ಧಾರ್ಮಿಕ ಪ್ರಭಾವ, ದೊಡ್ಡ ವೋಟ್ ಬ್ಯಾಂಕ್, ರಾಜಕೀಯ ಸಂಪರ್ಕ ಹೊಂದಿರುವ ಆರೋಪಿಗಳ ವಿಚಾರದಲ್ಲಿ ಆಡಳಿತದ ಮೃದು ಧೋರಣೆ ಸರಿಯಲ್ಲ. ಆಶ್ರಮಗಳ ಹೆಸರಲ್ಲಿ ಸ್ವೇಚ್ಛಾಚಾರ ನಡೆಸುವವರಿಗೆ, ಸ್ವಯಂಘೋಷಿತ ದೇವಮಾನವರಿಗೆ, ಜನಸಮೂಹಕ್ಕೆ ಮಂಕು ಬೂದಿ ಎರಚುವ ಮಾಟಗಾರರಿಗೆ ಒಂದು ರೀತಿಯ ಕಾನೂನು, ಸಾಮಾನ್ಯ ನಾಗರಿಕರಿಗೆ ಮತ್ತೊಂದು ರೀತಿಯ ಕಾನೂನು ತಕ್ಕುದಲ್ಲ.
ಜ್ಞಾನ, ಮಾರ್ಗದರ್ಶನ, ಮಾನವೀಯ ಮೌಲ್ಯ, ನೈತಿಕ ಜೀವನ ಪಾಠಕ್ಕೆ ಹೆಸರಾಗಿದ್ದ ʼಗುರುʼ ಎಂಬ ಪದ ಮಾತ್ರವನ್ನು ಮುಖವಾಡವಾಗಿಸಿಕೊಂಡು ಹಣಬಲದಿಂದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಭಯಾನಕ ಅರ್ಥ ಕಲ್ಪಿಸಿದ ಪ್ರಕರಣವೇ ಗುರ್ಮೀತ್ ರಾಮ್ ರಹೀಂ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣ.
ಹರಿಯಾಣದ ಸಿರ್ಸಾದಲ್ಲಿರುವ ಸುಮಾರು 700 ಎಕರೆ ವ್ಯಾಪ್ತಿಯ ಡೇರಾ ಸಚ್ಚಾ ಸೌದಾ ಹೆಸರಿನ ಸಂಸ್ಥೆಯೊಂದರ ಮುಖ್ಯಸ್ಥನಾಗಿ, ಸ್ವಯಂಘೋಷಿತ ದೇವ ಮಾನವ ಗುರ್ಮೀತ್, ಉತ್ತರ ಭಾರತದ ದೊಡ್ಡ ಶಕ್ತಿಯಾಗಿ ಬೆಳೆದ. ಮುಖ್ಯವಾಗಿ ಹರಿಯಾಣ, ಪಂಜಾಬ್, ರಾಜಸ್ತಾನ್ ರಾಜ್ಯಗಳಲ್ಲಿ ಈತನ ಪ್ರಭಾವ ಹೆಚ್ಚು. ರಾಜಸ್ಥಾನದ ಗಂಗಾ ನಗರದಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸದ ಗುರ್ಮೀತ್, 2002ರಲ್ಲಿ ಡೇರಾ ಸಚ್ಚಾದ ನೇತೃತ್ವ ಕೈಗೆತ್ತಿಕೊಂಡ. ಹಿಂದೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಆತ, ಮುಂದೆ ಡೇರಾವನ್ನು ರಾಜ್ಯದಲ್ಲೇ ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿ ಧಾರ್ಮಿಕ ಸಂಸ್ಥೆಗಳಲ್ಲೊಂದಾಗಿ ರೂಪಿಸಿಕೊಂಡುಬಿಟ್ಟ.

ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರ, ಮಾದಕವಸ್ತು ವಿರೋಧಿ ಕಾರ್ಯಕ್ರಮಗಳ ಮೂಲಕ ಸಮಾಜ ಸೇವಕನ ಮುಖವಾಡ ಧರಿಸಿದ್ದ. ಜೊತೆಗೆ ಸಿನಿಮಾ, ಸಂಗೀತ, ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ತನ್ನನ್ನು ದೇವಮಾನವ ಎಂಬಂತೆ ಬಿಂಬಿಸಿಕೊಂಡಿದ್ದ. ಆತನ ಕೈಚಳಕ ಎಷ್ಟಿತ್ತೆಂದರೆ, ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಡೇರಾ ಬೆಂಬಲಕ್ಕಾಗಿ ಮುಗಿಬೀಳುತ್ತಿದ್ದವು. 2022ರಲ್ಲಿ ಪೆರೋಲ್ (ಪೆರೋಲ್ ಎಂದರೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯನ್ನು, ಕೆಲವು ಷರತ್ತುಗಳ ಅಡಿಯಲ್ಲಿ, ವಿಶೇಷ ಕಾರಣಗಳಿಗಾಗಿ, ಪೆರೋಲ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ, ಶಿಕ್ಷೆಯ ಅವಧಿ ಮುಗಿಯುವ ಮುಂಚೆಯೇ ಬಿಡುಗಡೆ ಮಾಡುವ ಒಂದು ವ್ಯವಸ್ಥೆ. ಪೆರೋಲ್ ಷರತ್ತುಗಳನ್ನು ಉಲ್ಲಂಘಿಸಿದರೆ, ಕೈದಿಯನ್ನು ಮತ್ತೆ ಜೈಲಿಗೆ ಕಳುಹಿಸಬಹುದು) ಮೇಲೆ ಆಚೆ ಬಂದಿದ್ದ ಈ ಸ್ವಯಂ ಘೋಷಿತ ದೇವಮಾನವನನ್ನು ಭೇಟಿ ಮಾಡಲು ಹರಿಯಾಣದ ಕರ್ನಾಲ್‌ನ ಮೇಯರ್ ಮತ್ತು ಅಂದಿನ ಆಡಳಿತಾರೂಢ ಬಿಜೆಪಿಯ ನಾಯಕರು ಸೇರಿದಂತೆ ಹಲವು ರಾಜಕಾರಣಿಗಳು ಗುರ್ಮೀತ್‌ನ ಸತ್ಸಂಗದಲ್ಲಿ ಪಾಲ್ಗೊಳ್ಳಲು ಸಾಲುಗಟ್ಟಿದ್ದರು.
2002ರಲ್ಲಿ ಪಂಜಾಬ್–ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಒಂದು ಅನಾಮಧೇಯ ಪತ್ರ ತಲುಪಿತು. ಡೇರಾ ಆಶ್ರಮದೊಳಗೆ ಮಹಿಳಾ ಶಿಷ್ಯೆಯರನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ, ಗುರು ಹೆಸರಿನಲ್ಲಿ ಅವರನ್ನು ಲೈಂಕಗಿಕವಾಗಿ ಬಳಸಿಕೊಳ್ಳಲು ಒತ್ತಾಯಿಸಲಾಗುತ್ತಿದೆ, ವಿರೋಧಿಸಿದವರಿಗೆ ಜೀವ ಬೆದರಿಕೆ ಇದೆ ಎಂಬ ವಿವರಗಳು ಅದರಲ್ಲಿದ್ದವು. ಇಂತಹ ಗಂಭೀರ ಆರೋಪವನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿರಲಿಲ್ಲ. ಹೈಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ಆದೇಶಿಸಿತು.
ತನಿಖೆ ಆರಂಭವಾದರೂ ನ್ಯಾಯದ ದಾರಿ ಸುಗಮವಾಗಿರಲಿಲ್ಲ. ರಾಮ್ ರಹೀಂನ ಪ್ರಭಾವ, ಲಕ್ಷಾಂತರ ಭಕ್ತರ ಅಂಧನಿಷ್ಠೆ, ಸಾಕ್ಷಿಗಳಿಗಿದ್ದ ಜೀವ ಭಯಗಳು ಸಿಬಿಐಗೆ ದೊಡ್ಡ ಸವಾಲಾಗಿದ್ದವು. ಮಹಿಳಾ ಶಿಷ್ಯೆಯರು ಮುಂದೆ ಬಂದು ಮಾತನಾಡುವುದು ಎಂದರೆ ತಮ್ಮ ಧರ್ಮ, ಸಮಾಜ, ಜೀವನ ಎಲ್ಲವನ್ನೂ ಪಣಕ್ಕಿಡುವಂತಾಗಿತ್ತು. ಪ್ರಕರಣ ವರ್ಷಗಟ್ಟಲೆ ಕುಂಟುತ್ತಾ, ತೆವಳುತ್ತಾ ಸಾಗಿತ್ತು. ಕೊನೆಗೂ 2007ರಲ್ಲಿ ಸಿಬಿಐ, ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿ, ಗುರ್ಮೀತ್ ದೋಷಿ ಎಂದಿತ್ತು. ವಿಚಾರಣೆ ಮುಂದುವರಿದೇ ಇತ್ತು. ಧರ್ಮದ ಹೆಸರಿನಲ್ಲಿ ನಡೆದ ಅಪರಾಧದ ವಿರುದ್ಧ ಮಾತನಾಡುವುದು ಸಂತ್ರಸ್ತ ಮಹಿಳೆಯರಿಗೆ ಸುಲಭವಿರಲಿಲ್ಲ. ಆದರೆ ಕೊನೆಗೆ ನ್ಯಾಯಾಲಯದ ಮುಂದೆ ನಿಂತು ಸತ್ಯ ಹೇಳಲು ತೀರ್ಮಾನಿಸಿದರು. ಈ ಹೇಳಿಕೆಗಳೇ ಪ್ರಕರಣವನ್ನು ತೀರ್ಮಾನಿಸುವ ಪ್ರಮುಖ ಅಂಶವಾದವು.

2017ರ ಆಗಸ್ಟ್ 25ರಂದು ಹರಿಯಾಣದ ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯ ಗುರ್ಮೀತ್ ರಾಮ್ ರಹೀಂ ಸಿಂಗ್ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಘೋಷಿಸಿತು. ಅಪರಾಧಗಳು 2002ರಲ್ಲಿ ನಡೆದವು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಮೂರು ದಿನಗಳ ಬಳಿಕ ಅಂದರೆ, ಆ.28ರಂದು, ನ್ಯಾಯಾಲಯ ಪ್ರತಿ ಪ್ರಕರಣಕ್ಕೆ 10 ವರ್ಷಗಳಂತೆ ಒಟ್ಟು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತು. ಜೊತೆಗೆ ಪೀಡಿತರಿಗೆ ಪರಿಹಾರವಾಗಿ 30 ಲಕ್ಷ ರೂಪಾಯಿ ದಂಡ ವಿಧಿಸಿತು. ಈ ಪ್ರಕರಣದ ತೀರ್ಪು ಎಷ್ಟು ಪ್ರಭಾವಶಾಲಿಯಾಗಿದ್ದರೂ ಕಾನೂನನ್ನು ಮೀರಲು ಯಾರಿಗೂ ಅವಕಾಶ ಇಲ್ಲ ಎಂಬ ಸ್ಪಷ್ಟ ಸಂದೇಶ ಸಾರಿತ್ತು. ಆದರೆ, ಎಷ್ಟರಮಟ್ಟಿಗೆ? ನ್ಯಾಯಾಲಯದ ತೀರ್ಪಿನ ದಿನವೇ ಹರಿಯಾಣ, ಪಂಜಾಬ್ ಮತ್ತು ದೆಹಲಿ ಭಾಗಗಳಲ್ಲಿ ಭಾರೀ ಗಲಭೆ ಉಂಟಾಯಿತು. ರಾಮ್ ರಹೀಂನ ಬೆಂಬಲಿಗರು ರಸ್ತೆಗಿಳಿದು ಸರ್ಕಾರಿ ಕಟ್ಟಡಗಳು, ವಾಹನಗಳಿಗೆ ಬೆಂಕಿ ಹಚ್ಚಿದರು. ಪೊಲೀಸರ ಮೇಲೆ ದಾಳಿ ನಡೆಸಿದರು. ಈ ಹಿಂಸಾಚಾರದಲ್ಲಿ 40ಕ್ಕೂ ಹೆಚ್ಚು ಜನ ಅಮಾಯಕರು ಸಾವನ್ನಪ್ಪಿದರು. 300ಕ್ಕೂ ಹೆಚ್ಚು ಜನರು ಗಾಯಗೊಂಡರು. ಅಂಧಭಕ್ತಿಯು ಹೇಗೆ ಕ್ಷಣದಲ್ಲಿ ಹಿಂಸೆಯಾಗಿ ಪರಿವರ್ತನೆಯಾಗಬಹುದು ಎಂಬುದನ್ನು ದೇಶ ಕಂಡಿತು.
ಜೈಲಿನಲ್ಲಿದ್ದರೂ ರಾಮ್ ರಹೀಂ ಸುದ್ದಿಯಲ್ಲಿರುವುದರಿಂದ ಹಿಂದೆ ಬಿದ್ದಿರಲಿಲ್ಲ. 2017ರಿಂದ ಇಲ್ಲಿವರೆಗೆ 14ಕ್ಕಿಂತ ಹೆಚ್ಚು ಬಾರಿ ಪೆರೋಲ್ ಮತ್ತು ಫರ್ಲೋ (ಜೈಲಿನ ಏಕತಾನತೆ ಮುರಿಯಲು ಹಾಗೂ ಕುಟುಂಬದೊಂದಿಗೆ ಸಂಬಂಧ ಕಾಯ್ದುಕೊಳ್ಳಲು ಗರಿಷ್ಠ 14 ದಿನಗಳವರೆಗೆ ಬಿಡುಗಡೆ ಮಾಡುವ ವ್ಯವಸ್ಥೆ) ಮೇಲೆ ಈ ಮನುಷ್ಯನಿಗೆ ಜೈಲಿನಿಂದ ಹೊರ ಬರುವ ಅವಕಾಶ ಸಿಕ್ಕಿದೆ. 2023ರ ಜನವರಿಯಲ್ಲಿ 21 ದಿನ ಹಾಗೂ ನವೆಂಬರ್‌ನಲ್ಲಿ 41 ದಿನಗಳ ಪೆರೋಲ್ ನೀಡಲಾಗಿತ್ತು. 2022ರಲ್ಲೂ 40 ದಿನಗಳ ಪೆರೋಲ್‌ಗೆ ಅವಕಾಶ ಸಿಕ್ಕಿತ್ತು. ಪೆರೋಲ್ ವೇಳೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿರುವ ಆಶ್ರಮದಲ್ಲಿ ತಂಗಲಿದ್ದಾರೆ. ಜನವರಿಯಲ್ಲಿ ರಾಮ್ ರಹೀಮ್‌ಗೆ 40 ದಿನಗಳ ಪೆರೋಲ್ ನೀಡಿದ ವಿವಾದದ ಬಳಿಕ, “ಅವರು ಎಲ್ಲಾ ಕಾನೂನು ಕಾರ್ಯವಿಧಾನಗಳನ್ನು ಅನುಸರಿಸಿ ಪೆರೋಲ್ ಪಡೆಯುವುದು ಡೇರಾ ಸಚ್ಚಾ ಸೌದಾ ಮುಖ್ಯಸ್ಥರ ಹಕ್ಕು” ಎಂದು ಅಂದಿನ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸಮರ್ಥನೆ ಮಾಡಿಕೊಂಡಿದ್ದರು. ಇದೇ ಪೆರೋಲ್ ಅವಧಿಯಲ್ಲಿ ರಾಮ್ ರಹೀಮ್ ಕತ್ತಿಯಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದದ್ದು ಇನ್ನಷ್ಟು ವಿವಾದ ಹೊತ್ತಿಸಿತ್ತು.

ವಿಶೇಷವಾಗಿ ಚುನಾವಣೆಗಳ ಸಮಯದಲ್ಲಿ ಈ ಬಿಡುಗಡೆಗಳು ನಡೆದಿದ್ದರಿಂದ ದೇಶಾದ್ಯಂತ ಗಂಭೀರ ಚರ್ಚೆ ನಡೆಯಿತು. ನಡೆಯುತ್ತಲೂ ಇದೆ. ಅತ್ಯಾಚಾರ ದೋಷಿಗೆ ಇಷ್ಟು ಸಡಿಲಿಕೆ ನೀಡುವುದು ನ್ಯಾಯಸಮ್ಮತವೇ? ಇದರಲ್ಲಿ ರಾಜಕೀಯ ಲೆಕ್ಕಾಚಾರ ಇದೆಯೇ? ಎಂಬ ಪ್ರಶ್ನೆಗಳು ಕಾಡದೆ ಬಿಡವು. ಅತ್ಯಾಚಾರ ಪ್ರಕರಣ ಮಾತ್ರವಲ್ಲದೆ ತನ್ನ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಕೊಲೆಗೆ ಜೀವಾವಧಿ ಶಿಕ್ಷೆ ಹಾಗೂ 2019ರ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಹತ್ಯೆ ಪ್ರಕರಣದ ಶಿಕ್ಷೆಯನ್ನೂ ಈತ ಅನುಭವಿಸುತ್ತಿದ್ದಾನೆ.
ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳಲ್ಲಿ ದೋಷಾರೋಪಿತನಾದ ವ್ಯಕ್ತಿಗೆ, ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲೇ ಪದೇಪದೇ ಪೆರೋಲ್, ಫರ್ಲೋ, ಸಾರ್ವಜನಿಕ ಚಟುವಟಿಕೆಗಳಿಗೆ ಅವಕಾಶ ದೊರಕಿದ್ದು ಹೇಗೆ? ಕಾನೂನಿನ ಅಕ್ಷರವನ್ನಷ್ಟೇ ಮುಂದಿಟ್ಟುಕೊಂಡು ಈ ಸಡಿಲಿಕೆಗಳನ್ನು ಸಮರ್ಥಿಸಬಹುದಾದರೂ, ಇದು ನ್ಯಾಯದ ಅಪಹಾಸ್ಯವಾಗಿಯೇ ಕಾಣುತ್ತದೆ. ಸ್ತ್ರೀಪೀಡಕರ ವಿಚಾರದಲ್ಲಿ ಮಾನವೀಯತೆಯನ್ನು ನೆನಪು ಮಾಡಿಕೊಳ್ಳುವ ಆಡಳಿತ ವರ್ಗ, ಸಂತ್ರಸ್ತ ಮಹಿಳೆಯರೆಡೆಗಿನ ಮಾನವೀಯತೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಉತ್ತರ ಕೊಡುವವರಾರು?
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ, MSG 2 ಎಂಬ ಒಂದೇ ಚಿತ್ರದಲ್ಲಿ ಅತ್ಯಧಿಕ ಪಾತ್ರ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿದ ದಾಖಲೆ ಈತನ ಹೆಸರಿನಲ್ಲಿದೆ. ಈ ಚಿತ್ರದಲ್ಲಿ ಆತ ಒಟ್ಟು 43 ಪಾತ್ರ ಹಾಗೂ ಜವಾಬ್ದಾರಿಗಳನ್ನು ಸ್ವತಃ ನಿರ್ವಹಿಸಿದ್ದಾನೆ. 2016ರಲ್ಲಿ ಅತ್ಯಂತ ಜನಪ್ರಿಯ ನಟ, ನಿರ್ದೇಶಕ ಹಾಗೂ ಬರಹಗಾರ ವಿಭಾಗದಲ್ಲಿ ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆ ಸಂದರ್ಭದಲ್ಲಿ ಕೇಂದ್ರದಲ್ಲೂ, ಹರಿಯಾಣದಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಯುನಿವರ್ಸಲ್ ಲೇಬಲ್ ಅಡಿಯಲ್ಲಿ ಮ್ಯೂಸಿಕ್ ಆಲ್ಬಂಗಳನ್ನು ಕೂಡ ಬಿಡುಗಡೆ ಮಾಡಿದ್ದಾನೆ. ಆತನ ಕೊನೆಯ ಆಲ್ಬಂ ‘ಹೈವೇ ಲವ್ ಚಾರ್ಜರ್’ ಮೊದಲ ಮೂರು ದಿನಗಳಲ್ಲೇ 30 ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿದ್ದವು. ಜೊತೆಗೆ, ಆತ 100ಕ್ಕೂ ಹೆಚ್ಚು ರಾಕ್ ಶೋಗಳಲ್ಲಿ ಪ್ರದರ್ಶನ ನೀಡಿದ್ದು, ರಿಲಿಜಿಯಸ್ ರಾಕ್ ಎಂಬ ಹೊಸ ಸಂಗೀತ ಶೈಲಿಯನ್ನು ಆಧರಿಸಿ ಸಂಗೀತ ಕಾರ್ಯಕ್ರಮಗಳನ್ನೂ ನಡೆಸಿದ್ದಾನೆ. ಭಾರತೀಯ ಯೋಗ ಫೆಡರೇಷನ್ (Yoga Federation of India– YFI) ಸಂಸ್ಥೆ, ʼವಿಶ್ವ ಚಾಂಪಿಯನ್ ಯೋಗಿಗಳನ್ನು ರೂಪಿಸಿದವರುʼ ಎಂಬ ಕಾರಣ ನೀಡಿ ದ್ರೋಣಾಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನ ಕೂಡ ಮಾಡಿತ್ತು. ಅವ ಹಾಕದಿರುವ ಬಟ್ಟೆ ಇಲ್ಲ, ಮಾಡದಿರುವ ರೋಡ್ ಶೋಗಳಿಲ್ಲ. ದೇಶದ ಅತ್ಯಂತ ಪ್ರಭಾವಿಗಳಲ್ಲಿ ಆತನೂ ಒಬ್ಬ. ಇಂತಹ ಶೋಕಿವಾಲನಿಗೆ ಇರುವಷ್ಟು Z+ ಸೆಕ್ಯೂರಿಟಿ ಬಹುಸಂಖ್ಯಾತ ದೇಶವಾಸಿಗಳಿಗಿಲ್ಲ. ಬಹುಶಃ ದೇಶ ರಕ್ಷಕರಿಗೂ! ಎನ್ನುವುದು ವಿಪರ್ಯಾಸ.

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕುಲದೀಪ್ ಸಿಂಗ್ ಸೆಂಗರ್‌ನ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿದೆ. ಮೇಲ್ಮನವಿ ಬಾಕಿ ಇರುವುದರಿಂದ ಆತ ಜಾಮೀನಿನ ಮೇಲೆ ಹೊರಬಂದಿದ್ದಾನೆ. ದೇಶವನ್ನು ಬೆಚ್ಚಿಬೀಳಿಸಿದ್ದ ಹತ್ರಾಸ್ ಪ್ರಕರಣವು ಮೌನವಾಗಿ ತೆರೆಮರೆಗೆ ಸರಿದಿದೆ. ಆರೋಪಿಗಳು ಅತ್ಯಾಚಾರ ಮತ್ತು ಕೊಲೆ ಆರೋಪಗಳಿಂದ ಖುಲಾಸೆಗೊಂಡು ಈಗ ಮುಕ್ತರಾಗಿದ್ದಾರೆ. ಪ್ರಜ್ವಲ್ ರೇವಣ್ಣ ಜೈಲಿನಲ್ಲಿರಬಹುದು, ಆದರೆ ತಂದೆ ಜಾಮೀನಿನ ಮೇಲೆ ಹೊರಗಿದ್ದಾರೆ. ಏತನ್ಮಧ್ಯೆ, ಗುರ್ಮೀತ್ ರಾಮ್ ರಹೀಮ್ ಮತ್ತು ಅಸಾರಾಮ ಬಾಪು ಜೈಲುಗಳನ್ನು ತಮ್ಮ ವಿಸಿಟಿಂಗ್ ಸ್ಪಾಟ್‌ಗಳಾಗಿಸಿಕೊಂಡಿದ್ದಾರೆ. ಪೆರೋಲ್, ಮೆಡಿಕಲ್ ಎಮರ್ಜೆನ್ಸಿ ನೆಪವೊಡ್ಡಿ ತಮಗೆ ಬೇಕಾದಾಗ ಅಥವಾ ರಾಜಕೀಯ ಕ್ಯಾಲೆಂಡರ್‌ಗಳು ಬೇಡಿದಾಗಲೆಲ್ಲಾ ಹೊರಬಂದುಬಿಡುತ್ತಾರೆ. ಇಲ್ಲಿ ಶಿಕ್ಷೆ ಆದದ್ದು ಯಾರಿಗೆ? ಆಗುತ್ತಿರುವುದು ಯಾರಿಗೆ? ಆಗಬೇಕಿರುವುದು ಯಾರಿಗೆ?. ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳದ ಆರೋಪಗಳನ್ನು ಎದುರಿಸುತ್ತಿದ್ದರೂ ಆತ ಆರಾಮವಾಗಿದ್ದಾನೆ.
ಇದನ್ನೂ ಓದಿ: 10-ಮಿನಿಟ್ ಡೆಲಿವರಿ ಸಂಸ್ಕೃತಿ; ʼಕ್ವಿಕ್ ಕಾಮರ್ಸ್ʼ ಒಳಬೇಗುದಿ!
ಧಾರ್ಮಿಕ ಪ್ರಭಾವ, ದೊಡ್ಡ ವೋಟ್ ಬ್ಯಾಂಕ್, ರಾಜಕೀಯ ಸಂಪರ್ಕ ಹೊಂದಿರುವ ಆರೋಪಿಗಳ ವಿಚಾರದಲ್ಲಿ ಆಡಳಿತದ ಮೃದು ಧೋರಣೆ ಸರಿಯಲ್ಲ. ಆಶ್ರಮಗಳ ಹೆಸರಲ್ಲಿ ಸ್ವೇಚ್ಛಾಚಾರ ನಡೆಸುವವರಿಗೆ, ಸ್ವಯಂಘೋಷಿತ ದೇವಮಾನವರಿಗೆ, ಜನಸಮೂಹಕ್ಕೆ ಮಂಕು ಬೂದಿ ಎರಚುವ ಮಾಟಗಾರರಿಗೆ ಒಂದು ರೀತಿಯ ಕಾನೂನು, ಸಾಮಾನ್ಯ ನಾಗರಿಕರಿಗೆ ಮತ್ತೊಂದು ರೀತಿಯ ಕಾನೂನು ಜಾರಿಯಾಗುತ್ತಿರುವುದು ಭಾರತದಂತಹ ಸಂವಿಧಾನ ಪ್ರಧಾನ ದೇಶಗಳಿಗೆ ತಕ್ಕುದಲ್ಲ. ಸಂವಿಧಾನದ ಆಶಯಗಳಿಗೆ, ತತ್ವಗಳಿಗೆ ಇಂತಹ ಪ್ರಕರಣಗಳು ನೇರ ಸವಾಲು ಎಸೆಯುತ್ತಿವೆ. ಕೊಲೆಗಾರ, ಅತ್ಯಾಚಾರಿ ಎಂದು ಸಾಬೀತಾಗಿ ಶಿಕ್ಷೆ ಅನುಭವಿಸುವ ಈತನನ್ನು ಜನ ಈಗಲೂ ಫೋಟೋ ಇಟ್ಟು ಪೂಜಿಸುತ್ತಾರೆಂದರೆ ನಮ್ಮ ಸಮಾಜ ಸಾಗುತ್ತಿರುವುದೆತ್ತ?

ಇಂತಹ ಪ್ರಕರಣಗಳ ನಡುವೆ, ಬಿಲ್ಕಿಸ್ ಬಾನೋ ಅತ್ಯಾಚಾರಿಗಳಿಗೆ ನೀಡಲಾದ ವಿನಾಯಿತಿಯನ್ನು ರದ್ದುಗೊಳಿಸಿದ ಮತ್ತು ರಾಜ್ಯ ಅಧಿಕಾರದ ದುರುಪಯೋಗವನ್ನು ಖಂಡಿಸಿದ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರಂತಹ ನ್ಯಾಯಾಧೀಶರು ನಮ್ಮಲ್ಲಿ ಭರವಸೆಯ ಬೆಂಕಿ ಕಿಡಿಯೊಂದನ್ನು ಅಂಟಿಸುತ್ತಾರೆ. ದೇಶದಲ್ಲಿ ಇಂತಹ ನಡೆಗಳು ಹೆಚ್ಚಾಗಬೇಕಿರುವುದು ಇಂದಿನ ತುರ್ತು.





