“12ನೇ ಶತಮಾನದ ವಚನ ಚಳುವಳಿಯಿಂದ, ಇಂದು ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಸೌಜನ್ಯ ಹೋರಾಟದ ತನಕವೂ ಸೃಷ್ಟಿಯಾದ ಅಷ್ಟು ಹೋರಾಟದ ಹಾಡುಗಳು ಕನ್ನಡ ಸಾಹಿತ್ಯ ಲೋಕಕ್ಕೆ ಸಂಬಂಧಿಸಿವೆ. ಈ ಹೋರಾಟದ ಹಾಡುಗಳು, ಜನರ ಬದುಕು-ಬವಣೆ, ಸುಖ-ದುಖಃ ಗಳಿಗೆ ಸಮಾಜ ಸ್ಪಂದಿಸಿದ ಬಗೆಯನ್ನು ಹೇಳುತ್ತದೆ. ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಬದಲಾಗುವ ಎಲ್ಲ ಕಾಲವನ್ನು ಈ ಹಾಡುಗಳು ಕಟ್ಟಿಕೊಡುತ್ತವೆ. ಈ ನೆಲೆಕ್ಕೆ ಬೇಕಿರುವುದು ಹೋರಾಟದ ಸಾಹಿತ್ಯವೇ ಹೊರತು ಬೇರಾವುದು ಅಲ್ಲ” ಎಂದು ಹಿರಿಯ ಹೋರಾಟಗಾರರಾದ ಪಿಚ್ಚಳ್ಳಿ ಶ್ರೀನಿವಾಸ್ ಹೇಳಿದರು.
ಭಾನುವಾರ ಬೆಂಗಳೂರು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನಡೆದ ಸಮಾಜಮುಖಿ ಸಾಹಿತ್ಯ ಸಮ್ಮೇಳನದಲ್ಲಿ “ಕನ್ನಡದಲ್ಲಿ ಹೋರಾಟದ ಸಾಹಿತ್ಯ ಏಕಿಲ್ಲ..?” ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು “ಕರ್ನಾಟಕದಲ್ಲಿ ಮೊದಲು ವಚನ ಚಳುವಳಿಯಿಂದ ಮೊದಲುಗೊಂಡು, ಇಲ್ಲಿಯ ತನಕ ನಡೆದಿರುವ ದಲಿತ, ರೈತ, ಕಾರ್ಮಿಕ, ಮಹಿಳಾ ಚಳುವಳಿಗಳಲ್ಲಿ ಅನೇಕ ಸಾಹಿತ್ಯ ಸೃಷ್ಟಿಯಾಗಿ ಬಂದಿದೆ. ಈ ಗೋಷ್ಠಿಗೆ ನೀಡಿದ ಶೀರ್ಷಿಕೆಯೆ ( ಶೀರ್ಷಿಕೆ : ಕನ್ನಡದಲ್ಲಿ ಹೋರಾಟದ ಸಾಹಿತ್ಯ ಏಕಿಲ್ಲ..?) ತಪ್ಪು. ಕನ್ನಡ ಸಾಹಿತ್ಯದಲ್ಲಿ ಅನೇಕ ಚಳುವಳಿಗಳಲ್ಲಿ ಹಾಡಿನ ಮೂಲಕವೇ ಸಾಹಿತ್ಯ ಹುಟ್ಟಿದೆ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? : ಪ್ರತಿಭಟನೆಯೇ ದೇಶದ್ರೋಹವಾಗುವ ದೇಶದಲ್ಲಿ ಪ್ರಜಾತಂತ್ರ ಬಿಕ್ಕಟ್ಟಿನ ಹಾದಿಯಲ್ಲಿರುತ್ತದೆ: ಎ ನಾರಾಯಣ
ಈ ಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಿದ್ವಾಂಸರಾದ ಹಿ.ಶಿ.ರಾಮಚಂದ್ರೇಗೌಡ “ವಚನ ಚಳುವಳಿಯಿಂದ ಮೊದಲುಗೊಂಡು ಇಲ್ಲಿಯ ತನಕವು ನಮ್ಮಲ್ಲಿ ಹೋರಾಟದ ಸಾಹಿತ್ಯ ಬಂದಿದೆ. ಅದು ಚಳುವಳಿಗಳ ಮುಖಾಂತರ ಬಂದಿದೆ. ಎಲ್ಲ ಚಳುವಳಿಗೆ ಮುನ್ನುಡಿಯಂತೆ ವಚನ ಚಳುವಳಿ ಬಂದಿದೆ. ಅನೇಕ ಚಳುವಳಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ದೂರದರ್ಶಕವಾಗಿ ಜೊತೆಗೆ ನಾಯಕತ್ವದ ಗುಣವು ಇದ್ದಿದ್ದರಿಂದ ಸಾಹಿತ್ಯ ಜೊತೆಜೊತೆಗೆ ಬಂದಿದೆ” ಎಂದರು.

“ರೈತ ಚಳುವಳಿ ಆರಂಭವಾದಾಗ ಅನೇಕ ಹಾಡುಗಳು ಹುಟ್ಟಿವೆ. ಅದರಲ್ಲಿ ಬಂಡಾಯ ಸಾಹಿತ್ಯ ಇದೆ. ಅದರಲ್ಲಿ ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಚರ್ಚೆಗಳನ್ನು ನಡೆಸಿದ್ದೆವೆ. ಇವೆಲ್ಲದಕ್ಕೂ ಸಾಹಿತಿಗಳು ಸ್ಪಂದಿಸಿದ್ದಾರೆಯೇ ಹೊರತು ಜನಸಾಮಾನ್ಯರು ಸ್ಪಂದಿಸಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ದಲಿತ ಚಳುವಳಿಗಳು ನಮ್ಮಲ್ಲಿ ಸಮಗ್ರವಾಗಿ ನಡೆದವು. ದೇವನೂರು ಮಹಾದೇವ, ಪ್ರೊ.ಬಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ದಲಿತ ಚಳುವಳಿಗೆ ಒಳ್ಳೆಯ ನಾಯಕತ್ವ ಸಿಕ್ಕಿತು. ಇವರ ನೇತೃತ್ವದಲ್ಲಿ ಯಾವುದಾದರೂ ಚಳುವಳಿ ನಡೆದರೆ ಅನೇಕ ಜನ ಸೇರುತ್ತಿದ್ದರು. ಜೊತೆಗೆ ಅನೇಕ ಹಾಡುಗಳು ಸಹ ಸೃಷ್ಟಿಯಾದವು. ಈ ಹಾಡುಗಳು ಜನಪರವಾಗಿದ್ದರಿಂದ, ಅನೇಕ ಜನರನ್ನು ಸೆಳೆಯುತ್ತಿದ್ದವು. ಓದದವರಿಗಾಗಿ ಬರೆದ ಸಾಹಿತ್ಯ ಎಂದರೆ ಅದು ಚಳುವಳಿಗಳಲ್ಲಿ ಹುಟ್ಟಿದ ಹಾಡುಗಳು. ಅವುಗಳು ಜನಪರವಾಗಿದ್ದವು” ಎಂದರು.
“ರೈತ ಚಳುವಳಿ ಕನ್ನಡ ನಾಡಿನಲ್ಲಿ ಬಹಳ ಮುಖ್ಯವಾಗುತ್ತದೆ. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಅನೇಕ ಹೋರಾಟಗಳು ಜನಪರವಾಗಿದ್ದವು. ರೈತ ಚಳುವಳಿಯು ಜಾತ್ಯಾತೀತ ತತ್ವವನ್ನು, ಅಂತರಜಾತಿ ವಿವಾಹವನ್ನು ಮಾಡಿಸುವ ಮೂಲಕ ದೊಡ್ಡ ನಾಯಕತ್ವದ ಗುಣವನ್ನು ಕರ್ನಾಟಕಕ್ಕೆ ಪರಿಚಯಿಸಿತು” ಎಂದು ಹೇಳಿದರು.
“ವಿಶೇಷವಾಗಿ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಹುಟ್ಟಿದ ಎಲ್ಲ ಚಳುವಳಿಗಳು ಶೂದ್ರರ ಪರವಾಗಿಯೇ ಹುಟ್ಟಿದವು. ಶೂದ್ರರು ಅಸಂಘಟಿತ ವರ್ಗ, ಸಂಘಟಿತವಾಗಿ ಯಾವುದು ತಮ್ಮ ಸಂಸ್ಕೃತಿ ಎಂಬುದು ಇದುವರೆಗೂ ಕಂಡುಕೊಳ್ಳಲು ಸೋಲುತ್ತಿದ್ದಾರೆ. ಇಂದಿಗೂ ಮೇಲ್ವರ್ಗದ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ನಮ್ಮ ಶತ್ರು ಎಂದಿಗೂ ಒಂಟಿಯಲ್ಲ. ಇವರುಗಳು ಸ್ಥಳೀಯ, ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಇದ್ದಾರೆ. ಇವರುಗಳೇ ಕಾರ್ಪೋರೇಟರ್ಗಳು. ಇವರೆಲ್ಲರೂ ರಾಜಕಾರಣಿಗಳನ್ನು ಸಾಕು ನಾಯಿಗಳ ತರ ಸಾಕುತ್ತಿದ್ದಾರೆ. ಅದರ ವಿರುದ್ಧವಾಗಿಯೇ ರೈತ ಚಳವಳಿ ದೊಡ್ಡ ಮಟ್ಟದ್ದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೇತೃತ್ವದಲ್ಲಿ ನಡೆದ ಹೋರಾಟದ ದಿನ”ಗಳನ್ನು ನೆನೆಸಿಕೊಂಡರು.

ಈ ಗೋಷ್ಠಿಯಲ್ಲಿ ಮಾತನಾಡಿದ, ರೈತ ನಾಯಕಿ ಸುನಂದ ಜಯರಾಮ್ “ರೈತ ಚಳುವಳಿ ಕರ್ನಾಟಕದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಲೋಹಿಯಾ, ಅಂಬೇಡ್ಕರ್ ವಿಚಾರದಾರೆಗಲನ್ನು ಒಳಗೊಂಡಿತ್ತು. ಅದರ ಜೊತೆಗೆ ಕರ್ನಾಟಕದಲ್ಲಿ ನಡೆದ ಅನೇಕ ಕಾರ್ಮಿಕ, ದಲಿತ, ಮಹಿಳಾ ಚಳುವಳಿಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಸಾಹಿತ್ಯ ಸೃಷ್ಟಿಯಾಗಿದೆ. ಕನ್ನಡದಲ್ಲಿ ಹೊರಾಟದ ಸಾಹಿತ್ಯ ಇಲ್ಲ ಎನ್ನುವುದೇ ತಪ್ಪು” ಎಂದರು.
ಈ ಗೋಷ್ಠಿಯ ಸಮನ್ವಯತೆಯನ್ನು ಟಿ.ಹೆಚ್.ಲವಕುಮಾರ್ ಅವರು ವಹಿಸಿಕೊಂಡಿದ್ದರು.






