ಕರ್ನಾಟಕ ಹೈಕೋರ್ಟ್ ನೀಡಿದ ಈ ತೀರ್ಪು ನಕಾರಾತ್ಮಕವಾದ ಬಹಳಷ್ಟು ದೂರಗಾಮಿ ಪರಿಣಾಮಗಳಿಗೆ ಸಾಕ್ಷಿಯಾಗಲಿರುವುದು ನಿಶ್ಚಿತ. ಆದರೆ ಇಂತಹ ವಿಲಕ್ಷಣ ತೀರ್ಪುಗಳು ಇಂತಹ ತಿಳಿಗೇಡಿ ಮತ್ತು ಕಿಡಿಗೇಡಿಗಳಿಗೆ ದುಷ್ಕೃತ್ಯ ಮುಂದುವರಿಸಲು ಲೈಸನ್ಸ್ ನೀಡಿದಂತಾಗಿದೆ.
ಕರ್ನಾಟಕದ ಹೈಕೋರ್ಟ್ ಮಸೀದಿಯ ಒಳಗೆ ಜೈ ಶ್ರೀರಾಮ್ ಕೂಗುವುದು ಅಪರಾಧವಲ್ಲ ಎಂದು ತೀರ್ಪು ನೀಡಿದೆ. ಸ್ವತಃ ಈ ಪ್ರಕರಣದ ಆರೋಪಿಗಳೇ ಈ ತೀರ್ಪು ಕೇಳಿ ಒಳಗೊಳಗೆ ನಗುತ್ತಿರಬಹುದು. ಬಹುಶಃ ಭಾರತೀಯ ನ್ಯಾಯಾಂಗದ ಇತಿಹಾಸದಲ್ಲೇ ಅತ್ಯಂತ ವಿಚಿತ್ರ ತೀರ್ಪು ಇದು. ಕಾರಣಗಳೇ ಇಲ್ಲದೆ ಭಾರತದಲ್ಲಿ ಕೋಮುಗಲಭೆಗಳು ಸಾಮಾನ್ಯವಾಗಿ ಬಿಟ್ಟಿದೆ. ಈಗಂತೂ ಈ ತೀರ್ಪಿನಿಂದ ಪ್ರೇರಿತವಾಗಿ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸುವ ಮುನ್ಸೂಚನೆ ತೋರುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮುಂದೆ ಹಲವಾರು ಪ್ರಶ್ನೆಗಳು ಎದ್ದಿವೆ. ಗಣೇಶ ಚತುರ್ಥಿಯ ದಿನ ಪ್ರಧಾನಮಂತ್ರಿಯೇ ಈ ದೇಶದ ಮುಖ್ಯ ನ್ಯಾಯಮೂರ್ತಿ ಮನೆಗೆ ಭೇಟಿ ನೀಡಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದು ನ್ಯಾಯಾಂಗ ಮತ್ತು ಆಡಳಿತದ ವರ್ಗದವರ ಗಳಸ್ಯ ಕಂಠಸ್ಯತನವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಇಂತಹ ನಡತೆಗಳಿಂದ ನ್ಯಾಯಾಂಗದ ವಿಶ್ವಾಸಾರ್ಹತೆಗೆ ತೀವ್ರ ದಕ್ಕೆ ಬಂದಿರುವುದು ಸುಳ್ಳಲ್ಲ. ಭಾರತದ ಅಲ್ಪಸಂಖ್ಯಾತರ ಮಟ್ಟಿಗೆ ಅಕ್ಷರಶಃ ನ್ಯಾಯಾಂಗವೆಂಬ ಬೇಲಿಯೇ ತನ್ನ ಹೊಲವನ್ನು ಮೇಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ಧರ್ಮಗಳಿಂದ ಪ್ರೇರಿತವಾದ ರಾಜಕಾರಣವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸುವುದು ನ್ಯಾಯಾಲಯಗಳೇ ಆಗಿವೆ..
ಆದರೆ ಕರ್ನಾಟಕ ಹೈಕೋರ್ಟ್ ನೀಡಿದ ಈ ತೀರ್ಪು ನಕಾರಾತ್ಮಕವಾದ ಬಹಳಷ್ಟು ದೂರಗಾಮಿ ಪರಿಣಾಮಗಳಿಗೆ ಸಾಕ್ಷಿಯಾಗಲಿರುವುದು ನಿಶ್ಚಿತ. ಕಾನೂನಿನಲ್ಲಿರುವ ಉತ್ತಮ ಅಂಶಗಳನ್ನು ದುರ್ಬಳಕೆ ಮಾಡಿಕೊಂಡು ಸಮಾಜಘಾತಕ ಶಕ್ತಿಗಳು ಸೌಹಾರ್ದಯುತವಾದ ವಾತಾವರಣಗಳನ್ನು ಕೆಡಿಸುತ್ತಿರುವುದು ನಾವೆಲ್ಲ ನೋಡುತ್ತಿದ್ದೇವೆ. ಆದರೆ ಇಂತಹ ವಿಲಕ್ಷಣ ತೀರ್ಪುಗಳು ಇಂತಹ ತಿಳಿಗೇಡಿ ಮತ್ತು ಕಿಡಿಗೇಡಿಗಳಿಗೆ ದುಷ್ಕೃತ್ಯ ಮುಂದುವರಿಸಲು ಲೈಸನ್ಸ್ ನೀಡಿದಂತಾಗಿದೆ.
ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೇಸ್ ರದ್ದು; ಸರ್ಕಾರದ ಜವಾಬ್ದಾರಿ ಏನು ?
ಈ ತೀರ್ಪು ಕೋಮುವಾದದ ವ್ಯಾಪಕ ಪ್ರಸರಣ ಮತ್ತು ಪೋಷಣೆಗೆ ಕಾರಣವಾಗಲಿದೆ ಎನ್ನುವ ವಿಚಾರ ಸಾಮಾನ್ಯ ಜ್ಞಾನಕ್ಕೆ ನಿಲ್ಲುಕುವಂಥದ್ದು. ಇಂತಹ ತೀರ್ಪುಗಳು ನ್ಯಾಯಾಂಗದ ಉನ್ನತ ಸ್ಥಾನದಲ್ಲಿರುವವರ ಪ್ರಭುದ್ಧತೆ ಮತ್ತು ಸಾಮಾಜಿಕ ಬದ್ಧತೆಯನ್ನು ಪ್ರಶ್ನಿಸುತ್ತದೆ. ಇದರಿಂದಾಗಿ ಮೊದಲೇ ಪ್ರಶ್ನೆಗಳ ಸುಳಿಯಲ್ಲಿರುವ ನ್ಯಾಯಾಂಗ ಮತ್ತೆ ತನ್ನ ಘನತೆಯನ್ನು ಕಳೆದುಕೊಳ್ಳಲಿದೆ. ತೀರ್ಪುಗಳ ಮೂಲಕ ಸಾಮಾಜಿಕ ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಪೂರಕವಾಗಬೇಕಾದ ನ್ಯಾಯಾಂಗವೇ ಹೀಗೆ ಕೋಮುವಾದಿ ಎಂದು ಕಾಣಿಸಿಕೊಳ್ಳುವುದು ದುರದೃಷ್ಟಕರ.
ಅಶ್ರಫ್ ಕುಂದಾಪುರ
ಲೇಖಕ




