“ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳು ಜನಸಂಖ್ಯೆಯಲ್ಲಿ ದೊಡ್ಡಮಟ್ಟದಲ್ಲಿ ಇಲ್ಲದಿರುವುದರಿಂದಲೇ ರಾಜಕಾರಣಿಗಳು ನಮ್ಮ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ನಾವು ಸಂಘಟಿತರಾಗಿ ನಮ್ಮ ಮೀಸಲಾತಿಯನ್ನು ಕೇಳಬೇಕು” ಎಂದು ಹಿರಿಯ ನ್ಯಾಯಾವಾದಿ ಸಿ.ಎಸ್.ದ್ವಾರಕಾನಾಥ್ ಅವರು ಹೇಳಿದರು.
ಬೆಂಗಳೂರು ನಗರದ ಗಾಂಧಿಭವನದಲ್ಲಿ ಮಂಗಳವಾರ ಕರ್ನಾಟಕ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ, ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಮತ್ತು ಪಾರ್ಧಿ ಹರಣಾ ಶಿಕಾರಿ ಸಂಘ ಸೇರಿ, ಆದಿವಾಸಿ ಒಳ ಮೀಸಲಾತಿ ಕುರಿತು ಚಿಂತನ ಮಂಥನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇದನ್ನು ಓದಿದ್ದೀರಾ?: ಅಸ್ಪೃಶ್ಯ ಅಲೆಮಾರಿ ಒಳಮೀಸಲಾತಿ ಹೋರಾಟ; ಮಳೆಗೆ ಟೆಂಟ್ ಧ್ವಂಸ
“ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿಯೂ 48 ಬುಡಕಟ್ಟು ಸಮುದಾಯಗಳಿಗೆ ಮೀಸಲಾತಿ ದೊರೆತಿಲ್ಲ. ಇವ್ಯಾವುದು ಇಲ್ಲದೆ ಈ ಸಮುದಾಯಗಳು ಹೇಗೆ ಬದುಕಬೇಕು. ರಾಜಕೀಯ ಮೀಸಲಾತಿಯನ್ನು ಪಡೆಯಬೇಕಾದರೆ ನಾವು ಸಂಘಟಿತರಾಗಬೇಕು.” ಎಂದು ಹೇಳಿದರು.

ಈ ಸಭೆಯಲ್ಲಿ ಪ್ರಮುಖ ನಿರ್ಣಯವನ್ನು ಕೈಗೊಳ್ಳುವ ಕುರಿತು ದ್ವಾರಕಾನಾಥ್ ಅವರು ಐದು ನಿರ್ಣಯಗಳನ್ನು ಮಂಡಿಸಿದರು.
- ಕರ್ನಾಟಕ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಿದಂತೆ, ಪರಿಶಿಷ್ಟ ಪಂಗಡ, ಬುಡಕಟ್ಟುಗಳಿಗೂ ಒಳಮೀಸಲಾತಿ ಕಲ್ಪಿಸಲು, ಪರಿಶಿಷ್ಟ ಪಂಗಡ ಒಳ ಮೀಸಲಾತಿ ಆಯೋಗ ರಚನೆ ಮಾಡುವ ಕುರಿತು
- ಕರ್ನಾಟಕ ರಾಜ್ಯದಲ್ಲಿನ 50 ಬುಡಕಟ್ಟುಗಳಲ್ಲಿ 48 ಪರಿಶಿಷ್ಟ ಪಂಗಡಗಳನ್ನು ಒಳಗೊಂಡಂತೆ ಪರಿಶಿಷ್ಟ ಪಂಗಡಗಳ ಕ್ರಮ ಸಂಖ್ಯೆ 37/38 ರ ಪ್ರತ್ಯೇಕ ಅಭಿವೃದ್ಧಿ ನಿಗಮ ಇರುವುದರಿಂದ ಅವುಗಳನ್ನು ಹೊರತುಪಡಿಸಿ, ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮವನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮದಿಂದ ಪ್ರತ್ಯೇಕಿಸಿ ಸ್ಥಾಪಿಸುವ ಕುರಿತು
- ಆದಿವಾಸಿ ನಾಯಕ ಬಿರ್ಸಾಮುಂಡಾ ದಿನಾಚರಣೆಯನ್ನು ಪ್ರತಿವರ್ಷ ಸರ್ಕಾರದ ಮೂಲಕ ಆಚರಿಸುವ ಕುರಿತು
- ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಹುಲಿ ಸಂರಕ್ಷಿತ ಅರಣ್ಯಧಾಮವಾಗಿ ಘೋಷಿಸುವ ಪ್ರಸ್ತಾವನೆ ಕುರಿತು
- ಪಶ್ಚಿಮ ಘಟ್ಟ ಪ್ರದೇಶದ ಬುಡಕಟ್ಟುಗಳ ಅರಣ್ಯ ಹಕ್ಕು ಕಾಯಿದೆಯ ಅನುಷ್ಟಾನ, ಲೈನ್ ಮನೆಗಳಲ್ಲಿ ಮತ್ತು ಅರಣ್ಯವಾಸಿ ಬುಡಕಟ್ಟುಗಳ ಕುಂದುಕೊರತೆಗಳ ಕುರಿತು
ಕೊನೆಯಲ್ಲಿ ಈ ನಿರ್ಣಯಗಳ ಕುರಿತು ಅಲೆಮಾರಿ, ಆದಿವಾಸಿ ಮತ್ತು ಬುಡಕಟ್ಟು ಸಮುದಾಯದ ಮುಖಂಡರು ಚರ್ಚೆ ನಡೆಸಿದರು.






