ಶ್ರೀನಿವಾಸಪುರ : ಪ್ರದೇಶದ ಗಡಿ ಗುರುತಿಸುವ ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ರೈತರ ನಡುವೆ ತೀವ್ರ ಸ್ವರೂಪದ ಘರ್ಷಣೆ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದೊಡ್ಡಮಲದೊಡ್ಡಿ ಗ್ರಾಮದಲ್ಲಿ ಅರಣ್ಯಅಧಿಕಾರಿಗಳು ಸರ್ವೇ ಪಿಲ್ಲರ್ ಅಳವಡಿಸಲು ಮುಂದಾದಾಗ ಆಕ್ರೋಶಗೊಂಡ ರೈತರು ಅವರನ್ನು ತಡೆದಿದ್ದರಿಂದ ಸ್ಥಳದಲ್ಲಿ ನೂಕಾಟ-ತಲ್ಲಾಟ ಉಂಟಾಗಿ, ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಅರಣ್ಯ ಇಲಾಖೆಯ ಸಿಬ್ಬಂದಿ ಜಮೀನೊಂದರಲ್ಲಿ ಅರಣ್ಯ ಪ್ರದೇಶದ ಗಡಿ ಗುರುತಿಸಲು ಸರ್ವೇ ಪಿಲ್ಲರ್ ಅಳವಡಿಸಲು ಮುಂದಾಗಿದ್ದರು. ಈ ವೇಳೆ, “ನಮ್ಮ ಸಾಗುವಳಿ ಜಮೀನನ್ನು ಅರಣ್ಯ ಇಲಾಖೆ ಬಲವಂತವಾಗಿ ವಶಪಡಿಸಿಕೊಳ್ಳುತ್ತಿದೆ” ಎಂದು ಆರೋಪಿಸಿದ ರೈತರು ಅಧಿಕಾರಿಗಳ ಕೆಲಸಕ್ಕೆ ತೀವ್ರ ಅಡ್ಡಿಪಡಿಸಿದರು. ಅಧಿಕಾರಿಗಳ ಎಚ್ಚರಿಕೆಯನ್ನು ಲೆಕ್ಕಿಸದ ರೈತರು, ಅರಣ್ಯ ಇಲಾಖೆ ಅಳವಡಿಸಿದ್ದ ಪಿಲ್ಲರ್‌ಗಳನ್ನು ಕಿತ್ತೆಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ರೈತ ಮುಖಂಡ ಪಾತ ಕೋಟೆ ನವೀನ್ ಮಾತನಾಡಿ ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಸರ್ವೇ ನಡೆಸುವವರೆಗೂ ಯಾವುದೇ ಪಿಲ್ಲರ್ ಅಳವಡಿಸಬಾರದು.
ಈ ಭೂ ವಿವಾದಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (SIT) ತನಿಖೆಯಾಗಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಜಮೀನಿಗೆ ಕಾಲಿಡಬಾರದು. “ಅರಣ್ಯ ಇಲಾಖೆಗೆ ಪದೇ ಪದೇ ಮಾಹಿತಿ ನೀಡುತ್ತಿದ್ದರೂ ಅವರು ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಜಂಟಿ ಸರ್ವೇ ಮುಗಿಯುವ ತನಕ ಪಿಲ್ಲರ್ ಹಾಕುವ ಸಾಹಸಕ್ಕೆ ಕೈಹಾಕಬೇಡಿ.
ರೈತ ಕೇಶವಮೂರ್ತಿ ಮಾತನಾಡಿ, “ಅರಣ್ಯ ಇಲಾಖೆ ಸಿಬ್ಬಂದಿ ರೈತರ ಬದುಕು ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಪ್ರಶ್ನೆ ಮಾಡಲು ಹೋದರೆ ಹಲ್ಲೆಗೆ ಮುಂದಾಗುತ್ತಾರೆ. ತಾಲ್ಲೂಕಿನಲ್ಲಿ ರೈತರ ಒಪ್ಪಿಗೆಯಿಲ್ಲದೆ ಎಲ್ಲಿ ಪಿಲ್ಲರ್ ಹಾಕಿದರೂ ನಾವು ಸುಮ್ಮನಿರುವುದಿಲ್ಲ, ಅವುಗಳನ್ನು ಕಿತ್ತು ಹಾಕುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ..? ಹಾಲು ಡೇರಿ ಕಾರ್ಯದರ್ಶಿಗಳು, ಸಿಬ್ಬಂದಿಗಳ ಬೇಡಿಕೆ ಈಡೇರಿಕೆ
ಪಿಲ್ಲರ್ ಕಿತ್ತು ಹಾಕುವ ವಿಚಾರದಲ್ಲಿ ಅರಣ್ಯ ಸಿಬ್ಬಂದಿ ಮತ್ತು ರೈತರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ, ಶ್ರೀನಿವಾಸಪುರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಟ್ಟಿದ್ದು, ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ.
ಶ್ರೀನಿವಾಸಪುರದಲ್ಲಿ ರೈತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ನೂಕಾಟ ತಲ್ಲಾಟ
Date:
ಪೋಸ್ಟ್ ಹಂಚಿಕೊಳ್ಳಿ:




