ಪ್ರಿಯಾಂಕ್ ಖರ್ಗೆ ಅವರು ಎತ್ತಿರುವ ಈ ಗಂಭೀರ ವಿಷಯ ಕುರಿತು ಅವರ ಸಂಪುಟ ಸಹೋದ್ಯೋಗಿಗಳು ಒಕ್ಕೊರಲಿನಿಂದ ಜೊತೆ ನಿಲ್ಲಬೇಕಿತ್ತು. ದಲಿತಾತಿ ದಲಿತರೇ ಆಗಿರುವ ಗೃಹಸಚಿವರು ಮುಂದಾಗಿ ದನಿ ಎತ್ತಬೇಕಿತ್ತು. ಹಾಗಾಗದೆ ಇರುವುದು ಈ ನೆಲದ ದುರಂತ, ಜಾತ್ಯತೀತ ತತ್ವಗಳ ದುರಂತ. ಕಾಂಗ್ರೆಸ್ಸಿನೊಳಗೊಂದು ಆರೆಸ್ಸೆಸ್ ಆನೆ ಅವಿತಿರುವ ದುರಂತ.
ಶೈಕ್ಷಣಿಕ ಸಂಸ್ಥೆಗಳು ಮತ್ತಿತರೆ ರಾಜ್ಯ ಸರ್ಕಾರಿ ಒಡೆತನದ ಆವರಣಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಗ್ರಹ ಆರೆಸ್ಸೆಸ್ ಪರ ಮತ್ತು ವಿರೋಧಿ ವಲಯಗಳಲ್ಲಿ ತೀವ್ರ ತರಂಗಗಳನ್ನು ಎಬ್ಬಿಸಿದೆ.
ಆರೆಸ್ಸೆಸ್ ಬೆಂಬಲಿಗರು ಎಂದು ಹೇಳಿಕೊಳ್ಳುವ ಕೆಲವರು ಪ್ರಿಯಾಂಕ್ ಅವರನ್ನು ಅವಾಚ್ಯ ಶಬ್ದಗಳಲ್ಲಿ ಬೈಯ್ದು, ಪ್ರಾಣ ಬೆದರಿಕೆ ಹಾಕಿರುವ ಆತಂಕಕಾರಿ ಬೆಳವಣಿಗೆಯೂ ನಡೆದಿದೆ. ಈ ಕುರಿತು ಖುದ್ದು ಪ್ರಿಯಾಂಕ್ ಅವರೇ ರೆಕಾರ್ಡ್ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೀಗೆ ತಾಯಿ-ಸೋದರಿಯರ ಕುರಿತು ಅಶ್ಲೀಲ-ಅವಾಚ್ಯ ಬೈಗುಳಗಳನ್ನು ಲೀಲಾಜಾಲವಾಗಿ ಉಗುಳುವಂತಹವರ ಸಂಸ್ಥೆಗೆ ಮಕ್ಕಳನ್ನು ಕಳಿಸಬೇಡಿ, ಮಹಾತ್ಮ ಗಾಂಧಿ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಅವರನ್ನೇ ಬಿಡದೆ ವಾಚಾಮಗೋಚರ ಬೈದಿರುವವರು ನನ್ನನ್ನು ಬಿಡುತ್ತಾರೆಯೇ ಎಂಬ ಅವರ ಪ್ರಶ್ನೆಯಲ್ಲಿ ಈ ದೇಶದ ಬಹುಜನರನ್ನು ಅಜಗರವು ನುಂಗಿ ನೊಣೆಯುತ್ತಿರುವ ದುರಂತದ ಇಂಗಿತವಿದೆ.
ದೇಶದ ಸಂವಿಧಾನದ ಕುರಿತು ಆರೆಸ್ಸೆಸ್ ಆರಂಭದಿಂದಲೇ ದ್ವೇಷದ ಹೊಗೆ ಕಾರುತ್ತ ಬಂದಿರುವುದು ಹೊಸತಲ್ಲ. ರಾಷ್ಟ್ರ ಧ್ವಜವನ್ನು ಒಪ್ಪಿದ್ದು ಕೂಡ ದಶಕಗಳ ನಂತರವೇ. ಸಂವಿಧಾನವನ್ನು ಬದಲಾಯಿಸುವ- ತಿದ್ದುಪಡಿ ತರುವ ಮಾತುಗಳನ್ನು ಮತ್ತೆ ಮತ್ತೆ ಆಡುತ್ತ ಬರಲಾಗಿದೆ. ತಾನು ಸಂವಿಧಾನಕ್ಕಿಂತ ಮಿಗಿಲು, ನೆಲದ ಕಾಯಿದೆ ಕಾನೂನುಗಳಿಗಿಂತ ಶ್ರೇಷ್ಠ ಎಂದು ಹೇಳಿಸುತ್ತ ಬಂದಿದೆ. ಗಾಂಧೀ ಹತ್ಯೆಯ ಸಂಚಿನ ಆಪಾದಿತ ಈ ಸಂಘಟನೆಯ ಪಾಲಿನ ರಾಷ್ಟ್ರಪಿತ! ದೇಶದ ಸರ್ವೋಚ್ಚ ನ್ಯಾಯಮೂರ್ತಿಯವರ ಮೇಲೆ ಅವರು ದಲಿತರೆಂಬ ಕಾರಣಕ್ಕಾಗಿಯೇ ಮೆಟ್ಟು ಎಸೆಯಲು ಮುಂದಾಗಿ ಅವಮಾನಿಸಲಾಗಿದೆ. ಅಲ್ಪಸಂಖ್ಯಾತರ ಮನೆಗಳ ಮೇಲೆ ಬುಲ್ಡೋಝರ್ ಹರಿಸಿ ನೆಲಸಮಗೊಳಿಸುವ ನ್ಯಾಯವನ್ನು ಚೀಫ್ ಜಸ್ಟಿಸ್ ಗವಾಯಿ ಟೀಕಿಸಿದ್ದರು. ದೇಶದ ಕಾನೂನು ವ್ಯವಸ್ಥೆ ನಡೆಯುವುದು ಕಾಯಿದೆ ಕಾನೂನುಗಳ ನ್ಯಾಯದ ಮೂಲಕವೇ ವಿನಾ ಬುಲ್ಡೋಝರ್ ‘ನ್ಯಾಯ’ದಿಂದ ಅಲ್ಲ ಎಂದು ಇತ್ತೀಚೆಗೆ ಶ್ರೀಲಂಕಾದ ನ್ಯಾಯಾಂಗ ಸಮ್ಮೇಳನವೊಂದರಲ್ಲಿ ಹೇಳಿದ್ದರು. ಗವಾಯಿ ಅವರ ತಾಯಿ ಆರೆಸ್ಸೆಸ್ ಸಮಾರಂಭದಲ್ಲಿ ಒಪ್ಪದಿರುವ ಅಸಮಾಧಾನವೂ ಸೇರಿ ಮೆಟ್ಟು ಎಸೆಯುವ ಹಂತ ತಲುಪಿ ಸ್ಫೋಟಿಸಿದವು. ಸ್ವತಂತ್ರ ಭಾರತದ ಎರಡನೆಯ ಸರ್ವೋಚ್ಚ ನ್ಯಾಯಮೂರ್ತಿಯನ್ನು, ದಲಿತರನ್ನು, ಮೀಸಲಾತಿಯನ್ನು, ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೀಳಾಗಿ ಚಿತ್ರಿಸಿ ನಿಂದಿಸಲಾಯಿತು. ಬಲಪಂಥೀಯ-ಮೇಲ್ಜಾತಿಗಳ ಸಾವಿರಾರು ವಿಕೃತ ಮನಸುಗಳು ಹಾಕಿದ ಪೋಸ್ಟ್ ಗಳು ಈಗಲೂ ಕಾಣಲು ಸಿಗುತ್ತವೆ. ಈ ಪೋಸ್ಟ್ ಗಳ ಹಾಕಿದವರ ಮೇಲೆ ದೇಶವನ್ನು ಆಳುವವರು ಕ್ರಮ ಕೈಗೊಳ್ಳುವುದಿರಲಿ, ಖಂಡಿಸುವ ಗೋಜಿಗೆ ಕೂಡ ಹೋಗಿಲ್ಲ. ಕೃತ್ಯ ಸರಿಯಲ್ಲವೆಂದು ಪ್ರಧಾನಮಂತ್ರಿ ಅಳೆದ ತೂಗಿ ಪೋಸ್ಟ್ ಹಾಕುವ ಹೊತ್ತಿಗೆ ರಾತ್ರಿ ಎಂಟು ಗಂಟೆ ದಾಟಿತ್ತು. ಉಳಿದವರು ತುಟಿ ಬಿಚ್ಚಿಲ್ಲ. ಅವರ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಲ್ಲ. ಮೆಟ್ಟು ಎಸೆಯಲು ಮುಂದಾದ ವ್ಯಕ್ತಿಯ ಸೈದ್ಧಾಂತಿಕ ಒಲವು ಯಾವುದು ಎಂಬುದು ಆತನ ಎಕ್ಸ್ ಖಾತೆಯ ಪೋಸ್ಟುಗಳನ್ನು ನೋಡಿದರೆ ತಿಳಿಯುತ್ತದೆ.
ಆರೆಸ್ಸೆಸ್ ನಂತಹ ಸಂಸ್ಥೆಯ ಚಟುವಟಿಕೆಗಳು ಸರ್ಕಾರಿ ಕಾಲೇಜುಗಳು, ಹೈಸ್ಕೂಲುಗಳು, ವಿಶ್ವವಿದ್ಯಾಲಯಗಳು, ಮೈದಾನಗಳಲ್ಲಿ ನಡೆಯುವುದು ಕೂಡದು, ಖಾಸಗಿ ಆವರಣಗಳಲ್ಲಿ ಮಾಡಿಕೊಳ್ಳಲಿ ಎಂಬ ಖರ್ಗೆ ಆಗ್ರಹದಲ್ಲಿ ಹುರುಳಿದೆ. ಅಪ್ಪಟ ಜಾತ್ಯತೀತ ನೆಲೆಯಾಗಿದ್ದ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ಮೇಲೆ ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರಿ ಪ್ರಾಯೋಜಿತ ದಾಳಿ ಎಡೆಬಿಡದೆ ನಡೆದಿದೆ. ಇತ್ತೀಚೆಗೆ ಅಲ್ಲಿ ಆರೆಸ್ಸೆಸ್ ಪಥಸಂಚಲನ ಕೂಡ ನಡೆಯಿತು. ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರೇ ಆರೆಸ್ಸೆಸ್ ಸಮವಸ್ತ್ರ ಧರಿಸಿ ಮೆರವಣಿಗೆ ನಡೆಸಿದರು. ಭಾರತೀಯ ಸಮಾಜವನ್ನು ಒಡೆಯುವ ಈ ನಂಜುಭರಿತ ಚಟುವಟಿಕೆ ದೇಶಾದ್ಯಂತ ಜರುಗಿದೆ.
ತನಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆರೆಸ್ಸೆಸ್ ದೇಶಾದ್ಯಂತ ಆಚರಿಸುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ ಅದರ ಹುಟ್ಟು, ಸಿದ್ಧಾಂತ, ಚಾರಿತ್ರ್ಯಗಳನ್ನು ಪ್ರಶ್ನಿಸಲಾಗುತ್ತಿದೆ. ದೇವನೂರ ಮಹಾದೇವ ಅವರಂತಹ ಹಿರಿಯ ಚಿಂತಕ-ಸಾಹಿತಿ ಈ ಹಿಂದೆ ವಿಮರ್ಶಾತ್ಮಕವಾಗಿ ಬರೆದಿದ್ದ ‘ಆರ್ ಎಸ್ ಎಸ್ :ಆಳ ಮತ್ತು ಅಗಲ’ ಪುಸ್ತಿಕೆ ಒಂದೇ ತಿಂಗಳಲ್ಲಿ ಲಕ್ಷಾಂತರ ಪ್ರತಿಗಳ ಮಾರಾಟ ಕಂಡಿತ್ತು. ಕನ್ನಡದ ಗಡಿ ದಾಟಿ ಹಿಂದಿ- ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿತ್ತು. ಬೇರು ಬಿಟ್ಟಿರುವ ಬಿಜೆಪಿ ಆಡಳಿತ ಮತ್ತು ಅದರ ಹಿಂದಿರುವ ಆರೆಸ್ಸೆಸ್ ಒಟ್ಟಾಗಿ ದೇಶದಲ್ಲಿ ಕೋಮು ಧೃವೀಕರಣದ ವಿಷಬೀಜವನ್ನು ವ್ಯವಸ್ಥಿತವಾಗಿ ಬಿತ್ತಿ ಬೆಳೆ ಕಟಾವು ಮಾಡುತ್ತಿದೆ. ಈ ಅಪಾಯಕಾರಿ ಪ್ರವೃತ್ತಿಯ ಹಿನ್ನೆಲೆಯಲ್ಲಿ ದೇವನೂರ ಅವರ ನೇರ ಮತ್ತು ನಿಷ್ಠುರ ಕೃತಿ ಗಂಭೀರ ಚರ್ಚೆಯನ್ನು ಹುಟ್ಟಿ ಹಾಕಿತ್ತು.
‘ಎಲ್ಲ ಮೀಡಿಯಾ ಸದನಗಳು ಕೇಂದ್ರ ಸರ್ಕಾರದ ಹೊಗಳಿಕೆಯಲ್ಲಿ ಎಡೆಬಿಡದೆ ನಿರತವಾಗಿವೆ…ಈ ವ್ಯವಸ್ಥೆಯನ್ನು ಯಾರಾದರೂ ವಿರೋಧಿಸಿದರೆ ಅವರಿಗೆ ದೇಶದ್ರೋಹಿಯ ಹಣೆಪಟ್ಟಿ ಹಚ್ಚಲಾಗುತ್ತಿದೆ’ ಎಂದು ಅಂದಿನ ದಿನಗಳಲ್ಲಿ ಮಹಾದೇವ ಅವರು ದೆಹಲಿಯ ಪ್ರಸಿದ್ಧ ಇಂಗ್ಲಿಷ್ ಪತ್ರಿಕೆಗೆ ತಿಳಿಸಿದ್ದರು.
ಆರೆಸ್ಸೆಸ್ ಕುರಿತ ಪುಸ್ತಿಕೆಯ ಹಿನ್ನೆಲೆಯಲ್ಲಿ ಮಹಾದೇವ ತೀವ್ರ ನಿಂದನೆ ಮತ್ತು ಪ್ರಾಣಬೆದರಿಕೆ ಎದುರಿಸಿದ್ದುಂಟು. ಇದೀಗ ನಿಂದನೆ-ಬೆದರಿಕೆಗಳನ್ನು ಎದುರಿಸುವ ಸರದಿ ರಾಜಕಾರಣಿ ಪ್ರಿಯಾಂಕ್ ಅವರದು.
ಭಾರತದ ಸಾಮಾಜಿಕ ಜಾಲತಾಣವು ಬಲಪಂಥೀಯ ‘ಟ್ರೋಲ್’ ಸೇನೆಯ ಆರ್ಭಟ ಅಬ್ಬರಗಳಿಂದ ತುಂಬಿ ತುಳುಕಿದೆ. ಆರೆಸ್ಸೆಸ್-ಬಿಜೆಪಿ-ಮೋದಿ-ಅಮಿತ್ ಶಾ ಅವರನ್ನು ಟೀಕಿಸುವ ಪತ್ರಕರ್ತರು, ಬರೆಹಗಾರರು, ಪ್ರತಿಪಕ್ಷಗಳ ರಾಜಕಾರಣಿಗಳು ಈ ಬಾಡಿಗೆ ಟ್ರೋಲ್ ಸೇನೆಯಿಂದ ನೀಚಾತಿನೀಚ ನಿಂದನೆ, ಬೈಗುಳ, ಬ್ಲ್ಯಾಕ್ ಮೇಲ್, ಲೈಂಗಿಕ ಕಿರುಕುಳ, ಪ್ರಾಣಬೆದರಿಕೆ ನಿಶ್ಚಿತ. ಇವರು ಯಾರು, ಯಾಕಾಗಿ ಹೀಗೆ ಮಾಡುತ್ತಾರೆ, ಹೇಗೆಲ್ಲ ಸಂಘಟಿತರಾಗಿದ್ದಾರೆ, ಯಾರಿಗೂ ತಿಳಿಯದ ಈ ಕತ್ತಲ ಲೋಕದ ನೆಲೆ ಮತ್ತು ಬಲ ಯಾವುದು ಎಂಬ ಬಗೆಗೆ ಬೆಳಕು ಚೆಲ್ಲುವ ಆಘಾತಕಾರಿ ಸತ್ಯಾಂಶಗಳನ್ನು ಒಳಗೊಂಡ ಪುಸ್ತಕವೊಂದಿದೆ. Why I am a Troll ಎಂಬ ಈ ಪುಸ್ತಕವನ್ನು ವರ್ಷಗಳ ಹಿಂದೆ ಬರೆದಿರುವ ಪತ್ರಕರ್ತೆ ಸ್ವಾತಿ ಚತುರ್ವೇದಿ.
ಪ್ರಿಯಾಂಕ್ ಖರ್ಗೆ ಅವರ ಪತ್ರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶವೊಂದನ್ನು ನೀಡಿದ್ದಾರೆ. ಸರ್ಕಾರಿ ಆವರಣಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸಿ ತಮಿಳುನಾಡು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಅಧ್ಯಯನ ಮಾಡಿ ವರದಿ ನೀಡಬೇಕೆಂಬುದು ಈ ಆದೇಶದ ಸಾರಾಂಶ.
ಪ್ರಿಯಾಂಕ್ ಖರ್ಗೆ ಅವರು ಎತ್ತಿರುವ ಈ ಗಂಭೀರ ವಿಷಯ ಕುರಿತು ಅವರ ಸಂಪುಟ ಸಹೋದ್ಯೋಗಿಗಳು ಒಕ್ಕೊರಲಿನಿಂದ ಜೊತೆ ನಿಲ್ಲಬೇಕಿತ್ತು. ದಲಿತಾತಿ ದಲಿತರೇ ಆಗಿರುವ ಗೃಹಸಚಿವರು ಮುಂದಾಗಿ ದನಿ ಎತ್ತಬೇಕಿತ್ತು. ಹಾಗಾಗದೆ ಇರುವುದು ಈ ನೆಲದ ದುರಂತ, ಜಾತ್ಯತೀತ ತತ್ವಗಳ ದುರಂತ. ಕಾಂಗ್ರೆಸ್ಸಿನೊಳಗೊಂದು ಆರೆಸ್ಸೆಸ್ ಆನೆ ಅವಿತಿರುವ ದುರಂತ.





