ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಎನ್ನುವುದು ವಿಲಕ್ಷಣ ಪ್ರಯೋಗಗಳ ವೇದಿಕೆಯಾಗಿ ಬದಲಾಗುತ್ತಿದೆ. ಇದಕ್ಕೆ ತಕ್ಕ ಉದಾಹರಣೆ, ಜಗತ್ಪ್ರಸಿದ್ಧ ಐಷಾರಾಮಿ ಬ್ರ್ಯಾಂಡ್ ‘ಬಾಲೆನ್ಸಿಯಾಗ’ (Balenciaga) ಪರಿಚಯಿಸಿದ್ದ ಹ್ಯಾಂಡ್‌ಬ್ಯಾಗ್. ಈ ಬ್ಯಾಗ್ ನೋಡಲು ನಾವು ನಿತ್ಯ ರಸ್ತೆಬದಿಯಲ್ಲಿ ಕಾಣುವ ಸಾಮಾನ್ಯ ಪ್ಲಾಸ್ಟಿಕ್ ಕಸದ ಚೀಲದಂತೆಯೇ (Trash Bag) ಕಾಣುತ್ತದೆ. ಹಾಗಾಗಿ ಇನ್ನುಮುಂದೆ ಯಾರಾದರೂ ನಿಮ್ಮನ್ನ ʼನೀನೊಂದು ಕಸʼ ಅಥವಾ ʼನೀನೋಂದು ವೇಸ್ಟ್ʼ ಎಂದರೆ ಖುಷಿ ಪಡಿ!
ಬಾಲೆನ್ಸಿಯಾಗದ ಕ್ರಿಯೇಟಿವ್ ಡೈರೆಕ್ಟರ್ ‘ಡೆಮ್ನಾ’ ಅವರು ಈ ವಿಲಕ್ಷಣ ಬ್ಯಾಗ್‌ಗೆ ಟ್ರ್ಯಾಶ್ ಪೌಚ್ʼ (Trash Pouch) ಎಂದೇ ಹೆಸರಿಟ್ಟಿದ್ದಾರೆ. ಇದು ಸಾಮಾನ್ಯ ಕಸದ ಚೀಲದಿಂದಲೇ ಪ್ರೇರಿತವಾಗಿದೆ ಎಂದು ಅವರೇ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಈ ಬ್ಯಾಗ್‌ಗಳು ನೀಲಿ, ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿವೆ. ಮೇಲ್ನೋಟಕ್ಕೆ ಪ್ಲಾಸ್ಟಿಕ್‌ನಂತೆ ಕಂಡರೂ, ಇವುಗಳನ್ನು ಅತ್ಯಂತ ಮೃದುವಾದ ಕರುವಿನ ಚರ್ಮದಿಂದ (calfskin leather) ತಯಾರಿಸಲಾಗುತ್ತದೆ. ಇದಕ್ಕೆ ಹೊಂದುವ ಸ್ಟ್ರಾಪ್ ಕೂಡ ನೀಡಲಾಗಿದೆ. ಈ ‘ಐಷಾರಾಮಿ ಕಸದ ಚೀಲ’ದ ಬೆಲೆ ಬರೋಬ್ಬರಿ $1,790 (ಸುಮಾರು ₹1.65 ಲಕ್ಷಕ್ಕೂ ಅಧಿಕ).


“ವಿಶ್ವದ ಅತ್ಯಂತ ದುಬಾರಿ ಕಸದ ಚೀಲವನ್ನು ತಯಾರಿಸುವ ಅವಕಾಶವನ್ನು ನಾನು ಹೇಗೆ ತಾನೆ ಬಿಟ್ಟುಕೊಡಲಿ? ಯಾಕೆಂದರೆ ಫ್ಯಾಷನ್ ಜಗತ್ತಿನಲ್ಲಿ ವಿವಾದಗಳನ್ನು ಯಾರು ತಾನೇ ಇಷ್ಟಪಡುವುದಿಲ್ಲ?” ಎನ್ನುತ್ತಾರೆ ಡೆಮ್ನಾ.
ಬಾಲೆನ್ಸಿಯಾಗ ಇಂತಹ ವಿಚಿತ್ರ ಉತ್ಪನ್ನಗಳ ಮೂಲಕ ವಿಲಕ್ಷಣ ಪ್ರಯೋಗಕ್ಕೆ ಕೈ ಹಾಕುವುದು ಇದೇ ಮೊದಲಲ್ಲ. ಈ ಹಿಂದೆ ಸೀಳು ಬಿಟ್ಟಂತಿರುವ ಪ್ಯಾರಿಸ್ ಸ್ನೀಕರ್ಸ್ (1.71 ಲಕ್ಷ), ಏಳು ಪದರಗಳ ಭಾರಿ ಗಾತ್ರದ ಜಾಕೆಟ್ (8.31 ಲಕ್ಷ), ವಿಚಿತ್ರ ವಿನ್ಯಾಸದ ಶೂ ಮತ್ತು ಚಿಪ್ಸ್ ಬ್ಯಾಗ್ (1.89 ಲಕ್ಷ) ಮೂಲಕ ಈ ಬ್ರ್ಯಾಂಡ್ ಮೇಲಿಂದ ಮೇಲೆ ಸುದ್ದಿಯಾಗುತ್ತಲೇ ಇರುತ್ತದೆ. ಕಸದ ಚೀಲಕ್ಕೆ ನೆಟ್ಟಿಗರು ಕಮೆಂಟ್ ಮಾಡಿರುವ ರೀತಿಯೂ ಸಕ್ಕತ್ ತಮಾಷೆಯಾಗಿದೆ. “ಇದು ಮಿತಿ ಮೀರುತ್ತಿದೆ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, “ಇದನ್ನು ಯಾರು ಖರೀದಿಸುತ್ತಾರೋ, ಅವರನ್ನೇ ಇದರಲ್ಲಿ ಹಾಕಿ ಹೊರಗೆ ಎಸೆಯಬೇಕು” ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. “ಬಾಲೆನ್ಸಿಯಾಗ ಎಂಬುದು ಜನರ ಬುದ್ಧಿಶಕ್ತಿಯನ್ನು ಪರೀಕ್ಷಿಸುವ ಒಂದು ಸಾಮಾಜಿಕ ಪ್ರಯೋಗ, ನೀವೆಲ್ಲರೂ ಅದರಲ್ಲಿ ಸೋಲುತ್ತಿದ್ದೀರಿ” ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: ಪ್ರೀಮಿಯಂ ಲೇಖನ | ರಾಹುಲ್ ಗಾಂಧಿ ಎಂಬ ಬೆಂಕಿಯ ಚೆಂಡು



ಅಂತಿಮವಾಗಿ, ಈ ‘ಟ್ರ್ಯಾಶ್ ಪೌಚ್’ ಎಂಬುದು ಬಾಲೆನ್ಸಿಯಾಗದ ಪ್ರತಿಭೆಯೇ? ಅಥವಾ ಉಚಿತ ಮಾರ್ಕೆಟಿಂಗ್ ಪಡೆಯುವ ತಂತ್ರವೇ? ಎಂಬ ಪ್ರಶ್ನೆ ಕಾಡುವುದು ಸಹಜ. ದಿನ ನಿತ್ಯ ಬಳಸುವ ಫ್ಯಾಷನ್ ಅಲ್ಲದ ಸಣ್ಣ ಪುಟ್ಟ ವಸ್ತುಗಳನ್ನ ಫ್ಯಾಷನ್ ಆಗಿ ಪರಿವರ್ತಿಸುವ ಅವರ ಉದ್ದೇಶ ನಿಜಕ್ಕೂ ಅಚ್ಚರಿ. ಬಾಲೆನ್ಸಿಯಾಗ ಬ್ರ್ಯಾಂಡ್‌ನ ಯಾವುದೇ ಫ್ಯಾಷನ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ಹಾಗೂ ಲೇವಡಿಗೆ ಒಳಗಾದರೂ ಅದರ ಮಾರಾಟ ಮಾತ್ರ ಕಡಿಮೆಯಾಗಿಲ್ಲ ಎನ್ನುವುದು ಇನ್ನೊಂದು ದೊಡ್ಡ ವಿಚಿತ್ರ!





