ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾ ತುಂಬೆಲ್ಲಾ ʼಉಡಾಳʼನ ಹಾಡಿನದ್ದೇ ಸದ್ದು. ಯೋಗರಾಜ್ ಸಿನಿಮಾಸ್ ಮತ್ತು ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ʼಉಡಾಳʼ ಚಿತ್ರದ ʼಹೊಡಿ ಶ್ಯಾವಿಗ್ಯಾಗ ಮಜಿಗಿʼ ಹಾಡು ಸದ್ಯ ಟ್ರೆಂಡಿಂಗ್‌ನಲ್ಲಿದ್ದು, ನೆಟ್ಟಿಗರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಇತ್ತೀಚೆಗಷ್ಟೇ ಸರಿಗಮ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿರುವ ಉಡಾಳ ಚಿತ್ರದ ಈ ಮೊದಲ ಹಾಡು ನಾಲ್ಕೇ ದಿನಕ್ಕೆ 6 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಯೋಗರಾಜ್ ಭಟ್ಟರು ಬರೆದಿರುವ ಸಾಹಿತ್ಯಕ್ಕೆ ಚೇತನ್ ಡ್ಯಾವಿ ಸಂಗೀತ ಸಂಯೋಜನೆ ನೀಡಿದ್ದಾರೆ. ಉತ್ತರ ಕನ್ನಡದ ಗೀತೆಗಳಿಂದಲೇ ಹೆಸರು ಮಾಡಿರುವ ಸದ್ಯ ʼಬಿಗ್ ಬಾಸ್ʼನಲ್ಲಿರುವ ಗಾಯಕ ಮಾಳು ನಿಪ್ನಾಳ್ ಮತ್ತು ಸೃಷ್ಟಿ ಶಾಮನೂರು ಅವರ ಧ್ವನಿಯಲ್ಲಿ ಹಾಡು ಮತ್ತಷ್ಟು ಕ್ಯಾಚಿಯಾಗಿ ಮೂಡಿಬಂದಿದೆ.
ʼಉಡಾಳʼ ಚಿತ್ರದ ನಿರ್ದೇಶನ ಅಮೋಲ್ ಪಾಟೀಲ್ ಅವರದ್ದು. ʼಪದವಿಪೂರ್ವʼ ಚಿತ್ರದಿಂದ ಗಮನಸೆಳೆದ ಪೃಥ್ವಿ ಶಾಮನೂರು ಈ ಸಿನಿಮಾದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟಿಯಾಗಿ ರಿತಿಕಾ ಶ್ರೀನಿವಾಸ್ ಬಣ್ಣ ಹಚ್ಚಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ಮಾತ್ರವಲ್ಲದೇ ಜಿಯೋ ಸಾವನ್ ಚಾನಲ್‌ನಲ್ಲಿ ಈಗ ಭಾರತದಲ್ಲಿ ಎರಡನೇ ಸ್ಥಾನಕ್ಕೇರಿದೆ. ಹಾಡಿನ ವಿಶಿಷ್ಟ ರಾಗ ಮತ್ತು ನೃತ್ಯ ಶೈಲಿಯು ವಿಶಿಷ್ಟವಾಗಿದ್ದು, ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್ ಮೇಕರ್ಸ್‌ಗಳ ಮನಗೆದ್ದಿದೆ. ʼಉಡಾಳʼ ಚಿತ್ರದ ಮೊದಲ ಹಾಡು ಮತ್ತು ಟೀಸರ್ ಈಗಾಗಲೇ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದು, ಚಿತ್ರದ ಎರಡನೇ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ನವೆಂಬರ್ 14 ರಂದು ಚಿತ್ರ ತೆರೆಗೆ ಬರಲಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಕುರುಡು ದ್ವೇಷದ ಈ ಅಂಧಕಾರಕ್ಕೆ ಅಂತ್ಯವೆಂದು?





