ಸಿನಿಮಾ ಎಂಬುದೆ ಒಂದು ಅನುಭವ ಲೋಕ. ಅದರೊಳಗೆ ತಮ್ಮ ಅನುಭವವನ್ನು ಬಳಸಿ, ನೋಡುಗರ ಅನುಭವಕ್ಕೆ ಬರುವ ರೀತಿ ಕಟ್ಟುವುದು ಮುಖ್ಯ. ತೇಜಸ್ವಿ ಮತ್ತು ಸತ್ಯಜಿತ್ ರೇ ಇಬ್ಬರು ಸಾಹಿತ್ಯ ಮತ್ತು ಸಿನಿಮಾ ಲೋಕಕ್ಕೆ ಬಹಳ ಮುಖ್ಯ. ಜೊತೆಗೆ ಅವರ ಅನುಭವವು ಬಹಳ ಮುಖ್ಯವಾಗುತ್ತದೆ ಎಂದು ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಹೇಳಿದರು.
ಬೆಂಗಳೂರು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನಡೆದ ಸಮಾಜಮುಖಿ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ್ದ ಅನುಭವ ಲೋಕದ ಸೃಜನಶೀಲತೆ – ಪೂರ್ಣಚಂದ್ರ ತೇಜಸ್ವಿ ಮತ್ತು ಸತ್ಯಜಿತ್ ರೇ ಎಂಬ ಘೋಷ್ಠಿಯಲ್ಲಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ‘ಸಾಹಿತ್ಯ ಕೃತಿಯು, ಓದುಗರು ತಮ್ಮ ಅನುಭವವನ್ನು ಕಟ್ಟುವ ರೀತಿಯಲ್ಲಿ ಇರಬೇಕು. ಉದಾಹರಣೆಗೆ ಕಾರಂತರಿಗೆ ಹೆಚ್ಚಿನ ಅನುಭವವು ಇತ್ತು, ಅದನ್ನು ಗ್ರಹಿಸುವ, ಕಲೆಯಲ್ಲಿ ಹೇಳುವ ಶಕ್ತಿಯೂ ಇತ್ತು. ಇಂದು ನಮಗೆ ದೃಶ್ಯ ಎಂದರೆ ಏನು ಎಂದು ಅರ್ಥ ಮಾಡಿಕೊಳ್ಳುವ ಶಕ್ತಿ ಕಡಿಮೆ ಇದೆ’ ಎಂದರು.

‘ಸತ್ಯಜಿತ್ ರೇ ಹುಟ್ಟಿ ಬೆಳೆದದ್ದು ಭಾರತದಲ್ಲಿ. ಆದರೆ ಅವರು ರೂಢಿಸಿಕೊಂಡದ್ದು ಪಾಶ್ಚಿಮಾತ್ಯ ಸಂಸ್ಕೃತಿಯನ್ನು. ಅವರು ಪಾಶ್ಚಿಮಾತ್ಯ ಸಂಗೀತವನ್ನು ಕೇಳುತ್ತಿದ್ದರು. ಅದನ್ನೆ ತಮ್ಮ ಸಿನಿಮಾಗಳಲ್ಲಿ ಅಳವಡಿಸುತ್ತಿದ್ದರು. ರೇ ಅವರ ಅನೇಕ ಸಿನಿಮಾಗಳು ಸಂಗೀತವನ್ನೇ ಮುಖ್ಯವಾಗಿಸಿವೆ. ಸತ್ಯಜಿತ್ ರೇ ಒಂದು ಹಳ್ಳಿಯನ್ನು ನೋಡಿದ್ದೆ, ಪಥೇರ್ ಪಾಂಚಾಲಿ ಸಿನಿಮಾಕ್ಕಾಗಿ ಜಾಗವನ್ನು ನೊಡಲು ಹೋದಾಗ ಎಂದು ಅವರೇ ಹೇಳಿಕೊಂಡಿದ್ದಾರೆ’ ಎಂದರು.
ಇದನ್ನು ಓದಿದ್ದೀರಾ? ಕೇಂದ್ರ ಸರ್ಕಾರ ಕೋಟ್ಯಂತರ ಜನ ಮಾತನಾಡುವ ಭಾಷೆಗಳನ್ನು ತುಳಿದು ಸಂಸ್ಕೃತವನ್ನು ಪೋಷಿಸುತ್ತಿದೆ: ಹಂಪನಾ
‘ಭಾರತೀಯ ಸಿನಿಮಾದಲ್ಲಿ ಬಳಸುವ ಸಂಗೀತ ಅನ್-ಸಿನಿಮ್ಯಾಟಿಕ್ ಎಂದು ರೇ ಹೇಳಿದ್ದರು. ಆದ ಕಾರಣ ಪಾಶ್ಚಿಮಾತ್ಯ ಸಂಗೀತಕ್ಕೆ ಹೆಚ್ಚು ಮಾರುಹೋಗಿದ್ದರು. ತೇಜಸ್ವಿ ಅವರಿಗೆ ಸಂಗೀತದ ಬಗ್ಗೆ ಕುತೂಹಲ ಇತ್ತೇ ವಿನಃ ಅದನ್ನು ಕಲಿಯುವ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಆದರೆ ಸತ್ಯಜಿತ್ ರೇ ಸಂಗೀತವನ್ನು ಕಲಿತು ತಮ್ಮ ಸಿನಿಮಾಗಳಿಗೆ ಅವರೇ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ರೇ ಅವರಿಗೆ ಇದದ್ದು ಸಂಗೀತ ಅರಿಯುವ ಬಗ್ಗೆ ಹೆಚ್ಚು ಆಸಕ್ತಿಯಿತ್ತು’ ಎಂದರು.
‘ಸಿನಿಮಾದಲ್ಲಿ ಸೃಷ್ಟಿಯಾಗುವ ಕೆಲವೊಂದು ದೃಶ್ಯಗಳನ್ನು ಸಾಹಿತ್ಯದಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ. ಸಿನಿಮಾ ಹೇಳುವ ಭಾಷೆಯೇ ಬೇರೆ. ನನ್ನದೆ ‘ದ್ವೀಪ’ ಸಿನಿಮಾದಲ್ಲಿ ಕಡೆಯಲ್ಲಿ ಬರುವ ನೀರಿನ ದೃಶ್ಯ ಸಾಹಿತ್ಯದಲ್ಲಿ ಹೇಳುವುದು ಕಷ್ಟವಾಗಬಹುದು’ ಎಂದು ಹೇಳಿದರು.
ಅದೇ ಗೋಷ್ಟಿಯಲ್ಲಿ ಮಾತನಾಡಿದ ಸಿನಿಮಾ ವಿಮರ್ಶಕರಾದ ವಿದ್ಯಾಶಂಕರ್ ‘ಸೃಜನಶೀಲತೆ ಮತ್ತು ಅನುಭವ ಎಂದರೆ ತೇಜಸ್ವಿ ಮತ್ತು ಸತ್ಯಜಿತ್ ರೇ ಬಹಳ ಪ್ರಮುಖವಾಗುತ್ತಾರೆ. ಸಾಹಿತ್ಯ ಕೃತಿಗಳು ಸಿನಿಮಾವಾದಾಗ ಅದರ ಅನುಭವಕ್ಕೂ ಮತ್ತು ಸಿನಿಮಾದಲ್ಲಿ ಸೆರೆಹಿಡಿದ ದೃಶಕ್ಕೂ ಕೆಲವೊಮ್ಮೆ ವ್ಯತ್ಯಾಸಗಳು ಇರುತ್ತವೆ. ಸಾಹಿತ್ಯ ಲೋಕದಲ್ಲಿ ಶಿವರಾಮ ಕಾರಂತರು ಬರೆದ ಚೋಮನದುಡಿ ಕಾದಂಬರಿಯನ್ನು ಅವರು ಬರೆದದ್ದಕ್ಕೂ, ಅವರು ಅನುಭವಿಸಿ ಬರೆಯದ್ದಕ್ಕೂ ಸಾಕಷ್ಟು ಚರ್ಚೆಗಳು ನಡೆದಿವೆ. ಅದೇ ರೀತಿ ತೇಜಸ್ವಿ ಕೂಡ ಅನುಭವಿಸಿ ಬರೆದದ್ದಕ್ಕೂ, ಕಲ್ಪನೆಯ ಮೇಲೆ ಬರೆದದ್ದಕ್ಕೂ ಸಾಕಷ್ಟು ಚರ್ಚೆಗಳಿವೆ. ಅನುಭವ ಎಂದರೆ ಅದೊಂದು ನೆನಪಿನ ಲೋಕ. ಅನುಭವದ ಜೊತೆ ಭಾವನಾತ್ಮಕ ಸಂಬಂಧವಿರುತ್ತದೆ. ಜೊತೆಗೆ ವೈಯಕ್ತಿಕವೂ, ಸಾಮಾಜಿಕ ಒಳಗೊಳ್ಳುವಿಕೆಯು ಇರುತ್ತದೆ’ ಎಂದರು.

‘ತೇಜಸ್ವಿ ಮತ್ತು ಸತ್ಯಜಿತ್ ರೇ ಇಬ್ಬರನ್ನು ವಿಭಿನ್ನ ದೃಷ್ಟಿಕೋನದಲ್ಲಿ ನೋಡಬೇಕಾಗುತ್ತದೆ. ತೇಜಸ್ವಿಗೆ ಧಕ್ಕಿದ ಅನುಭವಕ್ಕೂ, ಸತ್ಯಜಿತ್ ರೇಗೆ ಧಕ್ಕಿದ ಅನುಭವಗಳು ಸಾಕಷ್ಟು ಭಿನ್ನವಾಗಿವೆ. ತೇಜಸ್ವಿ ಸಾಮಾಜಿಕ ಒಳಗೊಳ್ಳುವಿಕೆಯಿಂದ ಬಂದವರು. ಅವರ ಮೇಲೆ ಲೋಹಿಯಾ ಅವರ ತತ್ವ ಚಿಂತನೆ, ಕಾರಂತರ ಜೀವನ ದೃಷ್ಟಿ, ಕುವೆಂಪು ಅವರ ಪ್ರಭಾವವು ಇತ್ತು. ಅವರೊಬ್ಬ(ತೇಜಸ್ವಿ) ಆಧುನಿಕ ಚಿಂತನ ಕ್ರಮವನ್ನು ಬದಲಿಸಿದ ಸಂತ. ತೇಜಸ್ವಿ ಅವರು ತಾತ್ವಿಕ ಚಿಂತನೆಯನ್ನು, ಸಮಾಜವಾದಿ ಚಿಂತನೆಯನ್ನು ಜೊತೆಗೆ ರಾಜಕೀಯ ಚಿಂತನೆಯನ್ನು ನಮ್ಮೆದುರಿಗೆ ಇಟ್ಟಿದ್ದಾರೆ’ ಎಂದರು.
‘ಸತ್ಯಜಿತ್ ರೇ ಬೆಳೆದು ಬಂದ ರೀತಿ ಅದೊಂದು ಅಭಿಜಾತ ಪರಂಪರೆ. ಬ್ರಹ್ಮಸಮಾಜವನ್ನು ಒಳಗೊಂಡು, ರವೀಂದ್ರನಾಥ ಠಾಗೋರರ ಆಶ್ರಮದಲ್ಲಿ, ಕಲ್ಕತ್ತಾ ಎಂಬ ದೊಡ್ಡ ನಗರದಲ್ಲಿ ಬೆಳೆದವರು. ಇವರಿಗೆ ಸಮಾಜ ಒಳಗೊಳ್ಳುವಿಕೆಗಿಂತ, ಸಮಾಜವನ್ನು ಸೂಕ್ಷ್ಮವಾಗಿ ನೋಡುವ ಬಗೆ ತಿಳಿದಿತ್ತು’ ಎಂದರು.
‘ಯಾವುದೇ ಸಾಹಿತ್ಯದಲ್ಲಿ ಸೃಜನಶೀಲತೆ ಇರಬೇಕು. ಆ ಸೃಜನಶೀಲತೆಯ ಅಂಶಗಳು ತೇಜಸ್ವಿಯ ಎಲ್ಲ ಮುಖ್ಯ ಕೃತಿಗಳಲ್ಲಿ ಕಾಣುತ್ತದೆ. ಅದಕ್ಕೆ ಉದಾಹರಣೆ ಎಂಬಂತೆ, ಅವರ ಅನೇಕ ಕೃತಿಗಳಲ್ಲಿ ತೇಜಸ್ವಿಯೂ ಒಂದು ಪಾತ್ರವಾಗಿ ಬರುತ್ತಾರೆ. ಅವರು ಅನುಭವ ಲೋಕದೊಳಗೆ ಇರುತ್ತಾರೆ. ಅದಕ್ಕೂ ಮುಖ್ಯವಾಗಿ ಪರಕಾಯ ಪ್ರವೇಶ ಮಾಡಿದಂತೆ ಬರೆಯುತ್ತಾರೆ’ ಎಂದರು.
‘ತೇಜಸ್ವಿಯ ಅನೇಕ ಕಥೆಗಳಲ್ಲಿ, ಒಬ್ಬ ಸಿನಿಮಾ ಕಲಾ ನಿರ್ದೇಶಕ ಮಾಡುವ ಅಷ್ಟು ಕೆಲಸವನ್ನು ಮಾಡಿರುತ್ತಾರೆ. ಯಾವ ದೃಶ್ಯದಲ್ಲಿ ಯಾವ ರೀತಿಯ ಕಲಾಕೃತಿಗಳು ಬರಬೇಕು ಎಂಬುದು ತೇಜಸ್ವಿ ತಮ್ಮ ಕೃತಿಗಳಲ್ಲಿ ಬರೆದಿರುತ್ತಾರೆ’ ಎಂದರು.
ಯುವಚಿತ್ರ ನಿರ್ದೇಶಕರಾದ ಈರೇಗೌಡ ಅವರು ಸಹ ಗೋಷ್ಠಿಯಲ್ಲಿ ಮಾತನಾಡಿ ‘ಸಿನಿಮಾ ಎಂದರೆ ನಿರಂತರವಾಗಿ ಕಲಿಯುವ ಮಾಧ್ಯಮ. ಕಲಿಯುವುದು ಎಂದಿಗೂ ನಿಲ್ಲುವುದಿಲ್ಲ. ದೃಶ್ಯ ಮಾಧ್ಯಮದಲ್ಲಿ ನಾವು ಏನನ್ನು ಕೊಡುತ್ತಿದ್ದೆವೆ ಎಂಬುದು ಮುಖ್ಯವಾಗುತ್ತದೆ’ ಎಂದು ಹೇಳಿದರು.

‘ಗಾಂಧಿ ಜಯಂತಿಯನ್ನು ನಾವು ಚಿಕ್ಕವಯಸ್ಸಿನಿಂದಲೂ ಆಚರಿಸುತ್ತ ಬಂದಿದ್ದೇವೆ. ಆದರೆ ನಮ್ಮ ಎಷ್ಟೋ ಯುವಕರಿಗೆ ಗಾಂಧಿ ನಾಯಕ(ಹೀರೋ) ಆಗಲಿಲ್ಲ. ಯಾರಿಗಾದರು ಹೊಡೆದವರು ಹೀರೋ ಆಗುತ್ತಾರೆ. ಆದ್ದರಿಂದ ದೃಶ್ಯ ಮಾಧ್ಯವನ್ನು ಬಹಳ ಎಚ್ಚರಿಕೆಯಿಂದ ನಮ್ಮ ಯುವ ಸಮುದಾಯಕ್ಕೆ ಕೊಡುವ ಜವಾಬ್ದಾರಿ ನಮ್ಮದು’ ಎಂದು ಕಳಕಳಿ ವ್ಯಕ್ತಪಡಿಸಿದರು.
ಗೋಷ್ಠಿಯ ಸಮನ್ವಯತೆಯನ್ನು ರೋಹಿತ್ ಅಗಸರಹಳ್ಳಿ ನಡೆಸಿಕೊಟ್ಟರು.





