ಇತ್ತೀಚೆಗೆ ಲಂಡನ್ ಪ್ರವಾಸ ಕೈಗೊಂಡಿದ್ದ ರಾಜ್ಯ ಸರಕಾರದ ಉನ್ನತ ಶಿಕ್ಷಣ ಸಚಿವ ರಾಜ್ಯದಲ್ಲಿ ವಿದೇಶಿ ವಿಶ್ವ ವಿದ್ಯಾನಿಲಯಗಳಿಗೆ ಅವಕಾಶ ಕಲ್ಪಿಸುವುದಾಗಿ ಹೇಳಿರುವ ಹೇಳಿಕೆಯು, ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗ ವರದಿಗೆ ತದ್ವಿರುದ್ಧವಾಗಿದೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ದುರ್ಗೇಶ್ ಬರಗೂರು ಹೇಳಿದ್ದಾರೆ.
ರವಿವಾರ ಪತ್ರಿಕಾ ಹೇಳಿಕೆ ನೀಡರುವ ಅವರು, ರಾಜ್ಯ ಶಿಕ್ಷಣ ನೀತಿ ಆಯೋಗವು ವಿದೇಶಿ ವಿಶ್ವ ವಿದ್ಯಾನಿಲಯಗಳಿಗೆ ಅವಕಾಶ ನೀಡಬಾರದೆಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದ್ಯಾಗಿಯೂ ಉನ್ನತ ಶಿಕ್ಷಣ ಸಚಿವರ ಈ ಹೇಳಿಕೆಯು ರಾಜ್ಯ ಸರಕಾರದ ನಿಲುವಿಗೆ ವಿರೋಧವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಸರಕಾರಿ ವಿಶ್ವ ವಿದ್ಯಾನಿಲಯಗಳಲ್ಲಿ ಅನುದಾನಗಳಿಲ್ಲದೇ, ಅಧ್ಯಾಪಕರ ಕೊರತೆಯಿಂದ ಮತ್ತು ಮೂಲಭೂತ ಸೌಕರ್ಯಗಳ ಸಮಸ್ಯೆಗಳಿಂದ ತೀವ್ರವಾಗಿ ಬಳಲುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಸ್ತುತ ವಿಶ್ವ ವಿದ್ಯಾನಿಲಯಗಳನ್ನು ಅಭಿವೃದ್ಧಿಪಡಿಸುವುದರ ಕಡೆ ಗಮನ ನೀಡುವುದು ಬಿಟ್ಟು, ವಿದೇಶಿ ವಿಶ್ವ ವಿದ್ಯಾನಿಲಯಗಳಿಗೆ ಅವಕಾಶ ಕಲ್ಪಿಸಲಾಗುವುದೆಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಪ್ರಸ್ತುತ ಸರಕಾರಿ ಕಾಲೇಜುಗಳಲ್ಲಿರುವ ಶುಲ್ಕಗಳನ್ನು ಭರಿಸಲು ಸಾಧ್ಯವಾಗದೇ, ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ ಎಂದು ದುರ್ಗೇಶ್ ಹೇಳಿದ್ದಾರೆ.
ಸರಕಾರ ನಿಜವಾಗಿಯೂ ನಮ್ಮ ಸಾರ್ವಜನಿಕ ಸಂಸ್ಥೆಗಳನ್ನು ಸುಧಾರಿಸಲು ಬದ್ಧವಾಗಿದ್ದರೆ, ಅದು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಬೇಕು. ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡುವ ಬೃಹತ್ ತೆರಿಗೆ ವಿನಾಯಿತಿಗಳನ್ನು ನಿಲ್ಲಿಸಬೇಕು ಮತ್ತು ಶಾಸಕ, ಸಚಿವರ ಸಂಬಳ ಹಾಗೂ ಭತ್ಯೆಗಳನ್ನು ಕಡಿತಗೊಳಿಸಬೇಕು. ಆ ಹಣವನ್ನು ಶಿಕ್ಷಣದ ಸದೃಢೀಕರಣಕ್ಕೆ ವಿನಿಯೋಗಿಸಬೇಕು. ಎಲ್ಲರಿಗೂ ಉಚಿತ, ಗುಣಮಟ್ಟ ಶಿಕ್ಷಣವನ್ನು ಒದಗಿಸಬೇಕು ಎಂದು ದುರ್ಗೇಶ್ ಒತ್ತಾಯಿಸಿದ್ದಾರೆ.
ವೈದ್ಯಕೀಯ ಶಿಕ್ಷಣದಿಂದ ದಲಿತರನ್ನು ಹೊರಗಿಡುವ ಕುತಂತ್ರ!
ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು ಎನ್‌ಆರ್‌ಐ ಕೋಟಾವನ್ನು ಜಾರಿಗೊಳಿಸುವ ರಾಜ್ಯ ಸರಕಾರದ ನಿರ್ಧಾರ, ದಲಿತ, ಮಧ್ಯಮ ವರ್ಗದ ಬಡ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದಿಂದ ದೂರ ತಳ್ಳುವ ಕುತಂತ್ರವಾಗಿದೆ. ಅಷ್ಟೇ ಅಲ್ಲದೇ, ಸೀಟುಗಳನ್ನು ಮಾರಾಟ ಮಾಡಲು ಅವಕಾಶ ನೀಡುವುದು ಪ್ರಜಾಸತ್ತಾತ್ಮಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯದ ಗುಣಮಟ್ಟದ ತಳಹದಿಯ ಮೇಲಿನ ನೇರ ಪ್ರಹಾರವಾಗಿದೆ.
ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ‘ನೀಟ್’ ಪರೀಕ್ಷೆ ಜಾರಿಯಲ್ಲಿದ್ದು, ಇದರಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕಗಳನ್ನು ಗಳಿಸಿದ್ದರೂ ಪ್ರವೇಶಾತಿ ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ‘ನೀಟ್’ ಪರೀಕ್ಷೆ ರದ್ದು ಮಾಡುವುದು ಬಿಟ್ಟು, ಎನ್‌ಆರ್‌ಐ ಕೋಟಾ ಜಾರಿ ಮಾಡುತ್ತಿರುವುದು ಬಡವರ, ಮಧ್ಯಮ ವರ್ಗದವರ ಕನಸುಗಳನ್ನು ನುಚ್ಚುನೂರು ಮಾಡುವುದಾಗಿದೆ ಮತ್ತು ವಿದ್ಯಾರ್ಥಿ ವಿರೋಧಿಯಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.





