ಜಗತ್ತಿನ ಸಂತುಷ್ಟ ದೇಶಗಳ ಪಟ್ಟಿಯಲ್ಲಿ ಫಿನ್ಲೆಂಡ್ ಮೊದಲ ಸ್ಥಾನದಲ್ಲಿದೆ ಸತತ 9 ವರ್ಷಗಳಿಂದ ಈ ರಾಷ್ಟ್ರ ಅಗ್ರ ಸ್ಥಾನದಲ್ಲಿದೆ. ಉಳಿದ ನಾರ್ಡಿಕ್ ರಾಷ್ಟ್ರಗಳಾದ ಡೆನ್ಮಾರ್ಕ್, ನಾರ್ವೆ, ಐಸ್‌ಲ್ಯಾಂಡ್ ದೇಶಗಳು ಸಹ ಈ ಸಮೀಕ್ಷೆಯಲ್ಲಿ ಪೈಪೋಟಿಯ ಸ್ಥಾನ ಕಾಯ್ದುಕೊಂಡಿವೆ. ಇನ್ನೂ ಕೊನೆಯ ಸ್ಥಾನದಲ್ಲಿ ಅಫ್ಘಾನ್, ಮಲಾವಿಯಾ, ಜಿಂಬಾಬ್ವೆ, ಈಜಿಪ್ಟ್ ದೇಶಗಳಿವೆ. ಕೆನಡ, ಯುಎಸ್ , ಆಸ್ಟ್ರೇಲಿಯಾ ದೇಶಗಳು ಕಳೆದ ಒಂದು ದಶಕದಿಂದ ಜಾಗತಿಕ ಸಂತುಷ್ಟತೆಯ ಪಟ್ಟಿಯಲ್ಲಿ ಇಳಿಮುಖ ಕಂಡಿವೆ.
ಅತಿಯಾದ ಸೋಷಿಯಲ್ ಮೀಡಿಯ ಬಳಕೆಯು ಯುವಕರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಾಮಾಜಿಕ ಜಾಲತಾಣಗಳ ಗೀಳು ಹದಿಹರೆಯದವರ ಜೀವನ ಶೈಲಿಯನ್ನು ಕೆಟ್ಟ ರೀತಿಯಲ್ಲಿ ಪ್ರಭಾವಿಸುತ್ತಿದೆ ಎಂದು ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಅಧ್ಯಯನ ತಿಳಿಸಿದೆ.
ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಒಟ್ಟು 147 ರಾಷ್ಟ್ರಗಳಲ್ಲಿ ಭಾರತ 116 ನೇ ಸ್ಥಾನದಲ್ಲಿದೆ. ಭಾರತದ ಜಾಗತಿಕ ಸಂತುಷ್ಟತೆಯ ಮಟ್ಟವು ಪ್ರತಿವರ್ಷದ ಸಮೀಕ್ಷೆಯಲ್ಲೂ ನೂರರ ನಂತರದ ಸ್ಥಾನದಲ್ಲೇ ಇದೆ. ಕಳೆದ ವರ್ಷ 118 ನೇ ಸ್ಥಾನದಲ್ಲಿದ್ದು ಈ ಬಾರಿ 2 ಅಂಕಿಗಳ ಏರಿಕೆ ಕಂಡಿದೆ.

ಜಾಗತಿಕ ಸಂತೋಷ ಅಳೆಯುವುದು ಯಾರು ಮತ್ತು ಹೇಗೆ?
ಆಕ್ಸಫರ್ಡ್ ಯೂನಿವರ್ಸಿಟಿ ಕೈಗೊಳ್ಳುವ ವೆಲ್ ಬೀಯಿಂಗ್ ಸಂಶೋಧನ ತಂಡವು ಈ ವರದಿಯನ್ನು ಬಿಡುಗಡೆ ಮಾಡಿದೆ.
ಜಾಗತಿಕ ಸಂತುಷ್ಟ ವರದಿ (World Happiness Report) ದೇಶಗಳ ಸಂತೋಷವನ್ನು ಮುಖ್ಯವಾಗಿ ಗ್ಯಾಲಪ್ ವರ್ಡ್ ಪೋಲ್ ದತ್ತಾಂಶಗಳ ಆಧಾರದ ಮೇಲೆ ಅಳೆಯುತ್ತದೆ. ಇದು 6 ಪ್ರಮುಖ ಅಂಶಗಳನ್ನು ಪರಿಗಣಿಸುತ್ತದೆ: ತಲಾ ಜಿಡಿಪಿ, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಜೀವನದ ಆಯ್ಕೆಗಳಲ್ಲಿ ಸ್ವಾತಂತ್ರ್ಯ, ಉದಾರ ಮನೋಭಾವ ಮತ್ತು ಭ್ರಷ್ಟಾಚಾರದ ಮಟ್ಟ.
ಸಂತೋಷವನ್ನು ನಿರ್ಧರಿಸುವ ಮಾನದಂಡಗಳು ಯಾವುವು?
- ಜಿಡಿಪಿ ತಲಾ ಆದಾಯ ದೇಶದ ಆರ್ಥಿಕ ಸಮೃದ್ಧಿ. ಒಂದು ದೇಶದ ಆರ್ಥಿಕ ಭದ್ರತೆ ದೇಶದ ಜನರ ಉತ್ತಮ ಜೀವಿತಕ್ಕೆ ಪುಷ್ಟಿ ಕೊಡುತ್ತದೆ. ಹಾಗಾಗಿ ತಲಾ ಆದಾಯವನ್ನು ಈ ಸಮೀಕ್ಷೆಯ ಮುಖ್ಯ ಅಂಶವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
- ಸಾಮಾಜಿಕ ಬೆಂಬಲ ಕಷ್ಟದ ಸಮಯದಲ್ಲಿ ಸಹಾಯ ಮಾಡುವ ಸ್ನೇಹಿತರು/ಕುಟುಂಬದ ಲಭ್ಯತೆ ಜೊತೆಗೆ ಸಾಮಾಜಿಕ ಸಂರಚನೆಯನ್ನು ಸಮೀಕ್ಷೆಗೆ ಒಳಪಡಿಸುತ್ತಾರೆ.
- ಉತ್ತಮ ಜೀವಿತಾವಧಿ ಜನರ ಆರೋಗ್ಯ ಮತ್ತು ಆಯುಷ್ಯ.ದೇಶದ ಜನರ ಆರೋಗ್ಯ ಸ್ಥಿತಿಗತಿ ಹಾಗೂ ಜೀವಿತಾವಧಿಯ ಲೆಕ್ಕ ಹಾಕಲಾಗುತ್ತದೆ.
- ಸ್ವಂತ ನಿರ್ಧಾರದ ಸ್ವಾತಂತ್ರ್ಯ ಜೀವನದಲ್ಲಿ ಇಷ್ಟ ಬಂದದ್ದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ.
- ಉದಾರತೆ ರಾಷ್ಟ್ರದ ಜನರ ಉದಾರ ಮನೋಭಾವವನ್ನು ಸಂಶೋಧನೆಗೆ ಒಳಪಡಿಸಿ ಅವರಿಗಿರುವ ದಾನ ಮಾಡುವ ಪ್ರವೃತ್ತಿಯನ್ನು ಪರಿಗಣಿಸಲಾಗುತ್ತದೆ.
- ಭ್ರಷ್ಟಾಚಾರದ ಗ್ರಹಿಕೆ ಸರ್ಕಾರದ ವ್ಯವಹಾರಗಳಲ್ಲಿನ ಪಾರದರ್ಶಕತೆ ಹಾಗೂ ಭ್ರಷ್ಟಾಚಾರದ ಕುರಿತ ಅರಿವು ಇರುವ ದೇಶಗಳು ಸಂತೋಷಮಯ ರಾಷ್ಟ್ರಗಳ ಸರಣಿಯಲ್ಲಿ ಮೊದಲಿರುತ್ತದೆ.





