ಗ್ರಾಮೀಣ ಭಾರತದ ಹಳ್ಳಿಗಳಲ್ಲಿ, ಸೂರ್ಯೋದಯದ ಮೊದಲೇ ಎದ್ದು ಹಸುಗಳ ಬಳಿ ಹೋಗುವ ಮಹಿಳೆಯರ ಕೈಗಳು ಕೇವಲ ಹಾಲು ಕರೆಯುವ ಕೈಗಳಲ್ಲ. ಅವುಗಳು ಕುಟುಂಬದ ಆರ್ಥಿಕತೆಯನ್ನು ಹೊತ್ತುಕೊಂಡು, ಸಮಾಜದ ಬೆನ್ನೆಲುಬಾಗಿ ನಿಂತಿರುವ ಶಕ್ತಿಯ ಸಂಕೇತಗಳು. ಗ್ರಾಮೀಣ ಭಾರತದ ನಿಜವಾದ ಬೆನ್ನೆಲುಬು ಇವರೇ. ಇಂದು ಕ್ಷೀರ ಸಂಜೀವಿನಿ ಯೋಜನೆಯ ದಶಮಾನೋತ್ಸವದ ಅಂಗವಾಗಿ ನಡೆದ ಪ್ರಗತಿಪರ ಹೈನುಗಾರ ಮಹಿಳೆಯರ ಸಮಾವೇಶದಲ್ಲಿ ಕಾಣಿಸಿಕೊಂಡದ್ದು ಹಾಲಿನ ವಾಸನೆ ಮಾತ್ರವಲ್ಲ, ಹೋರಾಟದ ಕಥೆಗಳು, ಸಾಧನೆಯ ಹೆಜ್ಜೆಗಳು, ಸ್ವಾಭಿಮಾನದ ಜೀವನ.

ಹಸು, ಹಾಲು ಮತ್ತು ಪರಿಶ್ರಮ ಈ ಮೂರೇ ಇವರ ಬದುಕಿನ ಮಂತ್ರ. ಒಂದು ಕಾಲದಲ್ಲಿ ಮನೆಯ ಒಳಗೇ ಸೀಮಿತವಾಗಿದ್ದ ಮಹಿಳೆಯರು, ಇಂದು ಹೈನುಗಾರಿಕೆಯ ಮೂಲಕ ಸ್ವಾವಲಂಬನೆಯ ದಾರಿಯಲ್ಲಿ ನಿಂತಿದ್ದಾರೆ. ಒಂದು ಕಾಲದಲ್ಲಿ ಮನೆಯ ಒಳಗೇ ಸೀಮಿತವಾಗಿದ್ದ ಮಹಿಳೆಯರು ಇಂದು ಹೈನುಗಾರಿಕೆಯ ಮೂಲಕ ಸ್ವಾವಲಂಬನೆಯ ದಾರಿಯಲ್ಲಿ ನಿಂತಿದ್ದಾರೆ. ಬೆಳಿಗ್ಗೆ ಹಸುವಿನ ಆರೈಕೆಯಿಂದ ಶುರುವಾಗುವ ಅವರ ದಿನ, ಸಂಜೆ ಕುಟುಂಬದ ಖರ್ಚುಗಳನ್ನು ತಾವೇ ನಿರ್ವಹಿಸುವ ಮಟ್ಟಿಗೆ ಬೆಳದಿದೆ. ಹೈನುಗಾರಿಕೆ ಅವರಿಗೆ ಕೇವಲ ಆದಾಯದ ಮೂಲವಲ್ಲ, ಅದು ಆತ್ಮವಿಶ್ವಾಸ ಮತ್ತು ಗುರುತನ್ನು ನೀಡಿದೆ.

ಏನಿದು ಕ್ಷೀರ ಸಂಜೀವಿನಿ ಯೋಜನೆ?
ಕ್ಷೀರ ಸಂಜೀವಿನಿ ಯೋಜನೆಯು ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ಹಾಲು ಒಕ್ಕೂಟದ ಯೋಜನೆಯಾಗಿದ್ದು, ಮಹಿಳಾ ಹೈನು ಸಹಕಾರಿ ಸಂಘಗಳನ್ನು ಉತ್ತೇಜಿಸುವ ಮೂಲಕ ಹಾಗೂ ಹೈನುಗಾರಿಕೆಯ ಮೂಲಕ ಬಡ ಗ್ರಾಮೀಣ ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಸಹಯೋಗದೊಂದಿಗೆ ಪ್ರಾರಂಭಿಸಲಾದ ಈ ಉಪಕ್ರಮವು ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ತರಬೇತಿ, ಆರ್ಥಿಕ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ. ಈ ಮೂಲಕ ಅವರ ಆದಾಯ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ. ಮೊದಲ ಹಂತದ ಯೋಜನೆ 2014ರ ಏಪ್ರಿಲ್‌ನಲ್ಲಿ ಪ್ರಾರಂಭವಾಯಿತು.
ಇದರ ಸದುಪಯೋಗ ಪಡೆದುಕೊಂಡ ಮಹಿಳೆಯೊಬ್ಬರು ಈದಿನ.ಕಾಮ್ ಜೊತೆ ಮಾತನಾಡಿ “ಸರ್ಕಾರದ ಯೋಜನೆಯಿಂದಲೇ ಇಂದು ನಾವು ಇಲ್ಲಿ ಬಂದು ನಿಂತಿದ್ದೇವೆ. ನಮ್ಮ ಬದುಕು ಬದಲಾಗಿದೆ. ಇದಕ್ಕೆ ನಾವು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ” ಎಂದು ತಮ್ಮ ಖುಷಿಯನ್ನ ಹಂಚಿಕೊಂಡರು.

ಕ್ಷೀರ ಸಂಜೀವಿನಿ ಯೋಜನೆ ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರ ಬದುಕಿಗೆ ಹೊಸ ದಾರಿ ತೋರಿಸಿದೆ. ಹೈನುಗಾರಿಕೆ ಇನ್ನು ಬರೀ ಉದ್ಯೋಗವಲ್ಲ , ಇದು ಮಹಿಳೆಯರ ಶಕ್ತಿ, ಆತ್ಮವಿಶ್ವಾಸ ಮತ್ತು ಸ್ವತಂತ್ರತೆಯ ಸಂಕೇತವಾಗಿ ಬದಲಾಗಿದೆ. ಸಮಾವೇಶದಲ್ಲಿ ಹಲವಾರು ಪ್ರಗತಿಪರ ಮಹಿಳಾ ಹೈನುಗಾರರಿಗೆ ಸನ್ಮಾನವೂ ಮಾಡಲಾಯಿತು. ಆ ಸನ್ಮಾನಗಳು ವೇದಿಕೆಯಲ್ಲಿ ಕೊಟ್ಟ ಹೂವಿನ ಹಾರಗಳಷ್ಟೇ ಅಲ್ಲ , ವರ್ಷಗಳ ಕಾಲ ಬೆವರು ಸುರಿಸಿದ ಶ್ರಮಕ್ಕೆ ಸಿಕ್ಕ ಹೆಗ್ಗುರುತು.
ಯೋಜನೆಯ ಉದ್ದೇಶ ಮತ್ತು ಗುರಿಗಳು :
ಕ್ಷೀರ ಸಂಜೀವಿನಿ ಯೋಜನೆಯ ಪ್ರಮುಖ ಗುರಿ ಸಮಾಜದ ಹಿಂದುಳಿದ ವರ್ಗದ ಮಹಿಳೆಯರಿಗೆ, ಅಂದರೆ ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು, ಬಿಪಿಎಲ್ ಕುಟುಂಬಗಳು ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಆದಾಯದ ಮೂಲವನ್ನು ಒದಗಿಸುವುದು. ಕ್ಷೀರ ಸಂಜೀವಿನಿ ಯೋಜನೆಯನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದ್ದು, ಬೇಡಿಕೆಗೆ ತಕ್ಕಂತೆ ಯೋಜನೆಯ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ.
“ನಮ್ಮ ಜೀವನದಲ್ಲೇ ನಾವು ಇಂತಹ ದೊಡ್ಡ ಕಾರ್ಯಕ್ರಮಕ್ಕೆ ಬರ್ತೀವಿ ಅಂತ ಅಂದುಕೊಂಡಿರಲಿಲ್ಲ. ಹೈನುಗಾರಿಕೆ ಅದನ್ನ ಸಾಧ್ಯ ಮಾಡಿದೆ” ಎಂದು ಒಬ್ಬ ಮಹಿಳೆ ಹೇಳುವಾಗ, ಆ ಮಾತುಗಳಲ್ಲಿ ಸಾಧನೆಯ ಹೆಮ್ಮೆ ಮತ್ತು ಖುಷಿ ಎರಡೂ ಮಿಂಚುತ್ತಿತ್ತು.

ಆದರೆ ಈ ಖುಷಿಯ ಜೊತೆಗೆ ಕಳಕಳಿಯೂ ಕೇಳಿಬಂತು. “ರೈತರು ಮತ್ತು ಮಹಿಳೆಯರು ಹೈನುಗಾರಿಕೆಯಿಂದ ಹಿಮ್ಮುಖ ಆಗದಂತೆ ಸರ್ಕಾರವೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಸಬ್ಸಿಡಿ ಹೆಚ್ಚಿಸಬೇಕು, ಬಡ್ಡಿರಹಿತ ಸಾಲ ಕೊಡಬೇಕು, ಹೈನುಗಾರಿಕೆಯನ್ನು ಉಳಿಸಬೇಕು” ಎಂದು ಮಹಿಳೆಯರು ತಮ್ಮ ಬೇಡಿಕೆಗಳನ್ನು ಸ್ಪಷ್ಟವಾಗಿ ಹೇಳಿದರು. ಈ ಯೋಜನೆಯ ಯಶಸ್ಸು ಕೇವಲ ಹತ್ತು ವರ್ಷಗಳದ್ದಲ್ಲ ಅದು ಮುಂದಿನ ಪೀಳಿಗೆಗಳಿಗೂ ಮುಂದುವರಿಯಬೇಕು. ಹೈನುಗಾರಿಕೆ ಉಳಿದರೆ ಮಾತ್ರ ಗ್ರಾಮೀಣ ಆರ್ಥಿಕತೆಯೂ ಉಳಿಯುತ್ತದೆ ಎಂಬುದು ಅವರ ಮಾತು.

ಕ್ಷೀರ ಸಂಜೀವಿನಿ ಯೋಜನೆ ಮಹಿಳೆಯರ ಬದುಕಿಗೆ ಬೆಳಕು ತಂದಿದೆ. ಆ ಬೆಳಕು ನಂದಬಾರದು. ಹಸು, ಹಾಲು ಮತ್ತು ಪರಿಶ್ರಮದಿಂದ ನಿರ್ಮಾಣವಾದ ಈ ಶಕ್ತಿ ಗ್ರಾಮೀಣ ಭಾರತದ ಭವಿಷ್ಯ. ಇವರು ಕೇವಲ ಹೈನುಗಾರ ಮಹಿಳೆಯರಲ್ಲ. ಇವರು ದೇಶದ ಆರ್ಥಿಕತೆಯ ಮೌನವಾಗಿ ಕೊಡುಗೆ ಕೊಡುತ್ತಿರುವವರು.





