ಬಾಲಿವುಡ್ ನಟ ಆಮಿರ್ ಖಾನ್ ಅವರಿಗೆ ಮೊದಲ ಆರ್‌ಕೆ ಲಕ್ಷ್ಮಣ್ ಪ್ರಶಸ್ತಿ ಸಂದಿದೆ. ಇದೇ ನವೆಂಬರ್ 23ರಂದು ಪುಣೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆಮಿರ್ ಖಾನ್ ಅವರಿಗೆ ಮೊದಲ ಆರ್‌ಕೆ ಲಕ್ಷ್ಮಣ್ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಪುಣೆಯ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನವೆಂಬರ್ 23ರಂದು ಸಂಜೆ 5 ಗಂಟೆಗೆ ಆರಂಭವಾಗಲಿದೆ.
ಪ್ರಖ್ಯಾತ ಭಾರತೀಯ ವ್ಯಂಗ್ಯಚಿತ್ರಕಾರ, ಸಚಿತ್ರಕಾರ ಮತ್ತು ಹಾಸ್ಯಗಾರ, ‘ದಿ ಕಾಮನ್ ಮ್ಯಾನ್’ ಪಾತ್ರಕ್ಕೆ ಹೆಸರುವಾಸಿಯಾಗಿರುವ ಆರ್‌ಕೆ ಲಕ್ಷ್ಮಣ್ ಅವರ ಹೆಸರಲ್ಲಿ ಸಲ್ಲುವ ಮೊದಲ ಪ್ರಶಸ್ತಿ ಇದಾಗಿದೆ. ಆಮಿರ್ ಖಾನ್ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಆರ್‌ಕೆ ಲಕ್ಷ್ಮಣ್ ಕುಟುಂಬ ಘೋಷಿಸಿದೆ. ಈ ಕಾರ್ಯಕ್ರಮದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮವೂ ಇರಲಿದೆ.
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-2 | ‘ಥ್ರೀ ಇಡಿಯಟ್ಸ್’ ಸಿನಿಮಾದ ಸ್ಪೂರ್ತಿ ಸೋನಮ್ ವಾಂಗ್‌ಚುಕ್ ಮೇಲೆ ಕೇಂದ್ರದ ಕೆಂಗಣ್ಣೇಕೆ?
ಆರ್.ಕೆ. ಲಕ್ಷ್ಮಣ್ ಅವರ ಸೊಸೆ ಉಷಾ ಲಕ್ಷ್ಮಣ್, ಕಾರ್ಯಕ್ರಮ ಮತ್ತು ಪ್ರಶಸ್ತಿಯ ವಿವರಗಳ ಮಾಹಿತಿಯನ್ನು ನೀಡಿದ್ದು, “ಆರ್.ಕೆ. ಲಕ್ಷ್ಮಣ್ ಕುಟುಂಬವು ನವೆಂಬರ್ 23ರಂದು ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎ.ಆರ್. ರೆಹಮಾನ್ ಅವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ, ನಾವು ಮೊದಲ ಬಾರಿಗೆ ಆರ್.ಕೆ. ಲಕ್ಷ್ಮಣ್ ಹೆಸರಲ್ಲಿ ಪ್ರಶಸ್ತಿಯನ್ನು ಆರಂಭಿಸಲಿದ್ದೇವೆ. ಈ ಮೂಲಕ ಆರ್.ಕೆ. ಲಕ್ಷ್ಮಣ್ ಅವರಿಗೆ ಗೌರವ ಸಲ್ಲಿಸುತ್ತೇವೆ. ಇದು ನಾವು ಒಂದು ಕುಟುಂಬವಾಗಿ ಲಕ್ಷ್ಮಣ್ ಅವರಿಗೆ ನೀಡುತ್ತಿರುವ ಅತಿದೊಡ್ಡ ಗೌರವ” ಎಂದು ತಿಳಿಸಿದ್ದಾರೆ.
ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವ ಮತ್ತು ಭಾರತೀಯ ಸಿನಿಮೀಯ ಸಂಪ್ರದಾಯಗಳಿಗೆ ಸವಾಲು ಮಾಡುವ, ವ್ಯಂಗ್ಯದ ಮೂಲಕವೇ ಸಿನಿಮಾದಲ್ಲಿ ನೈಜ ವಿಚಾರವನ್ನು ಜನರಿಗೆ ತಲುಪಿಸುವವರು ಆಮಿರ್ ಖಾನ್. ಲಗಾನ್, ತಾರೆ ಜಮೀನ್ ಪರ್, ದಂಗಲ್, ಪಿಕೆ ಮೊದಲಾದ ಸಿನಿಮಾಗಳಿಗೆ ಖಾನ್ ಹೆಸರುವಾಸಿ. ಖಾನ್ ಅವರ ಸೃಜನಶೀಲ ಸಾಧನೆಗಳನ್ನು ಗುರುತಿಸಿ ಆರ್‌ಕೆ ಲಕ್ಷ್ಮಣ್ ಶ್ರೇಷ್ಠತಾ ಪ್ರಶಸ್ತಿಯನ್ನು ನೀಡಲು ಕುಟುಂಬ ನಿರ್ಧರಿಸಿದೆ. ಖಾನ್ ಅವರ ಸಿನಿಮಾಗಳು ಆರ್‌ಕೆ ಲಕ್ಷ್ಮಣ್ ಅವರ ತತ್ವಗಳೊಂದಿಗೆ ವಿಶೇಷವಾಗಿ ಭಾರತೀಯ ಸಮಾಜದ ಬಗ್ಗೆಗಿನ ಅವರ ಚಿಂತನೆಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಕುಟುಂಬ ಈ ಮೂಲಕ ತಿಳಿಸಿದೆ.
ದಿ ಕಾಮನ್ ಮ್ಯಾನ್ ರಚನೆಗೆ ಹೆಸರುವಾಸಿಯಾದ ಆರ್‌ಕೆ ಲಕ್ಷ್ಮಣ್
ಆರ್‌ಕೆ ಲಕ್ಷ್ಮಣ್ ದೇಶದ ಅತ್ಯಂತ ಜನಪ್ರಿಯ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು. ಅವರು ‘ಯು ಸೆಡ್ ಇಟ್’ ಮತ್ತು ದಿ ಕಾಮನ್ ಮ್ಯಾನ್ ಕಾರ್ಟೂನ್‌ಗೆ ಹೆಸರುವಾಸಿಯಾಗಿದ್ದಾರೆ. ದೇಶದ ದೈನಂದಿನ ಜೀವನದ ಸಮಸ್ಯೆಗಳನ್ನು ಹಾಸ್ಯ ಮತ್ತು ವ್ಯಂಗ್ಯವಾಗಿ ಕಾರ್ಟೂನ್ ಮೂಲಕ ಪ್ರಸ್ತುತ ಪಡಿಸುತ್ತಿದ್ದರು. ಆರ್‌ಕೆ ಲಕ್ಷ್ಮಣ್ ಅವರ ಸಹೋದರ ಆರ್‌ಕೆ ನಾರಾಯಣ್ ಬರೆದ ‘ಮಾಲ್ಗುಡಿ ಡೇಸ್’ ಟಿವಿ ಸರಣಿಗಾಗಿ ರೇಖಾಚಿತ್ರಗಳನ್ನು ರಚಿಸಿದ್ದರು. ಲಕ್ಷ್ಮಣ್ ಪದ್ಮಭೂಷಣ, ಪದ್ಮವಿಭೂಷಣ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾರೆ.





