ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರನ್ನು ಟೀಕಿಸುವ ಭರದಲ್ಲಿ ನಟ ಚೇತನ್ ಅಹಿಂಸಾ ಅವರು ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ವಿರುದ್ಧ ನೆಟ್ಟಿಗರು ಮತ್ತು ಹೋರಾಟಗಾರರು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದ್ದು, ಕಿಡಿಕಾರಿದ್ದಾರೆ.
ಇತ್ತೀಚೆಗೆ, ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಅವರು ಆರ್‌ಎಸ್ಎಸ್ ಕುರಿತು ಮಾತನಾಡಿದ್ದರು. ‘ಆರೆಸ್ಸೆಸ್ ಆರಾಧಿಸುವ ಸಾವರ್ಕರ್ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಅವರನ್ನು ಬ್ರಿಟಿಷ್ ಏಜೆಂಟ್‌ಗಳು’ ಎಂದು ಕರೆದಿದ್ದರು.
ಈ ಹೇಳಿಕೆಯನ್ನು ಆಧರಿಸಿ ಕಾಂಗ್ರೆಸ್ ಅನ್ನು ಟೀಕಿಸಲು ಯತ್ನಿಸಿದ್ದ ಚೇತನ್, “ಸಾವರ್ಕರ್ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಬ್ರಿಟಿಷರ ಪರ ನಿಂತವರು ಎಂದು ಬಿ.ಕೆ ಹರಿಪ್ರಸಾದ್ ಹೇಳುತ್ತಾರೆ. ನೋಡಿ, ಕಾಂಗ್ರೆಸ್ ಯಾವ ರೀತಿಯಲ್ಲಿ ತಾನು ದೇಶಭಕ್ತಿಯ ಸಂಕೇತ ಎಂದು ತೋರಿಸಿಕೊಳ್ಳುತ್ತದೆ, ಆದರೆ ನಿಜವಾಗಿ ಅದು ಸದಾ ಸ್ವಾರ್ಥದ ಅಧಿಕಾರದಾಸೆಯ ಬೇರು ಆಗಿದೆ. ಅಂಬೇಡ್ಕರ್ ಮತ್ತು ಪೇರಿಯಾರ್‌ರನ್ನು ಕೂಡ ಆ ಇಬ್ಬರ ಜೊತೆ ‘ಬ್ರಿಟಿಷ್ ಪರರು’ ಎಂದು ಯಾಕೆ ಸೇರಿಸಬಾರದು? ಕಾಂಗ್ರೆಸ್ಸು ಸದಾ ಅಸಮಾನತೆಯ ಮತ್ತು ಅನ್ಯಾಯದ ವ್ಯವಸ್ಥೆಯನ್ನು ಉಳಿಸಿಕೊಂಡ ಪಕ್ಷ ಎಂದು ನಾವು ನೋಡಬೇಕು” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅಂಬೇಡ್ಕರರನ್ನು ಬ್ರಿಟಿಷ್ ಏಜೆಂಟ್ ಎಂಬಂತೆ ಬಿಂಬಿಸಿದ್ದಾರೆ.
ಚೇತನ್ ಅವರ ಈ ಪೋಸ್ಟ್‌ಅನ್ನು ಹಲವು ಖಂಡಿಸಿದ್ದಾರೆ. ಸ್ವತಃ ಚೇತನ್ ಅವರ ಪತ್ನಿ ಮೇಘಾ ಕೂಡ ಖಂಡಿಸಿದ್ದಾರೆ. “ಇದೊಂದು ಅಜ್ಞಾನದ ಅವಮಾನಕರ ಪೋಸ್ಟ್’’ಎಂದು ಕಿಡಿಕಾರಿದ್ದಾರೆ.
ನಟ ಚೇತನ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರವಿ ದೇವನಾಂಪ್ರಿಯ ಎಂಬವರು, “ಬಾಬಾಸಾಹೇಬರು ಬ್ರಿಟಿಷರ ಪರ ಎನ್ನುವುದು ಬೌದ್ಧಿಕ ದಿವಾಳಿತನ” ಎಂದಿದ್ದಾರೆ.
ದೀಪಕ್ ಕುಮಾರ್ ಎಂಬವರು, “ಚೇತನ್ ಸಾರ್ ನಿಮಗೂ ಆ ತೇಜಸ್ವಿ ಸೂರ್ಯನಿಗೂ ವ್ಯತ್ಯಾಸವಿಲ್ಲ. ನೀವು ಬಾಬಾಸಾಹೇಬರನ್ನ ಮತ್ತು ಪೆರಿಯಾರರನ್ನ ಸರಿಯಾಗಿ ಅಧ್ಯಯನ ಮಾಡಿಲ್ಲ ಅನ್ಸುತ್ತೆ ಅವರನ್ನ ಅಧ್ಯಯನ ಮಾಡಿದವರು ಈ ರೀತಿ ಮನುವಾದಿಗಳ ಜೊತೆ ಕಂಪೇರ್ ಮಾಡ್ತಿರಲಿಲ್ಲ… ಸಿಂಪಲ್ಲಾಗಿ ಹೇಳ್ತಿನಿ ಬಾಬಾ ಸಾಹೇಬರು ತನ್ನ ಶೋಷಿತ ಜನಗಳ ಸ್ವಾತಂತ್ರಕ್ಕಾಗಿ ಹೋರಾಟ ನಡೆಸುತಿದ್ದರು, ಯಾಕಂದ್ರೆ ಈ ದೇಶದಲ್ಲಿ ಬ್ರಿಟಿಷರಿಗಿಂತ ಅತೀ ಕ್ರೂರವಾಗಿದ್ದವರು ನಿಮ್ಮ ಬಲಪಂಥೀಯ ಜನರು ಅದಕ್ಕಾಗಿ ತನ್ನ ಜನಗಳ ಹಕ್ಕು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡ್ತಿದ್ರು, ಹಾಗಂತ ಬಾಬಾಸಾಹೇಬರು ಎಲ್ಲಿಯೂ ಬ್ರಿಟಿಷರ ಪರವಾಗಿ ನಿಂತಿರುವ ಒಂದೇ ಒಂದು ಉದಾಹರಣೆಗಳಿಲ್ಲ. ಆದರೆ ಸಾವರ್ಕರ್ ಬ್ರಿಟಿಷರ ಬಳಿ ಆರು ಬಾರಿ ಕ್ಷಮಾಪಣ ಪತ್ರ ಬರೆದು ಪಿಂಚಣಿ ಪಡೆದರು. ಮನುವಾದಿಗಳಿಗೂ ಮಾನವತವಾದಿಗಳಿಗೂ ಕಂಪೇರ್ ಮಾಡುವ ನಿಮ್ಮ ಜ್ಞಾನ” ಎಂದು ಕಿಡಿಕಾರಿದ್ದಾರೆ.
“ನೀವು ಕಾಂಗ್ರೆಸನ್ನು ಟೀಕಿಸೊ ಬರದಲ್ಲಿ ಅಂಬೇಡ್ಕರ್, ಪೇರಿಯಾರ್ ಅನ್ನು ಸಾವರ್ಕರ್ ಗೆ ಹೊಲಿಸೋದು ದೊಡ್ದ ಮೂರ್ಖತನ. ಚೇತನ್ ಅವರೇ ನೀವು ಈ ತರ ಹೇಳಿರೋದೆ ದೊಡ್ದ ವಿಪರ್ಯಾಸ. ನಿಮಗೂ ಮನುವಾದಿಗಳಿಗೂ ಮತ್ತು ಕಾಂಗ್ರೆಸ್ಸಿಗರಿಗೂ ಏನು ವ್ಯತ್ಯಾಸ ಹೇಳಿ? ಎಲ್ಲರೂ ಅವರಿಗೆ ತಕ್ಕಂತೆ ಇತಿಹಾಸವನ್ನೂ ತಿರುಚುತ್ತಿದ್ದಾರೆ ಅಷ್ಟೇ. ನಿಮ್ಮ ಮೇಲೆ ಇದ್ದ ನಂಬಿಕೆ ಗೌರವ ಕಮ್ಮಿ ಆಗ್ತಾ ಇದೆ ಚೇತನ್ ರವರೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಸಾಮಾಜಿಕ ಹೋರಾಟಗಾರ ಹುಲಿಕುಂಟೆ ಮೂರ್ತಿ ಅವರು, “ಈತ ಸಂವಿಧಾನದ ಪುಸ್ತಕ ಹಿಡಿದು ಜೈಲಿಗೋದಾಗ ಬಹಳಷ್ಟು ಜನ ಕರ್ನಾಟಕದ ಚೆಗೆವಾರ ಅಂದರು. ನಟನೆ ಎಂದರೆ ಅಷ್ಟಗಲ ಕಣ್ಣು ಬಿಟ್ಟುಕೊಂಡು ಡೈಲಾಗ್ ಹೇಳುವುದು ಅಂದುಕೊಂಡ ಕಾರಣಕ್ಕೇ ನೆಲಕಚ್ಚಿದ ಮೇಲೆ ಬಾಬಾಸಾಹೇಬರನ್ನು ಬಳಸಿಕೊಂಡು ಚಲಾವಣೆಗೆ ಬಂದ. ನಮ್ಮ ಕಮ್ಯುನಿಷ್ಟರು ಒಂದಷ್ಟು ದಿನ, ದಲಿತರು ಒಂದಷ್ಟು ದಿನ ತಲೆ ಮೇಲೆ ಹೊತ್ತು ಮೆರೆಸಿದರು. ಮತ್ತೆ ಯಾರೂ ಕರೆಯಲ್ಲ ಅಂತ ಗೊತ್ತಾದ ಮೇಲೆ ಪ್ರಗತಿಪರರ, ದಲಿತರ ಸಮಾವೇಶಗಳಿಗೆ ಹೇಳದೆ ಕೇಳದೆ ಹೋಗಿ ಮೀಡಿಯಾ ಮುಂದೆ ಉರುಹೊಡೆದ ಡೈಲಾಗ್ ಹೊಡೆದು ದೊಡ್ಡ ಹೋರಾಟಗಾರನಂತೆ ಮುಷ್ಠಿ ಬಿಗಿದು ಹಲ್ಲು ಗಿಂಜಿದ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲವೂ ಅಂಚಿನ ಸಮುದಾಯಗಳ ಶತ್ರುಗಳು ಎಂಬುದನ್ನು ಯಾರೂ ಮರೆತಿಲ್ಲ; ಆದರೆ, ಸಮಯ ಸಂದರ್ಭ ನೋಡಿಕೊಂಡು ಮಾತಾಡಬೇಕಲ್ಲಾ….? ಕನಿಷ್ಠ ಕಾಮನ್ ಸೆನ್ಸ್ ಇಲ್ಲದೆ ಎಲ್ಲದಕ್ಕೂ ನಾಲಿಗೆ ಅಲ್ಲಾಡಿಸಿ, ಗೂಗಲ್ ಟ್ರಾನ್‌ಸ್ಲೇಟ್ ಮಾಡಿ ಈ ಮಟ್ಟಕ್ಕೆ ತಲುಪಿದ್ದಾನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಿಮ್ಮ ಲಾಜಿಕ್ ತುಂಬಾ ತಪ್ಪಾಗಿದೆ ಸರ್… ಪೆರಿಯಾರ್ ಅವರನ್ನು ಮತ್ತು ಅಂಬೇಡ್ಕರ್ ಅವರನ್ನ, ಸಾವರ್ಕರ್ ಮತ್ತು ಇನ್ನಿತರರಿಗೆ ಹೋಲಿಸಲಾಗದು ಸರ್, ನೀವು ಮಾತಿನ ಭರಾಟೆಯಲ್ಲಿ ಸ್ವಷ್ಟತೆಯನ್ನು ಮರೆಯುತ್ತಿದ್ದೀರಿ” ಗಣೇಶ್ ಸಂಗಾಪುರ ಎಂಬವರು ಕಮೆಂಟ್ ಮಾಡಿದ್ದಾರೆ.
ಚೇತನ್ ಅದ್ವಾನಗಳು ಒಂದೆರಡಲ್ಲ. ಏನಾದರೊಂದು ಅಸಂಬದ್ಧ ಪೋಸ್ಟ್ ಹಾಕಿ ವಿವಾದಕ್ಕೀಡಾಗುವುದು ಅವರಿಗೆ ಹೊಸದೇನಲ್ಲ. ಅದಕ್ಕೆ ಈಗ ಮತ್ತೊಂದು ವಿವಾದ ಸೇರ್ಪಡೆಯಾಗಿದೆ.




