“ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳು ನೀರು, ಆಹಾರ ಕೊಡುತ್ತವೆ. ಬಹುತೇಕ ರೈತರು ಪಶ್ಚಿಮ ಘಟ್ಟದಿಂದ ಬರುವ ಮಳೆಯ ಮೇಲೆ ಅವಲಂಬಿಸಿದ್ದಾರೆ. ಔಷಧಿಯನ್ನು ಕೊಡುವ ಅತೀ ಮುಖ್ಯವಾದ ಸಸ್ಯಪ್ರಭೇದಗಳು ಪಶ್ಚಿಮ ಘಟ್ಟದಲ್ಲಿವೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟವನ್ನು ನಾಶ ಮಾಡುವುದು ನಿಲ್ಲಬೇಕು” ಎಂದು ಚಿತ್ರನಟ ಮತ್ತು ಪರಿಸರವಾದಿ ಸುರೇಶ್ ಹೆಬ್ಳೀಕರ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದ, ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಕುರಿತು ಚಿತ್ರಕಲಾ ಪ್ರದರ್ಶನ ಹಾಗೂ ಪರಿಸರ ತಜ್ಞರ ರಾಷ್ಟ್ರಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
“ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಜನಸಾಮಾನ್ಯರಿಗೆ ಪಶ್ಚಿಮ ಘಟ್ಟದ ಬಗ್ಗೆ ಮಾಹಿತಿ ಕೊಡಲು ಈ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದೆವೆ. ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಪಾಂಡಿಚೇರಿಯಿಂದ ಅನೇಕ ಪರಿಸರ ತಜ್ಞರು ಬಂದಿದ್ದಾರೆ. ಅವರೆಲ್ಲರೂ ಇಂದು ಪಶ್ಚಿಮ ಘಟ್ಟ ಉಳಿಸಿಕೊಳ್ಳುವ ಹಾಗೂ ಅಲ್ಲಿರುವ ಗಿಡ, ಮರ, ಪ್ರಾಣಿ-ಪಕ್ಷಿ ಪ್ರಭೇದಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ” ಎಂದು ಹೇಳಿದರು.
“ಆರ್ಥಿಕ ಅಭಿವೃದ್ಧಿಯ ಬೆನ್ನು ಹತ್ತಿ, ಮಣ್ಣಿನ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದೆವೆ. ಗಿಡ-ಮರ, ಕಲ್ಲು-ಮಣ್ಣು, ನೀರು-ಗಾಳಿ ಇವುಗಳು ಮನುಷ್ಯನ ವಿಕಾಸದ ಮುಖ್ಯ ಭಾಗ. ಈ ಚಿತ್ರಕಲಾ ಪ್ರದರ್ಶನದ ಮೂಲಕ ಜನರ ಮೇಲೆ ಪ್ರಭಾವಿಸುವುದು ನಮ್ಮ ಕಾರ್ಯಕ್ರಮದ ಉದ್ದೇಶ” ಎಂದರು.

“ಬದುಕಿಗೆ ಅಗತ್ಯವಾದ ಪೇಪರ್, ಕರೆಂಟ್, ನೀರು, ಗಾಳಿ ಇವೆಲ್ಲವೂ ಎಲ್ಲಿಂದ ಬರುತ್ತದೆ ಎಂಬುದು ಇಂದಿನ ಮಕ್ಕಳಿಗೆ ಗೊತ್ತಿಲ್ಲ. ಅದಕ್ಕಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಅಭಿವೃದ್ಧಿ ಹೆಸರಲ್ಲಿ ಪರಿಸರವನ್ನು ನಾಶ ಮಾಡುತ್ತ ಹೋದರೆ, ಮುಂದೆ ನಮ್ಮ ಜಗತ್ತು ಉಳಿಯುವುದು ಕಷ್ಟ ಎನಿಸುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ನೂರಾರು ವೀಕ್ಷಕರು ಪಶ್ಚಿಮ ಘಟ್ಟಗಳ ಕುರಿತ ಬಣ್ಣದ ಕುಂಚದಲ್ಲಿ ತಯಾರಿಸಿದ್ದ ಚಿತ್ರಗಳನ್ನು ವೀಕ್ಷಿಸಿದರು.





