ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ...
ಗೊಂಬೆಯಾಟ ಬಯಲಾಟದ ಒಂದು ವಿಧ. ಬಯಲಾಟದಲ್ಲಿ ನಟರಿದ್ದರೆ, ಇಲ್ಲಿ ಗೊಂಬೆಗಳೇ ನಟರು. ಗೊಂಬೆಯಾಟದಲ್ಲಿ ಎರಡು ಬಗೆಗಳಿವೆ. ಸೂತ್ರದ ಗೊಂಬೆಯಾಟ, ತೊಗಲು ಗೊಂಬೆಯಾಟ. ಒಂದು ಕಾಲಕ್ಕೆ ಸೂತ್ರದ ಗೊಂಬೆಯಾಟ ಮೇಲ್ವರ್ಗದವರ ಮನರಂಜನೆಯಾಗಿದ್ದರೆ, ತೊಗಲು ಗೊಂಬೆಯಾಟ ಕೆಳವರ್ಗದವರ ಮನರಂಜನೆಯಾಗಿತ್ತು. ತೊಗಲುಗೊಂಬೆಯಾಟವನ್ನು ಸಿಳ್ಳೆ(ಕಿಳ್ಳೆ)ಕ್ಯಾತರು ನಡೆಸುತ್ತಾರೆ. ಇಡೀ ಕುಟುಂಬವೇ ಪ್ರದರ್ಶನ ನೀಡುವಲ್ಲಿ ಭಾಗಿಯಾಗುತ್ತದೆ. ನಾಲ್ಕು ಅಥವಾ ಐದು ಚದರ ಅಡಿ ಬಿಳಿ ಪರದೆಯ ಹಿಂದೆ ಇದ್ದು, ಗೊಂಬೆಗಳನ್ನು ಆಡಿಸುವುದೇ ಇದರ ವಿಶೇಷ. ಗೊಂಬೆಗಳ ನಿಯಂತ್ರಣ ಕಡ್ಡಿಗಳ ಮೂಲಕ ನಡೆಯುತ್ತದೆ.
ಗೊಂಬೆಯಾಟದವರನ್ನು ಗೊಂಬೆರಾಮರು ಎಂದು ಕರೆಯುವುದುಂಟು. ಇಂತಹ ಗೊಂಬೆರಾಮರು ಹಾಸನ ಜಿಲ್ಲೆಯಲ್ಲಿ ಅಲ್ಲಲ್ಲಿ ಇದ್ದರು. ಈಗ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಈ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂತಹವರಲ್ಲಿ ಹಾಸನ ತಾಲ್ಲೂಕಿನ ಹೂವಿನಹಳ್ಳಿ ಕಾವಲಿನ ಗುಂಡೂರಾಜರ ಕುಟುಂಬವು ಒಂದು. ಈ ಕುಟುಂಬ ಹಿಂದಿನಿಂದಲೂ ಗೊಂಬೆಯಾಟಕ್ಕೆ ಪ್ರಸಿದ್ಧಿ ಪಡೆದಿದೆ. ಇವರ ತಂದೆ ಗೊಂಬೆರಾಮಯ್ಯ, ತಾಯಿ ಹನುಮಮ್ಮ. ಈ ಇಬ್ಬರೂ ಗೊಂಬೆಯಾಟದಲ್ಲಿ ಎತ್ತಿದ ಕೈ. ಹನುಮಮ್ಮ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತೆ. ಈಗ ಈ ಇಬ್ಬರೂ ಇಲ್ಲ. ಇವರ ಮಗನೇ ಗುಂಡೂರಾಜ, ಈ ಕಲೆಯನ್ನು ಉಳಿಸಿಕೊಂಡು ಬಂದಿರುವುದರೊಂದಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಈ ಕಲೆಯನ್ನು ಕೊಂಡೊಯ್ದಿದ್ದಾರೆ. ಇವರೂ ಕೂಡ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು. ಈ ಎಲ್ಲಾ ಸಾಧನೆಯ ಹಿಂದೆ ತಾನೂ ಕೂಡ ಹೆಗಲೆಣೆಯಾಗಿ ನಿಂತು ಗೊಂಬೆಯಾಟದ ಕಲೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಲು ಗುಂಡೂರಾಜರ ಪತ್ನಿ ದಾಕ್ಷಾಯಿಣಿಯವರ ಪಾತ್ರ ಪ್ರಮುಖವಾದುದು.
ಈ ಲೇಖನ ಓದಿದ್ದೀರಾ?: ಜನಸೇವಾಸಕ್ತೆ ಯಶೋಧರಾ ದಾಸಪ್ಪ
ದಾಕ್ಷಾಯಿಣಿ ಹಾಸನ ತಾಲ್ಲೂಕಿನ ಮಣಚನಹಳ್ಳಿಯವರು. ಇವರಿಗೆ ಈಗ 65 ವರ್ಷ. ಎಂಟನೇ ತರಗತಿಯವರೆಗೆ ವಿದ್ಯಾಭ್ಯಾಸ. ತಂದೆ ಹನುಮಂತಯ್ಯ, ತಾಯಿ ರತ್ನಮ್ಮ. ಈ ಇಬ್ಬರೂ ಗೊಂಬೆಯಾಟ ಮಾಡುತ್ತಿದ್ದವರು. ದಾಕ್ಷಾಯಿಣಿಗೆ ಒಬ್ಬರು ಅಕ್ಕ. ಅವರ ವೃತ್ತಿ ವ್ಯವಸಾಯ. ಒಬ್ಬ ಅಣ್ಣ ರಾಮಚಂದ್ರ ಎಂಬುವವರು ಕೂಡ ಗೊಂಬೆಯಾಟದಲ್ಲಿ ನಿಪುಣ. ದಾಕ್ಷಾಯಿಣಿಗೆ ಮೂರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗ. ಈ ಎಲ್ಲಾ ಮಕ್ಕಳು ತಂದೆ ತಾಯಿಯರೊಂದಿಗೆ ಗೊಂಬೆಯಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಿರಿಯ ಮಗಳು ವಸಂತಕುಮಾರಿ ಮದುವೆಯಾಗಿದ್ದು ಗೊಂಬೆಯಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎರಡನೇ ಮಗಳು ಬಿಎ ಪದವೀಧರೆಯಾಗಿ ಶಿಕ್ಷಕಿಯಾಗಿದ್ದಾರೆ. ಮೂರನೆ ಮಗಳು ಶಶಿರೇಖ ಬಿ.ಇಡಿ. ಮತ್ತು ಕನ್ನಡ ಎಂಎ ಮಾಡಿದ್ದಾರೆ. ಇವರೆಲ್ಲರೂ ಶಿಕ್ಷಣ ಪಡೆದಿದ್ದರೂ ಇಂದಿಗೂ ತಮ್ಮ ತಂದೆ ತಾಯಿಯರೊಂದಿಗೆ ಬಿಡುವಿನ ವೇಳೆಯಲ್ಲಿ ಗೊಂಬೆಯಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಆಧುನಿಕತೆಯ ಸಂದರ್ಭದಲ್ಲೂ ನಮ್ಮ ಜನಪದ ಕಲೆಗೆ ಧಕ್ಕೆಯಾಗುತ್ತಿಲ್ಲ ಎಂಬುದರ ಸೂಚನೆ ಇಂತಹದ್ದರ ಮೂಲಕ ದೊರಕುತ್ತದೆ. ಇವರ ಮಗ ವೇಣುಗೋಪಾಲ ಕೂಡ ಗೊಂಬೆಯಾಟದಲ್ಲಿ ಮುಂಚೂಣಿಯಲ್ಲಿದ್ದಾನೆ.

ದಾಕ್ಷಾಯಿಣಿಯವರು ಚಿಕ್ಕ ವಯಸ್ಸಿನಿಂದಲೇ ತಮ್ಮ ತಂದೆ ತಾಯಿಯೊಂದಿಗೆ ಗೊಂಬೆಯಾಟದಲ್ಲಿ ತೊಡಗಿಸಿಕೊಂಡಿದ್ದು, ಮದುವೆಯ ನಂತರವಂತೂ ಗಂಡ, ಅತ್ತೆ, ಮಾವ ಇವರುಗಳ ಪ್ರೋತ್ಸಾಹ ಇನ್ನೂ ಹೆಚ್ಚು ಸಿಕ್ಕಿತು. ಇವರು ಇದುವರೆಗೂ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಗೊಂಬೆಯಾಟ ಪ್ರದರ್ಶನ ನೀಡಿರುವುದು ಅತ್ಯಂತ ಶ್ಲಾಘನೀಯವಾಗಿದೆ. ದಾಕ್ಷಾಯಿಣಿ ಗೊಂಬೆಯಾಟದಲ್ಲಿ ಮುಖ್ಯವಾಗಿ ಗೊಂಬೆಗಳನ್ನು ಪರದೆಯ ಹಿಂದೆ ಹಿಡಿದು ಕುಣಿಸುವುದು, ಹಾಡುಗಳನ್ನು ಹಾಡುವುದು, ಸ್ವರ, ತಾಳ, ನುಡಿಸುವುದು, ಸಂಭಾಷಣೆಗಳನ್ನು ಹೇಳುವುದನ್ನು ಮಾಡುತ್ತಾರೆ. ಜೊತೆಗೆ ಇವರ ಪತಿ ಗುಂಡೂರಾಜ ಸ್ವತಃ ಗೊಂಬೆಗಳನ್ನು ತಯಾರಿಸುತ್ತಾರೆ. ಆಗ ಗೊಂಬೆಗಳಿಗೆ ಬಣ್ಣ ತಯಾರಿಸಿಕೊಳ್ಳುವುದರಿಂದ ಹಿಡಿದು ಬಣ್ಣ ಹಚ್ಚುವ ಕೆಲಸವೆಲ್ಲ ದಾಕ್ಷಾಯಿಣಿಯವರದೇ ಆಗಿರುತ್ತದೆ.
ದಾಕ್ಷಾಯಿಣಿ ತಯಾರಿಸಿ ಬಣ್ಣ ಹಚ್ಚಿದ ತೊಗಲುಗೊಂಬೆಗಳು ಸಾವಿರಾರು ಇವೆ. ಇವರ ತಯಾರಿಕೆಯಲ್ಲಿ ಸಿದ್ಧವಾಗುವ ತೊಗಲುಗೊಂಬೆಗಳು ಕೇವಲ ಪೌರಾಣಿಕ ಗೊಂಬೆಗಳು ಮಾತ್ರವಲ್ಲದೆ, ಆಧುನಿಕತೆಗೆ ತಕ್ಕಂತಹ ಸಾಮಾಜಿಕ ಆಟಗಳ ಗೊಂಬೆಗಳನ್ನು ಕೂಡ ತಯಾರಿಸಿದ್ದಾರೆ. ಈ ಗೊಂಬೆಗಳನ್ನು ಹಿಂದೆ ಜಿಂಕೆ ಚರ್ಮ(ಚಕ್ಕಳ)ದಿಂದ ತಯಾರಿಸುತ್ತಿದ್ದರು. ಈಗ ಮೇಕೆ, ಕುರಿ ಚರ್ಮದಿಂದ ತಯಾರಿಸುತ್ತಿದ್ದಾರೆ. ಕೆಂಪು ಮತ್ತು ಕಪ್ಪು ಬಣ್ಣವನ್ನು ವಿವಿಧ ಸಸ್ಯದ ರಸ, ಎಣ್ಣೆ ಮುಂತಾದ ನೈಸರ್ಗಿಕ ವಸ್ತುಗಳನ್ನು ಬಳಸಿ ದಿನಗಟ್ಟಲೆ ಬಹಳವೇ ಶ್ರಮವಹಿಸಿ ತಯಾರು ಮಾಡಿ, ಗೊಂಬೆಗೆ ಬಣ್ಣ ಹಚ್ಚುವುದರ ಮೂಲಕ ಆಕಾರ ಕೊಡುತ್ತಾ, ಗೊಂಬೆಗಳಿಗೆ ಜೀವ ತುಂಬುವ ಕೆಲಸ ಮಾಡುತ್ತಾರೆ ದಾಕ್ಷಾಯಿಣಿಯವರು.
ಈ ಲೇಖನ ಓದಿದ್ದೀರಾ?: ಹಿರಿಯ ಲೇಖಕಿ, ಪತ್ರಕರ್ತೆ ಪಾರ್ವತಿ ಕೃ.ನ.ಮೂರ್ತಿ
ಇವರ ತಯಾರಿಕೆಯಲ್ಲಿ ಸಿದ್ಧವಾದ ಗೊಂಬೆಗಳು ಇವರ ಪ್ರದರ್ಶನಕ್ಕೆ ಮಾತ್ರವಲ್ಲದೆ ಅಮೆರಿಕಾ, ಇಟಲಿ, ಇಂಗ್ಲೆಂಡ್, ಆಫ್ರಿಕಾ, ಕೊರಿಯಾ… ಪ್ರವಾಸಿಗರೂ ಅವುಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಇವರ ಊರು ಪ್ರವಾಸಿ ಕೇಂದ್ರವಾದ ಬೇಲೂರಿನ ರಸ್ತೆಯಲ್ಲಿರುವುದೇ ಇದಕ್ಕೆ ಕಾರಣವಾಗಿದೆ. ಈ ಗೊಂಬೆ ಮಾರಾಟದಿಂದ ಲಾಭವೇನೂ ಇಲ್ಲ. ಗೊಂಬೆ ತಯಾರಿಕೆಗಿಂತ ಖರ್ಚೇ ಜಾಸ್ತಿ! ಆದರೆ ಕಸುಬನ್ನು ಬಿಡುವಂತಿಲ್ಲ ಎಂಬುದು ದಾಕ್ಷಾಯಿಣಿಯವರ ಅಭಿಪ್ರಾಯ.
ದಾಕ್ಷಾಯಿಣಿ ಗೊಂಬೆ ತಯಾರಿಕೆಯಲ್ಲಿ ಮಾತ್ರ ನಿಪುಣರಲ್ಲ. ಪರದೆಯ ಹಿಂದೆ ಕುಳಿತು ಗೊಂಬೆ ಕುಣಿಸುವುದರಲ್ಲಿ ಎತ್ತಿದ ಕೈ. ಹಾಡುಗಳನ್ನು ಹಾಡುವಾಗ ಆ ರಾಗ, ತಾಳ, ಲಯ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಸಂಭಾಷಣೆಯಂತೂ ಕಂಚಿನ ಕಂಠದಿಂದ ಹೊರಬರುವ ಧ್ವನಿಯಾಗಿದೆ. ಅದಕ್ಕೆ ಪ್ರತಿಯಾಗಿ ಇವರಿಗೆ ಸಿಗುವ ಲಾಭವೆಂದರೆ ಭತ್ತ, ರಾಗಿ, ಕಾಳು ಇತ್ಯಾದಿ. ಇದು ಇವರ ಜೀವನಕ್ಕೆ ಸ್ವಲ್ಪ ಆಧಾರವಾಗಿದೆ. ಜೊತೆಗೆ ಹಾಸನ ಜಿಲ್ಲೆಯಾದ್ಯಂತ ಮಾತ್ರವಲ್ಲದೆ, ಕರ್ನಾಟಕದಾದ್ಯಂತ, ಭಾರತದಾದ್ಯಂತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಇವರ ಕಲೆ ಪ್ರದರ್ಶನಗೊಂಡಿರುವುದಕ್ಕೆ ದಾಖಲೆಗಳು ಇವೆ.
ಇವರು ನಡೆಸುವ ಗೊಂಬೆಯಾಟಗಳೆಂದರೆ ಜನಪದ, ಪೌರಾಣಿಕ ಕಥೆಗಳಾದ ರಾಮಾಯಣ, ಮಹಾಭಾರತ, ಭಾಗವತ ಮುಂತಾದವುಗಳು. ಈ ಕಥೆಗಳನ್ನು ಪ್ರಸಂಗಕ್ಕೆ ಅನುಗುಣವಾಗಿ ಎಪ್ಪತ್ತು ಕಥೆಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಇವರು ಒಂದೇ ದಿನದಲ್ಲಿ ಎರಡು ಮೂರು ಪ್ರಸಂಗದ ಪ್ರದರ್ಶನ ನೀಡಿರುವುದೂ ಉಂಟು. ಸಂಪೂರ್ಣ ಮಹಾಭಾರತವಾದರೆ ಹದಿನೆಂಟು ರಾತ್ರಿ. ಪೂರ್ಣ ಭಾಗವತವಾದರೆ ಹತ್ತು ರಾತ್ರಿ ನಡೆಸುತ್ತಾರೆ. ಜೊತೆಗೆ ಆಧುನಿಕತೆಗೆ ಸಂಬಂಧಿಸಿದಂತಹ ಕುಟುಂಬ ಕಲ್ಯಾಣ ಯೋಜನೆ, ಏಡ್ಸ್ ರೋಗ, ಕ್ಯಾನ್ಸರ್, ಟಿ.ಬಿ, ಥೈರಾಯಿಡ್ ರೋಗಗಳ ಬಗ್ಗೆ ಅರಿವು ಮೂಡಿಸುವಂತಹ ಕಥೆಗಳನ್ನು ಹಾಗೂ ಗೊಂಬೆಗಳನ್ನು ಸಿದ್ಧಪಡಿಸಿಕೊಂಡು ಗೊಂಬೆಯಾಟ ಪ್ರದರ್ಶನವನ್ನು ನೀಡುತ್ತಿದ್ದಾರೆ.
ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ಪ್ರಸಾರ ಸಚಿವಾಲಯದ ವತಿಯಿಂದ ನಡೆಸುವ ಆರೋಗ್ಯ ಹಾಗೂ ಸಾಮಾಜಿಕ ಅರಿವಿನ ಕಾರ್ಯಕ್ರಮವನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಾನಾ ಕಡೆ ಗೊಂಬೆಯಾಟದ ಪ್ರದರ್ಶನದ ಮೂಲಕ ನೀಡಿದ್ದಾರೆ. ಭಾರತ ಸರ್ಕಾರದ ವತಿಯಿಂದ ಕೇರಳದ ತ್ರಿವೇಂಡ್ರಂ, ಮಹಾರಾಷ್ಟ್ರದ ನಾಗಪುರ, ಮಧ್ಯಪ್ರದೇಶದ ಖಜುರಾಹೊ, ದೆಹಲಿ, ಛತ್ತೀಸ್‌ಗಡ, ಫರೀದಾಬಾದ್, ರಾಜಸ್ಥಾನದ ಜೈಪುರ ಮತ್ತು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಗೊಂಬೆಯಾಟ ಪ್ರದರ್ಶನ ನೀಡಿರುವ ಹೆಗ್ಗಳಿಕೆಗೆ ದಾಕ್ಷಾಯಿಣಿ ಪಾತ್ರರಾಗಿದ್ದಾರೆ. ದಕ್ಷಿಣ ವಲಯದ ರೋಟರಿ ಸಂಸ್ಥೆ ವತಿಯಿಂದ ದಕ್ಷಿಣ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಗೊಂಬೆಯಾಟದ ಪ್ರದರ್ಶನ ನಡೆಸಿದ್ದಾರೆ. ಕೊರಿಯಾದಲ್ಲಿ ಅರವತ್ನಾಲ್ಕು ದೇಶಗಳು ಸೇರಿ ನಡೆಸಿದ ಮೂರನೇ ಡೆಲಿಪಿಕ್ ಗೇಮ್(ಗೊಂಬೆಯಾಟ ಪ್ರದರ್ಶನ)ನಲ್ಲಿ ಭಾರತದ ಪರವಾಗಿ ಇವರು ಮತ್ತು ಇವರ ಪತಿ ಭಾಗವಹಿಸಿ ಗೊಂಬೆಯಾಟ ಪ್ರದರ್ಶಿಸಿ ದ್ವಿತೀಯ ಸ್ಥಾನದ ಮೂಲಕ ಬೆಳ್ಳಿಪದಕ ಪಡೆದಿದ್ದಾರೆ. ಹಾಗೆಯೇ ಕುವೈತ್‌ನಲ್ಲಿ ನಡೆದ ಇಂಡಿಯಾ ಕುವೈತ್ ಫೆಸ್ಟಿವಲ್‌ನಲ್ಲಿ ಗೊಂಬೆಯಾಟ ಪ್ರದರ್ಶನ ನೀಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನು ಓದಿದ್ದೀರಾ?: ಅರ್ಥಶಾಸ್ತ್ರಜ್ಞೆ, ಐರನ್‌ಲೇಡಿ ಸುಶೀಲಾ ಸುಬ್ರಹ್ಮಣ್ಯ
ಇದಲ್ಲದೇ ಹೊರದೇಶಗಳಾದ ಹಾಂಕಾಂಗ್, ಕುವೈಯತ್, ಕೊರಿಯಾ ಮತ್ತು ಭಾರತದ ದೆಹಲಿ, ಒರಿಸ್ಸಾದ ಭುವನೇಶ್ವರ, ಆಂಧ್ರದ ಧರ್ಮಾವರಂ, ಮಧ್ಯಪ್ರದೇಶದ ಭೂಪಲ್, ಖಜರಾಹೋ, ಅರುಣಾಚಲಪ್ರದೇಶದ ಇಟಾನಗರ್, ಪಶ್ಚಿಮ ಬಂಗಾಳದ ಬರ್ದಮಾನ್(ವರ್ದಮಾನ್), ಕೇರಳ, ಹರಿಯಾಣ, ಮುಂಬಯಿ ಮುಂತಾದ ಕಡೆಗಳಲ್ಲೆಲ್ಲಾ ಪ್ರದರ್ಶನ ನೀಡಿದ್ದಾರೆ. ಇವರು ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ. ಇವರನ್ನು ಜಿಲ್ಲಾಡಳಿತ ಹಾಗೂ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಹೀಗೆ ನಿರಂತರವಾಗಿ ಚಿಕ್ಕ ವಯಸ್ಸಿನಿಂದ ಇದುವರೆಗೂ ಗೊಂಬೆಯಾಟ ನಡೆಸಿಕೊಂಡು ಬರುತ್ತಿರುವ ದಾಕ್ಷಾಯಿಣಿಯವರ ಕೈಚಳಕಕ್ಕೆ ದಾಕ್ಷಾಯಿಣಿಯವರೇ ಸಾಟಿ ಎಂಬಂತೆ ಗೊಂಬೆಯಾಟ ನಡೆಸಿಕೊಂಡು ಬರುತ್ತಿದ್ದಾರೆ.
ಈ ಕಲೆಯನ್ನು ತಮ್ಮ ಮಕ್ಕಳಿಗೂ ಕಲಿಸುವ ಮೂಲಕ ಮುಂದಿನ ತಲೆಮಾರಿಗೂ ಕಲೆ ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿರುವುದು, ನಮ್ಮ ದೇಸೀ ಸಂಸ್ಕೃತಿಯನ್ನು ಇವತ್ತಿನ ಹೊಟ್ಟೆಬಾಕ ಸಂಸ್ಕೃತಿಯ ನಡುವೆ ಜೀವಂತವಾಗಿ ಬದುಕಿಸುವ ಮೆಚ್ಚುವಂತಹ ಕೆಲಸವಾಗಿದೆ.
-ಡಾ. ಹಂಪನಹಳ್ಳಿ ತಿಮ್ಮೇಗೌಡ





