ನೆನಪು | ಎ. ನಾಗೇಶ್ವರರಾವ್: ಭಾರತದ ಸಾಂಸ್ಕೃತಿಕ ರಾಯಭಾರಿಯ ಶತಮಾನೋತ್ಸವ

Date:

ಅಭಿನಯದ ಬಗೆಗಿನ ಕಡು ವ್ಯಾಮೋಹ, ವೃತ್ತಿಯ ಬಗೆಗಿನ ನಿಷ್ಠೆ, ಪ್ರಯೋಗಗಳಿಗೆ ತೆರೆದುಕೊಂಡ ಮನಸ್ಸು ಮತ್ತು ಬದುಕಿನಲ್ಲಿ ರೂಢಿಸಿಕೊಂಡ ಶಿಸ್ತು ಎಎನ್ಆರ್ ಅವರ ಯಶಸ್ಸಿನ ಹಿಂದಿನ ಸೂತ್ರಗಳು. ತೆರೆಯ ಮೇಲೆ ಸಜ್ಜನನಾಗಿ ಕಾಣಿಸಿಕೊಂಡಷ್ಟೇ ನಿಜ ಬದುಕಿನಲ್ಲಿಯೂ ನಡೆದುಕೊಳ್ಳಬೇಕು ಎಂದು ನಂಬಿ ಅದರಂತೆ ಬದುಕಿದವರು. ಅಂತಹ ಮೇರುನಟನ, ಸಾಂಸ್ಕೃತಿಕ ರಾಯಭಾರಿಯ ಶತಮಾನೋತ್ಸವದ ನೆನಪು ಇಲ್ಲಿದೆ...

ಏಳು ದಶಕಗಳ ಅವಧಿಯಲ್ಲಿ ಬೆಳ್ಳಿತೆರೆಯ ಮೂಲಕ ಸುಮಾರು ನಾಲ್ಕು ತಲೆಮಾರುಗಳನ್ನು ರಂಜಿಸಿದ ಭಾರತದ ಹಿರಿಯ ನಟ ಅಕ್ಕಿನೇನಿ ನಾಗೇಶ್ವರ ರಾವ್ (ಎಎನ್‍ಆರ್) ಅವರು ಜನಿಸಿ ನೂರು ವರ್ಷ ತುಂಬಿದೆ (ಜನನ – 20ನೇ ಸೆಪ್ಟೆಂಬರ್1924).

ಭಾರತದ ಪ್ರಮುಖ ಚಲನಚಿತ್ರೋದ್ಯಮಗಳಲ್ಲೊಂದಾದ ತೆಲುಗು ಚಿತ್ರರಂಗದ ಭವ್ಯಸೌಧ ನಿರ್ಮಾಣಗೊಂಡಿರುವುದು ಎರಡು ಪ್ರಮುಖ ಸ್ತಂಭಗಳ ಮೇಲೆ. ಆ ಎರಡು ಸ್ತಂಭಗಳಲ್ಲಿ ಒಂದನ್ನು, ಎಎನ್ಆರ್ ಎಂದೇ ಜನಪ್ರಿಯರಾದ ಅಕ್ಕಿನೇನಿ ನಾಗೇಶ್ವರ ರಾವ್ ಪ್ರತಿನಿಧಿಸಿದರೆ ಮತ್ತೊಂದರ ಪ್ರತಿನಿಧಿ ವಯಸ್ಸಿನಲ್ಲಿ ಎಎನ್ಆರ್ ಅವರಿಗಿಂತ ಹದಿನೈದು ತಿಂಗಳು ಹಿರಿಯರಾದರೂ ವೃತ್ತಿಯಲ್ಲಿ ಎಂಟು ವರ್ಷ ಕಿರಿಯರಾದ ಎನ್‍ಟಿಆರ್ ಎಂದೇ ಜನಮಾನಸದಲ್ಲಿ ನೆಲೆಯಾದ ಎನ್.ಟಿ. ರಾಮರಾವ್. ಈ ಜೋಡಿಯು ತಾನು ಗಳಿಸಿದ ಅಗಾಧ ಜನಪ್ರಿಯತೆಯಿಂದ ತೆಲುಗು ಚಿತ್ರರಂಗದ ಭವಿಷ್ಯವನ್ನು ರೂಪಿಸಿತು. ಅದನ್ನು ಪ್ರಮುಖ ಮನರಂಜನಾ ಉದ್ಯಮವನ್ನಾಗಿ ಬೆಳೆಸಿತು.

ಪ್ರತಿಯೊಂದು ಯಶಸ್ಸಿನ ಹಿಂದೆಯೂ ಕುತೂಹಲಕಾರಿಯಾದ ವಿದ್ಯಮಾನಗಳಿರುತ್ತವೆ. ಎಎನ್ಆರ್ ಅವರ ಬದುಕು ಕುತೂಹಲಗಳ ಸರಮಾಲೆ. ಬರಿಗಾಲಿನಲ್ಲಿ ಹೊಲಮಾಳದಲ್ಲಿ ತಿರುಗಾಡುತ್ತಿದ್ದ ಆಂಧ್ರದ ರೈತನೊಬ್ಬನ ಮಗ ಗ್ಲಾಮರ್ ಪ್ರಪಂಚದ ದೊರೆಯಾಗಿ ಬೆಳಗಿದ ಪವಾಡಸದೃಶ ಬದುಕು ಅವರದು. ಇಂದಿನ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ರಾಮಪುರಂನಲ್ಲಿ ಜನಿಸಿದ ಎಎನ್‌ಆರ್ ಐವರು ಸೋದರರಲ್ಲಿ ಕೊನೆಯವರು. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಅವರದು ಹೋರಾಟದ ಬದುಕು. ಬಡತನದ ಪರಿಸ್ಥಿತಿಗಳಿಂದಾಗಿ ಅವರು ಪ್ರಾಥಮಿಕ ಹಂತದಲ್ಲಿಯೇ ಶಾಲಾ ಶಿಕ್ಷಣವನ್ನು ತ್ಯಜಿಸಿದರು. ಹೊಲದಲ್ಲಿ ಅಪ್ಪನಿಗೆ, ಮನೆಯಲ್ಲಿ ಅಮ್ಮನಿಗೆ ಸಹಾಯಕ್ಕೆ ನಿಂತರು. ಚಿಕ್ಕಂದಿನಿಂದಲೂ ಅವರಿಗೆ ನಟನೆಯತ್ತ ಒಲವು ಇತ್ತು. ಕೆಲಸದ ನಡುವೆ ಬಿಡುವ ದೊರೆತಾಗ ಕನ್ನಡಿಯ ಮುಂದೆ ನಿಂತು ರಂಗಭೂಮಿ ಮತ್ತು ಸಿನಿ ಕಲಾವಿದರನ್ನು ಅನುಕರಿಸುತ್ತಿದ್ದರು. ಕಲೆಯ ಬಗೆಗಿನ ಮಗನ ಮೋಹವನ್ನು ಗುರುತಿಸಿದ ತಾಯಿ ಪ್ರೋತ್ಸಾಹ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ನೂರರ ನೆನಪು | ಕಾವಾಡಿಗರ ಹಟ್ಟಿಯಿಂದ ಹಾಲಿವುಡ್ ಅಂಗಳಕ್ಕೆ ಜಿಗಿದ ಮೈಸೂರ್ ಸಾಬು

ಸಂದರ್ಶನವೊಂದರಲ್ಲಿ ಎಎನ್‍ಆರ್ ತನ್ನ ಮೇಲಾದ ತಾಯಿಯ ಪ್ರಭಾವವನ್ನು ವಿವರಿಸುತ್ತಾ “ನನ್ನ ತಾಯಿ ನನ್ನ ಜೀವನದಲ್ಲಿ ನನಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಅವರು ನನಗೆ ಚಿಕ್ಕ ವಯಸ್ಸಿನಲ್ಲಿಯೇ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸಿದರು” ಎಂದಿದ್ದರು. ತಾಯಿಯ ಉತ್ತೇಜನದಿಂದ ಅವರು 1934ರಲ್ಲಿ ತಮ್ಮ 10ನೇ ವಯಸ್ಸಿನಲ್ಲಿ ರಂಗಭೂಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೊದ ಮೊದಲು ಮಹಿಳೆಯರ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಕ್ರಮೇಣ ಪ್ರಮುಖ ಪಾತ್ರಗಳು ಹುಡುಕಿಕೊಂಡು ಬಂದವು. ಎಕ್ಸೆಲ್ಸಿಯರ್ ಅಮೆಚೂರ್ ಡ್ರಾಮಾಟಿಕ್ ಟ್ರೂಪ್ ಸಂಸ್ಥೆಯು ಅವರ ನಟನಾ ಕೌಶಲ್ಯಕ್ಕೆ ಸಾಣೆ ಹಿಡಿಯಿತು. ಚಲನಚಿತ್ರಗಳಲ್ಲಿ ನಟಿಸಬೇಕೆಂಬ ಅವರ ಆಸೆಯು ಪಿ. ಪುಲ್ಲಯ್ಯನವರ ‘ಧರ್ಮಪತ್ನಿ'(1941) ಚಿತ್ರದಲ್ಲಿ ಮೊದಲ ಬಾರಿಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನೆರವೇರಿತು. ಆದರೆ ಸಿನೆಮಾ ಅವಕಾಶಗಳು ಸೃಷ್ಟಿಯಾಗಲಿಲ್ಲ.

ಮತ್ತೊಂದು ಸಂದರ್ಶನದಲ್ಲಿ ಎಎನ್‌ಆರ್ ಅವರು ತಮ್ಮ ಜೀವನದಲ್ಲಿ ಘಟಿಸಿದ ಮತ್ತೊಂದು ದೊಡ್ಡ ಪ್ರಭಾವವನ್ನು ವಿವರಿಸಿದ್ದಾರೆ– ”1944ರಲ್ಲಿ ನಾನಾಗ ತೆನಾಲಿ ರಾಮಕೃಷ್ಣ ನಾಟಕದಲ್ಲಿ ಪಾತ್ರ ವಹಿಸಿ ರೈಲಿನಲ್ಲಿ ಹೊರಟಿದ್ದೆ. ನಾನು ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೆ. ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದ ಚಲನಚಿತ್ರ ನಿರ್ಮಾಪಕ ಘಂಟಸಾಲ ಬಲರಾಮಯ್ಯ, ಅವರನ್ನು ಬೆಜವಾಡ (ಈಗ ವಿಜಯವಾಡ) ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಮುಖಾಮುಖಿಯಾದೆ. ಅವರು ನನ್ನನ್ನು ಗುರುತಿಸಿ ತಾವು ತಯಾರಿಸುತ್ತಿರುವ ‘ಸೀತಾರಾಮ ಜನನಂ’ ಚಿತ್ರಕ್ಕೆ ಇಬ್ಬರು ಯುವನಟರ ಅಗತ್ಯವಿದ್ದು ನನಗೊಂದು ಪಾತ್ರ ನೀಡುವುದಾಗಿ ಹೇಳಿದರು. ನನಗಿಂತ ಎತ್ತರದ ನಟ ಸಿಕ್ಕರೆ ಆತನನ್ನು ರಾಮನ ಪಾತ್ರಕ್ಕೂ ನನ್ನನ್ನು ಲಕ್ಷ್ಮಣನ ಪಾತ್ರಕ್ಕೂ, ನನಗಿಂತ ಕಡಿಮೆ ಎತ್ತರದ ನಟ ಸಿಕ್ಕರೆ ನನಗೆ ರಾಮನ ಪಾತ್ರ ಗ್ಯಾರಂಟಿ ಎಂದು ಹೇಳಿದರು. ನಾನು ಯಾವುದೇ ಪಾತ್ರವಾದರೂ ಸರಿ ಎಂದುತ್ತರಿಸಿದೆ.” ಅದೃಷ್ಟವಶಾತ್ ಅವರಿಗೇ ಚಿತ್ರದ ನಾಯಕ ರಾಮನ ಪಾತ್ರ ದೊರೆಯಿತು. ಮೊದಲ ಚಿತ್ರದ ನಂತರ ಅವರು ಹಿಂತಿರುಗಿ ನೋಡಲಿಲ್ಲ. ಮುಂದೆ ಅವರಿಂದ ಇತಿಹಾಸವೊಂದು ಸೃಷ್ಟಿಯಾಯಿತು. ಸಿನಿಮಾ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿಕೊಳ್ಳುವ ಮಟ್ಟಕ್ಕೆ ಬೆಳೆದರು.

ಸುಮಾರು ಏಳು ದಶಕಗಳ ವರ್ಣಮಯ ವೃತ್ತಿಬದುಕಿನಲ್ಲಿ ಅವರು 255 ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪೌರಾಣಿಕ, ಐತಿಹಾಸಿಕ, ಭಕ್ತಿಪ್ರಧಾನ, ಜಾನಪದ ವೀರರ, ಕಲಾತ್ಮಕ ಹಾಗೂ ಸಾಮಾಜಿಕ ವಸ್ತುವಿನ ತೆಲುಗು, ತಮಿಳು ಮತ್ತು ಕೆಲವು ಹಿಂದೀ ಸಿನೆಮಾಗಳಲ್ಲಿ ಮರೆಯಲಾಗದ ಅಭಿನಯವನ್ನು ಮೆರೆದಿದ್ದಾರೆ. ಅವರ ಬಹುತೇಕ ಚಿತ್ರಗಳು ತೆಲುಗು ಭಾಷೆಯವು.(235 ಚಿತ್ರಗಳು). ಅವರು ನಟನೆಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡಲು ಉತ್ಸುಕರಾಗಿದ್ದರು. ಅವರ ಮೊದಲ ಬ್ಲಾಕ್‌ಬಸ್ಟರ್ ‘ಬಾಲರಾಜು'(1948) ಒಬ್ಬ ಜಾನಪದ ವೀರನ ಸಾಹಸಗಳನ್ನು ಕುರಿತ ಚಿತ್ರ. ನಂತರ ಕ್ರಮೇಣ ಎಲ್ಲ ಪ್ರಕಾರದ ಚಿತ್ರಗಳಲ್ಲೂ ಪ್ರಚಂಡ ಯಶಸ್ಸು ಗಳಿಸಿದರು. ಆರಂಭದಲ್ಲಿ ತಮಿಳು ಚಿತ್ರಗಳಿಗೂ ಬೇಡಿಕೆಯ ನಟರಾಗಿ ಅಲ್ಲಿನ ಪ್ರೇಕ್ಷಕರ ಮನಗೆದ್ದಿದ್ದ ಎಎನ್ಆರ್ ಅವರು ಶಿವಾಜಿ ಗಣೇಶನ್ಅವರ ಆಗಮನದ ನಂತರ (1952) ತೆಲುಗು ಚಿತ್ರಗಳಿಗೇ ತಮ್ಮ ವೃತ್ತಿ ಬದುಕನ್ನು ಹೆಚ್ಚು ಕೇಂದ್ರೀಕರಿಸಿದರು. ವೈವಿಧ್ಯಮಯ ಪಾತ್ರಗಳ ಮೂಲಕ ತೆಲುಗು ಚಿತ್ರರಂಗದ ಸ್ವರೂಪವನ್ನೇ ಬದಲಿಸಿದರು.

ದುರಂತ ಪ್ರೇಮಿ- ರಮ್ಯ ಪ್ರಣಯಿ

ಎಎನ್ಆರ್ ಅವರು ‘ಲೈಲಾ ಮಜ್ನು'(1949) ಚಿತ್ರದಲ್ಲಿ ದುರಂತ ಪ್ರೇಮಿ ಮಜ್ನು ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿ ದುರಂತ ಪ್ರೇಮಿಗಳ ಚಿತ್ರದ ಯಶಸ್ವೀ ಮಾದರಿಯೊಂದಕ್ಕೆ ನಾಂದಿ ಹಾಡಿದರು. ಶರತ್ ಚಂದ್ರ ಚಟೋಪಾಧ್ಯಾಯ ಅವರ ಜನಪ್ರಿಯ ‘ದೇವದಾಸ್’ ಬಂಗಾಳಿ ಕಾದಂಬರಿಯನ್ನು ಆಧರಿಸಿದ 1953ರ ಚಲನಚಿತ್ರ ‘ದೇವದಾಸು’ ಬಿಡುಗಡೆಯ ನಂತರ ಅವರ ಜನಪ್ರಿಯತೆಯು ಗಗನಕ್ಕೇರಿತು. ಹಿತೈಷಿಗಳ ವಿರೋಧದ ನಡುವೆಯೂ ತನ್ನ ವೈಯಕ್ತಿಕ ನೋವು ಮರೆಯಲು ಕುಡಿತದ ದಾಸನಾಗಿ ದುರಂತಕ್ಕೀಡಾಗುವ ದೇವದಾಸು ಪಾತ್ರವನ್ನು ಅವರು ಸವಾಲಾಗಿ ಸ್ವೀಕರಿಸಿ ಒಪ್ಪಿಕೊಂಡರು. ಅದು ದೇವದಾಸ್ ಆಧರಿಸಿದ ಐದನೇ ಚಿತ್ರ ಆವೃತ್ತಿ. ಈವರೆವಿಗೂ ದೇವದಾಸ್ ಆಧರಿಸಿ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳು ಎಂಟು ಭಾಷೆಗಳಲ್ಲಿ ತೆರೆಕಂಡಿವೆ. ಕೆ.ಎಲ್. ಸೈಗಾಲ್, ದಿಲೀಪ್ ಕುಮಾರ್, ಸೌಮಿತ್ರ ಚಟರ್ಜೀ, ಶಾರುಖ್ ಖಾನ್ ಮುಂತಾದವರು ಆ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಅವರೆಲ್ಲರಿಗಿಂತ ದುರಂತ ಪ್ರೇಮಿಯ ಒಳತೋಟಿಗಳನ್ನು, ನೋವು, ವಿರಹ, ಆತ್ಮಮರುಕವನ್ನು ಎಎನ್ಆರ್ ಅವರಷ್ಟು ಸಮರ್ಥವಾಗಿ ಬಿಡಿಸಿಟ್ಟಿದ್ದು ಯಾರಿಗೂ ಸಾಧ್ಯವಾಗಿಲ್ಲ ಎಂಬುದು ಸಿನಿರಸಿಕರ – ಸಿನಿಪಂಡಿತರ ಒಮ್ಮತದ ಅಭಿಪ್ರಾಯ. ದಿಲೀಪ್ ಕುಮಾರ್ ಸಹ ಈ ಅಭಿಪ್ರಾಯಕ್ಕೆ ಮುದ್ರೆ ಒತ್ತಿದ್ದಾರೆ.

ಮಜ್ನು ಮತ್ತು ದೇವದಾಸ್ ಅವರ ಪಾತ್ರದ ಯಶಸ್ಸು ಎಎನ್ಆರ್ ಅವರಿಗೆ ‘ದುರಂತ ಪ್ರೇಮಿ’ ಎಂಬ ಬಿರುದನ್ನು ನೀಡಿತು. ಇದೇ ರೀತಿಯ ಪಾತ್ರಗಳನ್ನು ‘ಅನಾರ್ಕಲಿ'(1955), ‘ಬಾಟಸಾರಿ'(1961), ‘ಮೂಗ ಮನಸುಲು'(1964), ‘ಪ್ರೇಮ್ ನಗರ'(1971), ‘ಪ್ರೇಮಾಭಿಷೇಕಂ'(1981), ಮತ್ತು ‘ಮೇಘಸಂದೇಶಂ'(1981) -ಮುಂತಾದ ಚಿತ್ರಗಳಲ್ಲಿ ನಿರ್ವಹಿಸಿದರೂ, ಎಂದೂ ಏಕತಾನತೆಯಿಂದ ಬಳಲದೆ ದುರಂತ ಪ್ರೇಮಿಗಳ ಹಲವು ಮಜಲುಗಳನ್ನು ಪ್ರೇಕ್ಷಕರಿಗೆ ದಾಟಿಸಿ ಯಶಸ್ಸು ಗಳಿಸಿದರು. ಪ್ರೇಮಾಭಿಷೇಕಂ ಚಿತ್ರವು ತೆಲುಗು ಚಲನಚಿತ್ರ ಇತಿಹಾಸದಲ್ಲಿ ಅತಿ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಯಿತು. ಹೈದರಾಬಾದ್‍ನ ಒಂದು ಥಿಯೇಟರ್‌ನಲ್ಲಿ 533 ದಿನಗಳ ಕಾಲ ಪ್ರದರ್ಶನಗೊಂಡಿದ್ದು ಇನ್ನೂ ಮುರಿಯದ ದಾಖಲೆಯಾಗಿದೆ. ಅಲ್ಲದೆ ಬಹುಸಂಖ್ಯೆಯಲ್ಲಿ ಚಿತ್ರಗಳ ಪ್ರತಿಗಳನ್ನು ಮುದ್ರಿಸಿ ಏಕಕಾಲಕ್ಕೆ ರಾಜ್ಯದಾದ್ಯಂತ ಬಿಡುಗಡೆ ಮಾಡುವ ಪದ್ಧತಿ ಎಎನ್ಆರ್ ಅವರ ಚಿತ್ರಗಳಿಂದಲೇ ಆರಂಭವಾಯಿತು.

ಎಎನ್ಆರ್1

ತಮ್ಮ ನವಿರಾದ ಅಭಿನಯದಿಂದ ಅವರು ಹೆಚ್ಚಿನ ಸಂಖ್ಯೆಯ ಮಹಿಳಾ ಪ್ರೇಕ್ಷಕರನ್ನು ಆಕರ್ಷಿಸಿದ ಮೊದಲ ನಟ ಎಂಬ ಖ್ಯಾತಿಯನ್ನು ಗಳಿಸಿದರು. ದುರಂತ ಪ್ರೇಮಿಯ ಜೊತೆಗೆ ಉತ್ಸಾಹಿ ಪ್ರಣಯಿಯ ಅಂದರೆ ಲವರ್ ಬಾಯ್ ಇಮೇಜ್ ಅನ್ನು ಸಹ ಅವರು ಗಳಿಸಿದ್ದು ವಿಶೇಷ. ಭಾರತೀಯ ಚಿತ್ರರಂಗದ ಸಂದರ್ಭದಲ್ಲಿ ಖ‍್ಯಾತ ನಟರಿಗೆ ತಮಗಂಟಿದ ಇಮೇಜನ್ನು ಮೀರುವುದು ಅಷ್ಟು ಸುಲಭವಲ್ಲ. ದೇವದಾಸುವಿನ ನೋವನ್ನು ಜೀವಿಸಿ ಪ್ರೇಕ್ಷಕರಲ್ಲಿ ತಳಮಳ ಸೃಷ್ಟಿಸಬಲ್ಲ ಎಎನ್ಆರ್ ಗುಂಡಮ್ಮ ಕಥ, ಮಿಸ್ಸಮ್ಮ ಚಿತ್ರದ ಪ್ರೇಮಿಯಾಗಿ ಪ್ರೇಕ್ಷಕನಲ್ಲಿ ರಮ್ಯಭಾವಗಳನ್ನು ಸಹ ಅಷ್ಟೇ ಸಮರ್ಥವಾಗಿ ಉದ್ದೀಪಿಸಬಲ್ಲವರಾಗಿದ್ದರು. ತಮ್ಮ ಲವರ್ ಬಾಯ್ ಇಮೇಜ್ ಅನ್ನು ಬಲಪಡಿಸುವ ನಿಟ್ಟಿನಲ್ಲಿ ನೃತ್ಯದಲ್ಲಿ ಹೊಸ ಟ್ರೆಂಡ್ಅನ್ನು ರೂಪಿಸಿದರು. ಮುಂದೆ ತೆಲುಗು ನಟರಾಗಬೇಕಾದರೆ ನೃತ್ಯವನ್ನು ಕಡ್ಡಾಯವಾಗಿ ಕಲಿತಿರಬೇಕು ಎನ್ನುವಷ್ಟರ ಮಟ್ಟಿಗೆ ಎಎನ್ಆರ್ ಅವರ ನೃತ್ಯ ಕೌಶಲ್ಯ ಮಾನದಂಡವಾಯಿತು. ಹೀಗೆ ದೇವದಾಸುವಿನ ವಿರಹಕ್ಕೂ ಸೈ, ಗುಂಡಮ್ಮ ಕಥ ಚಿತ್ರದ ರಾಜನ ಸರಸಕ್ಕೂ ಸೈ ಎನಿಸುವಂತೆ ನಟಿಸಿ ಯಶಸ್ವಿಯಾದವರು.

ಭಾರತದ ಸಾಂಸ್ಕೃತಿಕ ರಾಯಭಾರಿ

ಎಎನ್ಆರ್ ಅವರು ಭಾರತದ ವಿವಿಧ ಪ್ರದೇಶಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಮಹತ್ವದ ವ್ಯಕ್ತಿಗಳ ಪಾತ್ರಗಳನ್ನು ನಿರ್ವಹಿಸಿದ ಕಾರಣ ಅವರನ್ನು ಭಾರತದ ಸಾಂಸ್ಕೃತಿಕ ರಾಯಭಾರಿ ಎಂದು ಪಂಡಿತರು ಪರಿಗಣಿಸಿದ್ದಾರೆ. ಭಾರತದ ಮಹಾನ್ ಸಂತ ಮತ್ತು ಬರಹಗಾರ ವಾಲ್ಮೀಕಿ (ಶ್ರೀರಾಮ ರಾಜ್ಯ 2011), ಉಜ್ಜಯಿನಿಯ ಸಂಸ್ಕೃತ ಕವಿ ಕಾಳಿದಾಸ (ಮಹಾಕವಿ ಕಾಳಿದಾಸ 1960), ಮರಾಠಿ ಸಂತ ತುಕಾರಾಂ (ಭಕ್ತ ತುಕಾರಾಂ 1973), ಸಂತ ಕಬೀರ (ರಾಮದಾಸು 2006) ), ತೆಲುಗು ಕವಿ ರಾಮಕೃಷ್ಣ (ತೆನಾಲಿ ರಾಮಕೃಷ್ಣ 1956), ಕರ್ನಾಟಕದ ಪ್ರಸಿದ್ಧ ಶಿಲ್ಪಿ ಜಕ್ಕಣ್ಣ (ಅಮರಶಿಲ್ಪಿ ಜಕ್ಕಣ್ಣ 1964), ತಮಿಳು ಸಂತ ಮತ್ತು ಕವಿ ತೊಂಡಾದಿಪೋದ್ದಿ ಆಳ್ವರ್ (ವಿಪ್ರ ನಾರಾಯಣ 1954) ಮತ್ತು ಒಡಿಶಾದ ಸಂಸ್ಕೃತ ಕವಿ ಜಯದೇವ (ಭಕ್ತ ಜಯದೇವ 1961). ನಮ್ಮ ರಾಜ್ ಸಹ ಎಎನ್ಆರ್ ಅವರಂತೆಯೇ ಅನೇಕ ಸಂತರ – ಕವಿಗಳ ಪಾತ್ರ ವಹಿಸಿರುವುದು ನಿಜ. (ಕಬೀರ, ತುಕಾರಾಂ, ಕಾಳಿದಾಸ, ಸರ್ವಜ್ಞ, ಕನಕದಾಸ, ಪುರಂದರ ದಾಸ) ಆದರೂ ಎಎನ್ಆರ್ ಅವರು ಭಾರತದ ಅನೇಕ ಪ್ರಾಂತ್ಯಗಳಿಗೆ ಸೇರಿದ ವ್ಯಕ್ತಿಗಳ ಪಾತ್ರ ನಿರ್ವಹಿಸಿರುವುದರಿಂದ ವ್ಯಾಪಕತೆ ಹೆಚ್ಚಿದೆ. ಎಎನ್ಆರ್, ರಾಜ್, ಎನ್‍ಟಿಆರ್ ಮತ್ತು ಶಿವಾಜಿ ಗಣೇಶನ್ ಅವರಂಥ ದಕ್ಷಿಣ ಭಾರತದ ತಾರೆಯರು ಮಾತ್ರ ತಮ್ಮ ಪ್ರದೇಶಗಳ ವ್ಯಾಪಕತೆಯನ್ನು ಮೀರಿ ಭಾರತದ ವಿವಿಧ ಸಂಸ್ಕೃತಿಯ ಪರಿಚಯಕ್ಕೆ ಕಾರಣರಾಗಿರುವುದು ವಿಶೇಷ ಸಂಗತಿ.

ಎಎನ್ಆರ್ ಮತ್ತು ಎನ್ ಟಿ ಆರ್- ಅಪರೂಪದ ಜೋಡಿ

ಇತರ ದಕ್ಷಿಣದ ರಾಜ್ಯಗಳಲ್ಲಿನ ಸನ್ನಿವೇಶದಂತೆ, ತೆಲುಗು ಚಿತ್ರರಂಗದ ಇಬ್ಬರು ಮಹಾನ್ ನಟರಾದ ಎನ್‍ಟಿಆರ್ ಮತ್ತು ಎಎನ್ಆರ್ ನಡುವೆ ವೃತ್ತಿಯ ನಡುವಿನ ಸ್ಪರ್ಧೆಯ ನಡುವೆಯೂ ಜೊತೆಯಲ್ಲಿ ಅಭಿನಯಿಸುವ ಅವಕಾಶಗಳನ್ನು ಎಂದೂ ನಿರಾಕರಿಸಲಿಲ್ಲ. ವೈಯಕ್ತಿಕ ಸಂಬಂಧವೂ ಮಧುರವಾಗಿದ್ದದ್ದು ವಿಶೇಷ. ತಮ್ಮಿಬ್ಬರ ನಡುವಿನ ವೃತ್ತಿ ಸ್ಪರ್ಧೆ ತಮ್ಮ ಪರಸ್ಪರ ಬೆಳವಣಿಗೆಗೆ, ಭಿನ್ನ ಭಿನ್ನ ಪಾತ್ರಗಳ ಹುಡುಕಾಟಕ್ಕೆ ನೆರವಾಯಿತೆಂದು ಅಕ್ಕಿನೇನಿ ನಂಬಿದ್ದರು. ಎನ್‍ಟಿಆರ್ ಅವರು ಒಂದು ಸಂದರ್ಶನದಲ್ಲಿ ಹೇಳಿದಂತೆ ಅಭಿಮಾನಿಗಳ ನಡುವೆ ಇದ್ದ ಸ್ಪರ್ಧೆ ಅವರ ಗೆಳೆತನಕ್ಕೆ ಎಂದೂ ಅಡ್ಡ ಬರಲಿಲ್ಲ. ಹಾಗೆ ನೋಡಿದರೆ ಗೆಳೆತನದ ಕಾರಣದಿಂದಾಗಿ ಎಎನ್ಆರ್ ಅವರು ಜಮುನಾ ಅವರೊಡನೆ ನಟಿಸುವುದಿಲ್ಲವೆಂಬ ನಿರ್ಧಾರಕ್ಕೆ ಎನ್‍ಟಿಆರ್ ಸಹ ಅವರನ್ನು ಬೆಂಬಲಿಸಿ ತಾವೂ ಸಹ ಜಮುನಾ ಅವರೊಡನೆ ನಟಿಸುವುದನ್ನು ನಿಲ್ಲಿಸಿದ್ದರು. ಮುಂದೆ ಕೆ.ವಿ ರೆಡ್ಡಿ ಅವರ ಸಂಧಾನದಿಂದ ಈ ವಿವಾದ ತಿಳಿಯಾಯಿತು.

ತೆಲುಗು ಚಿತ್ರರಂಗದ ಆರಂಭದ ಪ್ರವರ್ತಕರಾದ ಇವರಿಬ್ಬರೂ ಸ್ನೇಹಿತರಾಗಿ ಉಳಿದು ಹದಿನಾಲ್ಕು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದರು. ಕೆಲವು ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಸೃಷ್ಟಿಸಿದವು. ಜೊತೆಯಾಗಿ ನಟಿಸಿದ ಇಬ್ಬರೂ ತಮ್ಮ ವೃತ್ತಿಬದುಕಿನ ಬಹು ಮುಖ್ಯ ಭೂಮಿಕೆಗಳನ್ನು ನಿರ್ವಹಿಸಿದರು. ‘ಮಾಯಾಬಜಾರ್’ (1957), ‘ಗುಂಡಮ್ಮ ಕಥೆ’ (1962), ‘ಮಿಸ್ಸಮ್ಮ’ (1955) ಮತ್ತು ‘ಚಂದ್ರಗುಪ್ತ ಚಾಣಕ್ಯ’ (1977) ಚಲನಚಿತ್ರಗಳಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತೆ ನಟಿಸಿ ಅಭಿಮಾನಿಗಳನ್ನು ರಂಜಿಸಿದರು. ಮಾಯಾ ಬಜಾರ್‍‌ನಲ್ಲಿ ಎನ್‍ಟಿಆರ್ ಕೃಷ್ಣನಾದರೆ, ಅಕ್ಕಿನೇನಿ ಅಭಿಮನ್ಯು; ಭೂಕೈಲಾಸದಲ್ಲಿ ರಾವಣನ ಪಾತ್ರ ಎನ್‍ಟಿಆರ್ – ನಾರದನ ಪಾತ್ರ ಎಎನ್ಆರ್; ಚಂದ್ರಗುಪ್ತ ಚಾಣಕ್ಯ ಚಿತ್ರದಲ್ಲಿ ಅರಸು ಚಂದ್ರಗುಪ್ತನ ಪಾತ್ರ ಎನ್‍ಟಿಆರ್ ವಹಿಸಿದರೆ ಎಎನ್ಆರ್ ಮಹಾಮಂತ್ರಿ ಚಾಣಕ್ಯನಾಗಿ ವಿಜೃಂಭಿಸಿದರು. ಗುಂಡಮ್ಮ ಕಥ, ಚರಣದಾಸಿ, ಸಂಸಾರಂ, ಇದ್ದರು ಮಿತ್ರುಲು ಮೊದಲಾದ ಯಶಸ್ವಿ ಚಿತ್ರಗಳಲ್ಲಿ ಉಭಯ ನಟರು ಗೆಳೆಯರಾಗಿ ಇಲ್ಲವೇ ಸೋದರರಾಗಿ ನಟಿಸಿ ಅಭಿಮಾನಿಗಳನ್ನು ರಂಜಿಸಿದರು. ಒಂದು ಸಂದರ್ಶನದಲ್ಲಿ ಎನ್‌ಟಿಆರ್ ಅವರ ಜನಪ್ರಿಯತೆಯನ್ನು ಸ್ಮರಿಸಿದ ಎಎನ್ಆರ್ ತಮ್ಮ ಬದುಕಿನ ಘಟನೆಯನ್ನು ಉದಾಹರಿಸಿ ಗೆಳೆಯನ ಬಗ್ಗೆ ಇದ್ದ ಅಭಿಮಾನ ಮೆರೆದಿದ್ದಾರೆ. ತಮ್ಮ ತಾಯಿಗಾಗಿ ಕಟ್ಟಿಸಿದ ಮನೆಯಲ್ಲಿ ಒಂದು ಕೃಷ್ಣನ ಫೋಟೋ ಇಡಲು ಅಮ್ಮ ಇಟ್ಟ ಬೇಡಿಕೆಯಂತೆ ಎಎನ್ಆರ್ ಕೃಷ್ಣನ ಫೋಟೋಗೆ ಕಟ್ಟುಹಾಕಿಸಿ ಕೊಟ್ಟರಂತೆ. ಅದನ್ನು ನೋಡಿದ ತಾಯಿ ಇದು ಕೃಷ್ಣನಂತೆ ಕಾಣುತ್ತಿಲ್ಲ, ಮಾಯಾಬಜಾರ್ ಕೃಷ್ಣನ ಫೋಟೋ ತಂದುಕೊಡು ಎಂದರಂತೆ! ಪರಸ್ಪರ ಹೊಗಳಲು ಇಬ್ಬರೂ ಎಂದೂ ಹಿಂದೆ ಬೀಳಲಿಲ್ಲ.

ಎಎನ್ಆರ್2

ಅಭಿನಯದ ಬಗೆಗಿನ ಕಡು ವ್ಯಾಮೋಹ, ವೃತ್ತಿಯ ಬಗೆಗಿನ ನಿಷ್ಠೆ, ಪ್ರಯೋಗಗಳಿಗೆ ತೆರೆದುಕೊಂಡ ಮನಸ್ಸು ಮತ್ತು ಬದುಕಿನಲ್ಲಿ ರೂಢಿಸಿಕೊಂಡ ಶಿಸ್ತು ಎಎನ್ಆರ್ ಅವರ ಯಶಸ್ಸಿನ ಹಿಂದಿನ ಸೂತ್ರಗಳು. ತೆರೆಯ ಮೇಲೆ ಸಜ್ಜನನಾಗಿ ಕಾಣಿಸಿಕೊಂಡಷ್ಟೇ ನಿಜ ಬದುಕಿನಲ್ಲಿಯೂ ನಡೆದುಕೊಳ್ಳಬೇಕು ಎಂದು ನಂಬಿ ಅದರಂತೆ ಬದುಕಿದವರು. ವೃತ್ತಿ ಬದುಕಿನಲ್ಲಿ ನಟಿ ಜಮುನಾ ಅವರೊಂದಿಗೆ ಘಟಿಸಿದ ವಿವಾದದ ಘಟನೆಯೊಂದನ್ನು ಹೊರತುಪಡಿಸಿದರೆ ಎಎನ್ಆರ್ ಅವರ ವೃತ್ತಿಬದುಕು ಮತ್ತು ನಿಜಜೀವನ ವಿವಾದಗಳಿಂದ ಮುಕ್ತವಾಗಿತ್ತು. ಅಲ್ಲದೆ ಅವರಿಗೆ ಸಿನೆಮಾ ಉಸಿರಾಗಿತ್ತು. ಅನೇಕ ಸಂದರ್ಶನಗಳಲ್ಲಿ ತಾವು ನಟಿಸುವಾಗಲೇ ಕೊನೆಯುಸಿರೆಳೆಯಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಅವರ ಬದುಕಿನಲ್ಲಿ ಅವರು ಇಚ್ಛಿಸಿದಂತೆಯೇ ಘಟಿಸಿತು. 2013ರಲ್ಲಿ ತೊಂಬತ್ತು ವರ್ಷದ ಅಕ್ಕಿನೇನಿ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. 2001ರಿಂದ ನಟಿಸುವುದನ್ನು ನಿಲ್ಲಿಸಿದ್ದ ಅವರು ತಮಗಿಷ್ಟವಾದ ಪಾತ್ರಗಳು ಬಂದಾಗ ಅಲ್ಲೊಂದು ಇಲ್ಲೊಂದು ಪಾತ್ರ ಮಾಡುತ್ತಿದ್ದರು. ಹಾಗೆ ಅವರು 2006ರಲ್ಲಿ ರಾಮದಾಸು ಚಿತ್ರದಲ್ಲಿ ಭಕ್ತ ಕಬೀರನ ಪಾತ್ರವನ್ನು ಶ್ರೀರಾಮ ರಾಜ್ಯಂ(2011) ಚಿತ್ರದಲ್ಲಿ ವಾಲ್ಮೀಕಿ ಪಾತ್ರವನ್ನು ಮಾಡಿದರು. ಹತ್ತು ವರ್ಷದ ಅವಧಿಯಲ್ಲಿ ಅವರು ನಟಿಸಿದ್ದು ಇವೆರಡೇ ಚಿತ್ರಗಳಲ್ಲಿ. ನಂತರ ತಮ್ಮದೇ ಸಂಸ್ಥೆಗಾಗಿ ನಟಿಸಿದ ‘ಮನಂ’ ಚಿತ್ರದೊಂದಿಗೆ ಅವರ ಸಿನಿಮಾ ಪಯಣ ಕೊನೆಗೊಂಡಿತು. ನಟ ನಾಗಾರ್ಜುನ ಮತ್ತು ಮೊಮ್ಮಕ್ಕಳಾದ ನಾಗ ಚೈತನ್ಯ ಮತ್ತು ಅಖಿಲ್ ಸೇರಿದಂತೆ ಅಕ್ಕಿನೇನಿ ಕುಟುಂಬದ ಮೂರು ತಲೆಮಾರುಗಳು ಅದರಲ್ಲಿ ನಟಿಸಿದ್ದಾರೆ. ಅಸ್ವಸ್ಥತೆಯ ನಡುವೆಯೂ ಅವರು ನಟಿಸಿದರು. ಚಿತ್ರೀಕರಣವೆಲ್ಲ ಮುಗಿಯುವ ವೇಳೆಗೆ ಅವರ ಕ್ಯಾನ್ಸರ್ ಉಲ್ಬಣಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ತನ್ನ ದಿನಗಳು ಮುಗಿಯುತ್ತಿವೆ ಎಂದು ಅರಿತು, ಅವರು ಆಸ್ಪತ್ರೆಯಿಂದ ಮನೆಗೆ ವಾಪಸ್ಸಾದರು. ತಮ್ಮ ಹಾಸಿಗೆ ಬಳಿಗೆ ಡಬ್ಬಿಂಗ್ ಉಪಕರಣಗಳನ್ನು ತರಿಸಿ ತಮ್ಮ ಮಾತುಗಳನ್ನು ಅಕ್ಷರಶಃ ಮರಣಶಯ್ಯೆಯಲ್ಲೇ ಮಲಗಿ ಡಬ್ ಮಾಡಿದರು. 1914ರ ಜನವರಿ 22ರಂದು ನಟಸಾಮ್ರಾಟ ತಮ್ಮ ಕೊನೆಯುಸಿರೆಳೆದರು. ‘ಮನಂ’ (2014) ಚಿತ್ರವು ಅವರ ನಿಧನದ ನಂತರ ಬಿಡುಗಡೆಯಾಯಿತು. ಅದು ಆ ಮಹಾನ್ ನಟನ ಹಂಸಗೀತೆಯಾಗಿ ಅವರ ಬದುಕಿಗೆ ಸೂಕ್ತ ಗೌರವವೆನ್ನುವಂತೆ ಜನಮನ್ನಣೆ ಪಡೆಯಿತು.

ಅಕ್ಕಿನೇನಿ ಅವರ ಬದುಕು ಅನೇಕ ವೈರುಧ್ಯ ಮತ್ತು ಅದ್ಭುತ ಸಂಗತಿಗಳ ಮಿಶ್ರಣ. ಜನಪ್ರಿಯ ತಾರೆಯಾಗಿ ಅವರು ಅದ್ಭುತವಾದ ವಾಣಿಜ್ಯ ಯಶಸ್ಸನ್ನು ಸಾಧಿಸಿದರು. ಅಪಾರ ಜನಪ್ರೀತಿ ಗಳಿಸಿದರು. ಜೊತೆಗೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಕಲಾವಿದರಾಗಿ ಉಳಿದರು. ಶಿಕ್ಷಣದಿಂದ ಬಾಲ್ಯದಲ್ಲೇ ವಂಚಿತರಾದರೂ, ಅವರು ಜೀವನದಿಂದ ಕಲಿತದ್ದು ಅಪಾರ. ತಮ್ಮ ಪಾತ್ರಗಳಲ್ಲೂ ಸಂಪೂರ್ಣವಾಗಿ ಅರ್ಥಮಾಡಿಕೊಂಡು ನಟಿಸಲು ಪ್ರಯತ್ನಿಸುತ್ತಿದ್ದ ಮೆಥೆಡ್ ಕಲಾವಿದ. ತಮ್ಮ ಪ್ರತಿಯೊಂದು ಚಿತ್ರ ಮತ್ತು ಪಾತ್ರವು ಒಂದೊಂದು ಪಿಎಚ್‍.ಡಿ ಅಧ್ಯಯನಕ್ಕೆ ಸಮವೆಂದು ಅವರೇ ಹೇಳುತ್ತಿದ್ದರು. ಅವರ ಕಲಿಕೆಯ ಆಸಕ್ತಿಯು ಸ್ವಂತ ಪರಿಶ್ರಮದಿಂದ ತೆಲುಗು ಸಾಹಿತ್ಯ ಮತ್ತು ಇಂಗ್ಲಿಷ್ ಭಾಷೆಯನ್ನು ಕರಗತ ಮಾಡಿಕೊಳ್ಳುವಷ್ಟು ಪ್ರಬಲವಾಗಿತ್ತು. ಆಸಕ್ತಿಯಿಂದ ತೆಲುಗು ಮತ್ತು ಇಂಗ್ಲಿಷ್ ಭಾಷೆಗಳನ್ನು ಕರಗತ ಮಾಡಿಕೊಂಡರು. ಅವರು ಪ್ರಸಿದ್ಧ ಸಂತರ ಪಾತ್ರದಲ್ಲಿ ಭಕ್ತಿಯ ಪರವಶತೆಯನ್ನು ಪರದೆಯ ಮೇಲೆ ಪರಿಪೂರ್ಣವಾಗಿ ಮೂಡಿಸಿದರು. ಆದರೆ ಉದ್ದಕ್ಕೂ ನಾಸ್ತಿಕರಾಗಿದ್ದರು. ನಾಸ್ತಿಕರಾದ ತಮಗೆ ಭಕ್ತರ, ದೇವರ ಪಾತ್ರಗಳನ್ನು ಎನ್‍ಟಿಆರ್ ಅವರಷ್ಟು ತನ್ಮಯರಾಗಿ ನಟಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಅವರು ಸಂದರ್ಶಕನಿಗೆ ನೀಡಿದ ಉತ್ತರ ನಟನೊಬ್ಬನಿಗಿರಬೇಕಾದ ಅರ್ಹತೆಯನ್ನು ನಿರೂಪಿಸುವ ಸಂಗತಿಯಂತೆ ಕಾಣುತ್ತದೆ. ಅವರ ಉತ್ತರ– ”ನಟನೆ ಅನ್ನುವುದು ಒಂದು ಪಾತ್ರದ ಒಳತೋಟಿಗಳನ್ನು ಅರಿತು ಅವುಗಳನ್ನು ಅಭಿವ್ಯಕ್ತಿಸುವ ಕುಶಲತೆ. ನೀವು ನಿಮ್ಮ ಅಭಿವ್ಯಕ್ತಿಯನ್ನು ಜನಮೆಚ್ಚುವಂತೆ ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಬಹುದು ಅಥವಾ ಆ ಪ್ರಯತ್ನದಲ್ಲಿ ಸೋಲಬಹುದು. ಸೋತರೆ ಅದು ಕೆಟ್ಟ ಅಭಿನಯ. ನಾನು ನಾಸ್ತಿಕನಾಗಿ ರಾಮನನ್ನು ನಂಬದಿದ್ದರೂ ಮನುಕುಲವು ಸದ್ಗುಣವನ್ನು ಮೆಚ್ಚುವಂತೆ ಮಾಡಲು ರಾಮನಂತ ದೇವರನ್ನು ಸೃಷ್ಟಿಸಿದ ವಾಲ್ಮೀಕಿಯನ್ನು ನಂಬುತ್ತೇನೆ.”

ಅಕ್ಕಿನೇನಿ ಅವರು ಜನಪ್ರಿಯ ಕಲಾವಿದ ಮಾತ್ರವಲ್ಲದೆ ಹಲವು ಸಂಸ್ಥೆಗಳನ್ನು ಹುಟ್ಟು ಹಾಕಿ ತೆಲುಗು ಚಿತ್ರೋದ್ಯಮದ ಬೆಳವಣಿಗೆಗೆ ಮೇಲ್ಪಂಕ್ತಿ ಹಾಕಿದ ದಾರ್ಶನಿಕ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಚಲನಚಿತ್ರಗಳು ತಯಾರಾಗುತ್ತಿದ್ದದ್ದು ತೆಲುಗು ಭಾಷೆಯಲ್ಲಿ. ಅತಿ ಹೆಚ್ಚಿನ ಪ್ರದರ್ಶನ ಗೃಹಗಳು ಮತ್ತು ಮತ್ತು ಪ್ರೇಕ್ಷಕ ಸಮುದಾಯವಿದ್ದದ್ದೂ ಆಂಧ್ರಪ್ರದೇಶದಲ್ಲಿ. ಆದರೂ ಮದ್ರಾಸು (ಈಗ ಚೆನ್ನೈ) ಅನೇಕ ದಶಕಗಳ ಕಾಲ ತೆಲುಗು ಚಿತ್ರನಿರ್ಮಾಣದ ಕೇಂದ್ರವಾಗಿತ್ತು. ಆಂಧ್ರಪ್ರದೇಶದಲ್ಲಿ ಅದರಲ್ಲೂ ರಾಜಧಾನಿಯಲ್ಲಿ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಯಾವುದೇ ಮೂಲಸೌಕರ್ಯವಿರಲಿಲ್ಲ. ತೆಲುಗು ಚಲನಚಿತ್ರೋದ್ಯಮವನ್ನು ಮದ್ರಾಸ್‌ನಿಂದ ಹೈದರಾಬಾದ್‌ಗೆ ಸ್ಥಳಾಂತರಿಸಲು ಅನೇಕ ಪ್ರಯತ್ನಗಳು ನಡೆದವಾದರೂ, ಮೊದಲು ಯಶಸ್ಸು ಕಂಡವರು ಎಎನ್‍ಆರ್. ಅವರು 1975ರಲ್ಲಿ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ 22 ಎಕರೆ ಜಮೀನಿನಲ್ಲಿ ತಮ್ಮ ಸ್ವಂತ ಸುಸಜ್ಜಿತ ಅನ್ನಪೂರ್ಣ ಚಲನಚಿತ್ರ ಸ್ಟುಡಿಯೊವನ್ನು ನಿರ್ಮಿಸಿದರು. ಅವರ ಸಾಹಸ ಕಂಡ ಯಶಸ್ಸು ಹಲವಾರು ತೆಲುಗು ಚಲನಚಿತ್ರ ಸ್ಟುಡಿಯೋಗಳು ಮತ್ತು ನಿರ್ಮಾಣ ಸಂಸ್ಥೆಗಳು ಹೈದರಾಬಾದ್‌ಗೆ ವಲಸೆ ಹೋಗಲು ಪ್ರೇರೇಪಿಸಿತು. ಆ ಕಾರಣದಿಂದ ಹೈದರಾಬಾದ್ ಇಂದು ಬಾಲಿವುಡ್‌ನ ನಂತರ ಭಾರತದ ಎರಡನೇ ಅತಿದೊಡ್ಡ ಚಲನಚಿತ್ರೋದ್ಯಮ ನೆಲೆಯಾಗಿದೆ.
ಅದಕ್ಕೂ ಮೊದಲು 1951ರಲ್ಲಿ ಎಎನ್‍ಆರ್ ಅವರು ಅನ್ನಪೂರ್ಣ ಪಿಕ್ಚರ್ಸ್ ಸಂಸ್ಥೆಯನ್ನು ತಮ್ಮ ಗೆಳೆಯರ ಜೊತೆ ಸ್ಥಾಪಿಸಿ ಸೂಪರ್ ಹಿಟ್ ಚಿತ್ರ ‘ದೊಂಗರಾಮುಡು’ ಮೂಲಕ ಚಿತ್ರ ನಿರ್ಮಾಣಕ್ಕಿಳಿದರು. ಈವರೆವಿಗೂ ಅರವತ್ತಕ್ಕೂ ಹೆಚ್ಚು ಚಿತ್ರಗಳು ಈ ಬ್ಯಾನರಡಿಯಲ್ಲಿ ನಿರ್ಮಾಣಗೊಂಡಿವೆ. ಅಲ್ಲದೆ ಈ ಸಂಸ್ಥೆಯು ಚಿತ್ರ ವಿತರಣೆ, ಟಿವಿ ಚಿತ್ರ ನಿರ್ಮಾಣಕ್ಕೂ ತನ್ನ ಕಾರ್ಯವನ್ನು ವಿಸ್ತರಿಸಿ ತೆಲುಗಿನ ಪ್ರತಿಷ್ಠಿತ ಚಿತ್ರನಿರ್ಮಾಣ ಸಂಸ್ಥೆಯಲ್ಲೊಂದೆನಿಸಿದೆ.

ಎ ನಾಗೇಶ್ವರರಾವ್5

ಚಿತ್ರೋದ್ಯಮಕ್ಕೆ ಅಪಾರ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲು ಎಎನ್‍ಆರ್ ಅವರು 2005ರಲ್ಲಿ ಅಕ್ಕಿನೇನಿ ಇಂಟರ್ ನ್ಯಾಷನಲ್‍ ಫೌಂಡೇಷನ್ ಸಂಸ್ಥೆಯನ್ನು ಮತ್ತು ತಾವು ಜನಿಸಿದ ರಾಮಾಪುರಂ ಪಟ್ಟಣದ ಅಭಿವೃದ್ಧಿಗೆ ಅಕ್ಕಿನೇನಿ ಜನ್ಮಭೂಮಿ ಟ್ರಸ್ಟ್ ಸ್ಥಾಪಿಸಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು.

ಎಎನ್‍ಆರ್ ಅವರ ಮಾರ್ಗದರ್ಶನದಂತೆ ಅನ್ನಪೂರ್ಣ ಸ್ಟುಡಿಯೋಸ್ ಸಂಸ್ಥೆಯು ಚಿತ್ರೋದ್ಯಮದ ಬೆಳವಣಿಗೆಗೆ ತನ್ನ ಕಾರ್ಯಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಿದೆ. 2011ರಲ್ಲಿ ಅನ್ನಪೂರ್ಣ ಇಂಟರ್ ನ್ಯಾಷನಲ್ ಫಿಲಂ ಸ್ಕೂಲ್ ಆಫ್ ಫಿಲಂ ಅಂಡ್ ಮೀಡಿಯಾ ಎಂಬ ಚಲನಚಿತ್ರ ಮತ್ತು ಮಾಧ್ಯಮ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಿದೆ. ದೇಶ ವಿದೇಶದ ಸುಮಾರು ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಭಾರತದ ಮೊದಲ ಲಾಭರಹಿತ ಮಾಧ್ಯಮ ಸಂಸ್ಥೆಯೆನಿಸಿದೆ.

ಇದನ್ನು ಓದಿದ್ದೀರಾ?: ನೂರರ ನೆನಪು | ದೇವಾನಂದ್ ಎಂಬ ಸಾಹಸಿಗ, ಚಿರಯೌವನಿಗ

ಅಕ್ಕಿನೇನಿ ನಾಗೇಶ್ವರ ರಾವ್ ಅವರ ಬದುಕು ಪ್ರತಿಭೆ ಮತ್ತು ಸಾಧನೆಯು ಹಲವು ತಲೆಮಾರುಗಳ ಚಲನಚಿತ್ರ ಕಲಾವಿದರು, ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಪ್ರೇರಣೆಯ ಕಾರಂಜಿಯಾಗಿದೆ. ಅವರು ಭಾರತೀಯ ಚಿತ್ರರಂಗ ಕಂಡ ಬಹುದೊಡ್ಡ ಕಲಾವಿದರಲ್ಲೊಬ್ಬರಾಗಿ ತೆಲುಗು ಚಲನಚಿತ್ರೋದ್ಯಮದ ದಂತಕಥೆಯಾಗಿ ಅಜರಾಮರರಾಗಿದ್ದಾರೆ.

WhatsApp Image 2023 07 14 at 5.34.29 PM
ಡಾ. ಕೆ. ಪುಟ್ಟಸ್ವಾಮಿ
+ posts

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ಕೆ. ಪುಟ್ಟಸ್ವಾಮಿ
ಡಾ. ಕೆ. ಪುಟ್ಟಸ್ವಾಮಿ

ಲೇಖಕ, ಪತ್ರಕರ್ತ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇರಳ ಚುನಾವಣೆ | ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ನಾಲ್ವರ ಪೈಪೋಟಿ; ಹಿಂದೆ ಸರಿಯುವ ಮಾತೇ ಇಲ್ಲ!

ಕಾಂಗ್ರೆಸ್‌ನ ನಾಲ್ವರು ನಾಯಕರು ಒಳಗೆಷ್ಟು ಅಸಮಾಧಾನ, ಪೈಪೋಟಿ ಹೊಂದಿದ್ದರೂ ರಾಜ್ಯದ ಕಾಂಗ್ರೆಸ್...

‘ಜೋಗಿ’ಯಿಂದ ‘ಕೆಡಿ’ವರೆಗೆ: ಕಲಾತ್ಮಕ ಮೌಲ್ಯಗಳ ಕುಸಿತ?

ʼನಾನು ಎಣ್ಣೆ ಹಾಗೂ ಉಪ್ಪಿನಕಾಯಿಯ ಬಗ್ಗೆ ಬರೆದಿದ್ದೇನೆʼ. ʼಈ ಹಾಡಿನ ಸಾಹಿತ್ಯದಲ್ಲಿ...

ಟ್ರಂಪ್‌ಗೆ ಚಿತ್ತಭ್ರಮೆಯೇ?; ಅಮೆರಿಕ ಅಧ್ಯಕ್ಷರ ಮಾನಸಿಕ ಆರೋಗ್ಯದ ಸುತ್ತ ಅನುಮಾನದ ಹುತ್ತ

ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ನಾಯಕನೊಬ್ಬನ ಮಾನಸಿಕ ಸ್ಥಿರತೆ...