣದ ಹಿಂದೆ ಯಾರೇ ಇದ್ದರೂ ಅವರನ್ನು ಹಿಡಿದು ನೆಲದ ಕಾನೂನಿನ ಪ್ರಕಾರ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲೇಬೇಕು. ಆದರೆ ತನಿಖೆ ಪಾರದರ್ಶಕವಾಗಿರಬೇಕು ಎಂಬುದು ಅಷ್ಟೇ ಮುಖ್ಯ.
ಅಮಾಯಕ ಸಾರ್ವಜನಿಕರನ್ನು ಬಲಿ ತೆಗೆದುಕೊಳ್ಳುವ ಅರ್ಥಹೀನ ಹಿಂಸಾಚಾರವು ದೇಶದ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ದೆಹಲಿಯ ಕೆಂಪು ಕೋಟೆಗೆ ರಾಷ್ಟ್ರೀಯ ಪ್ರಾಮುಖ್ಯತೆ ಇದೆ. 1947ರಲ್ಲಿ ಬ್ರಿಟಿಷರ ಆಳ್ವಿಕೆಯಿಂದ ದೇಶ ಸ್ವತಂತ್ರವಾದಾಗ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಭಾಷಣ ಮಾಡಿದ್ದು ಕೆಂಪು ಕೋಟೆಯಿಂದಲೇ. ಆ ನಂತರ ಎಲ್ಲ ಪ್ರಧಾನಿಗಳು ಆಗಸ್ಟ್ 15ರಂದು ರಾಷ್ಟ್ರಧ್ವಜವನ್ನು ಹಾರಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತ ಬಂದಿರುವುದು ಇದೇ ಕೆಂಪು ಕೋಟೆಯಿಂದ. ಈ ಪರಂಪರೆಯ ಕಾರಣ ಕೆಂಪುಕೋಟೆಯು ಭಾರತದ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯದ ಜೀವಂತ ಪ್ರತೀಕವಾಗಿದೆ. ಕೆಂಪು ಕೋಟೆಯ ಪ್ರದೇಶವನ್ನು ಸ್ಫೋಟಕ್ಕೆ ಆರಿಸಿಕೊಳ್ಳುವುದರ ಹಿಂದಿರಬಹುದಾದ ಮನಸ್ಥಿತಿಯಿದು.
‘ಭಯೋತ್ಪಾದಕ’ ದಾಳಿಗೆ ಸಂಚು ಹೂಡಿರುವ ಕಾಶ್ಮೀರಿ ವೈದ್ಯರೊಬ್ಬರನ್ನು ಹರಿಯಾಣದ ಫರೀದಾಬಾದ್ ನಿಂದ ದಸ್ತಗಿರಿ ಮಾಡಿರುವುದಾಗಿ ಪೊಲೀಸರು ಹೇಳಿಕೆ ನೀಡಿದ ಕೆಲವೇ ತಾಸುಗಳಲ್ಲಿ ಕೆಂಪು ಕೋಟೆಯಿಂದ ಅನತಿ ದೂರದಲ್ಲಿರುವ ಮೆಟ್ರೋ ಸ್ಟೇಷನ್ ಮುಂಭಾಗದಲ್ಲಿ ಈ ಸ್ಫೋಟ ಜರುಗಿದೆ.
ರಾಜಕೀಯವಾಗಿ ರಾಷ್ಟ್ರೀಯ ಮಹತ್ವವಿರುವ ಬಿಹಾರ ವಿಧಾನಸಭೆ ಚುನಾವಣೆಯ ಎರಡನೆಯ ಹಂತದ ಮತದಾನದ ಮುನ್ನಾ ದಿನ ಈ ಸ್ಫೋಟ ನಡೆದಿರುವುದು ಕೇವಲ ಕಾಕತಾಳೀಯವೇ ಅಥವಾ ಅದಕ್ಕಿಂತ ಹೆಚ್ಚಿನದೇನಾದರೂ ಇದೆಯೇ ಎಂಬ ಅಂಶದ ಕುರಿತು ಚರ್ಚೆಗಳು ನಡೆದಿವೆ.
ಸ್ಫೋಟದ ಘಟನೆಯ ನಡುವೆಯೂ ಪ್ರಧಾನಿ ಮೋದಿಯವರು ಭೂತಾನದ ದೊರೆಯ ಹುಟ್ಟುಹಬ್ಬಕ್ಕೆಂದು ಎರಡು ದಿನಗಳ ವಿದೇಶ ಪ್ರವಾಸವನ್ನು ರದ್ದು ಮಾಡದೆ ತೆರಳಿದ ಕುರಿತು ಸಾಮಾಜಿಕ ಜಾಲತಾಣಗಳು ಟೀಕೆಟಿಪ್ಪಣಿಗಳಿಂದ ತುಂಬಿ ತುಳುಕಿವೆ. “ನಾನಿಂದು ಭಾರವಾದ ಹೃದಯದಿಂದ ಭೂತಾನ್‌ಗೆ ಬಂದಿದ್ದೇನೆ. ನೆನ್ನೆ ಸಂಜೆ ದೆಹಲಿಯಲ್ಲಿ ಜರುಗಿದ ಭಯಾನಕ ಪ್ರಕರಣ ನನ್ನ ಮನಸ್ಸನ್ನು ತೀವ್ರವಾಗಿ ಕದಡಿದೆ. ನಮ್ಮ (ತನಿಖಾ) ಏಜೆನ್ಸಿಗಳು ಈ ಸಂಚಿನ ಆಳಕ್ಕೆ ಇಳಿಯಲಿವೆ. (ಸ್ಫೋಟದ ಹಿಂದಿರುವ) ಸಂಚುಕೋರರನ್ನು ಬಿಡುವುದಿಲ್ಲ. ಕಾರಣರಾದ ಎಲ್ಲರನ್ನೂ ಹಿಡಿದು ಕಾನೂನು ಕ್ರಮ ಜರುಗಿಸಲಿದ್ದೇವೆ” ಎಂದಿದ್ದಾರೆ. ‘ಘಟನೆಯ ಹಿಂದಿರುವ ಪ್ರತಿಯೊಬ್ಬ ಅಪರಾಧಿಯನ್ನೂ ಬೇಟೆಯಾಡುವಂತೆ ಆದೇಶ ನೀಡಿದ್ದೇನೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ನಮ್ಮ ಏಜೆನ್ಸಿಗಳ ಕಡು ಕ್ರೋಧವನ್ನು ಎದುರಿಸಲಿದ್ದಾರೆ’ ಎಂಬುದು ಗೃಹಮಂತ್ರಿ ಅಮಿತ್ ಶಾ ಅವರ ಆಶ್ವಾಸನೆ. ವಿದೇಶಯಾತ್ರೆಯಿಂದ ಇಂದು (ಬುಧವಾರ) ವಾಪಸಾದ ಮೋದಿಯವರು ದೆಹಲಿಯ ಲೋಕನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿ ಬಾಂಬ್ ಸ್ಫೋಟದ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದ್ದಾರೆ.
ಪ್ರಧಾನಿಯವರ ಭೂತಾನ್ ಯಾತ್ರೆಯ ಸಂದರ್ಭದಲ್ಲಿ ಗೌತಮ್ ಅಡಾಣಿ ಹಾಜರಿಯಲ್ಲಿ, 5000 ಮೆಗಾವಾಟ್ ಜಲವಿದ್ಯುತ್ ಉತ್ಪಾದನೆಯ ಜಂಟಿ ಒಪ್ಪಂದಕ್ಕೆ ಮೋದಿ ಮಿತ್ರ ಅದಾನಿ ಕಂಪನಿ ಸಹಿ ಹಾಕಿತು.
2000-2001ರ ಸಾಲಿನಲ್ಲಿ ಕೆಂಪು ಕೋಟೆಯ ಮೇಲೆ ಲಷ್ಕರ್ ಎ ತಯ್ಯೆಬಾ ಉಗ್ರರು ದಾಳಿ ನಡೆಸಿದ್ದರು. ಆಗ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರದಲ್ಲಿತ್ತು.
2001ರಲ್ಲಿ ಪಾಕಿಸ್ತಾನದ ಜೈಶ್ ಎ ಮಹಮ್ಮದ್ ಭಯೋತ್ಪಾದಕರು ದೇಶದ ಅಂದಿನ ಸಂಸದ್ ಭವನದ ಮೇಲೆ ನಡೆಸಿದ ದಾಳಿಯಲ್ಲಿ 13 ಮಂದಿ ಹತರಾಗಿದ್ದರು. ಆಗಲೂ ವಾಜಪೇಯಿ ಸರ್ಕಾರವಿತ್ತು.
ತರುವಾಯ ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಗಳಲ್ಲಿ ದೆಹಲಿಯಲ್ಲಿ ಸ್ಫೋಟಗಳ ಸರಣಿಯೇ ಜರುಗಿತು. 2008ರ ಸೆಪ್ಟಂಬರ್ ನಲ್ಲಿ ದೆಹಲಿಯ ಜನನಿಬಿಡ ಮಾರುಕಟ್ಟೆಗಳಲ್ಲಿ ಐದು ಬಾಂಬುಗಳು ಸ್ಫೋಟಿಸಿದ್ದವು. 33 ಮಂದಿಯನ್ನು ಕೊಂದ ಈ ಸ್ಫೋಟಗಳ ಹೊಣೆಯನ್ನು ಇಂಡಿಯನ್ ಮುಜಾಹಿದೀನ್ ಎಂಬ ಗುಂಪು ವಹಿಸಿಕೊಂಡಿತ್ತು. ಎರಡು ವಾರಗಳ ನಂತರ ಮತ್ತೊಮ್ಮೆ ಬಾಂಬುಗಳು ಸ್ಫೋಟಿಸಿ ಮೂವರು ಬಲಿಯಾಗಿದ್ದರು. 2005ರಲ್ಲಿ ಪಾಕಿಸ್ತಾನದ ಲಷ್ಕರ್ ಎ ತಯ್ಯೆಬಾ ದೆಹಲಿಯ ಹಲವೆಡೆ ನಡೆಸಿದ ಬಾಂಬ್ ಸ್ಫೋಟಗಳಲ್ಲಿ 70 ಮಂದಿ ಪ್ರಾಣ ಕಳೆದುಕೊಂಡಿದ್ದರು. 2011ರಲ್ಲಿ ದೆಹಲಿಯ ಹೈಕೋರ್ಟ್ ಹೊರಗೆ ನಡೆದ ಬ್ರೀಫ್ ಕೇಸ್ ಬಾಂಬ್ ಸ್ಫೋಟದಲ್ಲಿ 15 ಮಂದಿ ಮೃತರಾಗಿದ್ದರು.
2014ರ ನಂತರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ದೇಶದಲ್ಲಿ ಹಲವು ಸ್ಫೋಟ ಪ್ರಕರಣಗಳು ನಡೆದಿವೆ. ಆದರೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಮೂಗಿನಡಿ ನಡೆದಿರುವ ಮೊದಲ ಸ್ಫೋಟವಿದು ಎಂಬುದು ಗಮನಾರ್ಹ. ಕೇವಲ ಬಿಜೆಪಿ ಅದರಲ್ಲೂ ಮೋದಿ ಆಡಳಿತದಲ್ಲಿ ಮಾತ್ರ ಭಾರತ ಸುರಕ್ಷವಾಗಿರುವುದು ಸಾಧ್ಯ ಎಂಬುದನ್ನು ಈ ಘಟನೆ ಸುಳ್ಳು ಮಾಡಿದೆ. ನಿರಂತರ ಜಾಗೃತಿಯ ಮತ್ತು ಭದ್ರತಾ ವ್ಯವಸ್ಥೆಗಳಲ್ಲಿ ದೊಡ್ಡ ಲೋಪಗಳಾಗಿರುವುದು ನಿಚ್ಚಳ. ಪಾಕಿಸ್ತಾನದ ಮುಂದೆ ಅಬ್ಬರಿಸುವ ನಾಯಕತ್ವ, ಚೀನೀ ದಾಳಿಯನ್ನು ಕಣ್ಣುಮುಚ್ಚಿ ಶರಣಾಗತಿ ಒಪ್ಪಿಕೊಂಡಿರುವುದು ವಾಸ್ತವ.
ಈ ಸ್ಫೋಟವು ಭಯೋತ್ಪಾದನೆಯ ಕೃತ್ಯವೆಂದೇ ಭಾವಿಸಿ ನ್ಯಾಶನಲ್ ಇನ್ವೆಸ್ಟಿಗೇಟಿವ್ ಏಜೆನ್ಸಿಯು (ಎನ್ಐಎ) ಯುಎಪಿಎ ಮತ್ತು ಸ್ಫೋಟಕಗಳ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆದರೆ ಭಯೋತ್ಪಾದನೆಯ ಕೃತ್ಯವೆಂದು ಈವರೆಗೆ ಅಧಿಕೃತವಾಗಿ ಸಾರಿಲ್ಲ. ಸ್ಫೋಟ ನಡೆಸಲು ಬಳಸಿದ ಕಾರನ್ನು ನಡೆಸುತ್ತಿದ್ದ ವ್ಯಕ್ತಿಯೂ ಸತ್ತಿದ್ದಾನೆ. ಈ ವ್ಯಕ್ತಿಯು ದೇಶದ ಇತರೆಡೆಗಳಲ್ಲಿ ಭಯೋತ್ಪಾದನಾ ದಾಳಿಗಳ ಒಳಸಂಚನ್ನು ರೂಪಿಸಿದ್ದ ಇತರೆ ವ್ಯಕ್ತಿಗಳ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದನೆಂದು ಹೇಳಲಾಗುತ್ತಿದೆ. ಇದು ಇತ್ತೀಚಿನ ದಿನಗಳ ಬೆಳವಣಿಗೆಗಳ ಸ್ವರೂಪವೇ ಆಗಿ ಹೋಗಿದೆ. ತನಿಖೆಯಿಂದ ಹೊರಬೀಳಬಹುದಾದ ಹೆಚ್ಚಿನ ವಿವರಗಳು ಮಾತ್ರವೇ ಪ್ರಕರಣದ ಚಿತ್ರವನ್ನು ಸ್ಪಷ್ಟಗೊಳಿಸಬಹುದು. ಅಲ್ಲಿಯ ತನಕ ಊಹಾಪೋಹಗಳಲ್ಲಿ ತೊಡಗುವುದು ತರವಲ್ಲ. ದೇಶದ ಬಹುತೇಕ ಸುದ್ದಿ ಮಾಧ್ಯಮಗಳು ಊಹಾತ್ಮಕ ವರದಿಗಳ ಪ್ರಸಾರದಲ್ಲಿ ತೊಡಗಿವೆ. ‘ಬಲ್ಲ ಮೂಲಗಳು’ ಹೇಳಿವೆ ಎಂದು ಬಲ್ಲ ಮೂಲಗಳ ಹೆಸರಿನಲ್ಲಿ ಪ್ರಚೋದನಾತ್ಮಕ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ದೇಶದಲ್ಲಿ ಶಾಂತಿಯುತ ವಾತಾವರಣವನ್ನು ಸ್ಥಾಪಿಸಲು ಸರ್ಕಾರ, ಪ್ರತಿಪಕ್ಷಗಳು ಹಾಗೂ ಸುದ್ದಿ ಮಾಧ್ಯಮಗಳು ಒಂದಾಗಿ ಶ್ರಮಿಸಬೇಕಿದೆ.
ಆದರೆ ತೀವ್ರ ಬಲಪಂಥದ ಹಾದಿಯಲ್ಲಿ ನಡೆದಿರುವ ಭಾರತ ಮತ್ತು ವಿಶ್ವದ ಹಲವು ದೇಶಗಳಲ್ಲಿ ಭಯೋತ್ಪಾದನೆಯ ಹೆಸರಿನಲ್ಲಿ ಕೋಮುವಾದಿ ಧೃವೀಕರಣದ ತಿದಿ ಒತ್ತುವ ಕೃತ್ಯ ವ್ಯಾಪಕವಾಗಿದೆ. ಭಾರತವು ‘ಮೆದು ಪ್ರಭುತ್ವ’ವಾಗಿ ಹೋಗಿದೆ ಎಂಬ ಪ್ರಚಂಡ ಪ್ರಚಾರವನ್ನು ನಡೆಸಿದ ಮೋಶಾ ನೇತೃತ್ವದ ಬಿಜೆಪಿ ಮತ್ತು ಸಂಘಪರಿವಾರ ಹತ್ತು ಹಲವು ರೂಪಗಳಲ್ಲಿ ಕೋಮುವಾದಿ ಧೃವೀಕರಣದಲ್ಲಿ ತೊಡಗಿದೆ. ಭಯೋತ್ಪಾದನೆ ನಿಗ್ರಹದ ನಿಜ ರಣತಂತ್ರದಲ್ಲಿ ಸಾಮಾಜಿಕ ಸಾಮರಸ್ಯ ಸ್ಥಾಪನೆಯೂ ಇರಬೇಕು. ಈ ಅಂಶ ಇತ್ತೀಚಿನ ವರ್ಷಗಳಲ್ಲಿ ಮರೆಯಾಗಿ ಹೋಗಿದೆ. ಸಾಮಾಜಿಕ ಸಾಮರಸ್ಯವನ್ನು ಕದಡುವ ಕೃತ್ಯಗಳಿಗೆ ಶಿಕ್ಷೆಯ ಭಯವೇ ಇಲ್ಲವಾಗಿರುವುದು ಅತ್ಯಂತ ಕಳವಳದ ಸಂಗತಿ.





