ಅಧಿವೇಶನದಲ್ಲಿ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತೇ ಮಾತನಾಡಿವೆ. ತಮ್ಮ ಕಾಳಜಿ, ಕಳಕಳಿ ವ್ಯಕ್ತಪಡಿಸಿವೆ. ಆದರೆ ಆ ಭಾಗದ ಜನರ ಬದುಕು ಬದಲಾಗಲಿಲ್ಲ, ಗುಳೆ ಹೋಗುವುದು ನಿಲ್ಲಲಿಲ್ಲ, ಜನರ ಪಡಿಪಾಟಲಿಗೆ ಪರಿಹಾರ ದೊರಕಲಿಲ್ಲ.
ಡಿಸೆಂಬರ್ 8ರಿಂದ 19ರವರೆಗೆ, ಸುಮಾರು 10 ದಿನಗಳವರೆಗೆ ನಡೆದ ಬೆಳಗಾವಿ ಅಧಿವೇಶನ ಮುಕ್ತಾಯಗೊಂಡಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್‍ನ ಕೊರೆಯುವ ಚಳಿಯ ನಡುವೆಯೂ ರಾಜ್ಯದ ಆಗುಹೋಗುಗಳ ಕುರಿತು ಬಿಸಿ ಬಿಸಿ ಚರ್ಚೆಗಳಾಗುತ್ತವೆ ಎಂಬುದು ನಾಡಿನ ಜನರ ನಿರೀಕ್ಷೆಯಾಗಿತ್ತು. ದೂರದ ಬೆಳಗಾವಿಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಸಚಿವರು, ಶಾಸಕರು, ಅಧಿಕಾರಿಗಳು, ಪತ್ರಕರ್ತರು, ನೌಕರ ಸಿಬ್ಬಂದಿಗಳ ದೊಡ್ಡ ವರ್ಗವೇ ದಂಡೆತ್ತಿ ಹೋಗಿತ್ತು. ಈಗ ಆ ದಂಡು ಬೆಳಗಾವಿಗೆ ಬೆನ್ನು ಹಾಕಿ ತಮ್ಮ ತಮ್ಮ ಊರುಗಳತ್ತ ತೆರಳಿದೆ.
ಇದು ಪ್ರತಿವರ್ಷದ ಪ್ರಹಸನ.
ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಈವರೆಗೆ ಹದಿಮೂರು ಅಧಿವೇಶನಗಳು ಜರುಗಿವೆ. ದೂರದೂರುಗಳಿಂದ ಬೆಳಗಾವಿಗೆ ಬರುವವರ ಊಟ-ವಾಸ್ತವ್ಯ-ಓಡಾಟಕ್ಕಾಗಿ 170 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಬಾರಿಯ ಅಧಿವೇಶನಕ್ಕೆ 21 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ ಎಂದು ಬೆಳಗಾವಿ ಜಿಲ್ಲಾಡಳಿತ ಹೇಳಿದ್ದು ಕೂಡ ಈಗ ಹಳತಾಗಿದೆ.
ಇದು ಕೂಡ ಪ್ರತಿವರ್ಷದ ಪ್ರಹಸನವೇ.
ಆದರೆ, ಈ ಬಾರಿಯ ಬೆಳಗಾವಿ ಅಧಿವೇಶನ ಕೊಂಚ ಭಿನ್ನವಾಗಿತ್ತು. ಸ್ವಲ್ಪಮಟ್ಟಿಗೆ ಸಂಯಮಪೂರ್ಣವಾಗಿತ್ತು. ಅಂದರೆ ಆಡಳಿತ ಮತ್ತು ವಿಪಕ್ಷಗಳ ನಾಯಕರಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚಿಸಬೇಕೆಂಬ ತುಡಿತವಿತ್ತು. ಪರಿಹಾರ ಕಂಡುಕೊಳ್ಳಬೇಕೆಂಬ ಪ್ರಾಮಾಣಿಕತೆ ಇತ್ತು. ಆ ಕಾರಣಕ್ಕಾಗಿಯೋ ಏನೋ, ವಿರೋಧ ಪಕ್ಷಗಳು ವೃಥಾ ಕಾಲಹರಣ ಮಾಡದೆ, ಗದ್ದಲ ಎಬ್ಬಿಸಿ ಸದನದ ದಾರಿ ತಪ್ಪಿಸದೆ, ಪ್ರತಿಭಟನೆಗಿಳಿದು ಚರ್ಚೆಯನ್ನು ಹಾಳುಗೆಡವದೆ ಆಳುವ ಸರ್ಕಾರಕ್ಕೆ ಪ್ರಶ್ನೆಗಳನ್ನು ಹಾಕಿ ಉತ್ತರಕ್ಕಾಗಿ ಕಾದಿದ್ದವು.
ಇದನ್ನು ಓದಿದ್ದೀರಾ?: ಮೋದಿ- ಸಿದ್ದು ಸರ್ಕಾರಗಳ ನಡೆ ಅನುಕರಣೀಯ ಅಲ್ಲ; ಶೋಭೆ ತರುವುದಿಲ್ಲ
ಒಟ್ಟಾರೆ ಹತ್ತು ದಿನಗಳ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ, ಉಭಯ ಸದನಗಳಲ್ಲಿ ನಡೆದ ಚರ್ಚೆಗೆ, ಕೊನೆಯ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಎರಡೂ ಕಡೆ ತಲಾ ಮೂರು ಗಂಟೆಗಳ ಕಾಲ ಉತ್ತರಿಸಿದರು. ಮಾತಿನುದ್ದಕ್ಕೂ ತಮ್ಮ ಹಿರಿತನ, ಬುದ್ಧಿವಂತಿಕೆ ಮತ್ತು ವಾಕ್ಚಾತುರ್ಯ ಮೆರೆದರು. ಕೇಳುಗರು ತಲೆದೂಗಿದರು. ಸದನದ ಮುಂದೆ ಅವರಿಟ್ಟ ಕರಾರುವಾಕ್ ಅಂಕಿ-ಅಂಶಗಳು, ಕೇಂದ್ರ ಸರ್ಕಾರದ ತಾರತಮ್ಯ ನೀತಿ, ಆಗುತ್ತಿರುವ ಅನ್ಯಾಯ, ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಯೋಜನೆಗಳು, ಬಿಜೆಪಿ ಸರ್ಕಾರದ ಅವಧಿಯ ವೈಫಲ್ಯಗಳು- ಎಲ್ಲವನ್ನು ಸವಿಸ್ತಾರವಾಗಿ ಬಿಚ್ಚಿಟ್ಟರು. ವಿರೋಧಿಗಳು ಉಸಿರೆತ್ತದಂತೆ ಮಾಡಿದರು. ಏಕೆಂದರೆ, ಮುಖ್ಯಮಂತ್ರಿಗಳದು ಅಂತಿಮ ಉತ್ತರವಾಗಿತ್ತು!

ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಪರಿಹಾರ ಕಂಡುಕೊಳ್ಳಲು 2001ರಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಆರ್ಥಿಕ ತಜ್ಞ ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಅವರಿಂದ 2002ರಲ್ಲಿ ವರದಿ ಪಡೆಯಲಾಗಿತ್ತು. ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ 31 ಸಾವಿರ ಕೋಟಿ ರೂ. ಒದಗಿಸಿ, ಅಸಮತೋಲನೆ ನಿವಾರಿಸಬೇಕು ಎಂದಿದ್ದರು. ಆದರೆ 31 ಸಾವಿರ ಕೋಟಿ ರೂ. ಗಳಿಗಿಂತಲೂ ಹೆಚ್ಚಿನ ಹಣ ಹಿಂದುಳಿದ ತಾಲ್ಲೂಕುಗಳಲ್ಲಿ ಖರ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
ವಿಚಿತ್ರವೆಂದರೆ, 31 ಸಾವಿರ ಕೋಟಿ ಯಾರ ಅಭಿವೃದ್ಧಿಗೆ ವಿನಿಯೋಗವಾಗಿದೆ ಎಂಬುದನ್ನು ವಿವರಿಸಲಿಲ್ಲ. ಏಕೆಂದರೆ, 2002ರಿಂದ ಇಲ್ಲಿಯವರೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ಬಂದುಹೋಗಿವೆ. ಕೃಷ್ಣೆಯಲ್ಲಿ ನೀರು ಹರಿದಂತೆ, 31 ಸಾವಿರ ಕೋಟಿ ಹಣವೂ ಹರಿದುಹೋಗಿದೆ. ಉತ್ತರ ಕರ್ನಾಟಕದ ಜನರ ಸ್ಥಿತಿ, ಅವತ್ತು ಹೇಗಿತ್ತೋ ಇವತ್ತು ಕೂಡ ಹಾಗೆಯೇ ಇದೆ. ಹಾಗಾದರೆ ಆ ಹಣ ಏನಾಯಿತು ಎಂದರೆ, ಮೂರೂ ಪಕ್ಷಗಳ ರಾಜಕೀಯ ನಾಯಕರು, ಅಧಿಕಾರಿಗಳು, ಪಕ್ಷದ ಪುಢಾರಿಗಳು ಮುನ್ನಲೆಗೆ ಬರುತ್ತಾರೆ. ಸತ್ಯ ಹೊರಬರುತ್ತದೆ. ಈ ಸತ್ಯ ಹೊರಬರಲಿ, ಆ ಸತ್ಯ ಹೊರತರುವುದಕ್ಕಾಗಿಯೇ ನಮ್ಮ ಸರ್ಕಾರವಿರುವುದು ಎಂಬುದನ್ನು ಹೇಳದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಆರ್ಥಿಕ ತಜ್ಞ ಪ್ರೊ. ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದಷ್ಟೇ ಹೇಳಿದರು.
‘ನಂಜುಂಡಪ್ಪ ಅವರ ವರದಿಯಂತೆ ಈಗಾಗಲೆ ಹಿಂದುಳಿದ ತಾಲ್ಲೂಕುಗಳಿಗೆ ಹಣ ನೀಡಿ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು, ಇದರ ಬಳಿಕ ಈ ತಾಲ್ಲೂಕುಗಳಲ್ಲಿ ಏನೇನು ಬದಲಾವಣೆಯಾಗಿದೆ, ಅಭಿವೃದ್ಧಿಯಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ಪಡೆಯುವ ಅಗತ್ಯವಿದೆ. ಅದಕ್ಕಾಗಿ ಉತ್ತರ ಕರ್ನಾಟಕದವರೇ ಆದ ಹಿರಿಯ ಆರ್ಥಿಕ ತಜ್ಞ ಪ್ರೊ. ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೇವೆ. ಜನವರಿ ತಿಂಗಳ ಅಂತ್ಯದೊಳಗೆ ಈ ಸಮಿತಿಯು ವರದಿ ಸಲ್ಲಿಸುವ ನಿರೀಕ್ಷೆ ಇದೆ. ಈ ವರದಿಯನ್ನು ಆಧರಿಸಿ, ಯಾವ ಜಿಲ್ಲೆಗಳು, ತಾಲ್ಲೂಕುಗಳು, ಯಾವ ಕ್ಷೇತ್ರಗಳಲ್ಲಿ ಹಿಂದುಳಿದಿವೆ ಎಂಬುದನ್ನು ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರಮುಖವಾಗಿ ಪ್ರಾದೇಶಿಕ ಅಸಮತೋಲನ ಮತ್ತು ಅಸಮಾನತೆಯನ್ನು ನಿವಾರಿಸುವುದು ನಮ್ಮ ಸರ್ಕಾರದ ಮುಖ್ಯ ಆಶಯವಾಗಿದೆ’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉತ್ತರ ಕರ್ನಾಟಕವನ್ನು ನಮ್ಮ ಸರ್ಕಾರ ಕಡೆಗಣಿಸಿಲ್ಲ ಎಂಬುದನ್ನು ಒತ್ತಿ ಹೇಳಿದರು.
ಒಂದು ರಾಜ್ಯದ ಮುಖ್ಯಮಂತ್ರಿಯಾದವರು, ಉತ್ತರ-ದಕ್ಷಿಣ ಎಂದು ವಿಭಾಗಿಸುವುದು, ತಾರತಮ್ಯ ತೋರುವುದು ನಾಯಕನ ನಡೆಯಲ್ಲ. ಅದನ್ನು ಸಿದ್ದರಾಮಯ್ಯನವರು ಮಾಡಿಲ್ಲ. ಆದರೆ, ಅವರ ಅವಧಿಯಲ್ಲಿಯೂ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕ ಹಿಂದುಳಿದಿರುವುದು ನಿಜ. ಅದನ್ನು ಅವರು ಕೂಡ ಒಪ್ಪಿಕೊಳ್ಳುತ್ತಾರೆ. ‘ನಾವು ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ, ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡುತ್ತೇವೆ’ ಎಂದು ಕೂಡ ಹೇಳುತ್ತಾರೆ.

ಅಷ್ಟೇ ಅಲ್ಲ, ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಾಗಿ, ಅಸಮತೋಲನ ನಿವಾರಣೆ ಆಗಬೇಕು. ಅದಕ್ಕಾಗಿಯೇ ಆರ್ಥಿಕ ತಜ್ಞೆ ಪ್ರೊ. ಛಾಯಾ ದೇವಣಗಾಂವಕರ್ ನೇತೃತ್ವದಲ್ಲಿ ಶಿಕ್ಷಣ ಸಮಿತಿ ರಚಿಸಿದ್ದು, ಈಗಾಗಲೆ ಡಿ. 16ರಂದು ವರದಿ ಸಲ್ಲಿಸಿದ್ದಾರೆ. ಸಮಿತಿ ನೀಡಿರುವ ವರದಿಯಲ್ಲಿ ಶಿಫಾರಸು ಮಾಡಿರುವ ಅಂಶಗಳನ್ನು ನಾವು ಜಾರಿಗೊಳಿಸುತ್ತೇವೆ ಎಂದು ಕೂಡ ಹೇಳಿದ್ದಾರೆ.
ಹಾಗೆಯೇ, ಹೈದ್ರಾಬಾದ್ ಕರ್ನಾಟಕ ಪ್ರದೇಶವು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಲಾಗುತ್ತಿದ್ದು, ಈ ವರ್ಷ 5 ಸಾವಿರ ಕೋಟಿ ರೂ. ಅನುದಾನ ಒದಗಿಸಿದ್ದೇವೆ ಎಂದಿದ್ದಾರೆ. ಮುಂದುವರೆದು, ‘371 ಜೆ ಅನುಷ್ಠಾನವಾದ ಮೇಲೆ ಆ ಭಾಗದ ಅಭಿವೃದ್ಧಿಗಾಗಿ 24,778 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ಇದುವರೆಗೆ ಸುಮಾರು 14,800 ಕೋಟಿ ರೂ. ಗಳಿಗಿಂತ ಹೆಚ್ಚಿನ ಅನುದಾನ ಖರ್ಚು ಮಾಡಲಾಗಿದೆ’ ಎಂದು ಕೂಡ ಹೇಳಿದ್ದಾರೆ. ಮುಂದುವರೆದು, ‘ಗ್ಯಾರಂಟಿ ಯೋಜನೆಗಳಿಗಾಗಿ ವ್ಯಯಿಸಲಾದ 1.6 ಲಕ್ಷ ಕೋಟಿ ರೂ.ಗಳಲ್ಲಿ 46,276 ಕೋಟಿ ರೂ. ಉತ್ತರ ಕರ್ನಾಟಕ ಭಾಗಕ್ಕೆ ವೆಚ್ಚವಾಗಿದೆ’ ಎಂದಿದ್ದಾರೆ.
ಅಂದರೆ, ಕಾಲಕಾಲಕ್ಕೆ ಸರ್ಕಾರದಿಂದ ಕೋಟಿಗಟ್ಟಲೆ ಹಣ ಹರಿದಿದೆ. ಅಭಿವೃದ್ಧಿ ಹೆಸರಲ್ಲಿ ಫೈಲ್ ಪೇರಿಸಲ್ಪಟ್ಟಿದೆ. ಆದರೆ ಅಭಿವೃದ್ಧಿ ಕಾಣದಾಗಿದೆ. ಸರ್ಕಾರಗಳು ಬಂದುಹೋದರು, ಉತ್ತರ ಕರ್ನಾಟಕ ಜನರ ಬದುಕು ಬದಲಾಗಲಿಲ್ಲ, ಗುಳೆ ಹೋಗುವುದು ನಿಲ್ಲಲಿಲ್ಲ, ಜನರ ಪಡಿಪಾಟಲಿಗೆ ಪರಿಹಾರ ದೊರಕಲಿಲ್ಲ.
ಇದನ್ನು ಓದಿದ್ದೀರಾ?: ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನೇಕೆ ಮಾಡುತ್ತಿಲ್ಲ?
ಮೊನ್ನೆಯ ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮೈ ಕೊರೆಯುವ ಚಳಿಯ ನಡುವೆಯೂ, ಸುವರ್ಣ ವಿಧಾನಸೌಧ ಹಾಗೂ ಬಿ.ಎಸ್.ಯಡಿಯೂರಪ್ಪ ಮಾರ್ಗದ ಬಳಿ 118 ಸಂಘಟನೆಗಳು ಧರಣಿ ಕೂತಿದ್ದವು. ರೈತರು, ಅಂಗವಿಕಲರು, ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳು, ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪ್ರಥಮದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ನಿವೃತ್ತ ನೌಕರರು, ವಿವಿಧ ಸಮುದಾಯಗಳ ಸಂಘಟನೆಗಳು ಧರಣಿ ಕೂರುವ ಮೂಲಕ ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಆ ಮೂಲಕ ತಮ್ಮ ಹಕ್ಕೊತ್ತಾಯ ಮಂಡಿಸಿದರು.
ಆಶ್ಚರ್ಯಕರ ಸಂಗತಿ ಎಂದರೆ, ಸಿದ್ದರಾಮಯ್ಯನವರು ಉತ್ತರ ಕರ್ನಾಟಕದ ಅಸಮಾನತೆ ಮತ್ತು ಸಮಸ್ಯೆಗಳನ್ನು ಕುರಿತು ಮಾತನಾಡಿದಂತೆಯೇ, ದಿನಕ್ಕೆ ಒಬ್ಬರು ಅಥವಾ ಇಬ್ಬರು ಸಚಿವರು ಧರಣಿನಿರತ ವೇದಿಕೆಗಳತ್ತ ಬಂದು ಮನವಿ ಸ್ವೀಕರಿಸಿದರು. ‘ನಿಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ. ಮುಖ್ಯಮಂತ್ರಿ ಮತ್ತು ಸಂಬಂಧಿತ ಸಚಿವರ ಗಮನಕ್ಕೆ ತರುತ್ತೇನೆ’ ಎಂದು ಆಶ್ವಾಸನೆ ನೀಡಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಕಾಗದದ ಮೇಲೆ ಉಳಿದಂತೆ, ಪ್ರತಿಭಟನಾನಿರತರ ಬೇಡಿಕೆಗಳು ಕೂಡ ಆಶ್ವಾಸನೆಗಳಾಗಿಯೇ ಉಳಿದವು. ಅಧಿವೇಶನದಲ್ಲಿ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತೇ ಮಾತನಾಡಿವೆ. ತಮ್ಮ ಕಾಳಜಿ, ಕಳಕಳಿ ವ್ಯಕ್ತಪಡಿಸಿವೆ. ಆದರೆ ಸಮಸ್ಯೆಗಳು ಮಾತ್ರ ಹಾಗೆಯೇ ಇವೆ. ಎಚ್ಚೆತ್ತುಕೊಳ್ಳಬೇಕಾದವರು ಯಾರು?

ಲೇಖಕ, ಪತ್ರಕರ್ತ




