ಹಾಸನ ಮಣ್ಣಿನ ಹೆಣ್ಣು ಬೇರುಗಳು | ದಿಟ್ಟತನದ ಗಟ್ಟಿ ಹೋರಾಟಗಾರ್ತಿ, ಸಾಹಿತಿ- ವಿಜಯಾ ದಬ್ಬೆ

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ...

ಹಾಸನ ಜಿಲ್ಲೆಯ, ಬೇಲೂರು ತಾಲ್ಲೂಕಿನ, ದಬ್ಬೆ ಎಂಬ ಗಡಿ ಭಾಗದ ಪುಟ್ಟ ಗ್ರಾಮದಲ್ಲಿ 1951ರಲ್ಲಿ ಜನಿಸಿದ ವಿಜಯಾ ದಬ್ಬೆಯವರದ್ದೊಂದು ಹೋರಾಟದ ಬದುಕು. ದಬ್ಬೆಯಲ್ಲಿ ಆ ಕಾಲಕ್ಕೆ ಶಿಕ್ಷಣ ಸೌಲಭ್ಯಗಳಿಲ್ಲದಿದ್ದಾಗ, ಅಪ್ಪನೊಂದಿಗೆ ಹಠ ಹಿಡಿದು ಪರ ಊರಿನಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದರಂತೆ. ಆನಂತರ ಹಾಸನ ಸೇರಿ ಮನೆ ಮಾಡಿಕೊಂಡು, ಹೈಸ್ಕೂಲಿಗೆ ಸೇರಿದ್ದರು. ತಮ್ಮ-ತಂಗಿಯರನ್ನೂ ಜೊತೆಗಿರಿಸಿಕೊಂಡು ಅಡಿಗೆ, ಮನೆವಾರ್ತೆ ನೋಡಿಕೊಳ್ಳುತ್ತಾ ಓದಿ, ಪದವಿ ಹಂತದ ವಿದ್ಯಾಭ್ಯಾಸ ಮುಗಿಸಿದ್ದರು. ಮುಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವವರೆಗೆ, ನಂತರ ವಿಶ್ವವಿದ್ಯಾಲಯದಲ್ಲಿಯೇ ಕೆಲಸಕ್ಕೆ ಸೇರುವವರೆಗೂ ಅವರದು ಮುಕ್ಕಾಗದ ಛಲ. ಆನಂತರ ಪ್ರೀತಿಸಿದ ವಿದೇಶಿ ವಿದ್ವಾಂಸರೊಂದಿಗೆ ವಿವಾಹ… ಕಡು ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು, ಇಷ್ಟೆಲ್ಲಾ ವೈಚಾರಿಕವಾಗಿ, ಪ್ರಬುದ್ಧವಾಗಿ ಬೆಳೆದಿದ್ದನ್ನು ಕೇಳುವಾಗ ಒಬ್ಬಂಟಿಯಾಗಿ ಎಲ್ಲವನ್ನೂ ಎದುರಿಸುವ ಇಂತಹ ದಿಟ್ಟತನ ಇವರಿಗೆ ಎಲ್ಲಿಂದಾ ಬಂತು? ಎಂದು ಆಶ್ಚರ್ಯವಾಗುತ್ತದೆ.

ಇದನ್ನು ಓದಿದ್ದೀರಾ?: ಅಂತಾರಾಷ್ಟ್ರೀಯ ತೊಗಲುಗೊಂಬೆ ಕಲಾವಿದೆ- ದಾಕ್ಷಾಯಿಣಿ

ಮಹಿಳೆಯರ ಹಕ್ಕುಗಳು, ಸ್ವಾತಂತ್ರ್ಯ, ಸಮಾನತೆಯ ಉದ್ದೇಶದಿಂದ 1978ರಲ್ಲಿ ಮೈಸೂರಿನಲ್ಲಿ ‘ಸಮತಾ’ ವೇದಿಕೆಯನ್ನು ಹುಟ್ಟುಹಾಕಿಕೊಳ್ಳಲು ವಿಜಯಾ ದಬ್ಬೆ ಹಾಗೂ ರತಿರಾವ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ‘ಸಮತಾ’ ಪ್ರಾರಂಭದಲ್ಲಿ ಒಂದು ಮಹಿಳಾ ಅಧ್ಯಯನ ಕೇಂದ್ರವಾಗಿ ಕೆಲಸ ಮಾಡಲು ಉದ್ದೇಶಿಸಿದ್ದರೂ ಮಹಿಳೆಯರ ಸಮಸ್ಯೆಗಳ ತೀವ್ರತೆಯನ್ನು ಗಮನಿಸಿ, ಅಧ್ಯಯನದ ಜೊತೆಗೆ ಹೋರಾಟದ ಹಾದಿಯನ್ನು ಹಿಡಿಯಿತು. ವಿಜಯಾ ದಬ್ಬೆಯವರ ವ್ಯಕ್ತಿತ್ವವನ್ನು ಈ ‘ಸಮತಾ ವೇದಿಕೆ’ ಹಾಗೂ ‘ಸಮತಾ ಅಧ್ಯಯನ ಕೇಂದ್ರ’ಗಳನ್ನು ಹೊರತುಪಡಿಸಿ ಕಟ್ಟಿಕೊಳ್ಳಲು ಸಾಧ್ಯವೇ ಇಲ್ಲ. ಇವು, ಅವರು ಮಹಿಳಾಪರ ಮತ್ತು ಸಮಾಜಮುಖಿಯಾಗುವಂತೆ ಹಂತ ಹಂತವಾಗಿ ಬೆಳೆಸಿವೆ. ಮಹಿಳಾ ಚಳವಳಿಗೆ ಒಂದು ಸಾಂಸ್ಕೃತಿಕ ನೆಲೆಗಟ್ಟು ರೂಪಿಸುವಲ್ಲಿ ನೆರವಾಗಿವೆ. ಸಮಾಜದ ಎಲ್ಲ ಸ್ತರದ ಮಹಿಳೆಯರ ಮೇಲಿನ ವಿವಿಧ ರೀತಿಯ ಶೋಷಣೆಯ ವಿಶ್ವರೂಪದರ್ಶನ ಡಾ.ವಿಜಯಾ ಮತ್ತು ಅವರ ಗೆಳತಿಯರಿಗಾಗಿದ್ದು ಸಮತಾ ಅಧ್ಯಯನ ವೇದಿಕೆಯಿಂದಲೇ! ‘ಸ್ತ್ರೀವಾದವೆಲ್ಲಾ ಪಾಶ್ಚಾತ್ಯರಿಂದ ಬಂದದ್ದು ನಮ್ಮಲ್ಲಿ ಅದರ ಅವಶ್ಯಕತೆ ಇಲ್ಲ’ ಎನ್ನುವಂತಹ ನಂಬಿಕೆ ಇದ್ದ ಕಾಲದಲ್ಲಿ ಕಲಿತ ತಿಳಿವಳಿಕೆಯ ಜೊತೆಗೆ, ಸ್ವಂತ ಅನುಭವದ ಸಾರವನ್ನು ಬೆರೆಸಿ ತನ್ನ ಬದುಕನ್ನು-ಬರಹವನ್ನು-ಚಟುವಟಿಕೆಗಳನ್ನು ಗಟ್ಟಿಗೊಳಿಸಿಕೊಳ್ಳುವುದರ ಜೊತೆಗೆ, ಅದು ಸಮಾಜಕ್ಕೆ ಉಪಯೋಗಿಯಾಗುವಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಲೆ, ಗೆಳತಿಯರೊಡಗೂಡಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡರು ವಿಜಯಾ ದಬ್ಬೆಯವರು. ಜೊತೆಗೆ ವಿಚಾರವಂತ ಮಹಿಳೆಯರನ್ನು ನಿರಂತರವಾಗಿ ಸಂಘಟನೆಯಲ್ಲಿ ಹಿಡಿದಿಡುವಂತಹ ಕೆಲಸ ಕಡಿಮೆಯದಾಗಿರಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಲೇಖನ ಓದಿದ್ದೀರಾ?: ಜನಸೇವಾಸಕ್ತೆ ಯಶೋಧರಾ ದಾಸಪ್ಪ  

ಕರ್ನಾಟಕದಾದ್ಯಂತ ಹಲವಾರು ಮಹಿಳಾ ಜಾಗೃತಿ ಶಿಬಿರ, ಸಂಕಿರಣ, ಸಂಘಟನೆಗಳನ್ನು ವ್ಯವಸ್ಥಿತವಾಗಿ ಇಪ್ಪತ್ತು ವರ್ಷಗಳ ಕಾಲ, ಸಮಾನಮನಸ್ಕರೊಡಗೂಡಿ ವಿಜಯಾ ದಬ್ಬೆ ಅವರು ನಡೆಸಿದರು. ಮಹಿಳೆಯರ ಮೇಲೆ ವಿವಿಧ ರೂಪಗಳಲ್ಲಿ ನಡೆಯುತ್ತಿದ್ದ ವರದಕ್ಷಿಣೆ ಕಿರುಕುಳ, ಸಾವು ಅಥವಾ ಕೊಲೆ, ಅತ್ಯಾಚಾರ, ಕೌಟುಂಬಿಕ ಹಿಂಸೆ, ಮುಂತಾದವುಗಳನ್ನು ಪ್ರತಿಭಟನೆ, ಹೋರಾಟಗಳ ಮೂಲಕ ಹೆಣ್ಣಿನ ಪರವಾಗಿ ನ್ಯಾಯ ಕೇಳಲು ಬಳಸಿಕೊಂಡಿದ್ದಾರೆ. ಅನೇಕ ದನಿಯಿಲ್ಲದ ಮಹಿಳೆಯರಿಗೆ ದನಿ ನೀಡಿದ್ದು, ನೊಂದ ಮಹಿಳೆಯರಿಗೆ ಸಾಂತ್ವನ ನೀಡಿ, ಸಮಸ್ಯೆಗಳಿಗೆ ಪರಿಹಾರ ನೀಡಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು ‘ಸಮತಾ ವೇದಿಕೆ’. ಅದರ ಹಿಂದಿನ ಒಂದು ಶಕ್ತಿ ವಿಜಯಾ ದಬ್ಬೆ! ಅವರು ಲೇಖಕಿ ಮಾತ್ರವಲ್ಲ, ಮುಖ್ಯವಾಗಿ ಅವರೊಬ್ಬ ದಿಟ್ಟ ಮಹಿಳಾಪರ ಹೋರಾಟಗಾರ್ತಿ. ಸಾಹಿತ್ಯದ ಜೊತೆಗೆ ಪ್ರತಿಭಟನೆ, ಹೋರಾಟಗಳ ಮೂಲಕ ಲಿಂಗಾಧಾರಿತವಾದ ಸಾಮಾಜಿಕ ಬದಲಾವಣೆಯನ್ನು, ಸಮಾನತೆಯನ್ನು ತರಬೇಕು, ಜನಜಾಗೃತಿ ಮೂಡಿಸಬೇಕು ಎಂದು ನಂಬಿ ನಡೆಯುತ್ತಾ ಬಂದ ಚಿಂತಕಿ. ಹೀಗಾಗಿ ಸಾಹಿತ್ಯ ಚರಿತ್ರೆಯಲ್ಲಿ ಮಾತ್ರವಲ್ಲ, ಮಹಿಳಾ ಚರಿತ್ರೆಯಲ್ಲಿ ಕೂಡ ಅವರ ಹೆಸರು ಚಿರಸ್ಥಾಯಿಯಾಗಿರುವಂತದ್ದು.

ಚೇತನ ಕನ್ನಡ ಸಂಘದ ಪುಸ್ತಕ ಪುರವಣಿಯ ಸಂಪಾದಕಿಯಾಗಿ, ನೆಲೆ ತಪ್ಪಿದ ಮಹಿಳೆಯರಿಗೆ ಭದ್ರನೆಲೆ ಒದಗಿಸುವ ಉದ್ದೇಶದಿಂದ ರೂಪಿತಗೊಂಡಿರುವ ‘ಶಕ್ತಿಧಾಮ’ದ ಖಜಾಂಚಿಯಾಗಿ, ಆಳಕ್ಕಿಳಿದು ಅಭ್ಯಸಿಸುವ ಸಂಶೋಧಕಿಯಾಗಿ, ಪುರುಷ ಪ್ರಧಾನ ವ್ಯವಸ್ಥೆಯ ಮೂಲ ಬೇರುಗಳನ್ನು ಜಾಗೃತ ನೆಲೆಗಳಿಂದ ದಿಟ್ಟವಾಗಿ ಪ್ರಶ್ನಿಸುವ ಕವಯಿತ್ರಿಯಾಗಿ, ಕಡ್ಡಿ ತುಂಡು ಮಾಡುವ ನಿಷ್ಠೂರತೆ ಇಲ್ಲದೇ, ಮಗುವಿಗೆ ತಿಳಿ ಹೇಳುವ ನೆಲೆಯ ವಿಮರ್ಶಕಿಯಾಗಿ, ನಿರ್ಲಕ್ಷಿತ ಲೇಖಕಿಯರ ಕುರಿತ ಲೇಖನಗಳ ಸಂಪಾದಕಿಯಾಗಿ, ಮಹಿಳಾ ಲೋಕದ ಅಧ್ಯಯನದ ಗಂಭೀರ ಬರಹಗಾರ್ತಿಯಾಗಿ, ಸಂಸ್ಕೃತಿಯ ಪುನರ್ ನಿರ್ಮಾಣದ ದಿಟ್ಟ ಚಿಂತಕಿಯಾಗಿ, ಪುರಾಣ ಪ್ರತೀಕಗಳನ್ನು ಮುರಿದು ಕಟ್ಟುವ ವಿದ್ವಾಂಸರಾಗಿ, ಸಮರ್ಥ ಅನುವಾದಕಿಯಾಗಿ, ಪ್ರವಾಸದಲ್ಲಿ ತನ್ನ ಸುತ್ತಲನ್ನು ಸೂಕ್ಷ್ಮತೆಯೊಂದಿಗೆ ದಾಖಲಿಸುವ ಸಾಹಿತಿಯಾಗಿ, ವಿಮೆನ್ ರೈಟಿಂಗ್ ಇನ್ ಇಂಡಿಯಾ- ಕನ್ನಡ ವಿಭಾಗದ ಪ್ರಾದೇಶಿಕ ಸಂಪಾದಕಿಯಾಗಿ, ಲೇಖಕಿಯರ ಆತ್ಮಕಥಾನಕ ‘ಲೇಖ-ಲೋಕ’ದ ಸಂಪಾದಕಿಯಾಗಿ, ಸೂಕ್ಷ್ಮ ಸಂವೇದನೆಯ ಕವಿಯಾಗಿ- ಹೀಗೆ ಆಧುನಿಕ ಲೇಖಕಿಯರು ಮಾತ್ರವಲ್ಲ, ಆಧುನಿಕ ಮಹಿಳೆಯರೆಲ್ಲರ ಮೇಲೂ ಪ್ರಭಾವ ಬೀರಬಲ್ಲಂತಹ ಬಹುಮುಖಿ ವ್ಯಕ್ತಿತ್ವ ವಿಜಯಾ ದಬ್ಬೆಯವರದ್ದು.

ಈ ಲೇಖನ ಓದಿದ್ದೀರಾ?: ಹಿರಿಯ ಲೇಖಕಿ, ಪತ್ರಕರ್ತೆ ಪಾರ್ವತಿ ಕೃ.ನ.ಮೂರ್ತಿ

ಮೈಸೂರು ವಿಶ್ವವಿದ್ಯಾನಿಲಯದ ಪ್ರಾರಂಭದ ದಿನಗಳಲ್ಲಿ, ಮಹಿಳೆಯರು ಓದಲಿಕ್ಕೆ ಅಲ್ಲಿಗೆ ಸೇರಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಸೇರಲು ಅನೇಕರಿಗೆ ಪ್ರೋತ್ಸಾಹ, ಪ್ರೇರಣೆ ನೀಡಿದ್ದಾರೆ. ಉಪನ್ಯಾಸಕಿಯರನ್ನು ರೂಪಿಸಿದ್ದಾರೆ. ಮಹಿಳಾ ಪಿಎಚ್.ಡಿ ಗೈಡ್‌ಗಳು ಇಲ್ಲದಿದ್ದ ಕಾಲದಲ್ಲಿ ತಾವೇ ಪ್ರಥಮ ಮಹಿಳಾ ಗೈಡ್ ಆಗಿ ದಾಖಲೆ ನಿರ್ಮಿಸುವುದರೊಂದಿಗೆ, ಅನೇಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಇವೆಲ್ಲವೂ ಅವರ ‘ವಿಜಯಾಭಿನಂದನ’ ಗ್ರಂಥದಲ್ಲಿ ದಾಖಲಾಗಿವೆ. ಅವರ ಗುರುಗಳು, ಸಹವರ್ತಿಗಳು, ಮಿತ್ರವೃಂದ, ಶಿಷ್ಯರು, ಸಹಾಯ ಪಡೆದವರು ಅವರನ್ನು, ಅವರ ಗುಣ-ಸ್ವಭಾವಗಳನ್ನು ಮೆಚ್ಚಿ ಬರೆದಿರುವ ಬರಹಗಳನ್ನು ಓದಿದರೆ ಮನ ತುಂಬಿಬರುತ್ತದೆ. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಮಾಡುವುದೆಲ್ಲವನ್ನೂ ಅವರು ಕೇವಲ ಇಪ್ಪತ್ತು ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ ಎಂಬುದೇ ಅಚ್ಚರಿಯ ವಿಷಯ. ಅನೇಕರಿಗೆ ವಿದ್ಯಾಭ್ಯಾಸಕ್ಕೆ ಹಣ ನೀಡಿದ್ದಾರೆ. ತಮ್ಮ ಮನೆಯಲ್ಲೇ ಇಟ್ಟುಕೊಂಡು ಕೆಲವರನ್ನು ಓದಿಸಿದ್ದಾರೆ. ಇಂತಹ ಅನನ್ಯ ವ್ಯಕ್ತಿತ್ವದ ವಿಜಯಾ ದಬ್ಬೆಯವರ ಬರಹಗಳು ಮಾತ್ರವಲ್ಲ, ಅವರ ಕೆಲಸಗಳೂ ಇಂದಿಗೂ ನಮಗೆ ಮಾದರಿಯಾಗುವಂತದ್ದು.

WhatsApp Image 2026 02 02 at 20.30.56
ವಿಜಯಾ ದಬ್ಬೆ ಅವರೊಂದಿಗೆ ರೂಪ ಹಾಸನ

‘ಇರುತ್ತವೆ’, ‘ನೀರು ಲೋಹದ ಚಿಂತೆ’, ‘ಇತಿಗೀತಿಕೆ’ ಕವನ ಸಂಕಲನಗಳು, ಕಾವ್ಯಾಭ್ಯಾಸಿಗಳಿಗೆಲ್ಲಾ, ಅದರಲ್ಲೂ ಮಹಿಳಾ ಚಳವಳಿಗಳ ಹಿನ್ನೆಲೆಯಲ್ಲಿ ಕವಿತೆಗಳನ್ನು ಅಧ್ಯಯನ ಮಾಡುವ ಸಂಶೋಧಕರು, ಹಾಗೂ ವಿದ್ಯಾರ್ಥಿಗಳಿಗೆಲ್ಲಾ ಆಕರ ಕೃತಿಗಳಾಗಿವೆ ಹಾಗೂ ಪ್ರಭಾವ ಬೀರುವಂತವೇ ಆಗಿವೆ. ಮಹಿಳೆ ದಾರಿ ದಿಗಂತ, ಉರಿಯ ಚಿಗುರ ಉತ್ಕಲೆ, ಮಹಿಳೆ ಮತ್ತು ಮಾನವತೆ, ಸಾನಂದ ಗಣೇಶ ಸಾಂಗತ್ಯ, ಸಂಪ್ರತಿ, ನಯಸೇನ, ನಾಗಚಂದ್ರ ಒಂದು ಅಧ್ಯಯನ, ವಿಮೋಚನೆಯೆಡೆಗೆ, ಶ್ಯಾಮಲ ಸಂಚಯ, ಮಹಿಳೆ ಸಾಹಿತ್ಯ ಸಂಚಯ, ಹಿತೈಷಿಣಿಯ ಹೆಜ್ಜೆಗಳು, ಸಾರ ಸರಸ್ವತಿ, ಅನುಪಮಾ ನಿರಂಜನ ಮುಂತಾದ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಸ್ತ್ರೀವಾದಿ ಅಧ್ಯಯನಕ್ಕೆ ಅವರ ಮಹಿಳಾ ಕಾಳಜಿಯ ಅಸಂಖ್ಯ ಲೇಖನಗಳು ಮುನ್ನುಡಿಗಳಿದ್ದಂತೆ. ಅವನ್ನು ಓದಿಕೊಳ್ಳದೇ ಮುನ್ನಡೆಯುವಂತೆಯೇ ಇಲ್ಲ! ಅವರ ಸಾಹಿತ್ಯ ಸಾಧನೆಗಾಗಿ ವರ್ಧಮಾನ ಸಾಹಿತ್ಯ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಸದೋದಿತಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಗೌರವ ಇನ್ನೂ ಮುಂತಾದ ಸಮ್ಮಾನಗಳು ಸಂದಿವೆ.

ಇದನ್ನು ಓದಿದ್ದೀರಾ?: ಅರ್ಥಶಾಸ್ತ್ರಜ್ಞೆ, ಐರನ್‌ಲೇಡಿ ಸುಶೀಲಾ ಸುಬ್ರಹ್ಮಣ್ಯ

ಜನವರಿ 6, 1999ರಲ್ಲಿ ಘಟಿಸಿದ ಒಂದು ರಸ್ತೆ ಅಪಘಾತದಲ್ಲಿ ನೆನಪಿನ ಶಕ್ತಿಯನ್ನು, ಆರೋಗ್ಯವನ್ನೂ ಕಳೆದುಕೊಂಡು ನಿಷ್ಕ್ರಿಯರಾಗಿದ್ದ ವಿಜಯಾ ದಬ್ಬೆಯವರನ್ನು ಭಾರತದಲ್ಲಿಯೇ ಬಿಟ್ಟು, ಅವರ ಪತಿ, ತಮ್ಮ ಮಗಳನ್ನು ಕರೆದುಕೊಂಡು ವಿದೇಶಕ್ಕೆ ವಾಪಸ್ಸಾಗಿದ್ದರು. ಆನಂತರ ಅವರ ತವರು ಮನೆಯವರೇ ಕೊನೆಯವರೆಗೆ ನೋಡಿಕೊಂಡಿದ್ದರು. 2018ರ ಫೆಬ್ರವರಿ 23ರಂದು ಅವರು ಇಹಲೋಕವನ್ನು ಅಗಲಿದರು. ಆದರೆ, ಹಾಸನ ಜಿಲ್ಲೆಯ ಮೂಲೆಯ ದಬ್ಬೆಯಂತಹ ಪುಟ್ಟಹಳ್ಳಿಯ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಗಳೊಬ್ಬಳು ಸಾಹಿತ್ಯ ಹಾಗೂ ಮಹಿಳಾ ಹೋರಾಟದ ಚರಿತ್ರೆಯಲ್ಲಿ ಈ ಎತ್ತರವನ್ನು ತಲುಪಿದ್ದು, ದೊಡ್ಡ ಸಾಧನೆಯಾಗಿ ಇತಿಹಾಸದಲ್ಲಿ ದಾಖಲಾಗಿದೆ.

Roopa-Hasan
ರೂಪ ಹಾಸನ
+ posts

ಲೇಖಕಿ, ಸಂಘಟಕಿ. ಮೂಲತಃ ಮೈಸೂರಿನವರು. ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಗಳಿಗೆ ಬಟ್ಟಲ ತಿರುವುಗಳಲ್ಲಿ, ಕಡಲಿಗೆಷ್ಟೊಂದು ಬಾಗಿಲು, ಲಹರಿ, ಮಹಿಳೆ ಮತ್ತುಆಧುನಿಕತೆಯ ಸವಾಲುಗಳು, ಹೇಮಯೊಡಲಲ್ಲಿ, ತನ್ನಷ್ಟಕ್ಕೆ, ಇವಳ ಭಾರತ, ಒಂದು ನಿಸ್ತಂತುವಿನೆಳೆ, ಮಹಾಸಂಗ್ರಾಮಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಲವು ಪ್ರಶಸ್ತಿಗಳು ದೊರಕಿವೆ. ಮಹಿಳೆ ಮಕ್ಕಳು ಶಿಕ್ಷಣ ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯದ ನೆಲೆ ಹಾಸನ.

ಪೋಸ್ಟ್ ಹಂಚಿಕೊಳ್ಳಿ:

ರೂಪ ಹಾಸನ
ರೂಪ ಹಾಸನ
ಲೇಖಕಿ, ಸಂಘಟಕಿ. ಮೂಲತಃ ಮೈಸೂರಿನವರು. ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಗಳಿಗೆ ಬಟ್ಟಲ ತಿರುವುಗಳಲ್ಲಿ, ಕಡಲಿಗೆಷ್ಟೊಂದು ಬಾಗಿಲು, ಲಹರಿ, ಮಹಿಳೆ ಮತ್ತುಆಧುನಿಕತೆಯ ಸವಾಲುಗಳು, ಹೇಮಯೊಡಲಲ್ಲಿ, ತನ್ನಷ್ಟಕ್ಕೆ, ಇವಳ ಭಾರತ, ಒಂದು ನಿಸ್ತಂತುವಿನೆಳೆ, ಮಹಾಸಂಗ್ರಾಮಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಹಲವು ಪ್ರಶಸ್ತಿಗಳು ದೊರಕಿವೆ. ಮಹಿಳೆ ಮಕ್ಕಳು ಶಿಕ್ಷಣ ಪರಿಸರ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸದ್ಯದ ನೆಲೆ ಹಾಸನ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...