ಬಿಜೆಪಿ ಮತ್ತು ಸಂಘಪರಿವಾರ ದೇಶಾದ್ಯಂತ ಜನಾಂಗೀಯ ದ್ವೇಷದ ಬೀಜವನ್ನು ಬಿತ್ತಿ ಅದರ ನಂಜುಭರಿತ ಫಸಲನ್ನು ಕಟಾವು ಮಾಡತೊಡಗಿವೆ. ಉತ್ತರ ಭಾರತದಲ್ಲಿ ತೀವ್ರವಾಗಿರುವ ಗುಂಪು ಹತ್ಯೆಯ ಈ ಪಿಡುಗು ದಕ್ಷಿಣ ಭಾರತ ಅದರಲ್ಲಿಯೂ ಕೇರಳಕ್ಕೆ ಕಾಲಿಟ್ಟಿರುವುದು, “ನೀನು ಬಾಂಗ್ಲಾದೇಶಿಯೇ” ಎಂದು ಕೇಳಿ ಕೊಂದಿರುವುದು ಆತಂಕಕಾರಿ ಬೆಳವಣಿಗೆ.
ಕೋಮು ಸಾಮರಸ್ಯಕ್ಕೆ ಹೆಸರಾದ ಕೇರಳವೂ ಕೋಮುದ್ವೇಷದ ಅಮಲು ಏರಿಸಿಕೊಳ್ಳತೊಡಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ಛತ್ತೀಸಗಢದ ರಾಮನಾರಾಯಣ ಬಘೇಲ್ ಎಂಬ ಕಡುಬಡ ದಲಿತ ಯುವಕ ಉದ್ಯೋಗವನ್ನು ಅರಸಿ ಕೇರಳಕ್ಕೆ ಬಂದಿದ್ದ. ಕೆಲಸ ಸಿಗಲಿಲ್ಲ. ಸದ್ಯದಲ್ಲೇ ವಾಪಸು ಬರುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿದ್ದ. ಆದರೆ ಹಾಗೆ ಹಿಂದಿರುಗುವ ಮೊದಲೇ ಆತ ಕೋಮುದ್ವೇಷದ ನಂಜಿಗೆ ಬಲಿಯಾದ.
ಕೇರಳದ ತನ್ನ ಸಂಬಂಧಿಕನ ಜೊತೆ ವಾಸಿಸುತ್ತಿದ್ದ ಈತ ಇದೇ ಡಿಸೆಂಬರ್ 17ರಂದು ದಾರಿ ತಪ್ಪಿ ಪಾಲಕ್ಕಾಡ್‌ನ ಆಟ್ಟಪಾಳ್ಳಂ ಗ್ರಾಮಕ್ಕೆ ಬಂದಿದ್ದ. ಕೆಲ ಸ್ಥಳೀಯರು ಈತನನ್ನು ಕಳ್ಳನೆಂದು ಭಾವಿಸಿ ಥಳಿಸಿದ್ದಾರೆ. ರಾಮನಾರಾಯಣ ಮದ್ಯದ ಅಮಲಿನಲ್ಲಿದ್ದದ್ದು ಹೌದು. ಆದರೆ, ಏನನ್ನಾದರೂ ಕದ್ದಿದ್ದಾನೆಂಬುದಕ್ಕೆ ಯಾವುದೇ ಪುರಾವೆ ಇರಲಿಲ್ಲ. ಈವರೆಗೆ ಆತನ ವಿರುದ್ಧ ಯಾವುದೇ ಅಪರಾಧ ದಾಖಲೆಗಳಿಲ್ಲ ಎಂಬುದು ಪೊಲೀಸರ ಹೇಳಿಕೆ.
ಪೋಸ್ಟ್ ಮಾರ್ಟಮ್ ವರದಿಗಳ ಪ್ರಕಾರ ಗುಂಪೊಂದು ಈ ಬಡಪಾಯಿಯನ್ನು ಸಾಯುವ ತನಕ ಥಳಿಸಿದೆ. ಶರೀರವೆಲ್ಲ ಜರ್ಝರಿತವಾಗಿತ್ತು. ತಲೆಗೆ ತೀವ್ರತರ ಪೆಟ್ಟುಗಳೂ ಸೇರಿದಂತೆ ಒಟ್ಟು 80 ಕಡೆಗಳಲ್ಲಿ ಗಾಯಗಳಾಗಿವೆ. ಆಂತರಿಕ ರಕ್ತಸ್ರಾವ ಆಗಿದೆ. ಹಲ್ಲೆ ಮತ್ತು ತಲೆಗೆ ಆದ ಗಾಯಗಳಿಂದ ರಕ್ತ ಸೋರಿ ಸಾವು ಉಂಟಾಗಿದೆ ಎಂದು ವರದಿ ಹೇಳಿದೆ.
‘ರಾಮನಾರಾಯಣನ ದೇಹದಲ್ಲಿ ಗಾಯಗಳಾಗಿಲ್ಲದ ಒಂದೂ ಜಾಗ ಉಳಿದಿಲ್ಲ. ಹಲವು ಬದಿಗಳಿಂದ ನಡೆದಿರುವ ಅತ್ಯಂತ ಕ್ರೂರ ಹಲ್ಲೆಯಿದು. ಈತ ಗುಂಪಿನ ದಾಳಿಗೆ ತುತ್ತಾಗಿರುವುದು ನಿಚ್ಚಳ. ಪಶುವಿಗೆ ಬಡಿದಂತೆ ಬಡಿಯಲಾಗಿದೆ’ ಎಂದು ವೈದ್ಯರು ಮೀಡಿಯಾಕ್ಕೆ ತಿಳಿಸಿದ್ದಾರೆ.
ಕೊಲೆಯ ಕೇಸು ದಾಖಲಿಸಿರುವ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮುರಳಿ, ಪ್ರಸಾದ್, ಅನು, ಬಿಪಿನ್ ಹಾಗೂ ಸನ್ಹಿತಾ ಎಂಬುವ ಇವರು ಆಟ್ಟಪಾಳ್ಳಂ ಗ್ರಾಮಸ್ಥರು. ಹತ್ಯೆಗೀಡಾದ ರಾಮನಾರಾಯಣನಿಗೆ ಪತ್ನಿ ಮತ್ತು ಶಾಲೆಗೆ ಹೋಗುವ ಇಬ್ಬರು ಮಕ್ಕಳಿದ್ದಾರೆ. ಸಾಮಾಜಿಕ ಕಾರ್ಯಕರ್ತ ಜಬ್ಬಾರ್ ಪ್ರಕಾರ ಈ ಹತ್ಯೆಯ ಹಿಂದೆ ಕೋಮುದ್ವೇಷ ಕೆಲಸ ಮಾಡಿದೆ. ಬಾಂಗ್ಲಾದೇಶಿ ನುಸುಳುಕೋರನೆಂದು ಈತನ ಮೇಲೆ ಬೈಗುಳಗಳ ಸುರಿಮಳೆಯಾಗಿತ್ತು. ಇದು ದ್ವೇಷಭರಿತ ಕ್ರೂರ ಹಿಂಸೆ. ಕಳ್ಳತನದ ಕೋನವನ್ನು ಆನಂತರದ ಆಲೋಚನೆಯಾಗಿ ಸೃಷ್ಟಿಸಲಾಗಿದೆ ಎಂಬುದು ಜಬ್ಬಾರ್ ಆಪಾದನೆ.
ಛತ್ತೀಸಗಢದಲ್ಲಿ ಕೆಲಸ ಸಿಕ್ಕ ದಿನ ದಿನಕ್ಕೆ 200-300 ರುಪಾಯಿ ಕೂಲಿ ಸಂಪಾದಿಸುತ್ತಿದ್ದ ಬಘೇಲ್. ಕೆಲಸ ಸಿಗದ ದಿನ ಅದೂ ಇಲ್ಲ. ಹೆಚ್ಚಿನ ಕೂಲಿಯ ಆಸೆಯಿಂದ ನೂರಾರು ಕಿ.ಮೀ. ದೂರದ ಕೇರಳಕ್ಕೆ ಬಂದಿದ್ದ. ಅವನಿಗಿದ್ದ ತುಂಡು ಭೂಮಿ ತುತ್ತಿನ ಚೀಲಗಳನ್ನು ತುಂಬಿಸುತ್ತಿರಲಿಲ್ಲ. ಸತ್ನಾಮಿ ಎಂಬ ಛತ್ತೀಸಗಢದ ಪರಿಶಿಷ್ಟ ಜಾತಿಗೆ ಸೇರಿದ್ದ ಬಘೇಲ್.
ಅಮಾನುಷವಾಗಿ ಥಳಿಸಲಾದ ಬಘೇಲ್, ಆಂತರಿಕ ರಕ್ತಸ್ರಾವಗಳಿಂದ ರಕ್ತವಾಂತಿ ಮಾಡಿಕೊಂಡ. ರಸ್ತೆ ಬದಿಯಲ್ಲಿ ನಾಲ್ಕು ತಾಸುಗಳ ಕಾಲ ತಬ್ಬಲಿಯಂತೆ ಬಿದ್ದಿದ್ದ. ಆನಂತರ ಪೊಲೀಸರು ಆಸ್ಪತ್ರೆಗೆ ಕೊಂಡೊಯ್ದಿದ್ದರು.
ಇತ್ತೀಚೆಗೆ ಹೊರಬಿದ್ದರುವ ಈ ಘಟನೆಯ ವಿಡಿಯೋದಲ್ಲಿ ಹಲ್ಲೆಕೋರರು ಬಘೇಲ್ ನನ್ನು “ನೀನು ಬಾಂಗ್ಲಾದೇಶಿಯೇ?” ಎಂದು ಕೇಳುತ್ತಿರುವ ದೃಶ್ಯಗಳಿವೆ. ಬಘೇಲ್ ಸಂಘಪರಿವಾರದ ದ್ವೇಷ ರಾಜಕಾರಣದ ಬಲಿಪಶುವಾಗಿದ್ದಾನೆ. ಬಾಂಗ್ಲಾದೇಶಿ ಎಂಬ ಹಣೆಪಟ್ಟಿ ಹಚ್ಚಿ ಈತನನ್ನು ಕೊಲ್ಲಲಾಗಿದೆ. ಹಲ್ಲೆಕೋರರು ಆರೆಸ್ಸೆಸ್ ಗೆ ಸೇರಿದವರು. ಈ ಹಿಂದೆ ಕ್ರಿಮಿನಲ್ ಕೇಸುಗಳನ್ನು ಎದುರಿಸಿದ ದಾಖಲೆ ಹೊಂದಿದವರು ಎಂದು ಕೇರಳದ ಸಚಿವ ಎಂ.ಬಿ.ರಾಜೇಶ್ ತಿಳಿಸಿದ್ದಾರೆ.
ಬಿಜೆಪಿ ಮತ್ತು ಸಂಘಪರಿವಾರ ದೇಶಾದ್ಯಂತ ಜನಾಂಗೀಯ ದ್ವೇಷದ ಬೀಜವನ್ನು ಬಿತ್ತಿ ಅದರ ನಂಜುಭರಿತ ಫಸಲನ್ನು ಕಟಾವು ಮಾಡತೊಡಗಿದೆ. ಉತ್ತರ ಭಾರತದಲ್ಲಿ ತೀವ್ರವಾಗಿರುವ ಗುಂಪು ಹತ್ಯೆಯ ಈ ಪಿಡುಗು ದಕ್ಷಿಣ ಭಾರತ ಅದರಲ್ಲಿಯೂ ಕೇರಳಕ್ಕೆ ಕಾಲಿಟ್ಟಿರುವುದು, ನೀನು ಬಾಂಗ್ಲಾದೇಶಿಯೇ ಎಂದು ಕೇಳಿ ಕೊಂದಿರುವುದು ಆತಂಕಕಾರಿ ಬೆಳವಣಿಗೆ. ಕೇರಳದಲ್ಲಿ ತಲೆಯೆತ್ತಲು ಬಿಜೆಪಿ ಬಹುವಾಗಿ ಪ್ರಯತ್ನಿಸಿದೆ. ಕೇರಳದ ಇತ್ತೀಚಿನ ನಗರ ಪಂಚಾಯ್ತಿ ಚುನಾವಣೆಗಳಲ್ಲಿ ರಾಜಧಾನಿ ತಿರುವನಂತಪುರಂ ಮಹಾನಗರಪಾಲಿಕೆಯನ್ನೇ ಗೆದ್ದು ದೇಶದ ಗಮನ ಸಳೆಯಿತು. ಈ ಗೆಲುವಿನ ನಂತರ ಕೇಸರಿ ಪಕ್ಷದಿಂದ ಕೋಮುಧ್ರುವೀಕರಣದ ಪ್ರಯತ್ನಗಳು ಹೆಚ್ಚಲಿವೆಯೇ ವಿನಾ ತಗ್ಗುವ ಮಾತೇ ಇಲ್ಲ.
ವರ್ಷಗಳ ಹಿಂದೆ ಮಧು ಎಂಬ ಸ್ಥಳೀಯ ಗಿರಿಜನ ಯುವಕನನ್ನು ಗುಂಪೊಂದು ಹೀಗೆಯೇ ಸಾಯಹೊಡೆದಿತ್ತು. ಹಸಿವಿನಿಂದ ಕಂಗೆಟ್ಟಿದ್ದ ಮಧು ಮೇಲೆಯೂ ಕಳ್ಳತನದ ಸುಳ್ಳು ಆಪಾದನೆ ಹೊರಿಸಲಾಗಿತ್ತು. ಮಧುವನ್ನು ಥಳಿಸಿದ ವಿಡಿಯೋ-ಭಾವಚಿತ್ರಗಳು ದೇಶಾದ್ಯಂತ ರೋಷವನ್ನು ಹುಟ್ಟು ಹಾಕಿದ್ದವು. ಈತನನ್ನು ಕೊಂದ 14 ಮಂದಿಯ ಪೈಕಿ 13 ಮಂದಿಗೆ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗಿತ್ತು.
ದೆಹಲಿಗೆ ಅಂಟಿಕೊಂಡಿರುವ ಉತ್ತರ ಪ್ರದೇಶದ ಗಡಿಭಾಗದ ದಾದ್ರಿಯ ಬಿಸಾದ ಗ್ರಾಮದ ಮೊಹಮ್ಮದ್ ಅಖ್ಲಾಕ್ ನನ್ನು ಕಟ್ಟರ್ ಹಿಂದುತ್ವವಾದಿಗಳ ಗುಂಪೊಂದು ಜಜ್ಜಿ ಕೊಂದಿತ್ತು. ಮನೆಯ ರೆಫ್ರಿಜರೇಟರಿನಲ್ಲಿ ಗೋಮಾಂಸ ಇಟ್ಟಿದ್ದನೆಂಬ ಅನುಮಾನವಷ್ಟೇ ಈ ಹತ್ಯೆಯ ಹಿಂದಿನ ಕಾರಣವಾಗಿತ್ತು. ಈ ಹತ್ಯೆಯ ಎಲ್ಲ 18 ಮಂದಿ ಆಪಾದಿತರು ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಆದಿತ್ಯನಾಥ ಸರ್ಕಾರ ಕಳೆದ ತಿಂಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಪೆಹ್ಲೂಖಾನ್ ನನ್ನು ಬಡಿದು ಕೊಂದರೆಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲವೆಂದು 2019ರಲ್ಲಿ ಅಲ್ವರ್ ಜಿಲ್ಲಾ ನ್ಯಾಯಾಲಯ ಆರೂ ಮಂದಿ ಆಪಾದಿತರನ್ನು ಖುಲಾಸೆಗೊಳಿಸಿತು. ಆರೋಪಿಗಳ ಮೇಲಿನ ಆಪಾದನೆಯನ್ನು ಸೂಕ್ತ ಸಾಕ್ಷ್ಯಾಧಾರಗಳ ಸಹಿತ ಸಾಬೀತು ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದಿತು. ದೇಶದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆ ಹಿಡಿದಿರುವ ಇಳಿಜಾರಿನ ದಾರಿಯತ್ತ ಈ ಪ್ರಕರಣಗಳ ವಿಚಾರಣೆಗಳು ಬೆರಳು ಮಾಡಿವೆ.
ಇತ್ತೀಚೆಗೆ ಬಿಹಾರದ ನವಾದದಲ್ಲಿ ಅಥಾರ್ ಹುಸೇನ್ ಖಾನ್ ಎಂಬ ಬೀದಿ ಬೀದಿ ಸುತ್ತಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಅಮಾಯಕನನ್ನು ಕಳ್ಳನೆಂದು ಆರೋಪ ಹೊರಿಸಿ ಕ್ರೂರವಾಗಿ ಥಳಿಸಿ ಕೊಲ್ಲಲಾಗಿದೆ. ಕಿವಿಗಳನ್ನು ಕಟಿಂಗ್ ಪ್ಲಯರ್ ನಿಂದ ಕಿತ್ತು ಚಿತ್ರಹಿಂಸೆಗೆ ಗುರಿ ಮಾಡಲಾಗಿತ್ತು.
ಇದನ್ನೂ ಓದಿ ಬಾಂಗ್ಲಾದೇಶ | ಮಾಧ್ಯಮ ಸ್ವಾತಂತ್ರ್ಯದ ಮೇಲೆ ಕರಾಳ ದಾಳಿ; ಅಸಹಿಷ್ಣುತೆಯ ಹಾದಿ ಹಿಡಿದ ಯುವಕರು
ಬಿಹಾರದಲ್ಲಿ ಬಾಂಗ್ಲಾದೇಶದ ನುಸುಳುಕೋರರು ದೊಡ್ಡ ಪ್ರಮಾಣದಲ್ಲಿದ್ದಾರೆಂದು ಬಿಜೆಪಿ ಚುನಾವಣಾ ಪ್ರಚಾರ ಮಾಡಿ ಮುಸ್ಲಿಂ ದ್ವೇಷದ ಅಲೆ ಎಬ್ಬಿಸಿತ್ತು. ನುಸುಳುಕೋರರು ಇದ್ದಿದ್ದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಪತ್ತೆ ಹಚ್ಚಿ ಹೇಳಬೇಕಿತ್ತು. ಆದರೆ, ಮುಖ್ಯ ಚುನಾವಣಾ ಕಮಿಷನರ್ ಜ್ಞಾನೇಶ್ ಕುಮಾರ್ ಈ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡದೇ ನುಣುಚಿಕೊಂಡರು.
ದ್ವೇಷದ ಬೆಂಕಿಗೆ ಗಡಿಗಳಿರುವುದಿಲ್ಲ. ದಕ್ಷಿಣಕ್ಕೆ ದಾಟಿರುವ ಈ ಪಿಡುಗು ನೆರೆಮನೆಯ ಸುಟ್ಟ ನಂತರ ಅಲ್ಲಿಯೇ ಆರಿ ಹೋಗುವುದಿಲ್ಲ. ತಮ್ಮ ಮನೆಗೂ ಬೀಳಲಿದೆ ಎಂಬ ಸತ್ಯವನ್ನು ಸಮಾಜ ಅರಿತುಕೊಳ್ಳಬೇಕು. ಬೆಂಕಿ ಇಡುವವರ ನಿಜ ಉದ್ದೇಶಗಳನ್ನು ತಿಳಿಯಬೇಕು.





