‘ದಾವಣಗೆರೆ ಧಣಿ’ ಶಾಮನೂರು ಶಿವಶಂಕರಪ್ಪನವರ ಮತ್ತೊಂದು ಮುಖ

Date:

ಶಾಮನೂರರು ಇಲ್ಲವಾಗಿದ್ದಾರೆ. ದಿನಸಿ ಅಂಗಡಿ ಗುಮಾಸ್ತನಿಂದ ದಾವಣಗೆರೆ ಧಣಿಯವರೆಗೆ ಬೆಳೆದ ಪರಿಯನ್ನು ನೋಡಿದಾಗ- ವಂಶ ಪಾರಂಪರ್ಯ ಉದ್ಯಮಿ, ರಾಜಕಾರಣಿ, ಫ್ಯೂಡಲ್, ಕ್ಯಾಪಿಟೇಷನ್ ಕುಳ, ಅಜಾತಶತ್ರು, ಜನರೊಂದಿಗೇ ಬದುಕಿದ ಜನನಾಯಕ- ಎಲ್ಲವೂ ಕಾಣುತ್ತದೆ.

ದಾವಣಗೆರೆಯ ಧಣಿ ಶಾಮನೂರು ಶಿವಶಂಕರಪ್ಪ(95)ನವರು ಕಾಲವಾಗಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಅವರು, ದೇಶದ ಅತ್ಯಂತ ಹಿರಿಯ ಶಾಸಕರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ದೀರ್ಘಾವಧಿವರೆಗಿನ ಅಧ್ಯಕ್ಷರು. ಶಾಮನೂರು ಶಿವಶಂಕರಪ್ಪನವರು ಮೂಲತಃ ಉದ್ಯಮಿ. ಆ ಉದ್ಯಮಕ್ಕೆ ಪೂರಕವಾಗಿ ರಾಜಕಾರಣವನ್ನು ಮೈಗೂಡಿಸಿಕೊಂಡವರು. ರಾಜಕಾರಣಿ-ಉದ್ಯಮಿಯಾಗಿ ಗುರುತಿಸಿಕೊಂಡವರು. ವಂಶ ಪಾರಂಪರ್ಯ ಉದ್ಯಮ ಮತ್ತು ರಾಜಕಾರಣವನ್ನು ಪೊರೆದವರು. ಹತ್ತಿ ಗಿರಣಿಗಳಿಂದ ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದು ಹೆಸರಾಗಿದ್ದ ದಾವಣಗೆರೆಗೆ ಶಿಕ್ಷಣನಗರಿ, ವಾಣಿಜ್ಯನಗರಿ ಎಂಬ ಹೆಸರು ಬರಲು ಕೊಡುಗೆ ಕೊಟ್ಟವರು.   

ಶಾಮನೂರು ಕಲ್ಲಪ್ಪ–ಸಾವಿತ್ರಮ್ಮ ದಂಪತಿ ಪುತ್ರರಾಗಿ 1931ರ ಜೂನ್‌ 16ರಂದು ಜನಿಸಿದ ಶಾಮನೂರು ಶಿವಶಂಕರಪ್ಪನವರು ಮೂಲತಃ ಶ್ರೀಮಂತರಲ್ಲ. ಹೆಚ್ಚಿಗೆ ಓದಿದವರೂ ಅಲ್ಲ. ದಾವಣಗೆರೆಯ ಹಳೇ ಮಂಡಿಪೇಟೆಯ ದಿನಸಿ ಅಂಗಡಿಯಲ್ಲಿ ಗುಮಾಸ್ತರಾಗಿದ್ದರು. ದಲ್ಲಾಳಿ ಮಂಡಿಯಲ್ಲಿ ಕಮಿಷನ್ ಏಜೆಂಟ್ ಆಗಿ, ಪ್ರತಿನಿತ್ಯ ಸೈಕಲ್ ಮೇಲೆ ಓಡಾಡುತ್ತಿದ್ದರು. ಕೆಲ ಕಾಲದ ನಂತರ, ಅವರೇ ಒಂದು ಅಂಗಡಿ ತೆರೆದು ‘ಶಾಮನೂರು ಕಲ್ಲಪ್ಪ ಅಂಡ್ ಸನ್ಸ್’ ಎಂದು ನಾಮಕರಣ ಮಾಡಿ, ಮಾಲೀಕರಾದರು. ಎಲ್ಲರನ್ನು ಆತ್ಮೀಯವಾಗಿ ಕಂಡು, ಎಲ್ಲರೊಂದಿಗೆ ಬೆರೆಯುವ ಸ್ನೇಹಜೀವಿ ಎನಿಸಿಕೊಂಡಿದ್ದ ಶಿವಶಂಕರಪ್ಪನವರು ದುಡಿಮೆಯನ್ನು ನಂಬಿ ಬದುಕು ಕಟ್ಟಿಕೊಂಡ ಶ್ರಮಜೀವಿ. ಬಸವಣ್ಣನವರು ಹೇಳುವ ಹಾಗೆ ಕಾಯಕ ಜೀವಿ.

ಇದನ್ನು ಓದಿದ್ದೀರಾ?: ನುಡಿ ನಮನ | ತೀರಿಹೋದ ಶಾಮನೂರು ತೀರದ ಸೆಕ್ಯುಲರ್ ನೆನಪುಗಳು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1969ರಲ್ಲಿ ಮೊದಲ ಬಾರಿಗೆ ದಾವಣಗೆರೆ ನಗರಸಭಾ ಸದಸ್ಯರಾಗಿ ಆಯ್ಕೆಯಾದ ಶಿವಶಂಕರಪ್ಪನವರು, 1971ರಲ್ಲಿ ಅಧ್ಯಕ್ಷರಾದರು. ಆ ಸಂದರ್ಭದಲ್ಲಿ, ದಾವಣಗೆರೆ ನಗರದ ಒಂದಷ್ಟು ಸಮಾನಮನಸ್ಕರು ಸೇರಿ ಸ್ಥಾಪಿಸಿದ್ದ ಬಾಪೂಜಿ ಶಿಕ್ಷಣ ಸಂಸ್ಥೆ, ಜನರ ಸಂಸ್ಥೆಯಾಗಿತ್ತು, ಕೊಂಚ ಕಷ್ಟದಲ್ಲಿತ್ತು. ದಾವಣಗೆರೆ ನಗರಸಭಾ ಅಧ್ಯಕ್ಷರು ಈ ಸಂಸ್ಥೆಯ ಸದಸ್ಯರಾಗಿ ನಾಮನಿರ್ದೇಶನಗೊಳ್ಳುವುದು ರೂಢಿಯಲ್ಲಿತ್ತು. ಆ ರೀತಿಯಲ್ಲಿ ಆ ಶಿಕ್ಷಣ ಸಂಸ್ಥೆಯ ಒಳಪ್ರವೇಶಿಸಿದ ಶಾಮನೂರು ಶಿವಶಂಕರಪ್ಪನವರು, ಸದಸ್ಯರ ಮನವೊಲಿಸಿ ನಾಯಕರಾದರು. ಕಷ್ಟದಲ್ಲಿದ್ದ ಶಿಕ್ಷಣ ಸಂಸ್ಥೆಯನ್ನು ತಮ್ಮ ವ್ಯಾಪಾರಿಬುದ್ಧಿ ಬಳಸಿ, ಮೇಲೆತ್ತಿದರು. ಮುಚ್ಚುವ ಹಂತದಲ್ಲಿದ್ದ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಮರುಚೈತನ್ಯ ಪಡೆಯುವಂತೆ, ಹಣಕಾಸು ಓಡಾಡುವಂತೆ ನೋಡಿಕೊಂಡರು.

ಶಾಮನೂರು ಶಿವಶಂಕರಪ್ಪ 5

ಅಷ್ಟಕ್ಕೇ ಸುಮ್ಮನಾಗದ ಶಿವಶಂಕರಪ್ಪನವರು ಬಾಪೂಜಿ ಸಹಕಾರ ಸಂಸ್ಥೆ, ಬಾಪೂಜಿ ಸಹಕಾರ ಬ್ಯಾಂಕ್ ಸ್ಥಾಪಿಸಿ ಸಂಸ್ಥೆಗೆ ಆರ್ಥಿಕ ಭದ್ರತೆವೊದಗಿಸಿದರು. ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವ ಉಪನ್ಯಾಸಕರು, ಶಿಕ್ಷಕರು, ನೌಕರರು, ಸಿಬ್ಬಂದಿಗಳಿಗೆ ಸಹಕಾರ ಸಂಸ್ಥೆಯಿಂದ ಹಣ ಸಹಾಯ ಒದಗಿಸಿ, ಸೈಟು-ಮನೆ ಕಟ್ಟಿಕೊಳ್ಳಲು ನೆರವಾದರು. ಇಂದು ಬಾಪೂಜಿ ಸಹಕಾರ ಬ್ಯಾಂಕ್, ಸಹಕಾರ ಕ್ಷೇತ್ರದಲ್ಲಿ ನಂಬರ್ ಒನ್ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ. ಲಾಭದಲ್ಲಿ ನಡೆದು, ಸಹಕಾರ ಕ್ಷೇತ್ರಕ್ಕೆ ಹೆಸರು ತಂದಿದೆ. ಬಾಪೂಜಿ ಶಿಕ್ಷಣ ಸಂಸ್ಥೆಗಾಗಿ ಇಷ್ಟೆಲ್ಲ ಶ್ರಮ ಸುರಿದು ಅಭಿವೃದ್ಧಿಪಡಿಸಿದ, ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಗಟ್ಟಿಗೊಳಿಸಿದ ಶಿವಶಂಕರಪ್ಪನವರು, ಕಾಲಾನಂತರ ಬಾಪೂಜಿ ಶಿಕ್ಷಣ ಸಂಸ್ಥೆಗೇ ಮಾಲೀಕರಾದರು.

ಕಾಂಗ್ರೆಸ್ ಪಕ್ಷ ಸೇರಿ, ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. 1978-80ರಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದರು. ಈ ನಡುವೆ, ಖಾಸಗಿ ಒಡೆತನದಲ್ಲಿದ್ದ ಜೆಜೆಎಂ ಮೆಡಿಕಲ್ ಕಾಲೇಜು ಮುಚ್ಚುವುದರಲ್ಲಿತ್ತು. ಆಡಳಿತ ಮಂಡಳಿಯವರು ಸಹಜವಾಗಿಯೇ ಲಿಂಗಾಯತ ಸಮುದಾಯದ ನಾಯಕರು, ಉದ್ಯಮಿಗಳು ಮತ್ತು ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿದ್ದ ಪ್ರಭಾವಿ ಶಿವಶಂಕರಪ್ಪನವರ ಮೊರೆ ಹೋದರು. ಮುಂದೊಂದು ದಿನ, ಆ ಮೆಡಿಕಲ್ ಕಾಲೇಜಿಗೆ ಶಾಮನೂರು ಶಿವಶಂಕರಪ್ಪನವರೇ ಮಾಲೀಕರಾದರು.   

ಶಾಮನೂರು ಶಿವಶಂಕರಪ್ಪನವರು, ದಿನಸಿ ಅಂಗಡಿ, ಮಂಡಿ ಏಜೆಂಟ್, ರೈಸ್ ಮಿಲ್, ಸಕ್ಕರೆ ಕಾರ್ಖಾನೆ, ಶಿಕ್ಷಣ ಸಂಸ್ಥೆಗಳು- ಮೆಡಿಕಲ್, ದಂತ, ಎಂಜಿನಿಯರಿಂಗ್ ಕಾಲೇಜಗಳ ಮಾಲೀಕರಾಗಿ ಹಂತ ಹಂತವಾಗಿ ಬೆಳೆಯುತ್ತಹೋದರು. ಸಾದರ ಲಿಂಗಾಯತ ಸಮುದಾಯಕ್ಕೆ ಸೇರಿದ ಶಾಮನೂರು, ಲಿಂಗಾಯತ ಮಠಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಸ್ವಾಮೀಜಿಗಳಿಗೆ ಆಪ್ತರಾಗಿದ್ದರು. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿಯೂ ಗುರುತಿಸಿಕೊಂಡಿದ್ದರು.

ಹಳ್ಳಿಯ ಜವಾರಿ ಗೌಡನಂತಿದ್ದ ಶಿವಶಂಕರಪ್ಪನವರಲ್ಲಿ ಗುರುತಿಸಬಹುದಾದಂತಹ ಮತ್ತೊಂದು ಮುಖ್ಯ ಗುಣವೆಂದರೆ, ವ್ಯಕ್ತಿಗಳಲ್ಲಿರುವ ಸಾಮರ್ಥ್ಯ ಮತ್ತು ಬುದ್ಧಿಶಕ್ತಿಗಳನ್ನು ಗುರುತಿಸುವುದು. ಯಾವ ವ್ಯಕ್ತಿ ಎಲ್ಲಿಗೆ ಸೂಕ್ತ ಎನ್ನುವುದನ್ನು ಮೊದಲ ನೋಟದಲ್ಲಿಯೇ ಗ್ರಹಿಸುವುದು. ಅಂತಹವರಿಗೆ ಸೂಕ್ತ ಸ್ಥಾನ-ಮಾನ ನೀಡಿ ಗೌರವಿಸುವುದು. ಅವಕಾಶ ನೀಡಿ ಬೆಳೆಯಲು ಪ್ರೋತ್ಸಾಹಿಸುವುದು. ಎಚ್. ಆಂಜನೇಯ ಬೆಳೆದದ್ದೇ ಶಾಮನೂರರ ನೆರಳಿನಲ್ಲಿ. ಆದರೆ, ಆಷಾಢಭೂತಿಗಳನ್ನು, ಬೊಗಳೆ ಬಿಡುವವರನ್ನು, ಸೋಮಾರಿಗಳನ್ನು ಸಹಿಸುತ್ತಿರಲಿಲ್ಲ.

ಶ್ರೀಮಂತಿಕೆ ಬಂದರೂ, ಜನರಿಂದ ಧಣಿ ಎಂದು ಕರೆಸಿಕೊಂಡರೂ ಜನರಿಂದ ದೂರವಾಗಿರಲಿಲ್ಲ. ಇದಕ್ಕೊಂದು ಉತ್ತಮ ಉದಾಹರಣೆಯಾಗಿ, 80ರ ದಶಕದಲ್ಲಿ ಕಾರ್ಮಿಕ ನಾಯಕರಾಗಿದ್ದ, ಕಮ್ಯುನಿಸ್ಟ್ ಪಕ್ಷದ ಪಂಪಾಪತಿಯವರೊಂದಿಗಿನ ಸ್ನೇಹ ಮತ್ತು ಸಂಬಂಧ. ಶಾಮನೂರರು ದೊಡ್ಡ ಶ್ರೀಮಂತರು, ಪಂಪಾಪತಿಯವರು ಶಾಸಕರು, ಅವರಿಬ್ಬರ ಹಿನ್ನೆಲೆ ಬಂಡವಾಳಶಾಹಿ-ಕಾರ್ಮಿಕ ಬೇರೆ ಬೇರೆಯಾಗಿದ್ದರು, ಅವರು ಒಳ್ಳೆಯ ಸ್ನೇಹಿತರಾಗಿದ್ದರು ಎಂದು ದಾವಣಗೆರೆಯ ಹಿರಿಯ ಪತ್ರಕರ್ತರೊಬ್ಬರು ನೆನಪು ಮಾಡಿಕೊಳ್ಳುತ್ತಾರೆ.

ಹಾಗೆಯೇ ಶಾಮನೂರರು ಚಾಲಾಕಿ ಉದ್ಯಮಿಯಾಗಿದ್ದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ, ಸಾಮಾಜಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಶಾಮನೂರು ನಿಸ್ಸೀಮರಾಗಿದ್ದರು. ಅದಕ್ಕೊಂದು ಉದಾಹರಣೆಯಾಗಿ ಈ ಪ್ರಸಂಗವನ್ನು ಉಲ್ಲೇಖಿಸುತ್ತಾರೆ ಆ ಹಿರಿಯ ಪತ್ರಕರ್ತರು. ಆ ಕಾಲದಲ್ಲಿ ದಾವಣಗೆರೆ ಮಟ್ಟದಲ್ಲಿ ‘ಜನತಾವಾಣಿ’ ದಿನಪತ್ರಿಕೆಗೆ ಒಳ್ಳೆಯ ಹೆಸರಿತ್ತು. ಸಂಪಾದಕ ಷಡಕ್ಷರಪ್ಪ ಪ್ರಾಮಾಣಿಕ ಪತ್ರಕರ್ತರಾಗಿದ್ದರು. ಅವರ ಸ್ನೇಹಿತರಾಗಿದ್ದ ಶಾಮನೂರು, ಅವರ ಎರಡು ಹೆಣ್ಣುಮಕ್ಕಳಿಗೆ ಉಚಿತ ಮೆಡಿಕಲ್ ಸೀಟ್ ಕೊಡುವ ಮೂಲಕ, ಅವರ ವಿಶ್ವಾಸಕ್ಕೆ ಪಾತ್ರರಾದರು. ಕ್ಯಾಪಿಟೇಷನ್ ಕುರಿತು ಬರೆಯದಂತೆ ನಾಜೂಕಾಗಿ ನೋಡಿಕೊಂಡಿದ್ದರು. ಕ್ಯಾಪಿಟೇಷನ್ ಲಾಬಿಯನ್ನು ನಾಡಿಗೆ ಪರಿಚಯಿಸಿದ್ದರು. ಬರೀ ಪತ್ರಕರ್ತರಷ್ಟೇ ಅಲ್ಲ, ಬಿಜೆಪಿಯ ಹಿರಿಯ ನಾಯಕ, ಮಾಜಿಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೂಡ, ಮೆಡಿಕಲ್ ಸೀಟಿಗಾಗಿ ಒಂದು ಕಾಲದಲ್ಲಿ ಶಾಮನೂರರ ಬಾಗಿಲು ಕಾದಿದ್ದಾರೆ ಎನ್ನುತ್ತಾರೆ.

ಶಾಮನೂರು ಶಿವಶಂಕರಪ್ಪ1
ದೇವರಾಜ ಅರಸು ಮತ್ತು ಕೆ.ಎಚ್. ರಂಗನಾಥ್ ರೊಂದಿಗೆ ಶಾಮನೂರು ಶಿವಶಂಕರಪ್ಪ

1978-80ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಶಾಮನೂರು, ದೇವರಾಜ ಅರಸು ಅವರ ಕೊನೆಗಾಲದಲ್ಲಿ, ಕೆ.ಎಚ್. ರಂಗನಾಥರ ಕಡೆಯಿಂದ ಅವರಿಗೆ ಆಪ್ತರಾಗಿದ್ದರು. ಆನಂತರ ಇಂದಿರಾ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡರು. ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದರು. ದಾವಣಗೆರೆಗೆ ಸೋನಿಯಾ ಗಾಂಧಿಯವರನ್ನು ಕರೆಸಿ, ಬಹುದೊಡ್ಡ ಕಾರ್ಯಕ್ರಮ ಆಯೋಜಿಸಿದ್ದರು. ಅವರಿಂದ ಸ್ಪೆಷಲ್ ಥ್ಯಾಂಕ್ಸ್ ಪಡೆದಿದ್ದರು. ಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಪರ್ಮನೆಂಟ್ ಖಚಾಂಚಿಯಾಗಿದ್ದ ಶಾಮನೂರರು, ಪಕ್ಷ ಅಧಿಕಾರದಲ್ಲಿರಲಿ, ಇಲ್ಲದಿರಲಿ ಪಕ್ಷಕ್ಕಾಗಿ ಧಾರಾಳವಾಗಿ ಹಣ ಖರ್ಚು ಮಾಡುವ ‘ಧಣಿ’ ಎನಿಸಿಕೊಂಡಿದ್ದರು.

80 ಮತ್ತು 90ರ ದಶಕದಲ್ಲಿ, ಸಾರ್ವಜನಿಕ ವಲಯದಲ್ಲಿ ಶಾಮನೂರರ ಬಗ್ಗೆ ಒಂದು ಜೋಕ್ ಹರಿದಾಡುತ್ತಿತ್ತು. ಅದೇನೆಂದರೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಮತ್ತು ಎಚ್.ಸಿ. ಶ್ರೀಕಂಠಯ್ಯ- ಈ ಮೂವರನ್ನು ಶಾಮನೂರು ಸಾಕುತ್ತಿದ್ದಾರೆಂಬುದು. ಕಾಂಗ್ರೆಸ್ ಹೈಕಮಾಂಡಿಗೆ ಹತ್ತಿರವಾಗಿದ್ದರು ಎಂಬ ಕಾರಣಕ್ಕೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಫೈವ್ ಸ್ಟಾರ್ ಹೋಟೆಲ್ ಆದ ವೆಸ್ಟ್ ಎಂಡ್‌ನಲ್ಲಿ ಪರ್ಮನೆಂಟ್ ರೂಮ್ ಮಾಡಿದ್ದರು. ಅಲ್ಲಿ ಸಂಜೆಯ ಸಮಾರಾಧನೆಗಳು ನಡೆಯುತ್ತಿದ್ದವು. ಅದಕ್ಕೆಲ್ಲ ಹಣ ಕೊಡುತ್ತಿದ್ದವರು ಶಾಮನೂರರು ಎಂಬುದಾಗಿತ್ತು. ಇದು ಸುಮಾರು ವರ್ಷಗಳ ಕಾಲ ನಡೆದುಕೊಂಡು ಬಂದಿತ್ತೆಂಬುದನ್ನು ಆ ಕಾಲದ ಕಾಂಗ್ರೆಸ್ ಪಕ್ಷದ ನಾಯಕರನ್ನು ಹತ್ತಿರದಿಂದ ಬಲ್ಲ ಪತ್ರಕರ್ತರು ಈಗಲೂ ಹೇಳುವುದುಂಟು.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಶಾಮನೂರು ಶಿವಶಂಕರಪ್ಪನವರು, 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. ಆಗ ಅವರಿಗೆ 63 ವರ್ಷ ವಯಸ್ಸಾಗಿತ್ತು. ಆನಂತರ ಅವರು 6 ಬಾರಿ ಶಾಸಕರಾಗಿ, ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಸಚಿವರಾಗಿ, ಒಮ್ಮೆ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಈಗಲೂ ಅವರು ಶಾಸಕರಾಗಿಯೇ, ದೇಶದ ಅತ್ಯಂತ ಹಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಹಾಗೆಯೇ ಮಗನನ್ನು ಶಾಸಕ, ಸಚಿವನನ್ನಾಗಿ ಮಾಡಿದ್ದಾರೆ. ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ, ಸಂಸದೆಯಾಗಿ ಆಯ್ಕೆಯಾಗುವಂತೆ ನೋಡಿಕೊಂಡಿದ್ದಾರೆ.

ಶಾಮನೂರರು ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ನಿಷ್ಠರಾಗಿದ್ದರು ಎಂದರೆ, ಬೇರೆ ಪಕ್ಷಗಳತ್ತ ನೋಡಿದ್ದಿಲ್ಲ. ಆದರೆ, ಆ ನಿಷ್ಠೆಯ ಮರೆಯಲ್ಲಿ ಮಾಡಿದ ಫ್ಯೂಡಲ್‌ ಗಿರಿಯನ್ನು ಯಾರೂ ಮೆಚ್ಚುವುದಿಲ್ಲ. ಒಂದು ಸಲ ದಾವಣಗೆರೆಯ ಕ್ಷೇತ್ರವೊಂದಕ್ಕೆ ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿಗೆ ಬಿ ಫಾರಂ ಸಿಕ್ಕಿತ್ತು. ಆದರೆ ಶಾಮನೂರರು ಆ ಬಿ ಫಾರಂ ಹರಿದು ಹಾಕಿ, ಹೆಲಿಕಾಪ್ಟರಿನಲ್ಲಿ ಇನ್ನೊಂದು ಬಿ ಫಾರಂ ತರಿಸಿಕೊಳ್ಳಲು ಹೋಗಿ, ತಡವಾಗಿ, ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯೇ ಇಲ್ಲವಾಗಿತ್ತು. ಹಾಗೆಯೇ ಕಾಂಗ್ರೆಸ್ಸಿನಲ್ಲಿದ್ದರೂ ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಗೆಲ್ಲಲಿ ಎಂದು ಹೇಳಿಕೆ ನೀಡಿದ್ದೂ ಇತ್ತು. ಇದೆಲ್ಲವೂ ಪಕ್ಷನಿಷ್ಠೆಯನ್ನು ದುರುಪಯೋಗಪಡಿಸಿಕೊಂಡದ್ದಲ್ಲವೇ?  

ಶಾಮನೂರು ಶಿವಶಂಕರಪ್ಪನವರಿಗೆ ಕಾಂಗ್ರೆಸ್ ಪಕ್ಷದಂತೆಯೇ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. 2012ರಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿದ್ದಾರೆ. 2018ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಎದ್ದಾಗ ‘ವೀರಶೈವ–ಲಿಂಗಾಯತ’ ಎರಡೂ ಒಂದೇ ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದರು. ಆ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಮಠಾಧೀಶರನ್ನು ಒಗ್ಗೂಡಿಸಲು ಮುಂದಾಗಿದ್ದ ಶಾಮನೂರು ಶಿವಶಂಕರಪ್ಪನವರು, ಪಂಚಪೀಠ ಮಠಾಧೀಶರ ಸಮ್ಮೇಳನವನ್ನು ಆಯೋಜಿಸಿ ಯಶಸ್ಸು ಕಂಡಿದ್ದರು. ಆದರೆ, ತಮ್ಮದೇ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಎಂ.ಬಿ. ಪಾಟೀಲ್, ಪ್ರತ್ಯೇಕ ಧರ್ಮದ ಪರವಾಗಿದ್ದರೆ, ಶಾಮನೂರು ಅದರ ವಿರುದ್ಧವಿದ್ದರು.  

ಆದರೆ, ಪಕ್ಷ ಯಾವುದೇ ಆಗಿರಲಿ, ಎಲ್ಲರೊಂದಿಗೂ ಆಪ್ತರಾಗಿದ್ದರು. ಅಜಾತಶತ್ರು ಎಂಬ ಹೆಸರು ಪಡೆದಿದ್ದರು. ಲಿಂಗಾಯತ ಒಳಪಂಗಡಗಳ ಬಗ್ಗೆ ಧಾರಾಳಿಯಾಗಿ, ಎಲ್ಲರೊಂದಿಗೂ ಸಂಬಂಧ ಬೆಳೆಸಿದ್ದರು. ಅಲ್ಲಿ ಜಾತಿಗಿಂತ ಮುಖ್ಯವಾಗಿ ಕುಟುಂಬದ ಪ್ರತಿಷ್ಠೆ, ಹಣದ ವಹಿವಾಟು, ಉದ್ಯಮ, ರಾಜಕಾರಣ ಮುಖ್ಯವಾಗಿರುತ್ತಿತ್ತು. ಭೀಮಣ್ಣ ಖಂಡ್ರೆ, ಕೋರೆ, ಸಿದ್ದೇಶ್ವರ, ಶೆಟ್ಟರ್, ಅಂಗಡಿ, ಯಡಿಯೂರಪ್ಪ- ಎಲ್ಲರೊಂದಿಗೂ ಉತ್ತಮ ಸ್ನೇಹ ಮತ್ತು ಸಂಬಂಧವಿತ್ತು.

ಹಾಗೆಯೇ ಶಾಮನೂರರಿಗೆ ಸಿರಿಗೆರೆ ಮತ್ತು ಸಾಣೆಹಳ್ಳಿಯ ಸ್ವಾಮೀಜಿಗಳೊಂದಿಗೆ ಆತ್ಮೀಯತೆ ಇತ್ತು. ಅವರಿಬ್ಬರೂ ಮುನಿಸಿಕೊಂಡು, ಬೇರೆ ಬೇರೆಯಾಗಿದ್ದಾಗ, ‘ನಿಮಗೆ ವಯಸ್ಸಾಯಿತು, ಮಠ ಬಿಟ್ಟು ಹೊರನಡಿಯಿರಿ. ಹೊಸಬರಿಗೆ ಅವಕಾಶ ಕೊಡಿ’ ಎಂದು ನಿಷ್ಠುರವಾಗಿ ಹೇಳಿದ್ದರು. ಆದರೆ, ತಮ್ಮ ಕುಟುಂಬಕ್ಕೆ ಬಂದಾಗ, ಫ್ಯೂಡಲ್ ಆಗಿದ್ದರು.

ಪತ್ರಕರ್ತ, ಸಾಹಿತಿ ಪಿ. ಲಂಕೇಶರನ್ನು ಕಂಡರೆ ಬಹಳ ಗೌರವ ಇಟ್ಟುಕೊಂಡಿದ್ದರು. ತಮ್ಮಂತೆಯೇ ಅವರು ಕೂಡ ಲಿಂಗಾಯತರು ಎಂಬ ಕಾರಣಕ್ಕೋ ಅಥವಾ ಗುಂಡು-ಸಿಗರೇಟು ಸೇದುವ ದಿಲ್ ದಾರ್ ಮನುಷ್ಯ ಎಂಬುದಕ್ಕೂ ಮೆಚ್ಚುತ್ತಿದ್ದರು. ಆದರೆ ಇಬ್ಬರ ದಾರಿಗಳೂ ಭಿನ್ನವಾಗಿದ್ದವು. 1981-82ರಲ್ಲಿ ಶಾಮನೂರರ ಮೆಡಿಕಲ್ ಕಾಲೇಜು ಹಗರಣಗಳ ಕುರಿತು ‘ಲಂಕೇಶ್ ಪತ್ರಿಕೆ’ಯಲ್ಲಿ ವರದಿಯೊಂದು ಪ್ರಕಟವಾಗಿತ್ತು. ಆಗ ಲಂಕೇಶರು ಶಾಮನೂರರನ್ನು ‘ಅಮ್ಜದ್ ಖಾನ್’ರಿಗೆ ಹೋಲಿಸಿ ಬರೆದಿದ್ದರು. ಆನಂತರ 90ರ ದಶಕದಲ್ಲಿ, ವಿಠ್ಠಪ್ಪ ಗೋರಂಟ್ಲಿ ಎಂಬ ವರದಿಗಾರರು, ಬಾಪೂಜಿ ಸಂಸ್ಥೆಯಲ್ಲಿ ಕೆಲಸ ಮಾಡುವ ಉಪನ್ಯಾಸಕಿಯ ಬಗ್ಗೆ ಬರೆದಿದ್ದರು. ಅದಕ್ಕೆ ಅವರು ಕೇಸ್ ದಾಖಲಿಸಿದ್ದರು. ಕೊನೆಗೆ ಶಾಮನೂರರೇ ಆಕೆಗೆ ಹೇಳಿ ಕೇಸ್ ವಾಪಸ್ ತೆಗೆಸಿದ್ದರು.

shamanur shivashankarappa1
ಶಾಮನೂರು ಕುಟುಂಬ

1998ರಲ್ಲಿ ಅಂತ ಕಾಣುತ್ತದೆ… ಒಮ್ಮೆ ಶಾಮನೂರು ಶಿವಶಂಕರಪ್ಪನವರು ‘ಲಂಕೇಶ್ ಪತ್ರಿಕೆ’ ಆಫೀಸಿಗೆ ಬಂದಿದ್ದರು. ತಮ್ಮ ಕುಟುಂಬದ ಮದುವೆಗೆ ಲಂಕೇಶರನ್ನು ಆಮಂತ್ರಿಸಲು ಖುದ್ದಾಗಿ ಅವರೇ ಬಂದು, ಬೆಳ್ಳಿ ತಟ್ಟೆಯಲ್ಲಿ ಲಗ್ನಪತ್ರಿಕೆ ಇಟ್ಟು ಕೊಟ್ಟಿದ್ದರು. ಲಂಕೇಶರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಕಾಫಿ ಕುಡಿಸಿ, ಲಗ್ನಪತ್ರಿಕೆಯನ್ನಷ್ಟೇ ಪಡೆದು, ಬೆಳ್ಳಿ ತಟ್ಟೆಯನ್ನು ಬೆರಳ ತುದಿಯಿಂದಲೂ ಮುಟ್ಟದೆ, ‘ಬೇಸರ ಮಾಡಿಕೊಳ್ಳಬೇಡಿ’ ಎಂದು ನಯವಾಗಿ ತಿರಸ್ಕರಿಸಿದ್ದರು. ಲಂಕೇಶರ ನಿಷ್ಠುರತೆ ಕಂಡು ಖುಷಿಗೊಂಡ ಶಾಮನೂರರು, ‘ನೀವೂ ಸರಿ, ನಾನೂ ಸರಿ’ ಎಂದಷ್ಟೇ ಹೇಳಿ, ನಗುನಗುತ್ತ ಬೀಳ್ಕೊಟ್ಟಿದ್ದರು.

ಇಂದು ಶಾಮನೂರರು ಇಲ್ಲ. ಇಲ್ಲದಿರುವ ಹೊತ್ತಿನಲ್ಲಿ, ಇದೆಲ್ಲ ಬರೆಯುವ ಅಗತ್ಯವಿಲ್ಲ. ಆದರೂ, ಅವರ ವ್ಯಕ್ತಿತ್ವವನ್ನು ಬಿಡಿಸಿಡುವಾಗ, ದಿನಸಿ ಅಂಗಡಿ ಗುಮಾಸ್ತನಿಂದ ದಾವಣಗೆರೆ ಧಣಿಯವರೆಗೆ ಬೆಳೆದ ಪರಿಯನ್ನು ನೋಡುವ ಅಗತ್ಯವಿದೆ. ವಂಶ ಪಾರಂಪರ್ಯ ಉದ್ಯಮಿ, ರಾಜಕಾರಣಿ, ಫ್ಯೂಡಲ್, ಕ್ಯಾಪಿಟೇಷನ್ ಕುಳ, ಅಜಾತಶತ್ರು, ಜನರೊಂದಿಗೇ ಬದುಕಿದ ಜನನಾಯಕ ಎನ್ನುವುದನ್ನೂ ಹೇಳಬೇಕಾಗಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...