ಬೆಂಗಳೂರಿನ ಫಾಲ್ಕನ್ ಸಿವಿಲ್ ಸರ್ವೀಸಸ್ ಅಕಾಡೆಮಿ, ಅಕ್ಷರ ಸಿವಿಲ್ ಸರ್ವೀಸಸ್ ಕ್ಲಬ್‌ನ ಸಹಯೋಗದೊಂದಿಗೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ಉಚಿತ ಐಎಎಸ್ ಅಧ್ಯಯನ ಕೇಂದ್ರಕ್ಕೆ ಅಕ್ಟೋಬರ್ 12ರಂದು ಚಾಲನೆ ದೊರಕಲಿದೆ.
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಉಚಿತ ಐಎಎಸ್ ಅಧ್ಯಯನ ಕೇಂದ್ರದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಬೆಂಗಳೂರಿನ ಫಾಲ್ಕನ್ ಗ್ರೂಪ್‌ನ ಚೇಯರ್‌ಮೆನ್ ಡಾ. ಅಬ್ದುಲ್ ಸುಭಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಳಿದಂತೆ ಕಾರ್ಯಕ್ರಮದಲ್ಲಿ ಅಲಿಘರ್ ಮುಸ್ಲಿಂ ವಿವಿಯ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಅಬ್ದುರಹೀಮ್ ಕೆ, ಸರ್ಕಾರಿ ಅಧಿಕಾರಿ ಶಾಹಿದ್ ತಿರುವಳ್ಳೂರ್ ಅವರು ಭಾಗವಹಿಸಲಿದ್ದಾರೆ.

ಸರ್ಕಾರಿ ಸೇವೆಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯವನ್ನು ಹೆಚ್ಚಿಸುವ ಮತ್ತು ಗುಣಮಟ್ಟದ ನಾಗರಿಕ ಸೇವಾ ತರಬೇತಿಯೊಂದಿಗೆ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನಿಟ್ಟುಕೊಂಡು ಈ ಉಚಿತ ಸೇವೆಯನ್ನು ಪ್ರಾರಂಭ ಮಾಡಲಾಗುತ್ತಿದೆ ಎಂದು ಬೆಂಗಳೂರಿನ ಫಾಲ್ಕನ್ ಸಿವಿಲ್ ಸರ್ವೀಸಸ್ ಅಕಾಡೆಮಿ ತಿಳಿಸಿದೆ.
‘ಎಲ್ಲ ಯುವ ಪೀಳಿಗೆಯು ಸರ್ಕಾರಿ ಪರೀಕ್ಷೆಗಳನ್ನು ಬರೆಸುವ ಉದ್ದೇಶದಿಂದ ‘ಮಿಷನ್ 2030′ ಎಂಬ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಯೋಜನೆಯ ಭಾಗವಾಗಿ ಭಾರತ ಮತ್ತು ಯುಎಇ ದೇಶದಲ್ಲಿ 80ಕ್ಕೂ ಅಧಿಕ ಐಎಎಸ್ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದ್ದೇವೆ. ಪದವಿ ವಿದ್ಯಾರ್ಥಿಗಳಿಗೆ ಈಗಾಗಲೇ ಉಚಿತ ಫೌಂಡೇಶನ್ ಕೋರ್ಸ್ ಅನ್ನು ಜಾರಿಗೊಳಿಸಲಾಗುತ್ತಿದೆ’ ಎಂದು ಬೆಂಗಳೂರಿನ ಫಾಲ್ಕನ್ ಗ್ರೂಪ್‌ನ ಚೇಯರ್‌ಮೆನ್ ಡಾ. ಅಬ್ದುಲ್ ಸುಭಾನ್ ತಿಳಿಸಿದ್ದಾರೆ.

ಯೋಜನೆಯ ಭಾಗವಾಗಿ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿರುವ ತಿರುವಳ್ಳೂರು ಮಾಲಿಕ್ ದೀನಾರ್ ಕಾಲೇಜಿನಲ್ಲಿ ಕೂಡ ಉಚಿತ ಐಎಎಸ್ ಅಧ್ಯಯನ ಕೇಂದ್ರ ಆರಂಭಿಸಿದ್ದೇವೆ. ಇದರ ಮುಂದುವರಿದ ಭಾಗವಾಗಿ ಅಕ್ಷರ ಸಿವಿಲ್ ಸರ್ವೀಸಸ್ ಕ್ಲಬ್‌ನ ಸಹಯೋಗದೊಂದಿಗೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ಉಚಿತ ಐಎಎಸ್ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ಯಾವುದೇ ಪದವಿ ಕಾಲೇಜು ಈ ಯೋಜನೆಯ ಭಾಗವಾಗಲು ಬಯಸುವುದಾದರೆ ನಮ್ಮ ಜೊತೆಗೆ ಕೈ ಜೋಡಿಸಬಹುದು ಎಂದು ಡಾ. ಅಬ್ದುಲ್ ಸುಭಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





