ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸ್ವಾತಂತ್ರ್ಯ ಉದ್ಯಾನವನ (ಫ್ರೀಡಂ ಪಾರ್ಕ್) ವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವಂತೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಇಂದು ಬೆಳಿಗ್ಗೆ ನಗರದ ಸ್ವಾತಂತ್ರ್ಯ ಉದ್ಯಾನವನ (ಫ್ರೀಡಂ ಪಾರ್ಕ್)ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪಾರ್ಕ್‌ನಲ್ಲಿ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ, ವಾಯುವಿಹಾರಿಗಳ ನಡಿಗೆಗೆ ಸುಗಮ ಮಾರ್ಗ, ಸೂಕ್ತ ಭದ್ರತಾ ವ್ಯವಸ್ಥೆ ಸೇರಿದಂತೆ ಸಮಗ್ರ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
“ನಗರದ ಹೃದಯ ಭಾಗದಲ್ಲಿರುವ ಸ್ವಾತಂತ್ರ್ಯ ಉದ್ಯಾನವನದಲ್ಲಿ ವಾಯುವಿಹಾರಕ್ಕೆ ಆಗಮಿಸುವ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳ ನಡಿಗೆಗೆ ಸುಗಮವಾಗುವಂತೆ ಗುಣಮಟ್ಟದ ವಾಕಿಂಗ್ ಪಾತ್ ನಿರ್ಮಿಸಬೇಕು. ಮಕ್ಕಳ ಆಟೋಟಕ್ಕಾಗಿ ಆಟದ ಉಪಕರಣಗಳೊಂದಿಗೆ ಕಿಡ್ಸ್ ಪಾರ್ಕ್ ನಿರ್ಮಿಸಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಮತ್ತು ಉದ್ಯಾನವನದಲ್ಲಿ ಸ್ವಚ್ಛತೆ ಕಾಪಾಡಬೇಕು” ಎಂದು ತಿಳಿಸಿದರು.



ಹೆಚ್ಚು ಸಸಿಗಳನ್ನು ನೆಟ್ಟು ಅವುಗಳ ಸರಿಯಾದ ಪೋಷಣೆಗೆ ಕ್ರಮ ವಹಿಸಲು ಹಾಗೂ ಒಣಗಿದ ಹಾಗೂ ಅಪಾಯಕಾರಿ ಮರ ಮತ್ತು ರೆಂಬೆ ಕೊಂಬೆಗಳನ್ನು ತೆರವುಗೊಳಿಸಲು ಸೂಚಿಸಿದ ಅವರು, ಬಹುಮಹಡಿ ವಾಹನ ನಿಲುಗಡೆ ಕಟ್ಟಡದ ಮೇಲ್ಭಾಗದ ಸ್ಥಳವನ್ನು ವಾಣಿಜ್ಯ ಉದ್ದೇಶ ಬಳಸಿಕೊಳ್ಳಲು ಕ್ರಮ ವಹಿಸುವಂತೆ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು | ಪಶ್ಚಿಮ ಬಂಗಾಳದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಸ್ಥಳ ಪರಿಶೀಲನೆ ಸಂದರ್ಭದಲ್ಲಿ ನಿರ್ಮಾಣ ಹಂತದಲ್ಲಿರುವ ಕೆಲವು ಕಟ್ಟಡಗಳ ತ್ಯಾಜ್ಯ, ಕಬ್ಬಿಣ, ಜಲ್ಲಿಕಲ್ಲು, ಮರಳು ಇತರೆ ವಸ್ತುಗಳನ್ನು ರಸ್ತೆಯಲ್ಲಿ ಹಾಕಿದ್ದು ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕಾರಣ ಅದನ್ನು ಕೂಡಲೇ ತೆರವುಗೊಳಿಸಲು ಹಾಗೂ ಕಟ್ಟಡ ಮಾಲೀಕರಿಗೆ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸ್ವಾತಂತ್ರ್ಯ ಉದ್ಯಾನವನದ ಅಕ್ಕ ಪಕ್ಕದಲ್ಲಿನ ರಸ್ತೆಗಳನ್ನು ಪರಿಶೀಲಿಸಿ, ರಸ್ತೆಬದಿಯಲ್ಲಿ ಎಳನೀರು ಮಾರಾಟ ಮಾಡುತ್ತಿರುವವರ ತೆಂಗಿನ ಚಿಪ್ಪುಗಳನ್ನು ಅಲ್ಲಿಯೇ ಬಿಡದೆ, ವಿಲೇವಾರಿ ಮಾಡಲು ಕ್ರಮ ವಹಿಸಲು ಸೂಚಿಸಿದರು. ಜೊತೆಗೆ ಪಾದಚಾರಿ ಮಾರ್ಗಗಳ ಸರಿಯಾದ ನಿರ್ವಹಣೆಗಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್, ಜಂಟಿ ಆಯುಕ್ತ ರಂಗನಾಥ್ ಮತ್ತು ಹೇಮಂತ್ ಶರಣ್, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್ ಮತ್ತು ಸುಗುಣಾ, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.





