ಔರಾದ್ ತಾಲೂಕಿನ ಜಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕರ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ಘಟನೆ ಸಂಬಂಧ ಶಾಲೆಯ ಶಿಕ್ಷಕ ನಜೀರ್ ಅಹ್ಮದ್ ಅವರ ಅಮಾನತು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ವಿದ್ಯಾರ್ಥಿಗಳು ಬೆಳಗ್ಗೆ ಶಾಲೆಗೆ ಬೀಗ ಹಾಕಿ ಶಿಕ್ಷಕ ನಜೀರ್ ಅಹ್ಮದ್ ಅವರ ಅಮಾನತು ಮಾಡಿರುವುದು ಖಂಡನೀಯ. ಕೂಡಲೇ ಅವರ ಅಮಾನತು ಹಿಂಪಡೆಯಬೇಕೆಂದು ಆಗ್ರಹಿಸಿ ಶಾಲೆ ಎದುರು ಕೆಲಹೊತ್ತು ಪ್ರತಿಭಟನೆ ನಡೆಸಿದರು. ಮುಖ್ಯಶಿಕ್ಷಕರ ರಜೆ ಹಿನ್ನೆಲೆ ಪ್ರಭಾರ ಮುಖ್ಯಶಿಕ್ಷಕ ಕರ್ತವ್ಯದಲ್ಲಿದ್ದರು. ಶಿಕ್ಷಕ ನಜೀರ್ ಅಹ್ಮದ್ ಅವರದ್ದು ಯಾವುದೇ ತಪ್ಪಿಲ್ಲ. ಅವರನ್ನು ಪುನರ್ ನಿಯುಕ್ತಿ ಮಾಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಔರಾದ್ ಬಿಇಒ ಬಿ.ಜಿ. ರಂಗೇಶ ಭೇಟಿ ನೀಡಿ ಅಮಾನತು ಹಿಂಪಡೆಯಲಾಗುವುದು ಎಂದು ಭರವಸೆ ನೀಡಿ, ವಿದ್ಯಾರ್ಥಿಗಳಿಗೆ ಮನವೊಲಿಸಿದ ಬಳಿಕ ಮಕ್ಕಳು ಪ್ರತಿಭಟನೆ ಕೈಬಿಟ್ಟರು ಎಂದು ತಿಳಿದು ಬಂದಿದೆ.
ಏನಿದು ಘಟನೆ?
ಫೆ.3ರಂದು ಶಾಲೆಯ ಖಾಯಂ ಮುಖ್ಯ ಗುರು ರಜೆ ಮೇಲೆ ಇರುವುದರಿಂದ ಶಿಕ್ಷಕ ನಜೀರ್ ಅಹ್ಮರ್ ಇವರು ಪ್ರಭಾರಿ ಮುಖ್ಯ ಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಂದು ಮಧ್ಯಾಹ್ನ ಬಿಸಿಯೂಟ ಸೇವಿಸಿ ಹೊಟ್ಟೆ ನೋವು ಹಾಗೂ ವಾಂತಿಯಿಂದ ಬಳಲಿದ ಒಟ್ಟು 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಔರಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಘಟನೆ ನಡೆದ ದಿನ ಸಂಜೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ ಬದೋಲೆ ಸೇರಿದಂತೆ ಶಾಸಕ ಪ್ರಭು ಚೌಹಾಣ್ ಅವರು ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ: ಔರಾದ್ | ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಘಟನೆ ವಿಷಯ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಪರಿಗಣಿಸಿ ರಾಜ್ಯ ಮಕ್ಕಳ ರಕ್ಷಣಾ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿತ್ತು.





