ಕೇರಳ ಸಿಎಂ ಸೇರಿದಂತೆ ಕಮ್ಯೂನಿಸ್ಟ್ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ಮುಂದಿನ ವರ್ಷದ ಚುನಾವಣೆಯಲ್ಲಿ ಕಮ್ಯೂನಿಸ್ಟ್ ಪಕ್ಷ ಸೋಲುವ ಭಯದಿಂದ ಅಲ್ಪಸಂಖ್ಯಾತರಿಗೆ ಕರುಣೆ ತೋರಿಸುವ ನೆಪದಲ್ಲಿ ಮಾತನಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೋಗಿಲು ಗ್ರಾಮದ ಸರ್ವೆ ನಂ.99ರಲ್ಲಿ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಸುಮಾರು 180 ಮನೆಗಳನ್ನು ಡಿ.20 ರಂದು ನೆಲಸಮಗೊಳಿಸಿದ್ದರು.
ಸ್ಥಳ ವೀಕ್ಷಣೆಗೆ ಬಂದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಹತ್ತು ವರ್ಷದ ಹಿಂದೆ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸರ್ಕಾರವೇ ಈ ಜಾಗವನ್ನು ಕೊಟ್ಟಿತ್ತು. ರಾತ್ರೋರಾತ್ರಿ ಈ ಜಾಗಕ್ಕೆ ಬಂದು ಟೆಂಟ್ ಹಾಕಿಕೊಂಡು, ನಂತರ ಮನೆಯನ್ನು ಕಟ್ಟಿಕೊಂಡಿದ್ದಾರೆ. ವೋಟರ್ ಅಧಿಕಾರ ಇದ್ದರೂ, ಬೇರೆ ಜಾಗಕ್ಕೆ ಇರುತ್ತದೆಯೇ ವಿನಃ, ಸರ್ಕಾರಿ ಜಾಗಕ್ಕೆ ಕೊಡಲು ಬರುವುದಿಲ್ಲ. ಕಸ ಹಾಕುತ್ತಿದ್ದ ಜಾಗದಲ್ಲೇ ಮನೆಯನ್ನು ಕಟ್ಟಿಕೊಂಡಿದ್ದಾರೆ” ಎಂದರು.
ಮುಂದುವರೆದು ಮಾತನಾಡಿದ ಅವರು, “ಸುಮ್ಮನೆ ರಾಜಕೀಯ ಮಾಡುವುದು ಬೇಡ. ನಾನು ಬಂದಾಗ ಇಲ್ಲಿನ ಜನ ಜೈಕಾರ ಹಾಕಿದ್ರು. ನಾವು ತಪ್ಪು ಮಾಡಿದ್ರೆ ನಮಗೆ ದಿಕ್ಕಾರ ಕೂಗಬೇಕಿತ್ತು. ಜೈಕಾರ ಕೂಗುವ ಅರ್ಥ ನಾವು ತಪ್ಪು ಮಾಡಿಲ್ಲ” ಎಂದು ಸಮರ್ಥಿಸಿಕೊಂಡರು.
“ಕೆಲವರು ಹಣ ತೆಗೆದುಕೊಂಡು ಅಕ್ರಮವಾಗಿ ಮನೆ ನಿರ್ಮಾಣ ಮಾಡಲು ಸಹಾಯ ಮಾಡಿದ್ದಾರೆ. ಎಲ್ಲೆಲ್ಲಿ ಸರ್ಕಾರಿ ಆಸ್ತಿಗಳಿದೆಯೋ, ಅಲ್ಲೆಲ್ಲ ವಶಕ್ಕೆ ಪಡೆಯುವ ಕೆಲಸ ನಡೆಯುತ್ತಿರುತ್ತದೆ. ಅದೇ ರೀತಿ ಈ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ. ಸರ್ಕಾರದ ನಿಯಮದ ಪ್ರಕಾರ ಅನ್ಯಾಯ ಆಗಿರುವವರಿಗೆ ಮನೆಯನ್ನು ಕೊಡುತ್ತೇವೆ. ಅದೇ ರೀತಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೆವೆ” ಎಂದರು





