ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಾಯ್ದೆಗೆ ಸರ್ಕಾರವು ತಿದ್ದುಪಡಿ ಮಾಡಿದ್ದು, ವಿದ್ಯಾರ್ಥಿಗಳು ಕನಿಷ್ಠ 33% ಅಂಕಗಳನ್ನು ಪಡೆದರೆ ಉತ್ತೀರ್ಣರಾಗುತ್ತಾರೆಂದು ಅಧಿಸೂಚನೆ ಹೊರಡಿಸಿದೆ. ಈ ನಿಯಮವು ದುರದೃಷ್ಟಕರ ಮತ್ತು ವಿದ್ಯಾರ್ಥಿ ವಿರೋಧಿಯಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತದೆ ಎಂದು ‘ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ’ (ಪಾಫ್ರೆ) ಆರೋಪಿಸಿದೆ. ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಹುನ್ನಾರ ಇದರ ಹಿಂದಿದೆ ಎಂದು ಹೇಳಿದೆ.
ಹೊಸ ತಿದ್ದುಪಡಿ ಅನ್ವಯ 2025-26ನೇ ಸಾಲಿನಿಂದ 10ನೇ ತರಗತಿ ಪರೀಕ್ಷೆಯ ಉತ್ತೀರ್ಣಕ್ಕೆ ವಿದ್ಯಾರ್ಥಿ ಆಂತರಿಕ ಅಂಕ 20, ಬಾಹ್ಯಪರೀಕ್ಷೆಯಲ್ಲಿ 13 ಅಂಕ ಸೇರಿ 33 ಅಥವಾ ವಿಷಯವಾರು 30 ಅಂಕ ಅಂದರೆ, ಆಂತರಿಕ 20 ಅಂಕ ಬಾಹ್ಯಪರೀಕ್ಷೆಯಲ್ಲಿ 10 ಅಂಕ ಗಳಿಸಿದರೆ ಉತ್ತೀರ್ಣ ಎಂದು ಘೋಷಿಸಲಾಗುತ್ತದೆ.
ಪ್ರಸ್ತುತ ಡಿಜಿಟಲ್ ಸಮಾಜದಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ಕಲಿಕೆ-ಕಲಿಸುವಿಕೆಯು ಹೆಚ್ಚು ಪರಿಣಾಮಕಾರಿಯಾಗಿರಬೇಕು. ಶಿಕ್ಷಣ ಗುಣಮಟ್ಟ ಹೆಚ್ಚಬೇಕು. ಆದರೆ, ಈ ನಿಮಯವು ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಕುಸಿಯುವಂತೆ ಮಾಡುತ್ತದೆ. ವಿದ್ಯಾರ್ಥಿಗಳ ಕಲಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಆರೋಪಗಳಿವೆ.
ಸರ್ಕಾರದ ನಿಯಮವನ್ನು ಖಂಡಿಸಿರುವ ‘ಪಾಫ್ರೆ’ ಪ್ರಧಾನ ಸಂಚಾಲಕ ನಿರಂಜನಾರಾಧ್ಯ ವಿ.ಪಿ, “33% ಅಂಕ ಪಡೆದರೆ ಉತ್ತೀರ್ಣ ಎಂಬ ಪರಿಕಲ್ಪನೆ ಬ್ರಿಟಿಷ್ ಆಡಳಿತದ ಬಳುವಳಿಯಾಗಿದೆ. ಅಂದಿನ ಸಂದರ್ಭದ ಉದ್ದೇಶ, ವರ್ಣಾಶ್ರಮ ಪದ್ಧತಿಯ ಕಾರಣದಿಂದ ದೇಶದಲ್ಲಿ ಶಿಕ್ಷಣದಿಂದ ವಂಚಿತವಾಗಿದ್ದ ದೊಡ್ಡ ಸಮುದಾಯವನ್ನು ಸಾಕ್ಷರರನ್ನಾಗಿ ಮಾಡಿ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವುದಾಗಿತ್ತು. ಜೊತೆಗೆ, ಭಾರತವನ್ನು ವಶಾಹತು ಮಾಡಿಕೊಂಡಿದ್ದ ಬ್ರಿಟಿಷ್ ಆಡಳಿತ, ಅಂದಿನ ಆಡಳಿತಕ್ಕೆ ಅಗತ್ಯವಿದ್ದ ಮತ್ತು ವಿಧೇಯಕರಾಗಿರಬಲ್ಲ ಕಚೇರಿ ಸಹಾಯಕ, ಗುಮಾಸ್ತ ಅಥವಾ ಜವಾನರನ್ನು ಆಯ್ಕೆ ಮಾಡಲು ಕನಿಷ್ಠ ತಿಳಿವಳಿಕೆಯ ಮಾನದಂಡವನ್ನು ನಿಗದಿಪಡಿಸಿದ್ದರು. ಆ ಮಾನದಂಡಗಳು ಗುಣಮಟ್ಟದ ಶಿಕ್ಷಣ ತತ್ವದ ಮೇಲೆ ರೂಪಿಸಿದ್ದಲ್ಲ. ಬದಲಿಗೆ ತನ್ನ ಆಡಳಿತಾತ್ಮಕ ಅನುಕೂಲಕ್ಕಾಗಿ ಅಗತ್ಯವಿದ್ದ ಕನಿಷ್ಠ ಸೂಚನೆ ಪಾಲಿಸಬಲ್ಲ ಒಂದು ಸಾಕ್ಷರ ಸಮುದಾಯವನ್ನು ಸೃಷ್ಟಿಸಲು ರೂಪಿಸಿದ ನಿಯಮವಾಗಿತ್ತು” ಎಂದು ವಿವರಿಸಿದ್ದಾರೆ.
“ಆ ಬ್ರಿಟಿಷ್ ಕಾಲದ ನಿಯಮವನ್ನು ಕರ್ನಾಟಕ ಸರ್ಕಾರ ಈಗಲೂ ಪಾಲಿಸಲು ಮುಂದಾಗಿರುವುದು ಸರ್ಕಾರದ ಆಲೋಚನಾ ಕ್ರಮ ಮತ್ತು ಬೌದ್ಧಿಕ ದಿವಾಳಿತನದ ಉದಾಹರಣೆಯಾಗಿದೆ. 33% ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ ಎಂಬ ಮಾನದಂಡ ವಿದ್ಯಾರ್ಥಿ ಪಾಸಾಗಲು ಏನು ಮಾಡಬೇಕೆಂದು ಸೂಚಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಸಂಕುಚಿತ ಉದ್ದೇಶಕ್ಕೆ ಬಲಿಕೊಟ್ಟು ಜ್ಞಾನಾರ್ಜನೆ ಮತ್ತು ಜ್ಞಾನ ವಿಸ್ತಾರದ ಮೂಲ ನೆಲೆಯನ್ನು ತಿಳಿಗೊಳಿಸಿ, ವಿದ್ಯಾರ್ಥಿಗಳನ್ನು ಮಕ್ಕಿಕಾಮಕ್ಕಿಗಳನ್ನಾಗಿಸುತ್ತದೆ.
ಇದು ಸಮಗ್ರ ಗುಣಾತ್ಮಕ ಶಿಕ್ಷಣದ ಹಕ್ಕನ್ನು ನಿರಾಕರಿಸುವ ಹುನ್ನಾರವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸರ್ಕಾರದ ಈ ನಿರ್ಧಾರ ಎಷ್ಟು ಅಪಾಯಕಾರಿಯೆಂದರೆ, ವಿದ್ಯಾರ್ಥಿಗಳು ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಅಗತ್ಯ ಮೂಲ ಸೌಕರ್ಯಗಳಿಲ್ಲದೆ ಕಲಿಯುತ್ತಿರುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶೇಕಡ 33 ಸಾಕೆಂಬ ಧೋರಣೆಯನ್ನು ಹುಟ್ಟುಹಾಕುವ ಮೂಲಕ ಕಲಿಕೆಯ ಬಗೆಗಿನ ಆಸಕ್ತಿಯನ್ನು ಕಸಿಯುತ್ತದೆ. ಒಂದೆಡೆ, ಉನ್ನತ ಮಟ್ಟ ಕಲಿಕೆ ಗುಣಮಟ್ಟದ ಶಿಕ್ಷಣ ಪಡೆಯುವ ವಿದ್ಯಾರ್ಥಿ ವರ್ಗ ಮತ್ತೊಂದಡೆ ಏನೂ ಸೌಲಭ್ಯಗಳಿಲ್ಲದೆ ಪಾಸಾಗಲು ಕನಿಷ್ಠ ಸಾಕ್ಷರತೆ ಎಂಬ ಮತ್ತೊಂದು ವರ್ಗವನ್ನು ಸೃಷ್ಟಿಸುತ್ತದೆ. ಎಸ್ಎಸ್ಎಲ್‌ಸಿಯಲ್ಲಿ ಪಾಸ್ ಸರ್ಟಿಫಿಕೇಟ್ ಪಡೆದ ವರ್ಗದ ವಿದ್ಯಾರ್ಥಿಗಳು ಐಟಿಐ ಸೇರಿದರೆ, ಉನ್ನತ ಗುಣಮಟ್ಟದ ಶಿಕ್ಷಣ ಮತ್ತೊಂದು ವರ್ಗ ಐಐಟಿ ಸೇರುತ್ತದೆ. ಇದು ಒಂದು ಬಗೆಯ ಹೊಸ ವರ್ಣಾಶ್ರಮ ನೀತಿಯಾಗಿದೆ ಮತ್ತು ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮಚಾಡೊಗೆ ನೊಬೆಲ್ ಶಾಂತಿ ಪ್ರಶಸ್ತಿ; ತನ್ನ ಅರ್ಥವನ್ನೇ ಕಳೆದುಕೊಂಡ ‘ಶಾಂತಿ’
“ವಿದ್ಯಾರ್ಥಿಯ ಪ್ರಗತಿಯನ್ನು ಕೇವಲ ಅಂಕಗಳ ಆಧಾರದಲ್ಲಿ ಪಾಸು ಫೇಲು ಎಂದು ತೀರ್ಮಾನಿಸಲಾಗುವುದಿಲ್ಲ. ಗುಣಾತ್ಮಕ ಶಿಕ್ಷಣವೆಂದರೆ, ವಿದ್ಯಾರ್ಥಿಯ ಪ್ರಭುತ್ವ ಮಟ್ಟದ ಕಲಿಕಾ ಸಾಮರ್ಥ್ಯ, ವಿಚಾರಶೀಲತೆ, ಅನ್ವೇಷಣೆ, ಉನ್ನತ ಆಶಯಕ್ಕೆ ಕನಸು ಕಾಣುವುದು ಮತ್ತು ಸಾಮಾಜಿಕ ಹೊಣೆಗಾರಿಕೆಯ ಮೂಲಕ ಪ್ರಜಾಪ್ರಭುತ್ವನ್ನು ಬಲವರ್ಧನೆಗೊಳಿಸುವ ವಿಶಾಲ ಮಾನದಂಡವಾಗಿದೆ. ಶಿಕ್ಷಣ ಸಾಮಾಜಿಕ ಒಳಿತಿನ ಜೊತೆಗೆ ಸಾಮಾಜಿಕ ಪರಿವರ್ತನೆಯ ಸಾಧನವೂ ಹೌದು” ಎಂದು ಪಾಫ್ರೆ ಹೇಳಿದೆ.
“ಗುಣಮಟ್ಟದ ಶಿಕ್ಷಣ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತು ಪೂರ್ಣ ತಿಳಿವಳಿಕೆಯಿಲ್ಲದ ಶಿಕ್ಷಣ ಸಚಿವರು, ಶಿಕ್ಷಣವನ್ನು ಕೇವಲ ಪಾಸು ಅಥವಾ ಫೇಲಿಗೆ ಸಮೀಕರಿಸಿ ಶಿಕ್ಷಣದ ಒಟ್ಟು ಆಶಯವನ್ನು ತಿಳಿಗೊಳಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯಕ್ಕೆ ಮಾರಕವಾದ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪರವಾಗಿರುವ ಸನ್ಮಾನ್ಯ ಮುಖ್ಯಮಂತ್ರಿಗಳು ಮಧ್ಯ ಪವೇಶಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಗ್ಯಾರಂಟಿಗೊಳಿಸಲು ಈ ಅಧಿಸೂಚನೆಯನ್ನು ಹಿಂಪಡೆಯಲು ಶಿಕ್ಷಣ ಇಲಾಖೆಗೆ ಸೂಚಿಸಬೇಕು” ಎಂದು ಪಾಫ್ರೆ ಒತ್ತಾಯಿಸಿದೆ.




