ರಾಜ್ಯದ 2ನೇ ಅತ್ಯಂತ ಹಳೆಯ ವಿಶ್ವವಿದ್ಯಾಲಯ ಎಂಬ ಖ್ಯಾತಿ ಪಡೆದಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬರೋಬ್ಬರಿ ಏಳು ತಿಂಗಳ ನಂತರ ಉಪಕುಲಪತಿ ನೇಮಕಕ್ಕೆ ರಾಜ್ಯ ಸರ್ಕಾರ ಶೋಧನಾ ಸಮಿತಿಯನ್ನು ರಚಿಸಿದೆ. ಸಮತಿಯು ಹೊಸ ಉಪಕುಲಪತಿಯ ಆಯ್ಕೆಗೆ ಅರ್ಹರನ್ನು ಗುರುಸಿಬೇಕಿದೆ. ಆದಾಗ್ಯೂ, ಉಪಕುಲಪತಿ ಹುದ್ದೆಗಾಗಿ 191 ಅರ್ಜಿಗಳು ಬಂದಿವೆ ಎಂದು ವರದಿಯಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೊ. ಕೆ.ಬಿ ಗುಡಸಿ ಅವರು 2024ರ ಸೆಪ್ಟೆಂಬರ್ 30ರಂದು ನಿವೃತ್ತಾಗಿದ್ದರು. ಹೀಗಾಗಿ, ಕಳೆದ 7 ತಿಂಗಳಿಂದ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಯು ಖಾಲಿ ಉಳಿದಿತ್ತು. ಅಂದಿನಿಂದ ಪ್ರೊ. ಜಯಶ್ರೀ ಎಸ್ ಅವರು ಉಸ್ತುವಾರಿ ಉಪಕುಲಪತಿಗಳಾಗಿ ವಿಶ್ವವಿದ್ಯಾಲಯವನ್ನು ಮುನ್ನಡೆಸುತ್ತಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ್ ಅವರು ಉಪಕುಲಪತಿ ಹುದ್ದೆಗೆ ನೇಮಕ ಮಾಡಲು ಸರ್ಕಾರಕ್ಕೆ ಯಾವುದೇ ಆತುರವಿಲ್ಲ. ವಿಶ್ವವಿದ್ಯಾಲಯವನ್ನು ಜವಾಬ್ದಾರಿಯಿಂದ ಮುನ್ನಡೆಸಲು ಉತ್ತಮ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಆರಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು. ಜಯಶ್ರೀ ಅವರನ್ನು ಉಸ್ತುವಾರಿ ಉಪಕುಲಪತಿಯಾಗಿ ನೇಮಿಸಿದ್ದರು.
ಇದೀಗ, ಉಪಕುಲಪತಿ ಆಯ್ಕೆಗಾಗಿ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಗುಲ್ಬರ್ಗ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಎ.ಎಚ್. ರಾಜಾ ಸಾಬ್ ಅವರನ್ನು ಶೋಧನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಮಿತಿಯಲ್ಲಿ ಪ್ರೊ. ಕೈಲಾಶ್ ಚಂದ್ರ ಶರ್ಮಾ (ಯುಜಿಸಿ ನಾಮನಿರ್ದೇಶಿತ), ಡಾ. ಟಿ.ಆರ್ ಥಾಪಕ್ (ರಾಜ್ಯಪಾಲರ ನಾಮನಿರ್ದೇಶಿತ) ಮತ್ತು ಡಾ. ವಿ.ಜಿ ತಲಾವರ್ (ಸಿಂಡಿಕೇಟ್ ನಾಮನಿರ್ದೇಶಿತ) ಇದ್ದಾರೆ. ಜೊತೆಗೆ, ಸಮಿತಿಯ ಸಂಚಾಲಕರಾಗಿ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿಯಾಗಿರುವ ಶಶಿಧರ್ ಜಿ ಅವರನ್ನು ನೇಮಿಸಲಾಗಿದೆ.
ಸಮಿತಿಯು ಹುದ್ದೆಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡಬೇಕಿದೆ. ಸಮಿತಿಯು ಸಲ್ಲಿಕೆಯಾಗಿರುವ 191 ಅರ್ಜಿಗಳನ್ನು ಪರಿಶೀಲಿಸಿ, ಮುಂದಿನ 10 ದಿನಗಳೊಳಗೆ ಮೂರು ಹೆಸರುಗಳನ್ನು ಸರ್ಕಾರದ ಮುಂದಿಡುವ ಸಾಧ್ಯತೆಗಳಿವೆ. ಹೊಸ ಉಪಕುಲಪತಿಯು 15 ದಿನಗಳೊಳಗೆ ನೇಮಕವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಈ ವರದಿ ಓದಿದ್ದೀರಾ?: ಜಾತಿಗಣತಿ ನಡೆಸುವುದು ಮೋದಿ ಸರ್ಕಾರದ ಉದ್ದೇಶವೇ ಅಲ್ಲ!
1949ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯಾದಾಗಿನಿಂದ ಈವರೆಗೆ 17 ಉಪಕುಲಪತಿಗಳು ಸೇವೆ ಸಲ್ಲಿಸಿದ್ದಾರೆ. ಆದರೂ, ಈವರೆಗೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರು ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಗೆ ಆಯ್ಕೆಯಾಗಿಲ್ಲ. ಈ ಬಾರಿ ಸರ್ಕಾರವು ಕುಲಪತಿ ಹುದ್ದೆಗೆ ಎಸ್‌ಸಿ/ಎಸ್‌ಟಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಅರ್ಜಿದಾರರದಲ್ಲಿ 30 ಮಂದಿ ಕರ್ನಾಟಕ ವಿವಿಯ ಪ್ರಾಧ್ಯಾಪಕರು
ಉಪಕುಲಪತಿ ಹುದ್ದೆಗೆ ಒಟ್ಟು 191 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ, ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 30 ಪ್ರಾಧ್ಯಾಪಕರೂ ಅರ್ಜಿ ಸಲ್ಲಿಸಿದ್ದಾರೆ.
ಅಲ್ಲದೆ, ಮೈಸೂರು, ಗುಲ್ಬರ್ಗ ಹಾಗೂ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 25 ರಿಂದ 30 ವರ್ಷಗಳಿಗೂ ಹೆಚ್ಚು ಕಾಲ ಬೋಧನಾ ಅನುಭವ ಹೊಂದಿರುವ ಹಲವಾರು ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಿದ್ದಾರೆ.




