ಮಾಹಿತಿ ಹಕ್ಕು ಕಾಯ್ದೆ-2005ರಡಿ ಸಾರ್ವಜನಿಕ ಪ್ರಾಧಿಕಾರಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಕಣ್ಗಾವಲು ಇಡಬೇಕಾದ ‘ಕರ್ನಾಟಕ ರಾಜ್ಯ ಮಾಹಿತಿ ಆಯೋಗ’ವೇ ಇದೀಗ ಮಾಹಿತಿ ನೀಡಲು ಹಿಂದೇಟು ಹಾಕಿದೆ. ಆರ್‌ಟಿಐ ಬಳಕೆದಾರರಾದ ಪಿ. ದೀಪ ಅವರು ಸಲ್ಲಿಸಿದ್ದ ಅರ್ಜಿಗೆ ಆಯೋಗವು ‘ಗೌಪ್ಯತೆ’ಯ ನೆಪವೊಡ್ಡಿರುವುದು, ಆಡಳಿತ ವ್ಯವಸ್ಥೆ ಮತ್ತು ಆಯೋಗದ ಕಾರ್ಯಕ್ಷಮತೆಯ ಬಗ್ಗೆ ಗಂಭೀರ ಚರ್ಚೆ ಹಾಗೂ ಮಾತುಕತೆಗೆ ಗ್ರಾಸವಾಗಿದೆ.
ಪಿ. ದೀಪ ಅವರು ಮಾಹಿತಿ ಹಕ್ಕು ಅಧಿನಿಯಮದ ಕಲಂ 25ರ ಅಡಿ ಆಯೋಗದ ಕರ್ತವ್ಯಗಳ ಅನುಷ್ಠಾನದ ಕುರಿತು ಸ್ಪಷ್ಟ ಮಾಹಿತಿಯನ್ನು ಕೋರಿದ್ದರು. ಪ್ರತಿ ವರ್ಷ ಆಯೋಗವು ಮಾಹಿತಿ ಹಕ್ಕು ಕಾಯ್ದೆಯ ಅನುಷ್ಠಾನದ ಕುರಿತು ವಾರ್ಷಿಕ ವರದಿಯನ್ನು ಸಿದ್ಧಪಡಿಸಿ, ಸಮುಚಿತ ಸರ್ಕಾರಕ್ಕೆ ಸಲ್ಲಿಸಬೇಕು. ನಂತರ ಸರ್ಕಾರವು ಅದನ್ನು ಉಭಯ ಸದನಗಳಲ್ಲಿ (ವಿಧಾನಸಭೆ ಮತ್ತು ವಿಧಾನಪರಿಷತ್) ಮಂಡಿಸುವುದು ಕಡ್ಡಾಯ.
ಈ ನಿಯಮದ ಆಧಾರದ ಮೇಲೆ, 2023-24ನೇ ಸಾಲು ಹಾಗೂ 2024-25ನೇ ಸಾಲಿನ ವಾರ್ಷಿಕ ವರದಿ ಸಿದ್ಧವಾಗಿದೆಯೇ? ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆಯೇ? ಎಂಬ ಸಂಪೂರ್ಣ ಮಾಹಿತಿಯನ್ನು ದೀಪ ಪ್ರತಿ ವರ್ಷದ ವರದಿಗಳನ್ನು ಪ್ರತ್ಯೇಕವಾಗಿ ಕೇಳಿದ್ದರು. ಈ ಅರ್ಜಿಗೆ ಪ್ರತಿಕ್ರಿಯಿಸಿದ ಮಾಹಿತಿ ಆಯೋಗದ ಅಧೀನ ಕಾರ್ಯದರ್ಶಿಯವರು ಸಿದ್ಧ ಹಿಂಬರಹ ನೀಡಿದ್ದಾರೆ.
”ವಾರ್ಷಿಕ ವರದಿಯನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಿದ್ಧಪಡಿಸಲಾಗಿದೆ. ಕಲಂ 25(4)ರ ಅನ್ವಯ ಇದನ್ನು ಉಭಯ ಸದನಗಳಲ್ಲಿ ಮಂಡಿಸಬೇಕಿದೆ. ಇದಕ್ಕಾಗಿ ತಲಾ 20 ಪುಸ್ತಕಗಳು ಮತ್ತು ವರದಿಯ ವಿವರಗಳಿರುವ 275 ಸಿಡಿಗಳನ್ನು ಸಂಬಂಧಿತ ಇಲಾಖೆಗೆ ಕಳುಹಿಸಲಾಗಿದೆ. ಈ ವರದಿಯನ್ನು ಸದನದಲ್ಲಿ ಮಂಡಿಸುವವರೆಗೆ ಗೌಪ್ಯತೆಯನ್ನು ಕಾಪಾಡುವಂತೆ ಸೂಚಿಸಲಾಗಿದೆ” ಎಂದು ತಿಳಿಸುವ ಮೂಲಕ ಮಾಹಿತಿಯನ್ನು ನಿರಾಕರಿಸಲಾಗಿದೆ.
ಆಯೋಗದ ಈ ಅಸ್ಪಷ್ಟ ಹಾಗೂ ಹಾರಿಕೆಯ ಉತ್ತರದಿಂದ ಅಸಮಾಧಾನಗೊಂಡ ಪಿ. ದೀಪ ಅವರು, ಆಯೋಗದ ದುರ್ನಡತೆ ಕುರಿತು ಮೇಲ್ಮನವಿ ಸಲ್ಲಿಸಿದ್ದು, ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅರ್ಜಿಗೆ ಸ್ಪಷ್ಟವಾದ ದಾಖಲೆಗಳನ್ನು ನೀಡಲಾಗಿಲ್ಲ. ಜೊತೆಗೆ ನೀಡಲಾದ ಓದಿಕೆ ಪತ್ರ ಮತ್ತು ಲಗತ್ತಿಸಿರುವ ಪ್ರತಿಗಳು ಸಂಪೂರ್ಣ ಅಸ್ಪಷ್ಟವಾಗಿವೆ. ಇತ್ತೀಚೆಗೆ ಆಯೋಗದ ಆದೇಶಗಳು ಏಕಪಕ್ಷೀಯವಾಗುತ್ತಿವೆ. ಇದರಿಂದಾಗಿ ಇತರ ಸಾರ್ವಜನಿಕ ಪ್ರಾಧಿಕಾರಗಳಿಗೆ ಆಯೋಗದ ಬಗ್ಗೆ ಭಯವೇ ಇಲ್ಲದಂತಾಗಿದೆ. ಆಯೋಗವು ತಪ್ಪು ಅಥವಾ ನಕಲಿ ಮಾಹಿತಿಯನ್ನು ನೀಡುತ್ತಿರುವ ಶಂಕೆ ಇದೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಮಾಹಿತಿ ಆಯೋಗದ ಇಂತಹ ದುರ್ಬಲ ಹಾಗೂ ಅಪಾರದರ್ಶಕ ನಿರ್ಧಾರಗಳೇ ಮುಖ್ಯ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿ ಹಕ್ಕು ಕಾಯ್ದೆಯ ಕಲಂ 25 ಅತ್ಯಂತ ಮಹತ್ವದ ವಿಧಿಯಾಗಿದೆ. ಇದರಲ್ಲಿ ಸಾರ್ವಜನಿಕ ಪ್ರಾಧಿಕಾರಗಳಿಂದ ಮಾಹಿತಿ ಸಂಗ್ರಹಿಸಿ, ಕಾಯ್ದೆಯ ಅನುಷ್ಠಾನದ ಸ್ಥಿತಿ (ಸ್ವೀಕರಿಸಿದ ಅರ್ಜಿಗಳು, ನಿರಾಕರಿಸಿದ ಪ್ರಕರಣಗಳು, ವಿಧಿಸಿದ ದಂಡ ಇತ್ಯಾದಿ) ಕುರಿತು ವರದಿ ತಯಾರಿಸುವುದು ಆಯೋಗದ ಕರ್ತವ್ಯ. ಕಾನೂನು ತಜ್ಞರ ಪ್ರಕಾರ, ವರದಿಯನ್ನು ಸದನದಲ್ಲಿ ಮಂಡಿಸುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕೆಲವು ಆಡಳಿತಾತ್ಮಕ ಗೌಪ್ಯತೆ ಪಾಲಿಸುವ ಪದ್ಧತಿ ಇರಬಹುದು. ಆದರೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ಪಾರದರ್ಶಕತೆಯೇ ಈ ಕಾಯ್ದೆಯ ಮೂಲ ಉದ್ದೇಶ ವಾಗಿರುವುದರಿಂದ, ಸಾರ್ವಜನಿಕರಿಗೆ ಸೇರಬೇಕಾದ ವರದಿಯನ್ನು ಸಂಪೂರ್ಣವಾಗಿ ತಡೆಹಿಡಿಯುವುದು ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿದೆ.
ಇದನ್ನೂ ಓದಿ: ಬೆಂಗಳೂರು | ಹಾರ್ನ್ ವಿಚಾರ: ವೃದ್ಧನ ಮೇಲೆ ಅಮಾನುಷವಾಗಿ ಹಲ್ಲೆಗೈದ ಆರೋಪಿ ಬಂಧನ
ಕರ್ನಾಟಕದಲ್ಲಿ ಕಾಯ್ದೆಯ ಕಲಂ 25 ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಈ ವೈಫಲ್ಯಕ್ಕೆ ಯಾರು ಹೊಣೆ ಎಂಬುದರ ಬಗ್ಗೆ ಕರ್ನಾಟಕ ಲೋಕಾಯುಕ್ತದಿಂದ ಸಂಪೂರ್ಣ ತನಿಖೆಯಾಗಬೇಕು ಎಂದು ದೀಪ ಅವರು ಆಗ್ರಹಿಸಿದ್ದಾರೆ. ಒಂದು ಸರಳ ಮಾಹಿತಿಗಾಗಿ ಸಾಮಾನ್ಯ ನಾಗರಿಕರು ಮೇಲ್ಮನವಿ, ಮಾಹಿತಿ ಆಯೋಗದ ಮೆಟ್ಟಿಲೇರಿ, ಕೊನೆಗೆ ಹೈಕೋರ್ಟ್‌ನ ಬಾಗಿಲು ತಟ್ಟಬೇಕಾದ ಅನಿವಾರ್ಯತೆ ರಾಜ್ಯದಲ್ಲಿ ನಿರ್ಮಾಣವಾಗಿರುವುದು ನಿಜಕ್ಕೂ ದುರಂತ. ಕಾಯ್ದೆಯನ್ನು ರಕ್ಷಿಸಬೇಕಾದ ಆಯೋಗವೇ ಹೀಗೆ ವರ್ತಿಸಿದರೆ, ನ್ಯಾಯಕ್ಕಾಗಿ ಜನ ಸಾಮಾನ್ಯರು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಎದುರಾಗಿದೆ.





