- ಬೆಂಗಳೂರಿನಲ್ಲಿ ₹82 ಕೋಟಿಗೂ ಹೆಚ್ಚು ಮೌಲ್ಯದ ವಸ್ತು ವಶ
- 52 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ ಬಿಬಿಎಂಪಿ ಆಯುಕ್ತರು
ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ಸಂಗ್ರಹಿಸಿದ್ದ ಸುಮಾರು ₹300 ಕೋಟಿ ಮೌಲ್ಯದ ವಸ್ತುಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿವೆ. ರಾಜಕೀಯ ಪಕ್ಷಗಳು ಹಣ ಮತ್ತು ವಸ್ತುಗಳನ್ನು ನೀಡುವ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ದಾಖಲೆಗಳಿಲ್ಲದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರು ಒಂದರಲ್ಲೇ ಚುನಾವಣಾ ಆಯೋಗ ₹82 ಕೋಟಿಗೂ ಹೆಚ್ಚು ಮೌಲ್ಯದ ನಗದು ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಂಡಿದೆ.
ಈ ಕುರಿತು ಮಾತನಾಡಿರುವ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ, “ತಮಗೆ ಬಂದಿರುವ ಗುಪ್ತಚರ ಮಾಹಿತಿಯ ಪ್ರಕಾರ, ಮತದಾನದ ದಿನ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಮತದಾರರಿಗೆ ಲಂಚ ನೀಡುವ ಪ್ರಯತ್ನಗಳು ಹೆಚ್ಚಾಗುತ್ತವೆ” ಎಂದು ತಿಳಿಸಿದ್ದಾರೆ.
“ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವುದು ಮತ್ತು ಮುಕ್ತ ಮತ್ತು ನ್ಯಾಯಸಮ್ಮತ ಮತದಾನವನ್ನು ಖಚಿತಪಡಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಜಾಗರೂಕತೆಯನ್ನು ಹೆಚ್ಚಿಸಲು ಮತ್ತು ಕಣ್ಗಾವಲು ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದೇವೆ” ಎಂದು ಹೇಳಿದ್ದಾರೆ
“ರಾಜ್ಯಾದ್ಯಂತ ಸುಮಾರು ₹100 ಕೋಟಿಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಶೇ.10ರಷ್ಟು ಬೆಂಗಳೂರಿನಲ್ಲಿಯೇ ವಶಪಡಿಸಿಕೊಂಡಿದ್ದೇವೆ. ಮಾದಕ ವಸ್ತುಗಳು, ಚಿನ್ನ ಹಾಗೂ ಬೆಳ್ಳಿ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣಾ ಸಮೀಕ್ಷೆ | ಮುಕ್ತ ಚರ್ಚೆ ನಡೆಸಲು ಬಿ.ಎಲ್ ಸಂತೋಷ್‌ಗೆ ‘ಈದಿನ.ಕಾಮ್’ ಆಹ್ವಾನ
“ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರು ಒಂದರಲ್ಲೇ ಸುಮಾರು 52 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದಾರೆ” ಎಂದು ಕರ್ನಾಟಕ ಹೆಚ್ಚುವರಿ ಸಿಇಒ ಕೆ ವೆಂಕಟೇಶ್ ಕುಮಾರ್ ಹೇಳಿದ್ದಾರೆ.




