ಬಾಲಿವುಡ್ ನಟ ಗೋವಿಂದ ಮಂಗಳವಾರ ರಾತ್ರಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಮುಂಬೈನ ಜುಹುವಿನ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. 61 ವರ್ಷದ ನಟ ನಿನ್ನೆ ತಡರಾತ್ರಿ ಮನೆಯಲ್ಲಿ ಮೂರ್ಛೆ ಹೋದರು ಎಂದು ಅವರ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್ ಬಿಂದಾಲ್ ತಿಳಿಸಿದ್ದಾರೆ.
“ಆಸ್ಪತ್ರೆಗೆ ಸಾಗಿಸುವ ಮೊದಲೇ ವೈದ್ಯರಿಗೆ ಕರೆ ಮಾಡಿ ನಟ ಗೋವಿಂದ ಅವರಿಗೆ ಔಷಧಿ ನೀಡಲಾಗಿದೆ. 1 ಗಂಟೆ ಸುಮಾರು ದಿಢೀರ್ ಆಗಿ ಆಸ್ಪತ್ರೆಗೆ ದಾಖಲಿಸಲಾಯಿತು” ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಂದಾಲ್, ಗೋವಿಂದ ಅವರ ಸದ್ಯದ ಆರೋಗ್ಯ ಸ್ಥಿತಿ ಬಗ್ಗೆ ತಿಳಿಸಿಲ್ಲ.
ಇದನ್ನು ಓದಿದ್ದೀರಾ? ಆಕಸ್ಮಿಕವಾಗಿ ಕಾಲಿಗೆ ಗುಂಡೇಟು; ಬಾಲಿವುಡ್ ನಟ ಗೋವಿಂದ ಆಸ್ಪತ್ರೆಗೆ ದಾಖಲು
“ಗೋವಿಂದ ಅವರು ಹಲವು ಪರೀಕ್ಷೆಗಳಿಗೆ ಒಳಗಾಗಿದ್ದು ಸದ್ಯ ವರದಿಗಳಿಗಾಗಿ ಕಾಯುತ್ತಿದ್ದೇವೆ” ಎಂದಷ್ಟೇ ಬಿಂದಾಲ್ ಹೇಳಿದ್ದಾರೆ.
ಕಳೆದ ವರ್ಷ, ಅಕ್ಟೋಬರ್‌ನಲ್ಲಿ, ಗೋವಿಂದ ಅವರ ಕಾಲಿಗೆ ಗುಂಡೇಟು ತಗುಲಿತ್ತು. ಒಂದು ಗಂಟೆಯ ಶಸ್ತ್ರಚಿಕಿತ್ಸೆಯ ನಂತರ ಗುಂಡನ್ನು ತೆಗೆಯಲಾಗಿತ್ತು. ಈ ಬಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಾಹಿತಿ ನೀಡಿದ್ದ ಗೋವಿಂದ, “ನಾನು ಕೋಲ್ಕತ್ತಾದಲ್ಲಿ ಒಂದು ಕಾರ್ಯಾಕ್ರಮಕ್ಕೆ ಹೊರಟಿದ್ದೆ. ಬೆಳಗಿನ ಜಾವ ಸುಮಾರು 5 ಗಂಟೆಯಾಗಿತ್ತು. ಗನ್ ತಪ್ಪಿ ಕೆಳಗೆ ಬಿದ್ದು ನನ್ನ ಕಾಲಿಗೆ ಗುಂಡೇಟು ತಗುಲಿತು” ಎಂದು ಹೇಳಿದ್ದರು.





