- ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಪ್ರಚಾರ
- ʼರಾಜ್ಯದ ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆʼ
ನಾನು ನಿಮ್ಮಲ್ಲಿ ಕಳಕಳಿಯ ವಿನಂತಿ ಮಾಡುವುದೇನೆಂದರೆ, ಕಳೆದ 4 ವರ್ಷಗಳಲ್ಲಿ ತಮಗೆ ಆದ ಅನುಭವ ನೋಡಿ ಮತ ಚಲಾಯಿಸಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.
ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪ್ರಚಾರ ವೇಳೆ ಮಾತನಾಡಿ, “ಕಳೆದ ಮೂರು ವರ್ಷಗಳಿಂದ ರಾಜ್ಯದ ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಯುವಕರು ಕೆಲಸವಿಲ್ಲದೇ ಇದ್ದಾರೆ. ಇದಕ್ಕೆಲ್ಲಾ ಕಾರಣ ರಾಜ್ಯದ ಬಿಜೆಪಿ ಸರ್ಕಾರ” ಎಂದು ವಾಗ್ದಾಳಿ ನಡೆಸಿದರು.
“ಬೆಲೆ ಏರಿಕೆಯಿಂದ ತತ್ತರಿಸಿದ ನಮ್ಮ ಮಹಿಳೆಯರಿಗೆ, ಪ್ರತಿಮನೆಯ ಯಾಜಮಾನಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ 2000 ರೂ. ಪ್ರತಿ ತಿಂಗಳು ಕೊಡಲು ಕಾಂಗ್ರೆಸ್ ತೀರ್ಮಾನಿಸಿದೆ. ಕಾಂಗ್ರೆಸ್ ಘೋಷಿಸಿರುವ ಯುವನಿಧಿ ಗ್ಯಾರಂಟಿ ನಿರುದ್ಯೋಗಿ ಯುವಕ, ಯುವತಿಯರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡಲಾಗುವುದು. ಡಿಪ್ಲೋಮಾ ಆದವರಿಗೆ 1500 ರೂ., ಪದವೀಧರರಿಗೆ 3000 ರೂ. ನಿರುದ್ಯೋಗ ಭತ್ಯೆ ಕಾರ್ಯಕ್ರಮ ಕಾಂಗ್ರೆಸ್ ಹಮ್ಮಿಕೊಂಡಿದೆ” ಎಂದರು.
“ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣವೇ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಯ ಕಾರ್ಯಕ್ರಮಗಳನ್ನು ಮತ್ತೊಮ್ಮೆ ಅನುಷ್ಠಾನ ಮಾಡಲಿದ್ದೇವೆ. ರಾಜ್ಯದ ಸರ್ಕಾರಿ ಬಸ್ಸುಗಳಲ್ಲಿ ರಾಜ್ಯದ ಪ್ರತಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು” ಎಂದು ಹೇಳಿದರು.
“ಕುಂದಗೋಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರನ್ನು ಅತ್ಯಧಿಕ ಬಹುಮತದಿಂದ ಗೆಲ್ಲಿಸಿ. ತಾವು ಈ ಬಾರಿಯ ಮತದಾನವನ್ನು ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ಉತ್ತಮ ಭವಿಷ್ಯವನ್ನು ರೂಪಿಸುವ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ” ಎಂದು ಪ್ರಿಯಾಂಕಾ ಗಾಂಧಿ ಮನವಿ ಮಾಡಿದರು.





