ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ...
ಪರಕೀಯ ಆಳ್ವಿಕೆಯಲ್ಲಿದ್ದ ಭಾರತದಂತಹ ದೇಶಗಳು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವಾಗಲೇ ದೇಶದ ಆಂತರಿಕ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಟವನ್ನೂ ಕಂಡವು. ಭಾರತದಲ್ಲಿ ರಾಷ್ಟ್ರೀಯ ಹೋರಾಟದ ಜೊತೆಜೊತೆಗೆ ವಿಧವಾ ಪದ್ಧತಿ, ಸತಿ ಸಹಗಮನ, ಬಾಲ್ಯವಿವಾಹ, ಜಾತಿ ತಾರತಮ್ಯ, ಅಸ್ಪೃಶ್ಯತೆಯೇ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ, ಹೋರಾಟ ನಡೆದವು. ರಾಜಕಾರಣದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ಹೊಸ ನಾಯಕತ್ವ ಹುಟ್ಟಿಕೊಂಡಿತು. ಮಹಿಳೆಯರಿಗೆ ಉದ್ಯೋಗ, ಶಿಕ್ಷಣ, ರಾಜಕೀಯ ಪ್ರಾತಿನಿಧ್ಯವೇ ಮೊದಲಾಗಿ ಎಲ್ಲ ಕಡೆ ಅವಕಾಶ ಕಲ್ಪಿಸುವ ಅಗತ್ಯ ದೇಶ ಕಟ್ಟುವವರಿಗೆ ಹೊಳೆಯಿತು. ಮಹಿಳಾ ಭಾಗೀದಾರಿಕೆಗೆ ಸಿಕ್ಕ ಅವಕಾಶ, ಉತ್ತೇಜನಗಳಿಂದ ಕೆಲವು ಮುಂದಾಳ್ತಿಯರು ರೂಪುಗೊಂಡರು. ಇಂತಹ ಸಂದರ್ಭದಲ್ಲಿ ಕಷ್ಟಸಾಧ್ಯವಾದದ್ದನ್ನು ಸಾಧ್ಯ ಮಾಡಿಕೊಂಡ ಅಪರೂಪದ ಮಹಿಳೆಯರಲ್ಲಿ ಕರ್ನಾಟಕದ ಯಶೋಧರಾ ದಾಸಪ್ಪ ಮುಖ್ಯರಾದವರು.
ಭಾರತೀಯ ಸಮಾಜ ಗಂಡ-ಮನೆ-ಮಕ್ಕಳು, ಕುಟುಂಬವನ್ನು ಸರಿದೂಗಿಸುವುದೇ ಹೆಣ್ಣುಗಳ ಪರಮ ಕರ್ತವ್ಯ ಎಂದು ವಿಧಿಸಿದೆ. ಅದನ್ನು ಮಹಿಳೆಯರೂ ನಂಬಿ ಪಾಲಿಸಿಕೊಂಡು ಬಂದಿದ್ದಾರೆ. ಎಂದೇ ಅವರಿಗೆ ಸಾಮಾಜಿಕ ವಿಷಯಗಳು ಅಮುಖ್ಯ, ರಾಜಕಾರಣ ಅಪಥ್ಯ. ಕುಟುಂಬದಾಚೆಯ ಸುದ್ದಿಗಳು ಸೆಳೆಯಲಾರವು. ಹೊರರಾಜ್ಯ, ಹೊರದೇಶಗಳ ಮಾತಿರಲಿ; ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತರಾಗುವುದೂ ಕಷ್ಟವೇ. ಮದುವೆಯಾದರೆ ಮುಗಿಯಿತು, ಎಲ್ಲ ಹಕ್ಕುಗಳೂ ನಷ್ಟವಾದ ಹಾಗೆ. ತಾಯ್ತನವೆಂಬ ಪಾತಾಳಲೋಕದ ಸಿಂಹಾಸನವೇರಿಬಿಟ್ಟರೆ ಮೇಲೆದ್ದು ಬರುವುದು ದೂರದ ಮಾತು. ಈಗಲೂ ಇಂಥ ಮಹಿಳೆಯರೇ ಹೆಚ್ಚಿದ್ದಾರೆ.
ಇದನ್ನು ಓದಿದ್ದೀರಾ?: ಅನಾಥರ ಪಾಲಿನ ʼಸುಮಂಗಲಿʼ ಸುಶೀಲಮ್ಮಗೆ ಒಲಿದ ಪದ್ಮಶ್ರೀ
ಹೀಗಿರುತ್ತ 28ರ ಮೇ 1905ರಲ್ಲಿ ಜನಿಸಿದ ಯಶೋಧರಾ, 120 ವರ್ಷಗಳ ಕೆಳಗೆ ಸಣ್ಣಮಕ್ಕಳನ್ನು ಕಟ್ಟಿಕೊಂಡೇ ಪೊಲೀಸರನ್ನೆದುರಿಸಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ಸತ್ಯಾಗ್ರಹಗಳಲ್ಲಿ ಪಾಲ್ಗೊಂಡ ಅಸಾಮಾನ್ಯ ಮಹಿಳೆ. ತಂದೆ ಕೆ.ಎಚ್.ರಾಮಯ್ಯ ಅವರ ಬೆಂಬಲದಿಂದ ಇಂಗ್ಲಿಷ್ ವಿದ್ಯಾಭ್ಯಾಸ ಪಡೆದು, ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು, ನಂತರ ಬಾಳಸಂಗಾತಿ ಎಚ್.ಸಿ. ದಾಸಪ್ಪ ಅವರೊಡನೆ ಸಮಾಜ ಸೇವಾಕಾರ್ಯದಲ್ಲಿ ತೊಡಗಿಕೊಂಡರು. ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆಗಳಿಗೆ ಕೌಟುಂಬಿಕ ವಲಯದಲ್ಲಿ ಮುಳುಗಿಹೋಗಿದ್ದ ಮಹಿಳೆಯರನ್ನು ಎಳೆತಂದು ಸಂಘಟನಾ ಶಕ್ತಿಗೆ ಮಾದರಿಯಾದರು. ನೊಂದ ಮಹಿಳೆಯರ ಬಾಳಿಗೆ ಊರುಗೋಲಾಗಿ ನಿಂತು ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ನಿಧಿಯ ಕರ್ನಾಟಕ ಶಾಖೆಯನ್ನು, ಕಸ್ತೂರಬಾ ಗ್ರಾಮವನ್ನು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಕಟ್ಟಿ ಬೆಳೆಸಿದರು. ಹಾಸನದಲ್ಲಿಯೇ ರಾಜಕಾರಣದಲ್ಲಿ ಸಕ್ರಿಯರಾಗಿ ಚುನಾವಣೆ ಎದುರಿಸಿದರು. ನಾಲ್ಕು ವರ್ಷ ಮೈಸೂರು ನ್ಯಾಯವಿಧಾಯಕ ಸಭೆಯ ಸದಸ್ಯೆಯಾಗಿದ್ದರು. ಸ್ವಾತಂತ್ರ್ಯಾನಂತರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಸಮಾಜ ಕಲ್ಯಾಣ ಇಲಾಖೆಯ ಸಚಿವೆಯಾದರು. ಮೈಸೂರು ನ್ಯಾಯವಿಧಾಯಕ ಸಭೆಗೆ ಸ್ಪರ್ಧಿಸಿ ಗೆದ್ದ ಮೊದಲ ಮಹಿಳೆ (1938-42), ಸ್ವಾತಂತ್ರ್ಯಾನಂತರ ರೂಪುಗೊಂಡ ಎಂಪಿಸಿಸಿ(ಮೈಸೂರು ಪ್ರದೇಶ್ ಕಾಂಗ್ರೆಸ್ ಕಮಿಟಿ)ಯ ಮೊದಲ ಅಧ್ಯಕ್ಷೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಮೊದಲ ಮಹಿಳಾ ಅಧ್ಯಕ್ಷೆ, ಕರ್ನಾಟಕದ ಮೊದಲ ಸಂಪುಟ ದರ್ಜೆ ಸಚಿವೆ ಮುಂತಾಗಿ ಹಲವು ಮೊದಲುಗಳನ್ನು ತಮ್ಮ ಹೆಸರಿನೊಡನೆ ಹೊಂದಿದ ಮೊದಲಗಿತ್ತಿ ಅವರು. (ಕಾಂಗ್ರೆಸ್ ಪಕ್ಷದ ಕರ್ನಾಟಕ ಘಟಕದ ಮೊದಲ ಅಧ್ಯಕ್ಷೆಯಷ್ಟೇ ಅಲ್ಲ, ಏಕೈಕ ಮಹಿಳಾ ಅಧ್ಯಕ್ಷೆಯೂ ಹೌದು! ಯಾಕೆಂದರೆ ಇದುವರೆಗೆ ಮತ್ಯಾರೂ ಆ ಸ್ಥಾನಕ್ಕೆ ಬರಲು ಸಾಧ್ಯವಾಗಿಲ್ಲ.)

ಈಗ ಕೆಳಹಂತದಿಂದ ಹಿಡಿದು ವಿಧಾನಸಭೆ, ಸಂಸತ್ತುಗಳ ತನಕ ಸಾಕಷ್ಟು ಮಹಿಳೆಯರು ರಾಜಕಾರಣದಲ್ಲಿ ಕ್ರಿಯಾಶೀಲರಾಗಿದ್ದಾರೆ. ಆದರೆ ಪಕ್ಷ, ಜಾತಿ, ಧರ್ಮಗಳಲ್ಲಿ ಹಂಚಿಹೋದ ಮಹಿಳಾ ರಾಜಕಾರಣಿಗಳು ಹೆಣ್ಣು ಚಿಂತನೆಗಳನ್ನೂ, ತಾನು ಮಹಿಳೆಯರ ಪ್ರತಿನಿಧಿ ಎಂಬ ಸಂಗತಿಯನ್ನೂ ಮರೆತೇ ಬಿಡುವಂತೆ ವರ್ತಮಾನದ ರಾಜಕೀಯ ನಾಟಕಗಳು ಸಂಭವಿಸುತ್ತಿವೆ. ಜನಪ್ರತಿನಿಧಿಯಾಗಿ ಆಯ್ಕೆಯಾಗಿ, ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಸಿಕ್ಕಿದ್ದೇ ಕುರ್ಚಿಯ ಪ್ರಭಾವವೋ, ನಾಯಕಿ/ಕರನ್ನೇ ನೆಚ್ಚಿಕೊಂಡು ಆರಾಧಿಸುವ ಜನರ ದೌರ್ಬಲ್ಯವೋ, ಅಂತೂ ಅಧಿಕಾರಸ್ಥ ಮಹಿಳೆಯರು ಕೂಡಾ ದಬ್ಬಾಳಿಕೆ, ಪಕ್ಷಪಾತ, ಜಾತೀಯತೆ, ಭ್ರಷ್ಟಾಚಾರದಲ್ಲಿ ತಾವು ಯಾರಿಗೂ ಕಡಿಮೆಯಿಲ್ಲ ಎನ್ನುವಂತೆ ವರ್ತಿಸತೊಡಗಿದ್ದಾರೆ. ಅಧಿಕಾರದ ಕಾರಿಡಾರುಗಳಲ್ಲಿ ಕುರ್ಚಿಗಂಟಿ ಕೂರಬೇಕೆಂದು ನಡೆಸುವ ಮಸಲತ್ತುಗಳಲ್ಲಿ ತಮ್ಮ ಹೆಣ್ಣುಗುಣಗಳನ್ನೇ ನಷ್ಟ ಮಾಡಿಕೊಂಡಿದ್ದಾರೆ.
ಆಳುವವರ ದೃಷ್ಟಿಗೆ ಬೀಳಲು, ಅಧಿಕಾರದ ಆಸುಪಾಸಿನ ಜಾಗ ಕಾಯ್ದುಕೊಳ್ಳಲು ಬಹುತೇಕ ರಾಜಕಾರಣಿಗಳು ಲಾಗಪಲ್ಟಿ ಹೊಡೆಯುವುದನ್ನು ನೋಡುವಾಗ ಯಶೋಧರಾ– ರಾಜರಿಗೆ, ಅಧಿಕಾರದ ಗದ್ದುಗೆಗೆ ಮಣಿಯದೇ ಜನಸೇವೆ ಮಾಡುತ್ತ ಉಳಿದರು. ‘ರಾಜಸೇವಾಸಕ್ತ’ರಾಗಲೊಲ್ಲದೆ ಜನಸೇವಾಸಕ್ತರಾದರು. ಅಧಿಕಾರಕ್ಕಿಂತ ತತ್ತ್ವವೇ ಮುಖ್ಯ ಎಂದು ಭಾವಿಸಿ ಸಚಿವೆ ಪದವಿಗೆ ಬೆನ್ನು ಹಾಕಿದರು. ಎಂದೇ ಹಂಚಿಕೊಳ್ಳುವ ಸಂಪನ್ಮೂಲವಾಗಿ ಅಧಿಕಾರ ಸ್ಥಾನದಲ್ಲಿ ಕುಳಿತ ಯಶೋಧರಾ ಅಪರೂಪದ ಮಹಿಳಾ ನಾಯಕತ್ವಕ್ಕೆ ಉದಾಹರಣೆಯಾಗಿದ್ದಾರೆ.
ಯಶೋಧರಾ ತಮ್ಮ ಜನಪ್ರಿಯತೆ, ಜನಬೆಂಬಲವನ್ನು ಮತಗಳಾಗಿ ಪರಿವರ್ತಿಸಿಕೊಂಡದ್ದು ಸ್ವಾರ್ಥ ಸಾಧನೆಗೋ, ಸ್ವಜನ ಹಿತ ಕಾಯಲೋ ಅಲ್ಲ; ಬದಲಾಗಿ ಸಾಂವಿಧಾನಿಕ ಅಧಿಕಾರದ ಮೂಲಕ ಜನಹಿತದ ಕೆಲಸಗಳನ್ನು ವಿಸ್ತೃತವಾಗಿ ಮಾಡಬಹುದು ಎಂದು ಮಂತ್ರಿಯಾದರು. ಯಾವ ಖಾತೆಯಾದರೂ ದೊರೆಯಬಹುದಾದಷ್ಟು ಸಮರ್ಥೆ, ಪ್ರಭಾವಿಯಾಗಿದ್ದರೂ ಸಮಾಜ ಕಲ್ಯಾಣ ಇಲಾಖೆಯನ್ನೇ ಕೇಳಿ ಪಡೆದರು. ವಂಶಪಾರಂಪರ್ಯ ರಾಜಕಾರಣದಿಂದ ಪ್ರಜಾಪ್ರಭುತ್ವವು ಇಂದಿಗೂ ಸೊರಗುತ್ತಿರುವಾಗ ‘ನಿಮ್ಮ ಮಗನನ್ನು ಮುಖ್ಯಮಂತ್ರಿ ಮಾಡೋಣವೇ’ ಎಂದು ಪ್ರಧಾನಿ ಇಂದಿರಾ ತಮ್ಮ ಮನೆಗೇ ಬಂದು ಕೇಳಿದರೂ, ‘ನನ್ನ ಮಗನಿಗೆ ಅನುಭವ ಸಾಲದು; ಆದರೆ ಆ ದೇವರಾಜ ಅರಸು ಇದ್ದಾನಲ್ಲ, ಆತನಿಗೆ ಭವಿಷ್ಯವಿದೆ, ಸಾಮರ್ಥ್ಯ ಮುನ್ನೋಟಗಳಿವೆ. ಅವನನ್ನು ಮಾಡು’ ಎಂದು ಸಲಹೆ ಕೊಟ್ಟ ಯಶೋಧರಾ, ಉನ್ನತ ಮೌಲ್ಯಗಳ ಸಾಕಾರವಾಗಿ ಕಾಣುತ್ತಾರೆ. ಪಾನನಿರೋಧ ನೀತಿಯನ್ನು ತಮ್ಮದೇ ಪಕ್ಷದ ಸರ್ಕಾರ ಸಡಿಲಿಸಲು ಮುಂದಾದಾಗ ಅದು ಜನವಿರೋಧಿ ಮತ್ತು ಸಂವಿಧಾನದ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳಿಗೆ ವಿರುದ್ಧ ಎಂದು ಸಚಿವೆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದ ಯಶೋಧರಾ- ತತ್ತ್ವಕ್ಕೆ ನಿಷ್ಠರಾಗಿ ಅಧಿಕಾರದ ಅಂಗಳಕ್ಕೆ ಬೆನ್ನು ಹಾಕಿ ನಿರ್ಗಮಿಸಿದರು. ಹಣ, ಭೂಮಿ, ಅಧಿಕಾರದೆಡೆಗೆ ಉದಾತ್ತ ನಿಸ್ಪೃಹತೆಯನ್ನು ತೋರಿಸಿದರು.
ಯಾವುದನ್ನೇ ಆದರೂ ಆರಂಭಿಸಲು ಬಹಳ ಉತ್ಸಾಹವಿರುತ್ತದೆ. ಕಾಲ ಕಳೆಯುತ್ತ ಹೋದಹಾಗೆ ಹುಮ್ಮಸ್ಸು ಕುಂದುತ್ತದೆ. ಸಣ್ಣ ಅಡೆತಡೆಗಳು ಬಂದರೂ ಆರಂಭಗೊಂಡಿದ್ದು ನಿಂತೇ ಹೋಗುತ್ತದೆ. ಅಸ್ಮಿತೆಗಳನ್ನು ಮೀರಿಕೊಂಡವರಿಗಷ್ಟೇ ಏನೇ ಎದುರಾದರೂ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗೆ ಜಾತಿ, ವರ್ಗ, ಅಸ್ಮಿತೆಗಳನ್ನು ನಿರಂತರ ಮೀರಿಕೊಳ್ಳಲು ಪ್ರಯತ್ನಿಸಿದವರು ಯಶೋಧರಾ. ಹಣಕ್ಕೆ ಕಷ್ಟವಾದರೂ, ಕೈ ಜೋಡಿಸುವವರ ಸಂಖ್ಯೆ ಕಡಿಮೆಯಾದರೂ, ಅಪವಾದದ ಮಾತು ಬಂದರೂ ಕುಗ್ಗದೆ ಒಂದೇ ಮನಸ್ಸಿನಿಂದ ಸಮಾಜದ ಕೆಲಸ ಮಾಡಿದರು. ಹೆಜ್ಜೆಹೆಜ್ಜೆಗೂ ತಾನು ಆಡುವುದಕ್ಕೂ, ಮಾಡುವುದಕ್ಕೂ ತಾಳೆಯಿದೆಯೇ ಎಂದು ಪ್ರಶ್ನಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುವ, ನಿರಂತರ ಬದಲಾವಣೆಗೆ ಒಡ್ಡಿಕೊಳ್ಳುವ ವಿಶಿಷ್ಟ ಹೆಣ್ಣುಗುಣಗಳಿಂದ ಅಪರೂಪದ ಮಾದರಿಯಾಗಿ ಬೆಳೆದರು. ತನ್ನ ಗುರು, ಮಾರ್ಗದರ್ಶಿ ಗಾಂಧೀಜಿಯವರಂತೆ ಕೊನೆಯತನಕ ತನ್ನನ್ನು ಸಕಾರಾತ್ಮಕವಾಗಿ ಬದಲಿಸಿಕೊಳ್ಳುತ್ತಲೇ ಹೋದರು.
ಇದನ್ನು ಓದಿದ್ದೀರಾ? ಸಾವಯವ ಕೃಷಿಗೆ ಹೆಸರುವಾಸಿಯಾದ ಪದ್ಮಶ್ರೀ ಪುರಸ್ಕೃತೆ ಕಮಲಾ ಪೂಜಾರಿ ನಿಧನ
ಅವರ ಮತ್ತೊಂದು ಅಪರೂಪದ ಗುಣ ಓದುಬರಹದಲ್ಲಿ ತೊಡಗಿಕೊಳ್ಳುತ್ತಿದ್ದದ್ದು. ವೃತ್ತಪತ್ರಿಕೆಗಳನ್ನು ತಪ್ಪದೇ ಓದುತ್ತಿದ್ದರು. ‘ಹಿಂದ್ ಸ್ವರಾಜ್’ ಅನ್ನು ಪವಿತ್ರ ಗ್ರಂಥವೆಂಬಂತೆ ಪರಿಗಣಿಸುತ್ತಿದ್ದರು. ಕೈಚೀಲದಲ್ಲಿ ಸದಾ ಡಿವಿಜಿಯವರ ಮಂಕುತಿಮ್ಮನ ಕಗ್ಗ ಇರುತ್ತಿತ್ತು. ಭಾಷಣದ ನಡುವೆ ಕಗ್ಗದ ಒಂದೊಂದು ಪದ್ಯವನ್ನು ಉಲ್ಲೇಖಿಸುತ್ತಿದ್ದರು. ನೊಂದವರಿಗೆ ಸಮಾಧಾನ ಹೇಳುವಾಗಲೂ ಕಗ್ಗದ ಕವಿತೆಗಳನ್ನು ಉದ್ಧರಿಸಿ, ವಿಸ್ತರಿಸಿ ಹೇಳಿಬಿಡುತ್ತಿದ್ದರು. ‘ಬೈಗುಬೆಳಗು, ಸೂರ್ಯಚಂದ್ರನಕ್ಷತ್ರಗಳು, ಅರಳುವ ಹೂವು, ಸುರಿಯುವ ಇಬ್ಬನಿ ಹೇಗೆ ಉದ್ಘೋಷಿಸಿಕೊಳ್ಳದೇ ಸಹಜವಾಗಿ ಬಂದು ಬಾಳಿ ಹೋಗುತ್ತವೋ ಹಾಗೆ ಮನುಷ್ಯರೂ ಭೂಮಿ ಮೇಲೆ ಬಂದ ಬಳಿಕ ಉಪಯುಕ್ತ ಬದುಕು ನಡೆಸಿ ಹೋಗಬೇಕು’ ಎಂಬ ಕಗ್ಗದ ಕವಿತೆಯನ್ನು ಯಾವಾಗಲೂ ಧ್ಯಾನಿಸುತ್ತಿದ್ದರು. ಇಂಗ್ಲಿಷ್ ಹೊತ್ತಗೆಗಳೂ ಬಳಿಯಿರುತ್ತಿದ್ದವು. ಆಳ ಓದಿನ ಹವ್ಯಾಸವು ವಿಶಿಷ್ಟ ಚಿಂತನಾಶೀಲ ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾಯಿತು.
ರಾಷ್ಟ್ರ ರಾಜಕಾರಣದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ, ಸರೋಜಿನಿ ಮಹಿಷಿ ಮೊದಲಾದ ಕನ್ನಡಿತಿಯರು ಕಂಡುಬಂದರೆ ಕರ್ನಾಟಕಕ್ಕೆ, ಇಲ್ಲಿನ ನೆಲಕ್ಕೆ ತಮ್ಮ ಸೇವೆ ಮೀಸಲಿರಿಸಿದವರು ಬಳ್ಳಾರಿ ಸಿದ್ದಮ್ಮ, ಉಮಾಬಾಯಿ ಕುಂದಾಪುರ, ಯಶೋಧರಾ ದಾಸಪ್ಪ ಮೊದಲಾದವರು. ಸ್ವಾತಂತ್ರ್ಯಾನಂತರವೂ ಮಂತ್ರಿಯಾಗಿ, ಸಂಘಟಕಿಯಾಗಿ 30 ಜೂನ್ 1980ರ ತಮ್ಮ ಬದುಕಿನ ಕೊನೆಯ ತನಕ ಕ್ರಿಯಾಶೀಲರಾಗಿ ಉಳಿದ ಯಶೋಧರಾ- ಅಧಿಕಾರ ರಾಜಕಾರಣ, ಸಾರ್ವಜನಿಕ ಸೇವೆ, ಸಂಘಟನೆ, ಚುನಾವಣಾ ರಾಜಕಾರಣ ಇವೆಲ್ಲದರಲ್ಲೂ ಮುಂದಾಳ್ತಿಯಾಗಿ ಕೆಲಸ ಮಾಡಿ ಯಶಸ್ವಿಯಾದವರು. ಗಾಂಧಿ ತತ್ತ್ವಾನುಯಾಯಿಯಾಗಿ, ಜನಸೇವಕಿಯಾಗಿ, ರಾಜಕಾರಣಿಯಾಗಿ ವಿಶಿಷ್ಟರಾಗಿ ರೂಪುಗೊಂಡರು.

ಭಾರತದ ದಲಿತ-ಆದಿವಾಸಿಗಳ ಹೋರಾಟ, ರೈತ ಹೋರಾಟ, ಪರಿಸರ ಆಂದೋಲನ, ಕಾರ್ಮಿಕ ಹೋರಾಟ, ಸಾರಾಯಿ ವಿರೋಧಿ ಹೋರಾಟಗಳೆಲ್ಲದರಲ್ಲಿ ಗ್ರಾಮೀಣ, ತಳವರ್ಗಗಳ ಮಹಿಳೆಯರು ಪಾಲ್ಗೊಂಡಿದ್ದಾರೆ. ಆದರೆ ಅಧಿಕಾರಸ್ಥ ಜಾತಿಯಲ್ಲಿ, ಮೇಲ್ವರ್ಗದಲ್ಲಿ ಹುಟ್ಟಿ, ಪರದೇಶದ ಭಾಷೆಯಲ್ಲಿ ಶಿಕ್ಷಣ ಕಲಿತು, ಅನುಕೂಲಸ್ಥ ಸ್ಥಿತಿಯಲ್ಲಿದ್ದ ಯಶೋಧರಾ- ಬೀದಿಗೆ ಬಂದು ಹೋರಾಡಿದ್ದು, ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಪತಿ ಜೈಲಿಗೆ ಹೋದಾಗಲೂ ಹೋರಾಟ ಮುಂದುವರೆಸಿದ್ದು, ಲೋಕಹಿತಕ್ಕಾಗಿ ಸಂಘಟನೆ, ಸಂಸ್ಥೆಗಳನ್ನು ಕಟ್ಟಿ, ರಾಜಕೀಯ ಪಕ್ಷ ಸೇರಿ, ಚುನಾವಣೆಗೆ ನಿಂತದ್ದು, ಅಧಿಕಾರ ಇರುವಾಗಲೂ ಇಲ್ಲದಾಗಲೂ ತನ್ನ ತತ್ತ್ವಕ್ಕೆ ಬದ್ಧರಾಗಿ ಉಳಿದದ್ದು ಅಪರೂಪದಲ್ಲಿ ಅಪರೂಪದ ಗುಣಗಳಾಗಿವೆ. ಕಾಲದ ಸಂಕಟಗಳಲ್ಲಿ, ಅನಿರೀಕ್ಷಿತವಾಗಿ ಬಂದೆರಗುವ ಹೊಸಹೊಸ ದಂದುಗಗಳಲ್ಲಿ ಮುಳುಗಿ, ಮಾದರಿ ವ್ಯಕ್ತಿತ್ವಗಳು ಕಣ್ಣೆದುರೇ ಕುಸಿಯುವುದನ್ನು ವಿಷಣ್ಣರಾಗಿ ನೋಡುತ್ತಿರುವಾಗ ನಾವು ಮರೆತ ಯಶೋಧರಾ ಅವರತ್ತ ನಮ್ಮ ಗಮನ ಹರಿಯಬೇಕಿದೆ.
(ಇದೇ ಲೇಖಕಿಯ ‘ಜನಸೇವಾಸಕ್ತೆ ಯಶೋಧರಾ ದಾಸಪ್ಪ’ ಎಂಬ ಹೊತ್ತಗೆಗೆ ಬರೆದ ಲೇಖಕಿಯ ಮಾತುಗಳಿಂದ ಈ ಭಾಗ ಸಂಗ್ರಹಿಸಲ್ಪಟ್ಟಿದೆ. ಪುಸ್ತಕದ ಪ್ರತಿಗಳಿಗಾಗಿ: ಲಡಾಯಿ ಪ್ರಕಾಶನ, ಗದಗ, 94802 86844)

ಡಾ. ಎಚ್.ಎಸ್. ಅನುಪಮಾ
ಲೇಖಕಿ, ಕವಯತ್ರಿ. ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ- ಗ್ರಾಮಭಾರತದ ಕಥೆಗಳು ಎಂಬ ಮೂರು ಕಥಾಸಂಕಲನಗಳು; ಡಾ. ಬಾಬಾಸಾಹೇಬ್ ಅಂಬೇಡ್ಕರ್– ಕಿರು ಜೀವನ ಚರಿತ್ರೆ, ಮೋಚಕನ ಹೆಜ್ಜೆಗಳು- ಡಾ. ಬಿ.ಆರ್. ಅಂಬೇಡ್ಕರ್ ಜೀವನ ಚರಿತ್ರೆ, ನಾನು ಕಸ್ತೂರ್– ಕಸ್ತೂರಬಾ ಜೀವನ ಕಥನ, ಜನ ಸಂಗಾತಿ ಭಗತ್- ಜೀವನ ಚರಿತ್ರೆ ಸೇರಿದಂತೆ ಎಂಟು ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಜೊತೆಗೆ ಮಹಿಳೆ, ಸಂತಾನೋತ್ಪತ್ತಿ ಮತ್ತು ಮಾನಸಿಕ ಆರೋಗ್ಯ, ಮುಟ್ಟು– ವಿಜ್ಞಾನ, ಸಂಸ್ಕೃತಿ ಮತ್ತು ಅನುಭವ ಸೇರಿದಂತೆ ನಾಲ್ಕು ವೈದ್ಯಕೀಯ ಬರಹಗಳ ಸಂಕಲನಗಳನ್ನು ಪ್ರಕಟಿಸಿದ್ದಾರೆ. 'ನೈಲ್ ನದಿಯಗುಂಟ ಶರಾವತಿಯನರಸುತ್ತ ಈಜಿಪ್ಟ್ ಪ್ರವಾಸ ಕಥನ', ಅಂಡಮಾನ್: ಕಂಡ ಹಾಗೆ (ಪ್ರವಾಸ ಕಥನ), ಚೆಗೆವಾರನ ನೆಲದಲ್ಲಿ ಸೇರಿದಂತೆ ಮೂರು ಪ್ರವಾಸಕಥನ; ಬುದ್ಧ ಬೆಳಕಿನಲ್ಲಿ ಅಂಬೇಡ್ಕರ್ ಭಾರತ: ಲೇಖನ ಸಂಗ್ರಹ, ಸಂವಿಧಾನ ಮತ್ತು ಮಹಿಳೆ, ಹೆಣ್ಣು ಹೆಜ್ಜೆ (ಮಹಿಳಾ ಮಾದರಿ ಮತ್ತು ಮಾರ್ಗ) ಸೇರಿದಂತೆ 7 ಲೇಖನಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಇವುಗಳ ಜೊತೆಗೆ ಅನುವಾದ, ಸಂಪಾದನೆ, ಸಹಸಂಪಾದನೆ ಸೇರಿದಂತೆ ಒಟ್ಟು 53 ಕೃತಿಗಳನ್ನು ಪ್ರಕಟಿಸಿದ್ದಾರೆ.




