2026ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಬಿಫೆಸ್) ಪ್ರಮುಖ ಪ್ರದರ್ಶನ ಸ್ಥಳವನ್ನು ರಾಜಾಜಿನಗರದ ಓರಿಯಾನ್ ಮಾಲ್‌ನಿಂದ ಲುಲು ಮಾಲ್‌ಗೆ ಸ್ಥಳಾಂತರಿಸಿರುವುದು ಸಾಮಾನ್ಯ ಪ್ರತಿನಿಧಿಗಳು ಹಾಗೂ ಸಿನಿಪ್ರಿಯರ ಆತಂಕಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಗಳು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಜನವರಿ 29ರಿಂದ ಫೆಬ್ರವರಿ 6ರವರೆಗೆ ‘ಮಹಿಳಾ ಸಬಲೀಕರಣ’ ಎಂಬ ಆಶಯದೊಂದಿಗೆ ಚಿತ್ರೋತ್ಸವ ನಡೆಯಲಿದೆ ಎಂದು ಅಧಿಕೃತವಾಗಿ ಘೋಷಿಸಿದ್ದರು. ಉತ್ಸವದ ದಿನಾಂಕ ಮತ್ತು ಆಶಯವನ್ನು ಸ್ವಾಗತಿಸಿರುವ ‘ಸಿನಿಮಾ ಓದು ಗೆಳೆಯರ ಬಳಗ’, ಸ್ಥಳ ಬದಲಾವಣೆಯ ನಿರ್ಧಾರವು ಪ್ರತಿನಿಧಿಗಳಿಗೆ ಮಾರಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಸ್ವಂತ ಖರ್ಚಿನಲ್ಲಿ ನೋಂದಣಿ ಮಾಡಿಸಿಕೊಂಡು ಬರುವ ಸಾವಿರಾರು ಸಾಮಾನ್ಯ ಪ್ರತಿನಿಧಿಗಳೇ ಚಿತ್ರೋತ್ಸವದ ಜೀವಾಳ. ಆದರೆ, ಪ್ರಸ್ತುತ ಸ್ಥಳಾಂತರವು ಪ್ರತಿನಿಧಿಗಳಿಗೆ ಅತ್ಯಂತ ಪ್ರತಿಕೂಲಕರವಾಗಿದೆ ಎಂದು ಕೆ. ಫಣಿರಾಜ್, ರಮೇಶ್ ಶಿವಮೊಗ್ಗ ಸೇರಿದಂತೆ ಹಲವು ಗಣ್ಯರು ಸರಕಾರದ ಗಮನ ಸೆಳೆದಿದ್ದಾರೆ.
ಆಕ್ಷೇಪಕ್ಕೆ ಪ್ರಮುಖ ಕಾರಣಗಳೇನು?
ಆಸನಗಳ ಕೊರತೆ: ಓರಿಯಾನ್ ಹಾಗೂ ಲುಲು ಮಾಲ್ ಎರಡರಲ್ಲೂ 11 ಪರದೆಗಳಿದ್ದರೂ, ಲುಲು ಮಾಲ್‌ನಲ್ಲಿ ಓರಿಯಾನ್‌ಗಿಂತ 600 ಆಸನಗಳು ಕಡಿಮೆಯಿವೆ. ಇದರಿಂದ ದಿನವೊಂದಕ್ಕೆ ಸುಮಾರು 3,000 ದಷ್ಟು ಸಿನೆಮಾ ವೀಕ್ಷಣಾ ಅವಕಾಶಗಳಿಂದ ಪ್ರತಿನಿಧಿಗಳು ವಂಚಿತರಾಗಲಿದ್ದಾರೆ.
ಇದನ್ನು ಒದಿದ್ದೀರಾ? ಈ ದಿನ ಸಂಪಾದಕೀಯ | ಭದ್ರಾ ಮೇಲ್ದಂಡೆಗೆ ನೆರವು ನಿರಾಕರಣೆ; ಹಸಿದು ಬಾಯಾರಿದ ಸೀಮೆಗಳಿಗೆ ಮೋಶಾ ಬಗೆದ ದ್ರೋಹ!
ಸಾರಿಗೆ ಸಂಪರ್ಕದ ಕೊರತೆ: ಓರಿಯಾನ್ ಮಾಲ್‌ಗೆ ಮೆಟ್ರೋ ಸೇರಿದಂತೆ ಎಲ್ಲ ಬಗೆಯ ಸಾರಿಗೆ ಸಂಪರ್ಕ ಸುಲಭವಾಗಿತ್ತು. ಆದರೆ, ಲುಲು ಮಾಲ್‌ಗೆ ಸಾರ್ವತ್ರಿಕ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ. ಪ್ರತಿನಿಧಿಗಳು ಪ್ರದರ್ಶನ ಸ್ಥಳ ತಲುಪಲು 2-3 ಕಿ.ಮೀ ನಡೆಯಬೇಕಾದ ಪರಿಸ್ಥಿತಿ ಇದ್ದು, ಇದು ಉತ್ಸಾಹವನ್ನು ಕುಗ್ಗಿಸುತ್ತದೆ.
ಊಟೋಪಚಾರದ ಸಮಸ್ಯೆ: ಮಾಲ್ ಒಳಗಿನ ದುಬಾರಿ ಹೋಟೆಲ್‌ಗಳಲ್ಲಿ ಊಟ ಮಾಡುವುದು ಸಾಮಾನ್ಯ ಪ್ರತಿನಿಧಿಗಳಿಗೆ ಹೊರೆಯಾಗುತ್ತದೆ. ಓರಿಯಾನ್ ಮಾಲ್ ಸುತ್ತಮುತ್ತ ಕಡಿಮೆ ದರದಲ್ಲಿ ಹತ್ತಾರು ಹೋಟೆಲ್‌ಗಳು ಲಭ್ಯವಿದ್ದವು. ಆದರೆ ಲುಲು ಮಾಲ್ ಸುತ್ತಮುತ್ತ ಇಂತಹ ವ್ಯವಸ್ಥೆಯಿಲ್ಲ. ಹಸಿವು ನೀಗಿಸಿಕೊಳ್ಳಲು ಪ್ರತಿನಿಧಿಗಳು ಕಿಲೋಮೀಟರ್‌ಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ನೈಜ ಸಿನೆಮಾಸಕ್ತರ ಉತ್ಸಾಹ ಮತ್ತು ಅನುಕೂಲವನ್ನು ಪರಿಗಣಿಸಿ, ಮುಖ್ಯ ಪ್ರದರ್ಶನ ಸ್ಥಳವನ್ನು ಮರುಪರಿಶೀಲಿಸಬೇಕು ಎಂದು ಕೆ. ಫಣಿರಾಜ್, ರಮೇಶ್ ಶಿವಮೊಗ್ಗ, ನಾಗರಾಜ ಶೆಟ್ಟಿ, ಮುರಳಿಕೃಷ್ಣ, ಚಂದ್ರಪ್ರಭ ಕಠಾರಿ, ಕೃಷ್ಣಪ್ರಸಾದ್ ಹಾಗೂ ಸಿನಿಮಾ ಓದು ಗೆಳೆಯರ ಬಳಗ ಆಗ್ರಹಿಸಿದೆ.





