ಕೊತ್ತಲವಾಡಿ ಸಿನಿಮಾದ ಬಗ್ಗೆ ಅಪಪ್ರಚಾರ ಹಿನ್ನೆಲೆ ಕೆಜಿಎಫ್ ನಟ ಯಶ್ ತಾಯಿ ಪುಷ್ಪಾ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸ್ವರ್ಣಗೌರಿ ಹಾಗೂ ಪಿಆರ್‌ಒ ಹರೀಶ್ ಸೇರಿ ನಾಲ್ಕು ಮಂದಿಯ ವಿರುದ್ಧ ದೂರು ನೀಡಲಾಗಿದೆ. ಕಳೆದ ಒಂದು ವಾರದ ಹಿಂದೆ ಕೊಟ್ಟಿರುವ ದೂರು ತಡವಾಗಿ ಬೆಳಕಿಗೆ ಬಂದಿದೆ. ಕೊತ್ತಲವಾಡಿ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಿ ಕೊಟ್ಟ ಹಣ ಸರಿಯಾಗಿ ಉಪಯೋಗ ಪಡಿಸಿಕೊಂಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎ1 ಹರೀಶ್ ಅರಸು, ಎ2 ಮನು, ಎ3 ನಿತಿನ್, ಎ4 ಮಹೇಶ್ ಗುರು, ಎ5 ಸ್ವರ್ಣಗೌರಿ ವಿರುದ್ಧ ದೂರು ನೀಡಲಾಗಿದೆ. ಸದ್ಯ ಸ್ವರ್ಣಗೌರಿಗೆ ಹೈಗ್ರೌಂಡ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಒಟ್ಟು 64 ಲಕ್ಷ ಹಣ ಪಡೆದು ಸಿನಿಮಾ ಪ್ರಚಾರ ಮಾಡಲಿಲ್ಲ. ಅಲ್ಲದೆ ಚಿತ್ರವನ್ನು ಇವರೇ ಅಪ ಪ್ರಚಾರ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ಅಷ್ಟೇ ಅಲ್ಲದೇ ಇನ್ನು ಹಣಕ್ಕೆ ಬೇಡಿಕೆ ಇಟ್ಟ ಆರೋಪವೂ ಇದೆ. ಹಣ ಕೊಡದೆ ಇದ್ದಲ್ಲಿ ಮನೆ ಬಳಿ ಬಂದು ಗಲಾಟೆ ಮಾಡೋದಾಗಿ ಬೆದರಿಕೆ ಹಾಕಿದ್ದಾಗಿ ಆರೋಪ ಮಾಡಿದ್ದಾರೆ. ಇತ್ತೀಚಿಗೆ ಬೆದರಿಕೆ ಕರೆಗಳು ಬರುತ್ತಿರೋದಾಗಿಯೂ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನು ಓದಿದ್ದೀರಾ? ತಂತ್ರಜ್ಞಾನವು ಸಿನಿಮಾದಲ್ಲಿ ಏಕರೂಪತೆ ಹೇರುತ್ತಿದೆ: ನಿರ್ದೇಶಕ ಗಿರಿರಾಜ್
ಹರೀಶ್ ಅವರು ಕಳೆದ ಮೇ 18 ರಂದು 10 ಲಕ್ಷ ರೂಪಾಯಿ, ನಂತರ ಮೇ 21 ರಂದು 5 ಲಕ್ಷ ರೂಪಾಯಿ ಪಡೆದಿದ್ದರು. ನಂತರ ಚಿತ್ರದ ಬ್ರಾಂಡ್ ಹೆಸರನ್ನು ಬಳಸಿಕೊಂಡು ವಿವಿಧ ಚಾನೆಲ್‌ಗಳ ಮೂಲಕ ಹೆಚ್ಚುವರಿಯಾಗಿ 24 ಲಕ್ಷ ರೂಪಾಯಿ ಸಂಗ್ರಹಿಸಿದ್ದರು ಎಂದು ಪುಷ್ಪಾ ದೂರಿನಲ್ಲಿ ತಿಳಿಸಿದ್ದಾರೆ. ಒಟ್ಟಾರೆಯಾಗಿ, ಹರೀಶ್ ತನ್ನಿಂದ 64,87,700 ರೂಪಾಯಿ ಪಡೆದಿದ್ದಾರೆ, ಇದರಲ್ಲಿ ಜುಲೈ 31 ರಂದು ಮುದ್ರಣ ಮಾಧ್ಯಮ ಜಾಹೀರಾತಿಗಾಗಿ 4 ಲಕ್ಷ ರೂಪಾಯಿ ನಗದು ಸೇರಿದೆ.
ಇಷ್ಟೆಲ್ಲಾ ಹಣ ಪಡೆದುಕೊಂಡರೂ ಆಗಸ್ಟ್ 1ರಂದು ಬಿಡುಗಡೆಯಾಗಿದ್ದ ಚಿತ್ರಕ್ಕೆ ಯಾವುದೇ ಪ್ರಚಾರ ಮಾಡಿರಲಿಲ್ಲ. ಜುಲೈ 23 ರಂದು ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು, ಆದರೆ ಹರೀಶ್ ಪ್ರಚಾರ ಕಾರ್ಯವನ್ನು ನಿರ್ವಹಿಸದ ಕಾರಣ ನಟರೇ ತಮ್ಮ ಸ್ವಂತ ಖರ್ಚಿನಿಂದ 21,75,000 ರೂಪಾಯಿ ಖರ್ಚು ಮಾಡಬೇಕಾಯಿತು ಎಂದು ಪುಷ್ಪಾ ಹೇಳಿಕೊಂಡಿದ್ದಾರೆ. ಹಲವಾರು ಸಾಮಾಜಿಕ ಮಾಧ್ಯಮ ಮತ್ತು ಚಲನಚಿತ್ರ ಮಾಧ್ಯಮ ಪ್ರವರ್ತಕರಿಗೆ ಸಂಬಳ ನೀಡಿಲ್ಲ ಎಂದು ಕೂಡ ಆರೋಪಿಸಿದ್ದಾರೆ.





