ಏ.3ರಂದು ನಡೆದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯಲ್ಲಿ ಸಾಮೂಹಿಕವಾಗಿ ನಕಲು ಮಾಡಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಮುಖ್ಯ ಶಿಕ್ಷಕ ಸೇರಿದಂತೆ 16 ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಮಾರ್ಚ್ 31ರಿಂದ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಗೊಬ್ಬುರು (ಬಿ) ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಶಿಕ್ಷಕರು ಅವಕಾಶ ಮಾಡಿಕೊಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಇದೀಗ, ಆ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ಕಲಬುರಗಿ ಅಪರ ಪ್ರಾದೇಶಿಕ ಆಯುಕ್ತ ಆನಂದ ಪ್ರಕಾಶ್ ಆದೇಶ ಹೊರಡಿಸಿದ್ದಾರೆ.
ಕರ್ತವ್ಯದಲ್ಲಿದ್ದ ಪರೀಕ್ಷಾ ಸಿಬ್ಬಂದಿ, ಮೇಲ್ವಿಚಾರಕರು ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ಮಾಡಿಕೊಟ್ಟು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಹೆಚ್ಚುವರಿ ಆಯುಕ್ತರು ಪ್ರಕಾಶ್ ಮೀನಾ ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಸಲ್ಲಿಸಿದ ವರದಿ ಆಧರಿಸಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಎಸ್ಪಿ ಇಶಾ ಪಂತ್ ಅವರು ಸೋಮವಾರ ಶಾಲೆಗೆ ಭೇಟಿ ನೀಡಿ ಪರೀಕ್ಷಾ ಕೊಠಡಿಯ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಈ ವೇಳೆ, ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸಲು ಮೈಕ್ರೋ ಜೆರಾಕ್ಸ್ ನಕಲು ಚೀಟಿಗಳನ್ನು ಬಳಸುತ್ತಿದ್ದರು. ಸಾಮೂಹಿಕ ನಕಲು ಮಾಡಲು ಅವಕಾಶ ನೀಡಲಾಗಿದೆ ಎಂದು ಇಶಾ ಪಂತ್ ವರದಿ ನೀಡಿದ್ದರು.
ನಕಲು ಮಾಡಲು ಅವಕಾಶ ಕೊಟ್ಟ ಮುಖ್ಯ ಶಿಕ್ಷಕ ಗೋಳಾಲ್ಲಪ್ಪ ಗುರಪ್ಪ, 15 ಸಹಾಯಕ ಶಿಕ್ಷಕರಾದ ಭೀಮಾಶಂಕರ ಮಡಿವಾಳ, ರವೀಂದ್ರ, ದೇವೇಂದ್ರಪ್ಪ ಯರಗಲ್, ಸವಿತಾ ಬಾಯಿ ಜಮಾದಾರ್, ಅನಿತಾ, ನಾಗಮ್ಮ, ರೇವಣಸಿದ್ದಪ್ಪ, ಪರ್ವೀನ್ ಸುಲ್ತಾನ, ಬಾಬು ಪವಾರ್, ಕವಿತಾ, ಜಯಶ್ರೀ, ವಿದ್ಯಾವತಿ, ಗಾಯತ್ರಿ ಬಿರಾದಾರ್, ಮೀನಾಕ್ಷಿ ಹಾಗೂ ಅರುಣಕುಮಾರ ಎಂಬುವವರನ್ನು ಅಮಾನತ್ತುಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ?: ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕೃಪಾಂಕ ಬೇಕೆ?




