ಆಳುವ ಪಕ್ಷಗಳ ತಪ್ಪುತಡೆಗಳು, ಜನವಿರೋಧಿ ನಡೆಗಳನ್ನು ಸಂಸತ್ ಅಧಿವೇಶನದಲ್ಲಿ ಚರ್ಚೆಗಳ ಮೂಲಕ ಬಯಲು ಮಾಡುವುದು ಪ್ರತಿಪಕ್ಷಗಳ ಸಾಂವಿಧಾನಿಕ ಜವಾಬ್ದಾರಿ. ಈ ಹಿಂದೆ ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಅಂದಿನ ಪ್ರಧಾನಿ ಮನಮೋಹನಸಿಂಗ್ ಅವರನ್ನು ಮಾತನಾಡದಂತೆ ವಾರಗಟ್ಟಲೆ ಸತತ ಅಡಚಣೆ ಒಡ್ಡಿರುವುದು ವಾಸ್ತವ. ಮೋದಿಯವರಿಗೆ ದೈಹಿಕ ಹಲ್ಲೆಯ ಬೆದರಿಕೆಯಿತ್ತು ಎಂಬ ತಮ್ಮ ಮಾತಿಗೆ ಸ್ಪೀಕರ್ ಪುರಾವೆ ಒದಗಿಸಬೇಕಾಗುತ್ತದೆ.
ಲೋಕಸಭಾಧ್ಯಕ್ಷ ಅಥವಾ ಸ್ಪೀಕರ್ ಸ್ಥಾನ ಎಂಬುದು ಸಂಸತ್ತಿನ ಕೆಳಮನೆಯಾದ ಲೋಕಸಭೆಯ ಅತ್ಯುನ್ನತ ಹುದ್ದೆ. ಸದನವನ್ನು ಘನತೆ ಗಾಂಭೀರ್ಯದಿಂದ ನಿಯಮಾವಳಿಗಳ ಹಳಿ ತಪ್ಪದಂತೆ, ಸಂವಿಧಾನವನ್ನು ಉಲ್ಲಂಘಿಸದಂತೆ ಕಾರ್ಯಕಲಾಪಗಳನ್ನು ನಡೆಸುವುದು ಸ್ಪೀಕರ್ ಕರ್ತವ್ಯ. ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ, ಕಲಾಪ ಪಟ್ಟಿಯಲ್ಲಿ ನಮೂದಾಗಿರುವ ಎಲ್ಲ ಕಲಾಪಗಳನ್ನು ಬದಿಗಿರಿಸಿ ದೇಶವನ್ನು- ರಾಜ್ಯವನ್ನು ಬಾಧಿಸುವ ವಿಷಯ ಪ್ರಸ್ತಾಪಿಸುವ ನಿಲುವಳಿ ಸೂಚನೆ, ಪಕ್ಷಾಂತರ ಅಥವಾ ಅಡ್ಡಮತದ ಸಂದರ್ಭಗಳಲ್ಲಿ ಸದನದ ಸದಸ್ಯರ ಅನರ್ಹತೆಯ ತೀರ್ಮಾನಗಳು ನಿರ್ಣಾಯಕ. ಈ ತೀರ್ಮಾನಗಳ ಅಧಿಕಾರವನ್ನು ಸ್ಪೀಕರ್ ಹೊಂದಿರುತ್ತಾರೆ. ಸದಸ್ಯರೆಲ್ಲರೂ ಸದನದಲ್ಲಿ ಸ್ಪೀಕರ್ ಅವರನ್ನು ಸಂಬೋಧಿಸಿಯೇ ಮಾತನಾಡಬೇಕು. ಸ್ಪೀಕರ್ ಹುದ್ದೆಯು ಶಿಷ್ಟಾಚಾರದಲ್ಲಿ ಆರನೆಯ ಅತಿ ಪ್ರಮುಖ ಸ್ಥಾನ. ಭಾರತದ ಮುಖ್ಯನ್ಯಾಯಮೂರ್ತಿಗೆ ಸಮನಾದದ್ದು.
ಸ್ಪೀಕರ್ ಗಳು ತಮ್ಮ ಕರ್ತವ್ಯ ನಿರ್ವಹಿಸುವಾಗ ತಟಸ್ಥ ಪಾತ್ರ ವಹಿಸಬೇಕು ಎಂದು ಸಂವಿಧಾನ ವಿಧಿಸುತ್ತದೆ. ಅವರ ಸಂಬಳ ಸಾರಿಗೆಗಳು ಸರ್ಕಾರದಿಂದ ಸಂದಾಯವಾಗುವುದಿಲ್ಲ, ಬದಲಿಗೆ ನೇರವಾಗಿ ‘ಭಾರತದ ಸಂಚಿತ ನಿಧಿ’ಯಿಂದ (ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾ) ನೀಡಲ್ಪಡುತ್ತವೆ. ಸ್ಪೀಕರ್ ಅವರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಎಂಬುದೇ ಇಂತಹ ನೇರ ಸಂದಾಯದ ಹಿಂದಿನ ಆಶಯ.
ಸಂಗ್ರಹಿಸಲಾಗುವ ತೆರಿಗೆಗಳು ಮತ್ತು ಸಾಲಗಳನ್ನು ಒಳಗೊಂಡ ಭಾರತ ಸರ್ಕಾರದ ಎಲ್ಲ ಆದಾಯಗಳ ಸಂಗ್ರಹವನ್ನು ಭಾರತದ ಸಂಚಿತ ನಿಧಿ ಎಂದು ಕರೆಯಲಾಗುತ್ತದೆ. ಸಂವಿಧಾನದ 266ನೆಯ ಅನುಚ್ಛೇದದ ಪ್ರಕಾರ ಈ ನಿಧಿ ಸಂಚಿತಗೊಳ್ಳುತ್ತದೆ. ಈ ಸಂಚಿತ ನಿಧಿಯಿಂದ ಹಣವನ್ನು ಬಳಸಬೇಕಿದ್ದರೆ ಸಂಸತ್ತಿನ ಅನುಮೋದನೆ ಅತ್ಯಗತ್ಯ. ಅಂತೆಯೇ ಸ್ಪೀಕರ್ ಹುದ್ದೆ ವಹಿಸಿಕೊಳ್ಳುವ ವ್ಯಕ್ತಿ ತಾವು ಲೋಕಸಭೆಗೆ ಆರಿಸಿ ಬಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಪಕ್ಷಭೇದದಿಂದ ಮೇಲೆದ್ದು ಕರ್ತವ್ಯ ನಿರ್ವಹಿಸಬೇಕೆಂಬುದು ಈ ನಿಯಮದ ಹಿಂದಿನ ಅಪೇಕ್ಷೆ
ಲೋಕಸಭೆಯ ಸ್ಪೀಕರ್ ಗಳು ಸಾಮಾನ್ಯವಾಗಿ ಆಡಳಿತ ಪಕ್ಷ ಇಲ್ಲವೇ ಆಳುವ ಪಕ್ಷಗಳ ಮೈತ್ರಿಕೂಟದ ಪಕ್ಷಪಾತಿಗಳೇ ಆಗಿರುತ್ತಾರೆ. ಆಳುವ ಪಕ್ಷ ಅಥವಾ ಮೈತ್ರಿಕೂಟವೇ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿರುತ್ತದೆ. ಸಾಧಾರಣವಾಗಿ ಡೆಪ್ಯೂಟಿ ಸ್ಪೀಕರ್ ಸ್ಥಾನವನ್ನು ಪ್ರತಿಪಕ್ಷಗಳಿಗೆ ಬಿಟ್ಟುಕೊಡುವ ಸಂಪ್ರದಾಯವಿತ್ತು. ಆದರೆ ಮೋದಿ ಸರ್ಕಾರ ಈ ಸ್ಥಾನವನ್ನು ತುಂಬುವ ಗೊಡವೆಗೇ ಹೋಗಿಲ್ಲ. ಇನ್ನು ಪ್ರತಿಪಕ್ಷಗಳಿಗೆ ಬಿಟ್ಟುಕೊಡುವ ಮಾತೇ ಇಲ್ಲ.
ಸದಸ್ಯರನ್ನು ಅನರ್ಹಗೊಳಿಸುವ ಅಂತಿಮ ಅಧಿಕಾರ ಸ್ಪೀಕರ್ ಕೈಯಲ್ಲಿರುತ್ತದೆ. ಹೀಗಾಗಿಯೇ ಮುರಿದು ಕಟ್ಟುವ, ಕಟ್ಟಿ ಮುರಿಯುವ ಸಮ್ಮಿಶ್ರ ಸರ್ಕಾರಗಳ ಯುಗದಲ್ಲಿ ಸ್ಪೀಕರ್ ಹುದ್ದೆ ಬಹುಸೂಕ್ಷ್ಮ ಎನಿಸಿಕೊಂಡಿತ್ತು.
ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ನಿರ್ದಿಷ್ಟ ಅವಧಿಯ ರಕ್ಷಣೆ ಇರುವುದಿಲ್ಲ. ಸದನದ ಇಷ್ಟಾನಿಷ್ಟದ ಪ್ರಕಾರ ಯಾವಾಗ ಬೇಕಾದರೂ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಬಹುದಾಗಿರುತ್ತದೆ. ಹೀಗೆ ಇಳಿಸಬೇಕಿದ್ದರೆ ಸದನವು ಬಹುಮತದ ನಿರ್ಣಯವನ್ನು ಅಂಗೀಕರಿಸಬೇಕಾಗುತ್ತದೆ. ಆಳುವ ಸರ್ಕಾರವೇ ಬಹುಮತವನ್ನು ಹೊಂದಿರುವ ಕಾರಣ, ಈ ಹುದ್ದೆಯಲ್ಲಿರುವ ಬಹುತೇಕರು ಆಳುವ ಪಕ್ಷದ ಮರ್ಜಿಗೆ ಬಿದ್ದಿರುತ್ತಾರೆ. ಪ್ರತಿಪಕ್ಷಗಳನ್ನು ತಾರತಮ್ಯದಿಂದ ನಡೆಸಿಕೊಳ್ಳುತ್ತಾರೆ.
ಸ್ಪೀಕರ್ ಅಂತಿಮವಾಗಿ ಸದನಕ್ಕೆ ಉತ್ತರದಾಯಿ ಅಥವಾ ಜವಾಬುದೇಹಿ. ಕಳೆದ 25 ವರ್ಷಗಳ ಇತ್ತೀಚಿನ ಸಂಸದೀಯ ಗತವನ್ನು ಬಗೆದು ನೋಡಿದರೆ ನಿಜಾರ್ಥದಲ್ಲಿ ತಟಸ್ಥವಾಗಿ ನಡೆದುಕೊಂಡ ಒಬ್ಬರೇ ಒಬ್ಬರು ಸ್ಪೀಕರ್ ಕಾಣಬರುತ್ತಾರೆ. ಅವರು ಸಿಪಿಐ(ಎಂ) ಮೂಲದವರಾಗಿದ್ದ ಸೋಮನಾಥ ಚಟರ್ಜಿ. ಇದೇ ಅವಧಿಯಲ್ಲಿ ಹಾಲಿ ಸ್ಪೀಕರ್ ಓಂ ಬಿರ್ಲಾ ಅವರಷ್ಟು ಟೀಕೆಗೆ ಗುರಿಯಾಗಿರುವವರು ಮತ್ತೊಬ್ಬರಿಲ್ಲ. ಇತ್ತೀಚಿನ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕುರಿತು ನಡೆದ ಚರ್ಚೆ ಮತ್ತು ಈ ಚರ್ಚೆಗೆ ಪ್ರಧಾನ ಮಂತ್ರಿ ಉತ್ತರ ಕುರಿತು ಸ್ಪೀಕರ್ ಅವರ ನಡೆನುಡಿ ಪ್ರತಿಪಕ್ಷಗಳಿಂದ ಕಟುಟೀಕೆಗೆ ಗುರಿಯಾಗಿದೆ. ಕಳೆದ ಒಂದು ವಾರದಿಂದ ಸ್ಪೀಕರ್ ಮತ್ತು ಪ್ರತಿಪಕ್ಷಗಳ ನಡುವಣ ಘರ್ಷಣೆ ತೀವ್ರ ಬಿಗಡಾಯಿಸಿದೆ.
ಜನರಲ್ ಎಂ.ಎಂ.ನರವಣೆ ಅವರು ಬರೆದ ಆತ್ಮಚರಿತ್ರೆಯ ಆಯ್ದ ಭಾಗಗಳನ್ನು ಸದನದಲ್ಲಿ ಉಲ್ಲೇಖಿಸಲು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧೀ ಅವರಿಗೆ ಸ್ಪೀಕರ್ ಅವಕಾಶ ನಿರಾಕರಿಸಿದರು. ಇದೇ ಸಂದರ್ಭದಲ್ಲಿ ಆಳುವ ಪಕ್ಷದ ಸದಸ್ಯ ನಿಶಿಕಾಂತ ದುಬೆ ಅವರು ನೆಹರೂ ಕುರಿತು ಅತ್ಯಂತ ಅವಹೇಳನಕಾರಿ ಉಲ್ಲೇಖಗಳನ್ನು ಮಾಡಲು ಮುಕ್ತ ಅವಕಾಶ ನೀಡಲಾಯಿತು. ಸದಸ್ಯರು ತಾವು ಉಲ್ಲೇಖಿಸುವುದನ್ನು ಪ್ರಮಾಣೀಕರಿಸಿದಲ್ಲಿ, ಅಂತಹ ವಿಷಯದ ಮಂಡನೆಗೆ ಅವರಿಗೆ ಅವಕಾಶ ನೀಡಬೇಕೆಂಬುದು ಸದನದ ನಿಯಮಾವಳಿ. ಜನರಲ್ ನರವಣೆಯವರು ಚೀನೀ ಆಕ್ರಮಣ ಕುರಿತು ಹೊರಹಾಕಿರುವ ಸತ್ಯವನ್ನು ಸದನದಲ್ಲಿ ಪ್ರಸ್ತಾಪಿಸಿ ಪ್ರಧಾನಿ ಅವರಿಂದ ಉತ್ತರ ಪಡೆಯುವುದು ರಾಹುಲ್ ಉದ್ದೇಶವಾಗಿತ್ತು. ರಾಹುಲ್ ಅವರಿಗೆ ಅವಕಾಶ ನಿರಾಕರಣೆ ಮಾತ್ರವಲ್ಲದೆ, ಪ್ರಧಾನಿಯವರು ವಂದನಾ ನಿರ್ಣಯ ಕುರಿತ ಚರ್ಚೆಗೆ ಲೋಕಸಭೆಯಲ್ಲಿ ಉತ್ತರ ನೀಡದೆಯೇ ವಂದನಾ ನಿರ್ಣಯವನ್ನು ಅಂಗೀಕರಿಸಲಾಯಿತು. ಪ್ರಧಾನಿ ಆಸನದ ಬಳಿ ಬಂದು ನಿಂತು ಘೋಷಣೆ ಕೂಗುತ್ತಿದ್ದ ಪ್ರತಿಪಕ್ಷದ ಮಹಿಳಾ ಸದಸ್ಯರಿಂದ ಪ್ರಧಾನಿ ಅವರಿಗೆ ದೈಹಿಕ ಹಲ್ಲೆಯ ಬೆದರಿಕೆ ಇದ್ದ ಕಾರಣ, ಸದನಕ್ಕೆ ಬರದೆ ಇರುವಂತೆ ತಾವೇ ಅವರನ್ನು ತಡೆದದ್ದಾಗಿ ಸ್ಪೀಕರ್ ಓಂ ಬಿರ್ಲಾ ಮರುದಿನ ಲೋಕಸಭೆಯಲ್ಲಿ ಹೇಳಿದರು. ಅವರ ಈ ಹೇಳಿಕೆ ಪ್ರತಿಪಕ್ಷದ ತೀವ್ರ ಆಕ್ರೋಶಕ್ಕೆ ತುತ್ತಾಯಿತು. ಪ್ರತಿಪಕ್ಷದ ನಾಯಕರಾದವರಿಗೆ ಸಂವಿಧಾನವೇ ವಿಧಿಸಿರುವ ಕರ್ತವ್ಯಗಳಿವೆ. ಅವುಗಳನ್ನು ನೆರವೇರಿಸಲೂ ಸದನದಲ್ಲಿ ಅವಕಾಶ ದೊರೆಯುತ್ತಿಲ್ಲ ಎಂಬುದು ಜನತಂತ್ರವಾದಿಗಳ ದೂರು.
ಪ್ರಧಾನಿ ಆಸನದ ಬಳಿ ಜಮಾಯಿಸಿದ್ದ ಪ್ರತಿಪಕ್ಷಗಳ ಸದಸ್ಯರು ಸದನದ ಮುಂದಿದ್ದ ಕಾಗದ ಪತ್ರಗಳನ್ನು ಹರಿದು ಸಭಾಧ್ಯಕ್ಷರ ಪೀಠದತ್ತ ತೂರಿದರೆಂದು ಹೇಳಿ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.
ಆಳುವ ಪಕ್ಷಗಳ ತಪ್ಪುತಡೆಗಳು, ಜನವಿರೋಧಿ ನಡೆಗಳನ್ನು ಸಂಸತ್ ಅಧಿವೇಶನದಲ್ಲಿ ಚರ್ಚೆಗಳ ಮೂಲಕ ಬಯಲು ಮಾಡುವುದು ಪ್ರತಿಪಕ್ಷಗಳ ಜವಾಬ್ದಾರಿ. ಈ ಹಿಂದೆ ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಅಂದಿನ ಪ್ರಧಾನಿ ಮನಮೋಹನಸಿಂಗ್ ಅವರನ್ನು ಮಾತನಾಡದಂತೆ ಸತತ ಅಡಚಣೆ ಒಡ್ಡಿರುವುದು ವಾಸ್ತವ. ಮೋದಿಯವರಿಗೆ ದೈಹಿಕ ಹಲ್ಲೆಯ ಬೆದರಿಕೆಯಿತ್ತು ಎಂಬ ತಮ್ಮ ಮಾತಿಗೆ ಸ್ಪೀಕರ್ ಪುರಾವೆ ಒದಗಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಈ ಪಕ್ಷಪಾತೀಯ ನಡೆಯನ್ನು ಖಂಡಿಸಿ ಪ್ರತಿಪಕ್ಷಗಳು ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ತರುವ ಉದ್ದೇಶ ಪ್ರಕಟಿಸಿವೆ.
ಪ್ರಧಾನಿ ಆಸನದ ಬಳಿ ನಿಂತು ಘೋಷಣೆ ಕೂಗುತ್ತಿದ್ದ ತಮ್ಮಿಂದ ಪ್ರಧಾನಿಗೆ ದೈಹಿಕ ಹಲ್ಲೆಯ ಬೆದರಿಕೆಯಿತ್ತು ಎಂಬ ಸ್ಪೀಕರ್ ಆಪಾದನೆ ಕುರಿತು ಮಹಿಳಾ ಲೋಕಸಭಾ ಸದಸ್ಯರು ತೀವ್ರ ತಕರಾರು ಎತ್ತಿದ್ದಾರೆ.
ಪ್ರತಿಪಕ್ಷದ ದನಿಯನ್ನು ಸಾರಾಸಗಟು ಅದುಮಿಡುವ ಸಂಸತ್ತಿಗೆ ಅರ್ಥವೇ ಇಲ್ಲ. ಕೇವಲ ಆಳುವ ಪಕ್ಷಕ್ಕೆ ಅವಕಾಶ ನೀಡುವುದೇ ಆಗಿದ್ದರೆ ಸಂಸತ್ತಿನ ಅಧಿವೇಶನ ನಡೆಸುವುದಕ್ಕೆ ಯಾವ ಅರ್ಥವೂ ಇಲ್ಲ ಎಂಬ ಟೀಕೆಯು ಗಂಭೀರ ಆಲೋಚನೆಗೆ ಅರ್ಹವಾದದ್ದು.
ಘೋಷಣೆ ಕೂಗುವುದು, ಪ್ರತಿಭಟಿಸುವುದು, ಕಲಾಪಕ್ಕೆ ಅಡಚಣೆ ಉಂಟು ಮಾಡುವುದು ಕೂಡ ಸಂಸದೀಯ ಕಲಾಪದ ಒಂದು ಪದ್ಧತಿ ಎಂದು ಲೋಕಸಭೆಯಲ್ಲಿ ಅಂದಿನ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ಮೇಲ್ಮನೆಯಲ್ಲಿ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಸಮರ್ಥಿಸಿಕೊಂಡಿದ್ದು ದಾಖಲೆಗಳಲ್ಲಿದೆ.
ಈ ಮಾತುಗಳನ್ನು ಮೋಶಾ ಯುಗದ ಬಿಜೆಪಿ ಮರೆತೇ ಹೋದಂತಿದೆ. ಅತ್ಯಂತ ಸುವ್ಯವಸ್ಥಿತ ರೀತಿಯಲ್ಲಿ ಸದನದ ಕಲಾಪಗಳಿಗೆ ಅಡಚಣೆ ಒಡ್ಡುವ ಪ್ರವೃತ್ತಿಯನ್ನು ಬದಲಿಸಲೇಬೇಕಿದೆ ಎಂದು ಓಂ ಬಿರ್ಲಾ ಅವರು 84ನೆಯ ಪೀಠಾಧ್ಯಕ್ಷರ ಸಮ್ಮೇಳನದಲ್ಲಿ ಹೇಳಿದ್ದುಂಟು. ನೂರು ಇಲಿಗಳನ್ನು ತಿಂದ ನಂತರ ಬೆಕ್ಕು ತೀರ್ಥಯಾತ್ರೆಗೆ ಹೋಯಿತು ಎಂಬ ಗಾದೆ ಮಾತನ್ನು ನೆನಪಿಸಿಕೊಳ್ಳಬೇಕಿದೆ.





