ಮನೆಯಲ್ಲಿ, ಸಾರ್ವಜನಿಕ ಜಾಗಗಳಲ್ಲಿ, ಬಸ್‌ಗಳಲ್ಲಿ, ದುಡಿಯುವ ಸ್ಥಳಗಳಲ್ಲಿ, ಕಚೇರಿ ಹೀಗೆ ಎಲ್ಲಿ ನೋಡಿದರೂ ಮಹಿಳೆಯರ ಮೇಲಿನ ಪುರುಷರ ದಬ್ಬಾಳಿಕೆಗೆ ಕಡಿವಾಣವೇ ಇಲ್ಲದಂತಾಗಿದೆ. ರಾಜೀವನಂತಹ ದುಷ್ಟರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕಾಂಗ್ರೆಸ್ ಪಕ್ಷದಿಂದ ಆತನನ್ನು ಹೊರ ಹಾಕುವ ಕೆಲಸ ತಕ್ಷಣ ಮಾಡಬೇಕಿದೆ.
ಜಗತ್ತು ಶರವೇಗದಲ್ಲಿ ಬದಲಾಗುತ್ತಿದೆ. ಆದರೆ, ಮಹಿಳೆಯರ ಮೇಲಿನ ಪುರುಷರ ದಬ್ಬಾಳಿಕೆ, ಅಸಹನೆ, ಕೀಳು ಭಾವನೆಗಳು ಬದಲಾಗುವ ಲಕ್ಷಣ ಕಾಣುತ್ತಿಲ್ಲ. ಹೆಣ್ಣು ಎಷ್ಟೇ ಉನ್ನತ ಮಟ್ಟದ ಅಧಿಕಾರಿಯಾಗಿರಲಿ, ಪ್ರತಿಷ್ಠಿತ ಹುದ್ದೆಯಲ್ಲಿರಲಿ, ಎಷ್ಟೇ ಓದಿರಲಿ, ರಾಜಕೀಯ ಸ್ಥಾನದಲ್ಲಿರಲಿ ಅಥವಾ ಸಾಮಾನ್ಯ ಮಹಿಳೆಯೇ ಆಗಿರಲಿ ಆಕೆಯ ಮೇಲಿನ ಗಂಡಿನ ತಿರಸ್ಕಾರಕ್ಕೆ ಮಿತಿಯೇ ಇಲ್ಲ. ಹೆಣ್ಣೆಂದರೆ ಗಂಡಿನ ಅಡಿಯಾಳಾಗಿರಬೇಕಾದ ಜೀವ, ಆತನ ಬೇಕು ಬೇಡಗಳನ್ನು ಪೂರೈಸಬೇಕಾದ ಗುಲಾಮಳು ಎಂಬ ಭಾವನೆ ಕೌಟುಂಬಿಕ ವಾತಾವರಣದಲ್ಲಿ ಹೇಗಿದೆಯೋ, ಅದೇ ತರ ಸಾಮಾಜಿಕ ಸಂದರ್ಭಗಳಲ್ಲಿ, ಸರ್ಕಾರದೊಳಗೆ, ಕಚೇರಿಗಳಲ್ಲಿ, ಮನರಂಜನಾಕ್ಷೇತ್ರ, ರಾಜಕೀಯದಲ್ಲೂ ಢಾಳಾಗಿ ಕಾಣಿಸುತ್ತಿದೆ. ಹೆಣ್ಣು ಮೇಲಧಿಕಾರಿಯಾಗಿದ್ದು, ಆಕೆಯ ಕೈ ಕೆಳಗೆ ದುಡಿಯುವ ಪುರುಷರೂ ಭಯವಿಲ್ಲದೇ ತಮ್ಮ ಅಹಂಕಾರದ ನಡವಳಿಕೆ ಪ್ರದರ್ಶಿಸುವ ಅನೇಕ ಉದಾಹರಣೆಗಳಿವೆ.
ಕಳೆದ ಸೋಮವಾರ (ಜ.12) ತುಮಕೂರಿನ ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ರಾಜೀವ ಗೌಡ ಎಂಬಾತ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕರೆ ಮಾಡಿ ಮಾತನಾಡಿದ ರೀತಿ ಆತನಲ್ಲಿರುವ ಪುರುಷಹಂಕಾರಕ್ಕೆ ಹಿಡಿದ ಕೈಗನ್ನಡಿ. ರಸ್ತೆಯ ಬದಿ ಹಾಕಿದ್ದ ಅನಧಿಕೃತ ಫ್ಲೆಕ್ಸ್ ತೆಗೆಸಿದರೆಂದು ಸಿಟ್ಟಾದ ಆತ ಮಹಿಳಾ ಅಧಿಕಾರಿಯೊಂದಿಗೆ ಸಭ್ಯ ರೀತಿಯಲ್ಲಿ ಸಂವಹನ ನಡೆಸುವ ಬದಲು ಫ್ಲೆಕ್ಸ್ ತೆಗೆದ ಪೌರ ನೌಕರರಿಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದು, ಅದನ್ನು ಆಕ್ಷೇಪಿಸಿದಾಗ ಅಧಿಕಾರಿಯನ್ನೇ ಏಕವಚನದಲ್ಲಿ ಬೈದಿದ್ದಲ್ಲದೇ, ಊರಿನ ಜನರನ್ನೆಲ್ಲ ಕರೆಸಿ ದಾಳಿ ಮಾಡಿಸುವ ಬೆದರಿಕೆಯೊಡ್ಡಿದ್ದು ದುರಹಂಕಾರದ ಪರಮಾವಧಿ. ಮನೆಯಲ್ಲಿ, ಸಾರ್ವಜನಿಕ ಜಾಗಗಳಲ್ಲಿ, ಬಸ್‌ಗಳಲ್ಲಿ, ದುಡಿಯುವ ಜಾಗಗಳಲ್ಲಿ, ಕಚೇರಿ ಹೀಗೆ ಎಲ್ಲಿ ನೋಡಿದರೂ ಮಹಿಳೆಯರ ಮೇಲಿನ ಪುರುಷರ ದಬ್ಬಾಳಿಕೆಗೆ ಕಡಿವಾಣವೇ ಇಲ್ಲದಂತಾಗಿದೆ.
ರಾಜೀವನಂತಹ ದುಷ್ಟರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕಾಂಗ್ರೆಸ್ ಪಕ್ಷ ಆತನಿಗೆ ಈಗಾಗಲೇ ಶೋಕಾಸ್ ನೋಟಿಸ್ ಜಾರಿ ಮಾಡಿರುವುದು, ಕಾಂಗ್ರೆಸ್ ಮುಖಂಡರು ಆತನ ದುರ್ವರ್ತನೆಯನ್ನು ಖಂಡಿಸಿರುವುದು, ರಾಜ್ಯ ಮಹಿಳಾ ಆಯೋಗ ತಕ್ಷಣವೇ ಕ್ರಮಕ್ಕೆ ಒತ್ತಾಯಿಸಿ ಎಸ್‌ಪಿಗೆ ಪತ್ರ ಬರೆದಿರುವುದು ಶ್ಲಾಘನೀಯ ನಡೆ. ಇಂತಹ ನಡೆಯನ್ನು ಬಿಜೆಪಿಯಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿಯ ಶಾಸಕರೇ ಸಚಿವೆ, ಮಹಿಳಾ ಅಧಿಕಾರಿಗಳ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ ಪ್ರಕರಣಗಳಲ್ಲಿ ಪಕ್ಷ ಯಾವುದೇ ಶಿಸ್ತುಕ್ರಮ ಜರುಗಿಸಿದ ಉದಾಹರಣೆ ಇಲ್ಲ. ಎರಡು ಅತ್ಯಾಚಾರ ಪ್ರಕರಣಗಳ ಆರೋಪಿ ಬಿಜೆಪಿ ಶಾಸಕ ಮುನಿರತ್ನ ಈಗಲೂ ತನ್ನ ಪ್ರತಿಸ್ಪರ್ಧಿ ಮಹಿಳೆಯ ವಿರುದ್ಧ ಮಾನಹಾನಿಕರ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ.
ಕಳೆದ ವರ್ಷ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಪರಿಷತ್ ಕಲಾಪ ಮುಗಿಯುವ ವೇಳೆಗೆ ಮಾತಿನ ಸಮರ ಜೋರಾಗಿ, ಬಿಜೆಪಿ ಸದಸ್ಯ ಸಿ ಟಿ ರವಿ ಎದುರಿಗೆ ನಿಂತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ʼಪ್ರಾಸ್ಟಿಟ್ಯೂಟ್ʼಎಂದು ಏಳು ಬಾರಿ ನಿಂದಿಸಿದ ಪ್ರಕರಣ ಇಡೀ ರಾಜ್ಯವೇ ತಲೆ ತಗ್ಗಿಸುವ ವಿಚಾರ. ಅದೂ ಜನಪ್ರತಿನಿಧಿಗಳಾದವರು ಸಾಮಾಜಿಕ ಸಭ್ಯತೆಯ ಎಲ್ಲೆ ಮೀರಲೇಬಾರದು ಎಂದು ಸ್ವಯಂ ಕಡಿವಾಣ ಹಾಕಿಕೊಳ್ಳಬೇಕಿರುವ ಪವಿತ್ರವಾದ ಜಾಗದಲ್ಲಿ! ದುರಂತವೆಂದರೆ, ಸಭಾಪತಿ ಬಸವರಾಜ ಹೊರಟ್ಟಿ ತಕ್ಷಣ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಏನು ಮಾಡಬೇಕಿತ್ತೋ ಅದನ್ನು ಮಾಡದೇ ಜಾರಿಕೊಳ್ಳುವ ಹೇಳಿಕೆ ನೀಡುತ್ತಾ ಜವಾಬ್ದಾರಿ ಮರೆತರು. ನಂತರ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದಾಗ ಕೋರ್ಟ್ ಪ್ರಕರಣಕ್ಕೆ ತಡೆಯಾಜ್ಞೆ ಕೊಡುತ್ತದೆ! ಇಲ್ಲಿ ಶಾಸನ ರೂಪಿಸುವ ಸ್ಥಾನದಲ್ಲಿರುವ ವ್ಯಕ್ತಿಗಳು, ಅದೇ ಸ್ಥಾನದಲ್ಲಿರುವ ಹೆಣ್ಣಿಗೆ ಅವಮಾನ ಮಾಡಿದಾಗ ಕೋರ್ಟ್‌ಗಳು ಕೂಡಾ ಹೆಣ್ಣಿನ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಲಿಲ್ಲ ಎಂಬುದು ವಿಷಾದಕರ. ಒಂದು ದಿನದ ಮಟ್ಟಿಗೂ ಸಿ ಟಿ ರವಿಯನ್ನು ವಿಧಾನ ಪರಿಷತ್ತಿನಿಂದ ಅಮಾನತು ಮಾಡದ ಸಭಾಧ್ಯಕ್ಷರೂ ಸ್ತ್ರೀ ಘನತೆಗೆ ಗೌರವ ಕೊಟ್ಟಿಲ್ಲ ಎಂದೇ ಅರ್ಥ. ಹಾಗೆ ಮಾಡದೇ ಸ್ವತಃ ಸಭಾಧ್ಯಕ್ಷರೇ ಪೀಠದ ಘನತೆ ಕಳೆದಿದ್ದಾರೆ ಎಂದು ವಿಷಾದದಿಂದಲೇ ಹೇಳಬೇಕಾಗಿದೆ. ಸಭ್ಯತೆ ಮರೆಯುವ ಜನಪ್ರತಿನಿಧಿಗಳಿಗೆ ಬುದ್ಧಿ ಹೇಳುವ ಕೆಲಸ ಆಗಿಂದಾಗಲೇ ಆಗಬೇಕಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರ ಬಗ್ಗೆ ತೀರಾ ಅವಮಾನಕರವಾಗಿ ವಿಧಾನಸೌಧದ ಮುಂದೆ ಮಾತನಾಡಿದ್ದ ಬಿಜೆಪಿಯ ಎಂಎಲ್‌ಸಿ ಎನ್ ರವಿಕುಮಾರ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅದು ಸುದ್ದಿಯಾದದ್ದು ಬಿಟ್ಟರೆ ಮುಂದೆ ಯಾವುದೇ ಕ್ರಮ ಆಗಿಲ್ಲ. ನಟಿ ರಮ್ಯಾ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಹಲವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣ ಕೋರ್ಟ್‌ನಲ್ಲಿದೆ.
ವಾರದ ಹಿಂದಷ್ಟೇ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ತಮಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಮಾಡಿದ್ದ ಕಿಡಿಗೇಡಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯ ಬಂಧನವಾಗಿದೆ. ಇಂತಹ ಸಾಲು ಸಾಲು ಪ್ರಕರಣಗಳು ವರದಿಯಾಗುತ್ತಿವೆ. ಅಧಿಕಾರದಲ್ಲಿರುವ ಮಹಿಳೆಯರಿಗೇ ಈ ರೀತಿಯಾದರೆ ಸಾಮಾನ್ಯ ಮಹಿಳೆಯರ ಪರಿಸ್ಥಿತಿ ಹೇಗಿರಬಹುದು? ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರ ಬಗ್ಗೆ ಕಿಡಿಗೇಡಿಗಳು ಬಳಸುವ ಪದಗಳು ಈ ಸಮಾಜ ತಲುಪಿರುವ ಅಧೋಗತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ದಶಕಗಳಿಂದ ಅಶ್ಲೀಲವಾಗಿ ನಿಂದಿಸಲಾಗುತ್ತಿದೆ. ಆಕೆಗೀಗ ವಯಸ್ಸು 79. ಈಗಲೂ ಅವರನ್ನು ಬಾರ್ ಡಾನ್ಸರ್ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಎಳೆಯ ವಯಸ್ಸಿನ ಯುವಕರು ಅವಮಾನಿಸುತ್ತಿದ್ದಾರೆ. ಆ ಪರಿ ಯುವ ಮನಸ್ಸುಗಳಲ್ಲಿ ಸೋನಿಯಾಗಾಂಧಿ ಅವರ ಬಗ್ಗೆ ವಿಷ ತುಂಬಲಾಗಿದೆ. 55 ವರ್ಷಗಳಿಂದ ಭಾರತದಲ್ಲೇ ನೆಲೆಸಿದ್ದರೂ, ಸಂಸದೆಯಾಗಿ, ಕಾಂಗ್ರೆಸ್ ಪಕ್ಷದ ಅಧಿನಾಯಕಿಯಾಗಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದರೂ ಈಗಲೂ ಸೋನಿಯಾರನ್ನು ಇಟಲಿಯವರು, ವಿದೇಶಿ ಮಹಿಳೆ ಎಂದು ನಿಂದಿಸಲಾಗುತ್ತದೆ.
ಬಾಯಿ ಬಿಟ್ಟರೆ ಸಂಸ್ಕೃತಿ, ಸಂಸ್ಕಾರ, ಸ್ತ್ರೀಯರನ್ನು ಗೌರವಿಸುವ ಸಮಾಜ ನಮ್ಮದು ಎಂದು ಹೇಳುವ ಪುರುಷರೇ ತಮ್ಮ ನರನಾಡಿಗಳಲ್ಲಿ ಸ್ತ್ರೀ ದ್ವೇಷವನ್ನು ಮೈತುಂಬಿಕೊಂಡಿರುತ್ತಾರೆ. ಸ್ತ್ರೀಯರನ್ನು ಭೋಗದ ವಸ್ತುವಾಗಿ, ಜೀತದಾಳಾಗಿ ನೋಡುವ ಪುರುಷಪ್ರಧಾನ ವ್ಯವಸ್ಥೆಯೊಳಗೆ ಧಾರ್ಮಿಕ ಆಚರಣೆ, ನಂಬಿಕೆಯ ಹೆಸರಿನಲ್ಲಿ ಗಂಡಿನ ಅಡಿಯಾಳಾಗಿ ಬಂಧಿಸಿಡುವ ವ್ಯವಸ್ಥಿತ ಹುನ್ನಾರ ಒಂದು ಕಡೆಯಾದರೆ, ಸುಶಿಕ್ಷಿತರಾಗಿ ಉನ್ನತ ಸ್ಥಾನದಲ್ಲಿರುವ ಮಹಿಳೆಯರನ್ನೂ ಗೌರವಿಸದ ಅಹಂಕಾರ ಪ್ರವೃತ್ತಿ ಮತ್ತೊಂದೆಡೆ. ಸ್ಥಳೀಯ ಮಟ್ಟದ ರಾಜಕಾರಣಿ ರಾಜೀವ ಗೌಡನಿಗೆ ಒಬ್ಬ ಕೆಎಎಸ್ ಅಧಿಕಾರಿಯ ಜೊತೆಗೆ ಮಾತನಾಡುವಾಗ ಇದ್ದದ್ದು ಆಕೆ ಹೆಣ್ಣು, ತಾನು ಗಂಡು ಎಂಬ ಅದೇ ಅಹಂ. ರಾಜಕಾರಣಿ, ಮಂತ್ರಿಗಳ ಬೆಂಬಲಿಗ ಎಂಬ ಧಿಮಾಕು. ಈ ದುಷ್ಟನ ವಿರುದ್ಧ ಪ್ರಕರಣ ದಾಖಲಾಗಿದೆ. ಅಷ್ಟೇ ಆದರೆ ಸಾಲದು, ಕಾನೂನಿನಡಿ ಶಿಕ್ಷೆ ಆಗಬೇಕು. ಉಳಿದ ಪುರುಷಹಂಕಾರಿಗಳಿಗೆ ಪಾಠವಾಗಬೇಕು.
ಸ್ತ್ರೀನಿಂದನೆಯ ಪ್ರಕರಣಗಳನ್ನು ಎಲ್ಲರೂ ಖಂಡಿಸಬೇಕು. ಶೋಷಣೆಗೆ ಒಳಗಾಗುವವರಿಗೆ ಯಾವುದೇ ಜಾತಿ, ಧರ್ಮ, ಪಕ್ಷ ಇಲ್ಲ. ದುರಾದೃಷ್ಟವೆಂದರೆ ರಾಜಕೀಯ, ಧರ್ಮ ನೋಡಿ ಖಂಡಿಸುವ ಮತ್ತು ಖಂಡಿಸದಿರುವ ವರ್ಗವೊಂದಿದೆ. ಅತ್ಯಾಚಾರ ಕೊಲೆ ಪ್ರಕರಣಗಳ ಅಪರಾಧಿಗಳನ್ನೂ ಮಹಿಳೆಯರೇ ಬೆಂಬಲಿಸುವ ಸಮರ್ಥಿಸುವ, ಸಂತ್ರಸ್ತರನ್ನೇ ನಿಂದಿಸುವ ಬೆಳವಣಿಗೆಗೆ ಈ ಕಾಲ ಸಾಕ್ಷಿಯಾಗಿದೆ. ಉನ್ನಾಂವ್ ಅತ್ಯಾಚಾರ ಅಪರಾಧಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಬಿಜೆಪಿಯ ಮಾಜಿ ಶಾಸಕ ಕುಲದೀಪ ಸಿಂಗ್ ಸೆಂಗರ್‌ಗೆ ಜಾಮೀನು ನೀಡಿ ನಂತರ ತಡೆ ಹಿಡಿದ ಪ್ರಕರಣದಲ್ಲಿ ಆತನಿಗೆ ಬೆಂಬಲಿಸಿ ದೆಹಲಿಯಲ್ಲಿ ಒಂದು ಗುಂಪು ಘೋಷಣೆ ಕೂಗಿತ್ತು. ತಂಡದ ಮುಂಚೂಣಿಯಲ್ಲಿ ಇದ್ದದ್ದು ಒಬ್ಬ ಯುವತಿ! ಇದು ಸ್ವಸ್ಥ ಸಮಾಜದ ಲಕ್ಷಣವಲ್ಲ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಇಡೀ ಸ್ತ್ರೀಕುಲವೇ ಒಟ್ಟಾಗಿ ವಿರೋಧಿಸಬೇಕಿದೆ.





