ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದ, ಭ್ರಷ್ಟಾಚಾರ, ಕಮಿಷನ್ ದಂಧೆ ವಿರುದ್ಧ ಮತ ಹಾಕುವಂತೆ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದ ‘ಎದ್ದೇಳು ಕರ್ನಾಟಕ’ ಅಭಿಯಾನ ಕಾರ್ಯಕರ್ತರ ಮೇಲೆ ಬಿಜೆಪಿಗರು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.
ಜಯನಗರದ 9ನೇ ಬ್ಲಾಕ್‌ನಲ್ಲಿ ಎದ್ದೇಳು ಕರ್ನಾಟಕ’ದ ಕಾರ್ಯಕರ್ತರು ಜಾಗೃತಿ ಕಾರ್ಯ ನಡೆಸುತ್ತಿದ್ದರು. ಈ ವೇಳೆ, ಅವರನ್ನು ಅಡ್ಡಗಟ್ಟಿದ ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಕೆ ರಾಮಮೂರ್ತಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.
ಅಭಿಯಾನದ ಸದಸ್ಯ ರವಿ ಮತ್ತು ಲೋಕ್ಯ ಎಡಿಲು ಅವರನ್ನು ಬಿಜೆಪಿ ಕಾರ್ಯಕರ್ತರು ಥಳಿಸಿದ್ದಾರೆ. ಅಲ್ಲದೆ, ಅಭಿಯಾನದಲ್ಲಿ ಮಹಿಳಾ ಕಾರ್ಯಕರ್ತೆಯರಾದ ಗೌರಿ, ಚೆನ್ನಮ್ಮ ಅವರಿಗೂ ಬೆದರಿಕೆ ಹಾಕಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ‘ಎದ್ದೇಳು ಕರ್ನಾಟಕ’ದ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.




