ಭಾರತದ ರಸ್ತೆಗಳು, ನಗರಗಳು ಮತ್ತು ಗ್ರಾಮಗಳು ಯಾವಾಗಲೂ ಅನ್ಯಾಯದ ವಿರುದ್ಧದ ಪ್ರತಿಭಟನೆಗಳಿಗೆ ಸಾಕ್ಷಿಯಾಗಿವೆ. 2012 ರ ಡಿಸೆಂಬರ್‌ನಲ್ಲಿ ದೆಹಲಿಯ ಚಲಿಸುತ್ತಿದ್ದ ಬಸ್ಸೊಂದರಲ್ಲಿ ನಿರ್ಭಯಾ ಮೇಲೆ ಭೀಕರ ಸಾಮೂಹಿಕ ಅತ್ಯಾಚಾರ ನಡೆಯಿತು. ಈ ನೀಚ ಕೃತ್ಯವನ್ನು ನೆನಪಿಸುವ ಹೀನಾತಿಹೀನ ಕೃತ್ಯಗಳು ದೇಶದಲ್ಲಿ ನಡೆಯುತ್ತಲೇ ಇರುತ್ತವೆ. ಬಿಜೆಪಿ ನಾಯಕನಾಗಿದ್ದ ಉತ್ತರಪ್ರದೇಶದ ಅತ್ಯಾಚಾರಿ ಕುಲದೀಪ್ ಸೆಂಗರ್ ನ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿರುವ ಕಳವಳಕಾರಿ ಬೆಳವಣಿಗೆ ಜರುಗಿದೆ.
ನಿರ್ಭಯಾ ಪ್ರಕರಣ ಕೇವಲ ಒಂದು ಘಟನೆಯಾಗಿ ಉಳಿಯದೆ ದೇಶದ ಆತ್ಮವನ್ನು ಜಾಗೃತಗೊಳಿಸಿತ್ತು. ಪ್ರತಿಭಟನೆ ಕಂಡ ರಸ್ತೆಗಳು ಕಡುಕೋಪದಲ್ಲಿ ಕನಲಿದ್ದವು. ಯುವಕರು, ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು ಎಲ್ಲರೂ ಬೀದಿಗಿಳಿದು, “ನ್ಯಾಯ ಬೇಕು, ಸುರಕ್ಷತೆ ಬೇಕು” ಎಂದು ದನಿಯೆತ್ತಿದ್ದರು. ಮೋಂಬತ್ತಿಗಳ ಹಚ್ಚಿ, ಪ್ಲೇ ಕಾರ್ಡ್‌ಗಳು ಎತ್ತಿ ಹಿಡಿದು, ರಾತ್ರಿಯವರೆಗೂ ಪ್ರತಿಭಟಿಸಿದ್ದರು. ಇಂದು ಕಂಡು ಬರುತ್ತಿರುವ ನಿಶ್ಚೇತನದ ಭಾರತ 2012ರ ಅದೇ ಅದೇ ಎಚ್ಚೆತ್ತಿದ್ದ ಭಾರತವೇ ಎಂದು ಅನುಮಾನ ಹುಟ್ಟುವಂತೆ ಮಾಡಿದೆ ಮೊನ್ನೆ ನಡೆದ ಒಂದು ಬೆಳವಣಿಗೆ.

ಆಗ 2012ರಲ್ಲಿ ನಿರ್ಭಯಾ ಅತ್ಯಾಚಾರ-ಅಮಾನುಷ ಹಿಂಸೆ- ಸಾವಿನ ವಿರುದ್ಧ ಭುಗಿಲೆದ್ದ ಕ್ರೋಧದ ರೋಷಾಗ್ನಿಯಲ್ಲಿ ಸರ್ಕಾರಗಳೇ ಬೆಂದು ಹೋಗಿದ್ದವು. ಹೊಸ ಕಾನೂನು ಕಾಯಿದೆ ಜಾರಿಗೆ ಬಂದವು. ಅಪರಾಧಿಗಳಿಗೆ ಶಿಕ್ಷೆ ಘೋಷಣೆ ಆಯ್ತು. ಗಲ್ಲಿಗೇರಿಸಲಾಯಿತು. ಆದರೆ ಇಂದು ಏನಾಗಿದೆ? 2017 ರಲ್ಲಿ ಉತ್ತರ ಪ್ರದೇಶದ ಉನ್ನಾಂವ್ ನಲ್ಲಿ ನಡೆದ ಕುಲದೀಪ್ ಸೆಂಗರ್ ನಡೆಸಿದ ಅತ್ಯಾಚಾರ ಪ್ರಕರಣ ಈ ಎಲ್ಲಾ ಪ್ರಶ್ನೆಗಳನ್ನ ಕೇಳುವಂತೆ ಮಾಡಿದೆ. ಆ ಸಾತ್ವಿಕ ಆಕ್ರೋಶ ಈಗ ಎಲ್ಲಿದೆ? ಪ್ರವಾಹದಂತೆ ಕುದಿದು ಹರಿದ ಆ ಪ್ರವಾಹ ಎಲ್ಲಿ ಅಡಗಿಹೋಯಿತು? ಉನ್ನಾಂವ್ ಸಂತ್ರಸ್ತೆ – ಒಬ್ಬ ಸಾಮಾನ್ಯ ಯುವತಿ, ರಾಜಕಾರಣಿಯ ದೌರ್ಜನ್ಯಕ್ಕೆ ಒಳಗಾಗಿ ಇಂದಿಗೂ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ. ಆಕೆಯ ತಾಯಿ, ಆಕೆಯ ಕುಟುಂಬ ಎಲ್ಲರೂ ಬೀದಿ ಬೀದಿ ಅಲೆದಾಡುತ್ತಿದ್ದಾರೆ. ಪ್ರತಿಪಕ್ಷಗಳ ಮನೆ ಬಾಗಿಲಲ್ಲಿ ನಿಂತು, ನ್ಯಾಯಾಲಯಗಳಲ್ಲಿ ಕಣ್ಣೀರು ಹಾಕಿದ್ದಾರೆ. ಆದರೆ ಆ ಕೂಗನ್ನ ಕೇಳುವವರೂ ಮೋದಿ ಸರ್ಕಾರದಲ್ಲಿ ದಿಕ್ಕಿಲ್ಲವಾಗಿದ್ದಾರೆ. ಪ್ರತಿಭಟನೆ ಉಕ್ಕಿ ಹರಿದ ಅವೇ ರಸ್ತೆಗಳು ಇಂದು ಭಣಗುಟ್ಟಿವೆ. ಕ್ಯಾಂಡಲ್‌ಗಳ ಬದಲು, ಸೋಷಿಯಲ್ ಮೀಡಿಯಾದಲ್ಲಿ ಕೆಲವು ಹ್ಯಾಶ್‌ಟ್ಯಾಗ್‌ಗಳನ್ನಷ್ಟೇ ಕಾಣಬಹುದು. ಇದು ಯಾವ ಭಾರತ? ನಾಲಿಗೆ ಸತ್ತ ಭಾರತವೇ?

ಕುಲದೀಪ್ ಸೆಂಗರ್, ಬಿಜೆಪಿಯ ಒಬ್ಬ ಪ್ರಮುಖ ಶಾಸಕನಾಗಿದ್ದ. ಸೆಂಗರ್ 17 ವರ್ಷದ ಬಾಲಕಿಗೆ ಕೆಲಸ ಕೊಡಿಸುವ ನೆಪದಲ್ಲಿ ಅಪಹರಿಸಿ 2017ರ ಜೂನ್ 11 ರಿಂದ 20 ನಡುವೆ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಆಕೆಯನ್ನು 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ. ಈ ನಡುವೆ ಸೆಂಗಾರ್‌ನ ಆಣತಿಯಂತೆ ಪೊಲೀಸರು ಬಾಲಕಿಗೆ ನಿರಂತರ ಬೆದರಿಕೆ ಹಾಕಿದ್ದರು. ದೌರ್ಜನ್ಯದ ವಿರುದ್ದ ಮಾತನಾಡದಂತೆ ಬಾಯಿ ಮುಚ್ಚಿಸಿದ್ದರು. ಅಷ್ಟು ಮಾತ್ರವಲ್ಲದೆ ತನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿದ್ದ ಸಂತ್ರಸ್ತೆಯ ತಂದೆಯನ್ನು ಕುಲದೀಪ್ ಸೆಂಗರ್‌ನ ಸಹೋದರ ಅತುಲ್ ಸಿಂಗ್ ಮತ್ತು ಇತರರು 2018ರ ಏಪ್ರಿಲ್‌ನಲ್ಲಿ ತೀವ್ರವಾಗಿ ಥಳಿಸಿದ್ದರು. ಪೊಲೀಸರು ಅಪರಾಧಿಗಳನ್ನು ಬಂಧಿಸುವ ಬದಲು, ಸಂತ್ರಸ್ತೆಯ ತಂದೆಯನ್ನೇ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ ಬಂಧಿಸಿದ್ದರು. 2018ರ ಏಪ್ರಿಲ್ 8ರಂದು ಸಂತ್ರಸ್ತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ ನಂತರ ಪ್ರಕರಣ ರಾಷ್ಟ್ರಮಟ್ಟದ ಗಮನ ಸೆಳೆದಿತ್ತು. ಇದಾದ ಮರುದಿನವೇ ಸಂತ್ರಸ್ತೆಯ ತಂದೆ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಗಂಭೀರ ಗಾಯಗಳಿಂದ ಮೃತಪಟ್ಟಿದ್ದರು.

ಕೊನೆಗೆ ನ್ಯಾಯಾಲಯ ಸೆಂಗರ್‌ಗೆ ಶಿಕ್ಷೆ ವಿಧಿಸುವ ಮುನ್ನ, ನಂಬರ್ ಪ್ಲೇಟ್ ಇಲ್ಲದ ಲಾರಿಯೊಂದು ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸಂತ್ರಸ್ತೆ ಮತ್ತು ಆಕೆಯ ವಕೀಲರು ಗಂಭೀರವಾಗಿ ಗಾಯಗೊಂಡಿದ್ದರು. ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವನ್ನಪ್ಪಿದ್ದರು. ಈ ಸಂಬಂಧ ಸೆಂಗರ್ ವಿರುದ್ದ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಆದರೆ, ಡಿಸೆಂಬರ್ 2021ರಲ್ಲಿ, ಅಪಘಾತವನ್ನು ಸೆಂಗರ್ ಅವರೇ ಆಯೋಜಿಸಿದ್ದಾರೆ ಎಂಬುದಕ್ಕೆ ಯಾವುದೇ ಪ್ರಾಥಮಿಕ ಪುರಾವೆಗಳು ದೊರೆಯದ ಕಾರಣ ದೆಹಲಿ ನ್ಯಾಯಾಲಯವು ಅವರನ್ನು ಈ ಪ್ರಕರಣದಿಂದ ಬಿಡುಗಡೆ ಮಾಡಿತು.
ಇದೆಲ್ಲವೂ ಮುಗಿದ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ನೀಡಿ, ಸೆಂಗರ್‌ಗೆ ಜೀವಾವಧಿ ಶಿಕ್ಷೆಯನ್ನೂ ಕೊಟ್ಟಿದೆ. ಆದರೆ ನ್ಯಾಯದಾನದ ಪಯಣ ಇನ್ನೂ ಮುಗಿದಿಲ್ಲ. ಸಂತ್ರಸ್ತೆಯ ಕುಟುಂಬ ಇನ್ನೂ ಭಯದಲ್ಲಿ ಬದುಕುತ್ತಿದೆ. ಆಕೆಯ ತಾಯಿ ಪ್ರತಿಪಕ್ಷಗಳ ಬಾಗಿಲಲ್ಲಿ ನಿಂತು ಕೇಳುತ್ತಿದ್ದಾಳೆ. “ನಮಗೆ ಸುರಕ್ಷತೆಯನ್ನು ಕೊಡಿ. ನ್ಯಾಯವನ್ನು ದೊರಕಿಸಿ ಕೊಡಿ.”ಅಂತ ಬೇಡುತ್ತಿದ್ದಾಳೆ. ಯಾಕೆ ಗೊತ್ತಾ? ಅತ್ಯಾಚಾರಿ, ಕೊಲೆಗಡುಕ ಕುಲದೀಪ್ ಸಿಂಗ್ ಸೆಂಗರ್‌ಗೆ ದೆಹಲಿ ಹೈಕೋರ್ಟ್ ನಿಂದ ಡಿ.23 ರಂದು ಜಾಮೀನು ಮಂಜೂರಾಗಿದೆ. ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ನೀಡಲಾದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಸುಬ್ರಹ್ಮಣ್ಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ಪೀಠವುಈ ತೀರ್ಪನ್ನ ನೀಡಿದೆ. ಆ ತಾಯಿ ಹಾಗೂ ಸಂತ್ರಸ್ತೆಯ ಕೂಗು ಅರಣ್ಯರೋದನ ಆಗುತ್ತಿದೆ.
ನಿರ್ಭಯಾ ಪ್ರಕರಣದ ನಂತರ, ಭಾರತದಲ್ಲಿ ಅನೇಕ ಅತ್ಯಾಚಾರ ಪ್ರಕರಣಗಳು ನಡೆದಿವೆ. ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಸೇರಿದ ಆಶ್ರಮದಲ್ಲಿ ಸೂರತ್ ಮೂಲದ ಮಹಿಳೆ ವಾಸವಿದ್ದರು. 2001ರಿಂದ 2006ರವರೆಗೆ ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡು ಅತ್ಯಾಚಾರ ಎಸಗಿದ್ದ ಎಂದು 2013ರಲ್ಲಿ ಅಹಮದಾಬಾದ್‌ನ ಚಂದಖೇಡ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದರು. ವಿಚಾರಣೆ 2014 ರಲ್ಲಿ ಆರಂಭವಾಗಿ ನಾಲ್ಕು ವರ್ಷಗಳ ಕಾಲ ನಡೆಯಿತು. ವಿಚಾರಣೆಯ ಅವಧಿಯಲ್ಲಿ, ಒಂಬತ್ತು ಸಾಕ್ಷಿಗಳ ಮೇಲೆ ದಾಳಿ ನಡೆದು, ಅದರಲ್ಲಿ ಮೂವರು ಸಾಕ್ಷಿಗಳು ಹತರಾಗಿದ್ದರು. ಅಸಾರಾಂ ಬಾಪುಗೆ ಗುಜರಾತ್‌ನ ಗಾಂಧಿ ನಗರದಲ್ಲಿರುವ ಕೋರ್ಟ್ 2018ರ ಏಪ್ರಿಲ್‌ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 2022ರಲ್ಲಿ, ತಮ್ಮ ಶಿಕ್ಷೆ ಅಮಾನತುಗೊಳಿಸುವಂತೆ ಅವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅದು ತಿರಸ್ಕೃತವಾಗಿತ್ತು. ಆದರೆ ಈ ಸ್ವಯಂಘೋಷಿತ ದೇವಮಾನವನಿಗೆ ರಾಜಸ್ಥಾನ ಹೈಕೋರ್ಟ್ ಇದೇ ವರ್ಷ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅದೇ ಆಧಾರದ ಮೇಲೆ ಆರು ತಿಂಗಳ ಕಾಲ ಜಾಮೀನು ನೀಡುತ್ತಿರುವುದಾಗಿ ನ್ಯಾಯಾಲಯ ಮೌಖಿಕವಾಗಿ ತಿಳಿಸಿತ್ತು.
ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಪ್ರಕರಣವೂ ಇದೇ ರೀತಿಯದು. ಸಿರ್ಸಾದ ಡೇರಾ ಸಚ್ಚಾ ಸೌದಾ ಆಶ್ರಮದಲ್ಲಿ ಮಹಿಳಾ ಅನುಯಾಯಿಗಳ ಮೇಲೆ ಲೈಂಗಿಕ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿ ಅನಾಮಿಕ ಪತ್ರವೊಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿಗೆ ತಲುಪಿತು. ಪತ್ರದಲ್ಲಿ ಮಾಡಲಾದ ಆರೋಪಗಳ ಕುರಿತು ತನಿಖೆ ನಡೆಸುವಂತೆ ಸಿರ್ಸಾ ಜಿಲ್ಲಾಡಳಿತ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಹೈಕೋರ್ಟ್ ಸೂಚನೆ ನೀಡಿತು. ಲೈಂಗಿಕ ಶೋಷಣೆಗಳು ನಡೆದಿರುವ ಸಾಧ್ಯತೆಯಿದೆ ಎಂದು ಜಿಲ್ಲಾ ನ್ಯಾಯಾಲಯ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ. ಸಿರ್ಸಾದಲ್ಲಿ ಪ್ರಧಾನ ಕೇಂದ್ರ ಹೊಂದಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಂ ರಹೀಂ ಸಿಂಗ್ ವಿರುದ್ಧ ಸಿಬಿಐ ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಗಳನ್ನು ದಾಖಲಿಸಿಕೊಂಡಿತು. ಡೇರಾ ಮುಖ್ಯಸ್ಥನ ವಿರುದ್ಧ ಅಂಬಾಲಾ ಕೋರ್ಟಿನಲ್ಲಿ ಆರೋಪ ಪಟ್ಟಿ ಸಲ್ಲಿಸಿದ ಸಿಬಿಐ. ಇಬ್ಬರು ಸಾಧ್ವಿಗಳ ಮೇಲೆ 1999-2001ರ ನಡುವೆ ಲೈಂಗಿಕ ಶೋಷಣೆ ನಡೆದಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಇಬ್ಬರು ದೂರುದಾರರು ಕೋರ್ಟಿನ ಮುಂದೆ ಹಾಜರಾಗಿ ಹೇಳಿಕೆ ನೀಡಿದರು. ಕೊನೆಗೆ ಗುರ್ಮಿತ್ ಸಿಂಗ್‌ದೋಷಿ ಎಂದು, ಒಟ್ಟು 20 ವರ್ಷ ಜೈಲು ಶಿಕ್ಷೆಯನ್ನ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದೆ. ನಂತರ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಮತ್ತು 2002 ರಲ್ಲಿ ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಹತ್ಯೆಗಳು ಸೇರಿದಂತೆ ಎರಡು ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2021 ರಲ್ಲಿ ಡೇರಾ ಮ್ಯಾನೇಜರ್ ಆಗಿದ್ದ ರಂಜಿತ್ ಸಿಂಗ್ ಅವರನ್ನು ಕೊಲ್ಲಲು ಸಂಚು ರೂಪಿಸುವಲ್ಲಿ ರಾಮ್ ರಹೀಮ್ ಅಪರಾಧ ಸಾಬೀತಾಗಿದೆ. 16 ವರ್ಷಗಳ ಹಿಂದೆ ಪತ್ರಕರ್ತನ ಹತ್ಯೆಗೆ 2019 ರಲ್ಲಿ ಡೇರಾ ಮುಖ್ಯಸ್ಥ ಮತ್ತು ಇತರ ಮೂವರಿಗೆ ಶಿಕ್ಷೆ ವಿಧಿಸಲಾಗಿತ್ತು.
ರಾಮ್ ರಹೀಮ್ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆಯಾಗಿದ್ದರೂ, ಆಗಾಗ್ಗೆ ತಿಂಗಳುಗಟ್ಟಲೆ ಪೆರೋಲ್ ಪಡೆದು ಜೈಲಿನಿಂದ ಹೊರಗಿದ್ದಾನೆ. ಇದು ರಾಜಕೀಯ ಪ್ರಭಾವ ಅಲ್ಲದೇ ಇನ್ನೇನೂ ಆಗೋಕೆ ಸಾಧ್ಯ ಇಲ್ಲ. ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಅನುಯಾಯಿಗಳನ್ನು ಹೊಂದಿರುವ ಕಾರಣಕ್ಕೆ ಎಲ್ಲೇ ಚುನಾವಣೆ ನಡೆದರೂ ಮೊದಲು ಈ ಅತ್ಯಾಚಾರಿಗೆ ಪೆರೋಲ್ ಸಿಗತೊಡಗಿದೆ. 2023ರಲ್ಲಿ ಹರ್ಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಲ್ಲಿದ್ದಾಗ ಮೂರು ಸಂದರ್ಭಗಳಲ್ಲಿ ಪೆರೋಲ್ ಅನ್ನು 91 ದಿನಗಳವರೆಗೆ ನೀಡಲಾಗಿತ್ತು. ನವೆಂಬರ್‌ನಲ್ಲಿ 21 ದಿನಗಳು, ಜುಲೈನಲ್ಲಿ 30 ದಿನಗಳು ಮತ್ತು ಜನವರಿಯಲ್ಲಿ 40 ದಿನಗಳ ಪೆರೋಲ್ ನೀಡಲಾಗಿತ್ತು. ಮಾಜಿ ಡೇರಾ ಮುಖ್ಯಸ್ಥ ಶಾ ಸತ್ನಾಮ್ ಅವರ ಜನ್ಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇವನಿಗೆ ಪೆರೋಲ್ ನೀಡಲಾಗಿತ್ತು. ಇನ್ನೂ 2022ರ ಜೂನ್‌ನಲ್ಲಿ ಆತನನ್ನು ಒಂದು ತಿಂಗಳ ಪರೋಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಫೆಬ್ರವರಿಯಲ್ಲಿ, ಪಂಜಾಬ್ ಚುನಾವಣೆಗೆ ಪೂರ್ವಭಾವಿಯಾಗಿ ಅವನಿಗೆ 21 ದಿನಗಳ ಪರೋಲ್ ನೀಡಲಾಗಿತ್ತು. ನವೆಂಬರ್‌ನಲ್ಲಿ 40 ದಿನಗಳ ಪರೋಲ್ ದೊರೆತಿತ್ತು.
ಈ ಸ್ವಯಂ ಘೋಷಿತ ದೇವಮಾನವನ ಭೇಟಿ ಮಾಡಲು ಹಲವು ರಾಜಕೀಯ ಮುಖಂಡರು ಸಾಲುಗಟ್ಟಿ ನಿಂತಿದ್ದರು. ಪ್ರಮುಖವಾಗಿ ಬಿಜೆಪಿಯ ಹಲವಾರು ನಾಯಕರು ಸೇರಿದಂತೆ ಅನೇಕ ರಾಜಕಾರಣಿಗಳು ರಾಮ್ ರಹೀಂ ಸಿಂಗ್ ರ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ಇದೇ ವರ್ಷ ಜನವರಿಯಲ್ಲಿ 30 ದಿನಗಳ ಪೆರೋಲ್ ಮಂಜೂರಾಗಿತ್ತು, ಮತ್ತು ಸಿರ್ಸಾ ಡೇರಾದಲ್ಲಿ ಉಳಿಯಲು ಅವಕಾಶವೂ ಸಿಕ್ಕಿತ್ತು. ಕೊನೆಗೆ ಆಗಸ್ಟ್‌ನಲ್ಲಿ ಮತ್ತೊಮ್ಮೆ 40 ದಿನಗಳ ಪೆರೋಲ್ ನೀಡಲಾಯಿತು, ಸುನಾರಿಯಾ ಜೈಲಿನಿಂದ ಹೊರಬಂದು ಸಿರ್ಸಾ ಡೇರಾದಲ್ಲಿ ಉಳಿದುಕೊಂಡಿದ್ದ. ಪ್ರತಿ ವರ್ಷವೂ ಮೂರು ಅಥವಾ ಮೂರಕ್ಕಿಂತ ಹೆಚ್ಚು ಬಾರಿ ಈ ಅತ್ಯಾಚಾರಿ ಪೆರೋಲ್ ಮೇಲೆ ಹೊರಗೆ ಬಂದು ತಾನು ಏನೂ ಮಾಡಿಯೇ ಇಲ್ಲ ಅನ್ನುವಂತೆ ಸ್ವತಂತ್ರವಾಗಿ ಹಾರಾಡುತ್ತಾನೆ. ಆದರೆ ಇಂತಹ ಅತ್ಯಾಚಾರಿಯನ್ನ ಪೋಷಿಸುವ ಪೂಜಿಸುವ ಜನರು ನಮ್ಮ ಸುತ್ತಮುತ್ತ ಇದ್ದಾರೆ.
ಸಂತ್ರಸ್ತೆಯರು ನ್ಯಾಯಕ್ಕಾಗಿ ಬೀದಿಗಳಲ್ಲಿ ನಿಂತು ಮೊರೆ ಇಡುತ್ತಿದ್ದಾರೆ. ಆದರೆ ಈ ಮೊರೆಯನ್ನು ಕೇಳುವವರ್ಯಾರು? ಸರ್ಕಾರಗಳು? ಪೊಲೀಸ್? ನ್ಯಾಯಾಲಯಗಳು? ನಿರ್ಭಯಾ ಕಾಲದಲ್ಲಿ ಪ್ರಕಟವಾದ ಆ ಸಾತ್ವಿಕ ಕ್ರೋಧ ಎಲ್ಲಿಗೆ ಹೋಯಿತು? ಈಗ ಆ ಆಕ್ರೋಶ ಬರೀ ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ಸೀಮಿತವಾಗಿದೆ. ಭಿನ್ನಮತದ ಪ್ರತಿಭಟನೆಯು ತುಟ್ಟಿಯಾಗಿ ಹೋಗಿದೆ. ಯಾಕೆಂದರೆ, ಇಂದು ಪ್ರತಿಭಟನೆಯನ್ನು “ದೇಶದ್ರೋಹ” ಎಂದು ಕರೆದು ವಿಚಾರಣೆ, ತನಿಖೆಯೇ ಇಲ್ಲದೇ ವರ್ಷಾನೂ ಗಟ್ಟಲೇ ಜೈಲಲ್ಲೇ ಕೊಳೆಯೋ ಹಾಗೇ ಮಾಡತ್ತೆ ನಮ್ಮದೇ ಸರ್ಕಾರ. ಪೊಲೀಸ್ ಲಾಠಿಗಳು, ಟಿಯರ್ ಗ್ಯಾಸ್, ಜೈಲುಗಳು – ಇವೆಲ್ಲವೂ ಭಿನ್ನಮತವನ್ನು ತಡೆಯಲು ಸಿದ್ಧವಾಗಿವೆ. ಉನ್ನಾಂವ್ ಸಂತ್ರಸ್ತೆಯಂತಹವರು ಒಂಟಿಯಾಗಿ ಹೋರಾಡುತ್ತಾರೆ. ಆಕೆಯ ತಾಯಿ, ಆಕೆಯ ಸಹೋದರ ಅವರೆಲ್ಲರೂ ಭಯದಲ್ಲಿ ಬದುಕುತ್ತಿದ್ದಾರೆ. ಆದ್ರೆ ಆಳುವ ಪಕ್ಷದ ರಾಜಕಾರಣಿಗಳಿಗೆ ಚುನಾವಣೆಯ ಗೆಲುವುಗಳು, ಅಧಿಕಾರ ಮುಖ್ಯವೇ ವಿನಾ ಇವರ ಕಷ್ಟ ಕಣ್ಣೀರು ಲೆಕ್ಕಕ್ಕೇ ಇಲ್ಲ.

ತನಿಖಾ ಏಜೆನ್ಸಿಗಳು – ಸಿಬಿಐ, ಇಡಿ, ನ್ಯಾಯಾಂಗ ಪೊಲೀಸ್ – ಬೇಟೆ ನಾಯಿಗಳಂತೆ ಸಂತ್ರಸ್ತೆಯರ ಬೆನ್ನತ್ತಿವೆಯೇ ವಿನಾ ಅತ್ಯಾಚಾರಿಗಳು-ಅನಾಚಾರಿಗಳ ವಿರುದ್ಧ ಕನಿಷ್ಠ ಬೊಗಳುವುದೂ ಇಲ್ಲ. ಯಾರ ಕೈಯಲ್ಲಿ ಕಟ್ಟಿಹಾಕಲ್ಪಟ್ಟಿವೆಯೋ,ಅವರ ಆದೇಶದಂತೆ ಕೆಲಸ ಮಾಡುತ್ತವೆ. ಅಪರಾಧಿಗಳು ಜೈಲುಗಳಿಂದ ಹೊರಬಂದು, ಮತ್ತೆ ಮತ್ತೆ ಮೆರೆದಾಡುತ್ತಾರೆ. ಸಂತ್ರಸ್ತೆಯರು ಮತ್ತು ಅವರ ಕುಟುಂಬಗಳಿಗೆ, ಪ್ರಕರಣಗಳ ಸಾಕ್ಷಿಗಳನ್ನು ಬೆದರಿಸುತ್ತಾರೆ. ಅಪರಾಧ ಸಾಬೀತಾಗಿದ್ದರೂ, ಜೈಲುಗಳಿಂದ ಹೊರಬಿದ್ದು ಆಸಾರಾಮ್, ರಾಮ್ ರಹೀಮ್, ಸೆಂಗರ್ ಹೀಗೆ ಆರ್ಭಟಿಸಿದ್ದಾರೆ. ಇದು ನಮ್ಮ ವ್ಯವಸ್ಥೆಯ ದೌರ್ಬಲ್ಯವನ್ನ ಎತ್ತಿ ತೋರುತ್ತದೆ. ನಿರ್ಭಯಾ ಕೂಗಿದ್ದ ರಸ್ತೆಗಳು ಮೌನ ಹೊದ್ದು ಮಲಗಿವೆ. ಉನ್ನಾಂವ್ ಸಂತ್ರಸ್ತೆಯ ಕಣ್ಣೀರು ಇನ್ನೂ ಆರಿಲ್ಲ. ನಾವು ಆಕೆಯ ಮೊರೆಯನ್ನು ಆಲಿಸಿದರೆ, ಆ ಕಣ್ಣೀರನ್ನು ಒರೆಸಿದ್ರೆ, ಆಗ ಮಾತ್ರ ಭಾರತ ಬದಲಾಗುತ್ತದೆ. ನ್ಯಾಯ ಅನ್ನೋದು ಕೇವಲ ಒಂದು ಹಕ್ಕಲ್ಲ ಅದು ನಮ್ಮ ಜವಾಬ್ದಾರಿ. ಸಂತ್ರಸ್ತೆಯರ ಹೋರಾಟ ನಮ್ಮ ಹೋರಾಟ. ರಸ್ತೆಗಳಿಗೆ ಇಳಿಯಬೇಕು, ಗಟ್ಟಿ ದನಿ ಎತ್ತಬೇಕು, ಬದಲಾವಣೆ ತರೋಣ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಹೋರಾಡಬೇಕು. ಅದೇ ನಿಜವಾದ ಭಾರತ – ನ್ಯಾಯ ಪಕ್ಷಪಾತದ ಭಾರತ.





