“ಬೂಟಾಟಿಕೆ ಬಿಟ್ಟು ಮಾನವ ಧರ್ಮ ಪಾಲಿಸಿ. ಭಾಷೆ ಮತ್ತು ಧರ್ಮ ನೋಡಬೇಡಿ. ಸರ್ಕಾರದವರು ಮಾನವೀಯತೆನ್ನು ಅನುಸರಿಸಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಕೂಡಲೇ ಪುನರ್ ವಸತಿ ಕಲ್ಪಿಸಿ” ಎಂದು ಹಿರಿಯ ಸಾಹಿತಿಗಳು ಹಾಗೂ ಮಾಜಿ ಸಚಿವರಾದ ಬಿ.ಟಿ.ಲಲಿತಾ ನಾಯಕ್ ಆಗ್ರಹಿಸಿದರು.
ಕೋಗಿಲು ಲೇಔಟ್‌ನ ಮನೆ ನೆಲಸಮ ಪ್ರಕ್ರಿಯೆಯಿಂದ ನಿರಾಶ್ರಿತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
“ವಸತಿ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಕಂದಾಯ ಸಚಿವ ಕೃಷ್ಣಭೈರೇಗೌಡರು ಒಪ್ಪಿಕೊಂಡಿರುವ ಮಾತಿನಂತೆ ಕೂಡಲೇ ಪುನರ್ ವಸತಿ ವ್ಯವಸ್ಥೆ ಮಾಡಬೇಕು” ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ವೀರಸಂಗಯ್ಯ ಮಾತನಾಡಿ “ಎ ಟಿ ರಾಮಸ್ವಾಮಿ ವರದಿ ಪ್ರಕಾರ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಬಲಾಢ್ಯರು ಕಬಳಿಸಿದ್ದಾರೆ. ಈಗಲೂ ಸಹ ಸಾವಿರಾರು ಎಕರೆ ಸರ್ಕಾರಿ ಭೂಮಿ ಬಲಾಢ್ಯರ ಬಳಿ ಇದೆ. ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಆದರೆ ಕೋಗಿಲು ಸಂತ್ರಸ್ತರ ವಿರುದ್ಧ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವುದು ಅಕ್ಷಮ್ಯ. ವಿರೋಧ ಪಕ್ಷಗಳು ನಿರ್ಗತಿಕರ ಜೊತೆ ನಿಲ್ಲುವುದನ್ನು ಬಿಟ್ಟು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುತ್ತಿದೆ” ಬೇಸರ ವ್ಯಕ್ತಪಡಿಸಿದರು.
ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಮಾತನಾಡಿ “ಹೆಂಗಸರು ಮತ್ತು ಮಕ್ಕಳ ಜೊತೆಗೆ ಎಲ್ಲರೂ ಚಳಿಯಲ್ಲಿಯೇ ಇದ್ದಾರೆ. ಗಂಜಿ ಕೇಂದ್ರದ ವ್ಯವಸ್ಥೆಯನ್ನು ಸಂತ್ರಸ್ತರಿರುವ ಜಾಗ ಬಿಟ್ಟು ಬೇರೆಡೆಗೆ ತೆರೆಯಲಾಗಿದೆ. ವಿರೋಧ ಪಕ್ಷವಾದ ಬಿಜೆಪಿಯ ಸತ್ಯಶೋಧನೆ ತಂಡ ಬಹುತೇಕರನ್ನು ಭೇಟಿ ಮಾಡಿಲ್ಲ. ಆ ಜಾಗದಲ್ಲಿ ಮುಸ್ಲಿಂ ಸಮುದಾಯದವರಿದ್ದಾರೆ ಎಂಬ ಕಾರಣಕ್ಕೆ ಬಾಂಗ್ಲಾದೇಶದವರು ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದೇ ಬಿಜೆಪಿಯವರು ಕಳೆದ ಐದು ವರ್ಷದ ಹಿಂದೆ ಕಾರ್ಪೋರೇಟ್ ಚುನಾವಣೆಯ ಸಂದರ್ಭದಲ್ಲಿ ಈ ಜನರ ಮತ ಪಡೆದುಕೊಂಡು ಗೆದ್ದಿದ್ದಾರೆ. ಮತ ಕೇಳುವಾಗ ಇಲ್ಲದ ಪ್ರಶ್ನೆ, ಈಗ ಯಾಕೆ ಕೇಳುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
ದುಡಿಯುವ ಜನರ ವೇದಿಕೆಯ ನಂದಿನಿ ಮಾತನಾಡಿ “ಜಿಬಿಎ ಮನೆಗಳನ್ನು ನೆಲಸಮಗೊಳಿಸಿದ ದಿನದಿಂದ (ಡಿ.20) ಇಂದಿಗೆ 23 ದಿನಗಳಾಗಿವೆ. ಇಲ್ಲಿಯತನಕ ಯಾವುದೇ ವ್ಯವಸ್ಥೆಗಳಿಲ್ಲದೇ, ಭೂಮಿ ತಾಯಿಯೇ ತೊಟ್ಟಿಲು, ಆಕಾಶವೇ ಸೂರಾಗಿದೆ. ಸರ್ಕಾರ ಪುನರ್ವಸತಿ ವ್ಯವಸ್ಥೆ ಮಾಡುವ ಭರವಸೆ ನೀಡಿದೆ. ಆದರೆ ಈಗ ಭಾಷೆ, ಜಾತಿ, ಧರ್ಮ, ಭೌಗೋಳಿಕ ಹಿನ್ನಲೆಯ ಪ್ರಶ್ನೆ ಕೇಳುತ್ತಿದೆ. ಆದರೆ ಭಾರತ ಸಂವಿಧಾನದ 19 ನೇ ವಿಧಿಯು ಎಲ್ಲಾ ಭಾರತೀಯರಿಗೆ ಸ್ವಾತಂತ್ರ್ಯವಾಗಿ ಬದುಕುವ ಹಕ್ಕನ್ನು ಕಲ್ಪಿಸುತ್ತದೆ. ನಗರವನ್ನು ಕಟ್ಟಲು ಬಂದ ಇಂತಹ ವಲಸಿಗರಿಗೆ ಸಂವಿಧಾನದ 21ನೇ ವಿಧಿಯ ಪ್ರಕಾರ ಘನತೆಯಿಂದ ಬದುಕಲು ಸರ್ಕಾರವು ಸೂರು ನೀಡಬೇಕು” ಎಂದು ಒತ್ತಾಯ ಮಾಡಿದರು.





