ಈ ದಿನ ಸಂಪಾದಕೀಯ | ಬಿಜೆಪಿಗೆ ಮತದಾರರು ಕಲಿಸಿದ ಪಾಠವನ್ನು ಕಾಂಗ್ರೆಸ್ ಮರೆಯದಿರಲಿ

Date:

ಗೆದ್ದು ಗದ್ದುಗೆ ಏರಲು ಸಿದ್ಧವಾಗಿರುವ ಕಾಂಗ್ರೆಸ್ ಈ ಅಜ್ಞಾತ ಮತದಾರರನ್ನು ಮರೆಯಬಾರದು. ಅವರ ಕಾಣ್ಕೆಯನ್ನು ಕಡೆಗಣಿಸಬಾರದು. ಬಡವರ ಬೇಗುದಿ, ಶೋಷಿತರ ಸಿಟ್ಟು, ಅಸಹಾಯಕರ ಅತಂತ್ರ ಸ್ಥಿತಿಯನ್ನು ಧ್ಯಾನಿಸಿ, ಕಾಂಗ್ರೆಸ್ ಆಡಳಿತ ನಡೆಸಬೇಕಾಗಿದೆ.

ಈ ಸಲದ ವಿಧಾನಸಭಾ ಚುನಾವಣೆ ಹಲವರಿಗೆ ಹಲವು ರೀತಿಯಲ್ಲಿ ಪಾಠ ಕಲಿಸಿದೆ. ದುಷ್ಟರಿಗೆ, ದುರಹಂಕಾರಿಗಳಿಗೆ, ಸೋಮಾರಿಗಳಿಗೆ, ನಿಷ್ಪ್ರಯೋಜಕರಿಗೆ ನೀರಿಳಿಸಿದೆ. ಪಕ್ಷ, ಜಾತಿ, ಹಣ ಮತ್ತು ಪ್ರಭಾವ ಬಳಸಿ ಗೆಲ್ಲುತ್ತಿದ್ದವರಿಗೆ ಗರಬಡಿಸಿದೆ. ಯೋಗ್ಯರು-ಅಯೋಗ್ಯರ ನಡುವಿನ ಗೆರೆ ಅಳಿಸಿಹೋಗಿ ಆಯ್ಕೆಯೇ ಕಷ್ಟವಾಗಿರುವ ಈ ಕಾಲದಲ್ಲಿ ಮತದಾರರಿಗೆ ಮರೆಯಲಾರದ ಅನುಭವವನ್ನು ನೀಡಿದೆ.

ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಬಿಗಿ ಹಿಡಿತದಿಂದ ಬಿಡಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಿಂದ ಕರ್ನಾಟಕವನ್ನು ಪಾರು ಮಾಡಿದ ನಾಡಿನ ಜನತೆ ಇವತ್ತು ದೇಶದ ದಿಕ್ಕು ದೆಸೆ ಬದಲಿಸಿದ್ದಾರೆ. ಮಾದರಿ ಮತದಾರರಾಗಿ ಹೊರಹೊಮ್ಮಿದ್ದಾರೆ. ಇಡೀ ದೇಶವೇ ಕರ್ನಾಟಕದತ್ತ ನೋಡುವಂತೆ ಮಾಡಿದ್ದಾರೆ.

ಗೆದ್ದು ಗದ್ದುಗೆ ಏರಲು ಸಿದ್ಧವಾಗಿರುವ ಕಾಂಗ್ರೆಸ್ ಈ ಅಜ್ಞಾತ ಮತದಾರರನ್ನು ಮರೆಯಬಾರದು. ಅವರ ಕಾಣ್ಕೆಯನ್ನು ಕಡೆಗಣಿಸಬಾರದು. ಬಡವರ ಬೇಗುದಿ, ಶೋಷಿತರ ಸಿಟ್ಟು, ಅಸಹಾಯಕರ ಅತಂತ್ರ ಸ್ಥಿತಿಯನ್ನು ಧ್ಯಾನಿಸಿ, ಕಾಂಗ್ರೆಸ್ ಆಡಳಿತ ನಡೆಸಬೇಕಾಗಿದೆ. ಬಿಜೆಪಿ ಮಾಡಿರುವ ಸಾಲ, ಆರ್ಥಿಕ ಅಧ್ವಾನಗಳ ನಡುವೆಯೇ ಬಡವರಿಗೆ ಕೊಟ್ಟ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಬೇಕಾಗಿದೆ. ಅದು ನಿಜಕ್ಕೂ ಸವಾಲಿನ ಹಾದಿಯಾದರೂ, ಸಾಧಿಸಿ ತೋರಬೇಕಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪತ್ರಿಕಾ ಸ್ವಾತಂತ್ರ್ಯ- ಎದೆ ಸೆಟೆಸಿ ಸೆಣಸುವುದೊಂದೇ ದಾರಿ

ಇನ್ನು ಮುಖ್ಯಮಂತ್ರಿ ಯಾರಾಗಬೇಕೆಂಬ ಹಗ್ಗಜಗ್ಗಾಟ. ಇದು ಗೆದ್ದ ಎಲ್ಲ ಪಕ್ಷಗಳಲ್ಲೂ, ಎಲ್ಲ ಕಾಲಕ್ಕೂ ನಡೆಯುವ ಸಹಜ ರಾಜಕಾರಣ. 1972ರಲ್ಲಿ ದೇವರಾಜ ಅರಸು ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 165 ಸ್ಥಾನಗಳನ್ನು ಗೆದ್ದಿತ್ತು. ಅಂದಿನ ಕಾಂಗ್ರೆಸ್ಸಿನ ಅಧಿನಾಯಕಿ ಇಂದಿರಾ ಗಾಂಧಿಯವರ ಆಯ್ಕೆಯೂ ಅರಸು ಅವರೇ ಆಗಿದ್ದರು. ಆದರೆ, ಅಂದಿನ ಹಿರಿಯ ರಾಜಕಾರಣಿಗಳಾದ ಕೆ.ಎಚ್ ಪಾಟೀಲ್, ಕೆ.ಎಚ್ ರಂಗನಾಥ್, ಸಿದ್ಧವೀರಪ್ಪ, ಕೆ.ಎಸ್ ನಾಗರತ್ನಮ್ಮ, ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿದ್ದರು. ದೇವರಾಜ ಅರಸರನ್ನು ಅಧಿಕಾರದಿಂದ ದೂರವಿಡಲು ಹವಣಿಸಿದ್ದರು.

ಹಾಗಾಗಿ ಸಿಎಂ ಪೈಪೋಟಿ ಎನ್ನುವುದು ಇವತ್ತೇ ಹುಟ್ಟಿಕೊಂಡ ಹೊಸ ವಿವಾದವಲ್ಲ. ಗೆದ್ದವರಾರು ಸನ್ಯಾಸಿಗಳಲ್ಲ. ಆದರೆ ಇದು ಭಟ್ಟಂಗಿಗಳ ಬಲಪ್ರದರ್ಶನಕ್ಕೆ ಬಲಿಯಾಗಬಾರದು. ಬೀದಿಜಗಳ, ಜಾತಿಜಗಳವಾಗಿ ಪರಿವರ್ತನೆಯಾಗಬಾರದು. ಮಠಾಧೀಶರು, ಸ್ವಾಮೀಜಿಗಳು ರಾಜಕಾರಣಿಗಳಾಗಲೇಬಾರದು. ಬದಲಿಗೆ, ಪಕ್ಷದ ಚೌಕಟ್ಟಿನೊಳಗೇ ಚರ್ಚೆಯಾಗಬೇಕಾಗಿದೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕಾಗಿದೆ. ಅಂತಹ ಪ್ರಬುದ್ಧತೆಯನ್ನು ಹಿರಿಯ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್– ಇಬ್ಬರೂ ತೋರಬೇಕಾಗಿದೆ. ಆ ಮೂಲಕ ಜಾತಿ ಮೀರಿದ ಜನನಾಯಕರೆಂದು ಮತ್ತೆ ಮತ್ತೆ ಸಾಬೀತುಪಡಿಸಬೇಕಾಗಿದೆ. ಹೈಕಮಾಂಡ್‌ಗೆ ಎದುರಾಗಿರುವ ಎದೆಬಡಿತವನ್ನು ನಿವಾರಿಸಬೇಕಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ, ಮುಖ್ಯಮಂತ್ರಿ ಯಾರೇ ಆದರೂ, ಮತ್ತೊಬ್ಬರು ಹೆಗಲಾಗಿ ನಿಲ್ಲಬೇಕಾಗಿದೆ. ಒಗ್ಗಟ್ಟು ಪ್ರದರ್ಶಿಸಿ ಸರ್ಕಾರ ಸುಗಮವಾಗಿ ಸಾಗಲು ಸಹಕರಿಸಬೇಕಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸತ್ಯವಾಯಿತು ಈದಿನದ ಸಮೀಕ್ಷೆ; ಇದು ಜನರ ಗೆಲುವು

ಇಲ್ಲದಿದ್ದರೆ, ಈ ಸಣ್ಣ ಸೆಣಸಾಟವನ್ನೇ ದೊಡ್ಡ ಗುಡ್ಡ ಮಾಡುವ ಮಾರಿಕೊಂಡ ಮಾಧ್ಯಮ- ಅಪಾತ್ರರಿಗೆ ಅಧಿಕಾರ, ಕಾಂಗ್ರೆಸ್ಸಿನ ಹಣೆಬರಹವೇ ಇಷ್ಟು ಎಂಬಂತೆ ಬಾಯಿ ಬಡಿದುಕೊಳ್ಳುತ್ತದೆ. ಅದನ್ನು ಬಿಜೆಪಿ ದೇಶದ ತುಂಬಾ ಪ್ರಚಾರ ಮಾಡುತ್ತದೆ. ಅಧಿಕಾರದಿಂದ ದೂರವಿರುವ ಅಯೋಗ್ಯರು, ಕೆಲವೇ ಕೆಲವು ದಿನಗಳ ಅಂತರದಲ್ಲಿ ಸಂತರಂತೆ ಕಾಣತೊಡಗುತ್ತಾರೆ. ಅದು ಬರಲಿರುವ 2024ರ ಲೋಕಸಭಾ ಚುನಾವಣೆ ಮೇಲೆ ವ್ಯತ್ತಿರಿಕ್ತ ಪರಿಣಾಮವನ್ನೂ ಬೀರುತ್ತದೆ.

ಹಾಗಾಗಿ ಮುಖ್ಯಮಂತ್ರಿ ಯಾರಾಗಬೇಕೆಂಬ ಗೊಂದಲವನ್ನು ಕಾಂಗ್ರೆಸ್ ಹೈಕಮಾಂಡ್ ಆದಷ್ಟು ಬೇಗ ಬಗೆಹರಿಸಬೇಕಾಗಿದೆ. ಅದಷ್ಟೇ ಅಲ್ಲ, ಮಂತ್ರಿಗಳಾಗುವ ಮಹತ್ವಾಕಾಂಕ್ಷಿಗಳು, ಸಿಗದಿದ್ದಾಗ ಸಿಡಿದೇಳುವ ಅತೃಪ್ತ ಆತ್ಮಗಳು, ಬಂಡಾಯದ ರೂಪದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಿನಿಕರ ದೊಡ್ಡ ದಂಡೇ ಕಾಂಗ್ರೆಸ್ಸಿನಲ್ಲಿದೆ. ಇವರೇನು ಇಂದ್ರ-ಚಂದ್ರರಲ್ಲ, ಕಾಸು ಖರ್ಚು ಮಾಡದೆ ಗೆದ್ದು ಬಂದವರಲ್ಲ, ಅಧಿಕಾರಕ್ಕೇರಿದರೆ ಬಿಜೆಪಿಗಿಂತ ಭಿನ್ನವಾದ ಆಡಳಿತವನ್ನೇನೂ ಕೊಡುವುದಿಲ್ಲ.

ಕಾಂಗ್ರೆಸ್ ಮುಖಂಡರು ಮತ್ತು ವರಿಷ್ಠರು ಜನ ಕೊಟ್ಟಿರುವ ಈ ಅಧಿಕಾರವನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಮತ್ತು ಜನಹಿತಕ್ಕಾಗಿ ಮಾತ್ರ ವಿನಿಯೋಗಿಸಬೇಕು. ಕುರ್ಚಿಗಾಗಿ ಕಿತ್ತಾಡುವುದು, ಮಂತ್ರಿ ಪಟ್ಟಕ್ಕಾಗಿ ಬಂಡಾಯ, ಭಿನ್ನಮತ ಇಂಥವನ್ನೆಲ್ಲ ಮಾಡಿ ಜನರಲ್ಲಿ ರೇಜಿಗೆ ಹುಟ್ಟಿಸಬಾರದು. ಭ್ರಷ್ಟಾಚಾರವನ್ನಂತೂ ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸಬಾರದು. ಇವೆಲ್ಲ ಮಾಡಿದ್ದರಿಂದಲೇ ಬಿಜೆಪಿಗೆ ಹೀನ ಸ್ಥಿತಿ ಬಂದೊದಗಿದ್ದು ಎನ್ನುವುದನ್ನು ಕಾಂಗ್ರೆಸ್ ಮರೆಯಬಾರದು.

ಸಂಕಟದ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಕೈ ಹಿಡಿದಿರುವ ನಾಡಿನ ಬಡವರು, ಶೋಷಿತರು, ಅಸಹಾಯಕರು ಅಸಹ್ಯ ಪಟ್ಟುಕೊಳ್ಳುವ ಮುನ್ನ ಎಚ್ಚೆತ್ತು, ಸರ್ಕಾರ ರಚನೆ ಮಾಡುವ, ಜನತೆಯ ಆಶೋತ್ತರಗಳನ್ನು ಈಡೇರಿಸುವ ಕೆಲಸ ಆಗಬೇಕಾಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....